ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
   

ಹಿರಿಯ ಚೇತನಗಳ ಬಗ್ಗೆ ಇರಲಿ ಗೌರವ

ಗುರುವಾರ ಬೆಳಿಗ್ಗೆ 5 ಗಂಟೆಗೆ ವಾಕಿಂಗ್‌ಗೆಂದು ಪಾರ್ಕ್‌ಗೆ ಹೋದೆ. ನನ್ನೊಬ್ಬ ಸ್ನೇಹಿತ ಜೊತೆಯಾದ. ‘ರತನ್ ಟಾಟಾ ಅಸ್ತಂಗತರಾದರು’ ಎಂದೆ. ಆತ ನಿರ್ಭಾವುಕನಾಗಿ ‘ಹೌದಾ’ ಎಂದ. ನನಗೆ ಗಲಿಬಿಲಿಯಾಯಿತು. ‘ಅಲ್ಲಯ್ಯಾ, ರತನ್ ಟಾಟಾ ದಿವಂಗತರಾದರು ಎಂದರೆ ಯಾವ ಪ್ರತಿಕ್ರಿಯೆಯನ್ನೂ ತೋರದೆ ಇದ್ದೀಯ’ ಎಂದೆ. ಅದಕ್ಕೆ ಅವನು ‘ಹುಟ್ಟಿದವರು ಸಾಯಲೇಬೇಕಲ್ಲವೇ’ ಎಂದ. ಆಗ ನನಗೆ ಬೇಸರವಾಗಿ, ‘ದೇಶಕ್ಕೆ ಕೊಡುಗೆ ಕೊಟ್ಟವರು, ಲಕ್ಷಾಂತರ ಜನರಿಗೆ ಕೆಲಸ ಕೊಟ್ಟು ದೇಶದ ಹೆಬ್ಬಾಗಿಲಿನಂತೆ ಕಾಯುತ್ತಿದ್ದವರ ಜೀವ ಅಂತರ್ಗತವಾಗಿದೆ ಎಂದರೆ ವಿಚಿತ್ರವಾಗಿ ನೋಡುತ್ತೀಯಲ್ಲ’ ಎಂದೆ. ಆಗ ಅವನಿಗೆ ತಪ್ಪಿನ ಅರಿವಾಯಿತು. ಕ್ಷಮಿಸುವಂತೆ ಕೇಳಿದ. ಆಗ ನಾನು ನನಗೆ ತಿಳಿದಷ್ಟು ಮಟ್ಟಿಗೆ ಟಾಟಾ ಅವರ ಬಗ್ಗೆ ವಿವರಿಸಿ, ‘ಭಾರತದ ಒಂದು ಧ್ರುವನಕ್ಷತ್ರ ಇಂದು ಅಸ್ತಂಗತವಾಯಿತು’ ಎಂದಾಗ, ಅವನ ಕಣ್ಣಲ್ಲೂ ದುಃಖದ ಛಾಯೆ ಮೂಡಿತು.

ಇಂತಹ ಗಣ್ಯರು ಅಸ್ತಂಗತರಾದಾಗ, ನಾವು ಬೇರೇನು ಮಾಡ ಲಾಗದಿದ್ದರೂ ಕನಿಷ್ಠಪಕ್ಷ ಅವರ ಆತ್ಮಕ್ಕೆ ಒಳ್ಳೆಯದಾಗಲಿ ಎಂದು ಹರಸುವ ಮತ್ತು ಅವರ ಸಾಧನೆಗಳನ್ನು ಸ್ಮರಿಸುವ ಬುದ್ಧಿ ಬರಬೇಕು.⇒

ADVERTISEMENT

-ಬಾಲಕೃಷ್ಣ ಎಂ.ಆರ್., ಬೆಂಗಳೂರು

**

ಮಕ್ಕಳ ಲೇವಡಿ: ಕಿವಿ ಹಿಂಡಿದ ಸರ್ಕಾರ

ಬಿಹಾರದಲ್ಲಿ ಇನ್ನು ಮುಂದೆ ಶಾಲಾ ಮಕ್ಕಳನ್ನು ಕತ್ತೆ, ಒಂಟೆ ಎಂದೆಲ್ಲ ಜರಿಯುವಂತಿಲ್ಲ. ಹೀಗೆಂದು ಅಲ್ಲಿನ ಸರ್ಕಾರವು ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ. ಶಾಲೆಗಳಲ್ಲಿ ಸ್ವಲ್ಪ ದಡ್ಡ ಮಕ್ಕಳಿಗೆ ಕತ್ತೆ ಎಂದು ಮತ್ತು ಉದ್ದ ಇರುವ ಮಕ್ಕಳನ್ನು ಒಂಟೆ ಎಂದು ಶಿಕ್ಷಕರು ಲೇವಡಿ ಮಾಡುವುದು ತೀರಾ ಸಾಮಾನ್ಯವಾಗಿದ್ದು, ಪಾಲಕರು ಮುಖ್ಯಮಂತ್ರಿಗೆ ದೂರು ನೀಡಿದ್ದರಂತೆ. ಹೀಗಾಗಿ, ಇದರ ತಡೆಗೆ ಸರ್ಕಾರ ಮುಂದಾಗಿರುವುದು ಒಂದು ಶ್ಲಾಘನೀಯ ಕ್ರಮ ಎನ್ನಬಹುದು.

ಈ ರೀತಿ ಮಕ್ಕಳನ್ನು ಲೇವಡಿ ಮಾಡುವುದು ಬಿಹಾರ ರಾಜ್ಯಕ್ಕಷ್ಟೇ ಸೀಮಿವಾಗಿಲ್ಲ. ಕತ್ತೆಬಡವ, ಕತ್ತೆ ಕಾಯಲು ಹೋಗು, ದನ ಮೇಯಿಸಲು ಹೋಗು ಎಂದೆಲ್ಲ ಮಕ್ಕಳನ್ನು ಶಿಕ್ಷಕರು ತರಾಟೆಗೆ ತೆಗೆದುಕೊಳ್ಳುವುದು ನಮ್ಮಲ್ಲೂ ಸಹಜ ಎನ್ನುವಂತಾಗಿದೆ. ಮಕ್ಕಳು ಸಣ್ಣವರಾದರೂ ಅವರಿಗೂ ಘನತೆ, ಗೌರವ ಇರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು.

-ರಮಾನಂದ ಶರ್ಮಾ, ಬೆಂಗಳೂರು

**

ಮಾದಕವಸ್ತು: ಅರಿವು ಮೂಡಿಸುವುದು ಅಗತ್ಯ 

ಯಾದಗಿರಿ ಜಿಲ್ಲೆಯ ಗ್ರಾಮಗಳು, ಶಾಲಾ-ಕಾಲೇಜುಗಳನ್ನು ತಂಬಾಕುಮುಕ್ತ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಜಿಲ್ಲಾಧಿಕಾರಿಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಅ. 9). ಜಿಲ್ಲಾಧಿಕಾರಿಯ ಉದ್ದೇಶ ಒಳ್ಳೆಯದೇ ಆಗಿದೆ. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಲ್ಲಿ ಸರ್ಕಾರದ ಆದೇಶದಂತೆ ಪ್ರತಿವರ್ಷವೂ ಈ ಭಾಗದಲ್ಲಿ ‘ಮಹಾಂತ ಜೋಳಿಗೆ’ ಖ್ಯಾತಿಯ ಇಳಕಲ್ ಮಹಾಂತ ಶಿವಯೋಗಿಗಳ ಜನ್ಮದಿನವನ್ನು ‘ವ್ಯಸನಮುಕ್ತ ದಿನ’ವೆಂದು ಆಚರಿಸಲಾಗುತ್ತಿದೆ. ಮಾದಕವಸ್ತುಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳು, ನಾಗರಿಕರಿಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ಈ ಕೆಲಸವು ಆಂದೋಲನದ ರೂಪದಲ್ಲಿ ನಡೆಯಬೇಕು.

ನನಗೆ ಗೊತ್ತಿರುವ ಕೆಲವು ಶಿಕ್ಷಕರು ಮತ್ತು ಉಪನ್ಯಾಸಕರೇ ಗುಟ್ಕಾದ ದಾಸರಾಗಿದ್ದಾರೆ. ಬೆಳಿಗ್ಗೆ ಎದ್ದ ಕ್ಷಣದಿಂದಲೇ ಗುಟ್ಕಾ ಜಗಿಯಲು ಪ್ರಾರಂಭಿಸಿದ ಅವರ ಬಾಯಿಯು ಮಲಗುವವರೆಗೂ ಖಾಲಿ ಇರುವುದಿಲ್ಲ! ಇಂಥವರು ಎಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೇನು? ‘ಹೇಳುವುದು ಪುರಾಣ, ತಿನ್ನುವುದು ಬದನೇಕಾಯಿ’ ಎಂಬಂತೆ ಆಗುವುದಿಲ್ಲವೇ? ಮೊದಲು ಶಿಕ್ಷಕರು ವ್ಯಸನಮುಕ್ತರಾಗಲಿ!

-ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

**

ಶಿಕ್ಷಕರ ದಿನಾಚರಣೆ: ಎಲ್ಲರನ್ನೂ ಒಳಗೊಳ್ಳಲಿ

ಶಿಕ್ಷಕರ ದಿನಾಚರಣೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಬೇಕೆಂದು ವಿವರಿಸಿರುವ ಅರವಿಂದ ಚೊಕ್ಕಾಡಿ ಅವರ ಲೇಖನ (ಪ್ರ.ವಾ., ಅ. 8) ಅರ್ಥಪೂರ್ಣವಾಗಿದೆ. ‘ವರ್ಣಮಾತ್ರಮ್ ಕಲಿಸಿದಾತಂ ಗುರು’ ಎಂಬ ಲೋಕೋಕ್ತಿಯಂತೆ, ಪ್ರತಿವರ್ಷ ಸೆ. 5ರಂದು ಎಸ್‌. ರಾಧಾಕೃಷ್ಣನ್ ಅವರ ಜನ್ಮದಿನವನ್ನು ದೇಶದಾದ್ಯಂತ ಶಿಕ್ಷಕರ ದಿನವಾಗಿ ಆಚರಿಸುವುದು ಸಂತೋಷದ ಸಂಗತಿ. ಈ ಕಾರ್ಯಕ್ರಮವು ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಚರಣೆಯಲ್ಲಿದೆ. ಈ ಕಾರ್ಯಕ್ರಮಗಳಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳು ಹಾಜರಿದ್ದು, ಅವರ ಜೊತೆಗೆ ವೇದಿಕೆಯ ಮುಂದೆ ಆಸಕ್ತ ಶಿಕ್ಷಕ ವೃಂದದವರೇ ಸಭಿಕರಾಗಿರುತ್ತಾರೆ. ವಿದ್ಯಾರ್ಥಿಗಳು, ಪೋಷಕರು ಅಥವಾ ಸಾರ್ವಜನಿಕರು ಉಪಸ್ಥಿತರಿರುವುದಿಲ್ಲ.

ಚೊಕ್ಕಾಡಿಯವರ ವಿಶ್ಲೇಷಣೆಯಂತೆ, ಕಾರ್ಯಕ್ರಮವು ವಿಕೇಂದ್ರೀಕರಣಗೊಂಡು, ಅದನ್ನು ಶಾಲೆಯ ಕ್ಲಸ್ಟರ್ ಅಥವಾ ಪಂಚಾಯಿತಿ ಮಟ್ಟದಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು, ಅಧಿಕಾರಿ ವರ್ಗದವರು ಒಡಗೂಡಿ ಆಚರಿಸುವುದು ಒಳಿತು. ಇದರಿಂದ ಶಿಕ್ಷಕ ವೃಂದಕ್ಕೆ ಸಾರ್ವಜನಿಕ ವಲಯದಲ್ಲಿ ಗೌರವ, ಘನತೆ ಹೆಚ್ಚಲು ಅನುವಾಗುತ್ತದೆ. ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲು ಶಿಕ್ಷಕ ಸಮೂಹವು
ಪ್ರಯತ್ನಿಸಬೇಕು.

-ಕೆ.ಎಂ.ರೆಡ್ಡಪ್ಪ, ಚಿಕ್ಕಬಳ್ಳಾಪುರ

**

ಹೋಗಿ ಬನ್ನಿ, ಟಾ...ಟಾ...!

ಹಸಿದವರಿಗೆ, ಸಂತ್ರಸ್ತರಿಗೆ

ರೋಗಿಗಳಿಗೆ, ಬಡಜನರಿಗೆ

ನೆರವಾದ ಹೃದಯವಂತಿಕೆಯ

ಮತ್ತೊಂದು ಹೆಸರೇ

ರತನ್ ಟಾಟಾ,

ಇತಿಹಾಸದಲ್ಲಿ ತುಂಬಾ ಕಾಲ

ನಿಮ್ಮ ಹೆಸರು ಉಳಿದು

ನಿಮ್ಮ ಆದರ್ಶಗಳು

ಸಾಧನೆಗೆ ಸ್ಫೂರ್ತಿಯಾಗುತ್ತವೆ,

ಹೋಗಿ ಬನ್ನಿ ಸರ್, ಟಾ... ಟಾ...!

-ಆರ್.ನಾಗರಾಜ್, ಗೊರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.