ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
   

ಜೀರೊ ಟ್ರಾಫಿಕ್‌ಗೆ ಸಡ್ಡು: ದುರಹಂಕಾರದ ನಡೆ

ರಾಯಚೂರಿನಿಂದ ಜಿಂದಾಲ್‌ ವಿಮಾನ ನಿಲ್ದಾಣಕ್ಕೆ ಶನಿವಾರ ರಾತ್ರಿ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಚಾರಕ್ಕೆ ಅನುವಾಗುವಂತೆ ಜೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಿದ್ದ ಸಂದರ್ಭದಲ್ಲಿ, ಶಾಸಕ ಜನಾರ್ದನ ರೆಡ್ಡಿ ಅವರಿದ್ದ ಕಾರು ಡಿವೈಡರ್‌ ದಾಟಿ ಒನ್‌ವೇಯಲ್ಲಿ ವಿರುದ್ಧ ದಿಕ್ಕಿಗೆ ಸಂಚರಿಸಿರುವುದು ದುರಹಂಕಾರ ಮತ್ತು ಅವಿವೇಕದ ನಡೆಯಾಗಿದೆ. ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದು ಸರಿಯಾಗಿದೆ.

ಬಳ್ಳಾರಿ ಪ್ರವೇಶಿಸಲು ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಸಿಕ್ಕಿ ಇನ್ನೂ ಕೆಲವು ದಿನಗಳಷ್ಟೇ ಆಗಿವೆ. ಆಗಲೇ ಇಂತಹ ಉದ್ಧಟತನದ ವರ್ತನೆ ಅಚ್ಚರಿ ಹುಟ್ಟಿಸುತ್ತದೆ. ಕೆಲವರಿಗೆ ಈ ಜನ್ಮದಲ್ಲಿ ಬುದ್ಧಿ ಬರುವುದಿಲ್ಲ ಎನಿಸುತ್ತದೆ. ಇಲ್ಲಿ, ಮುಖ್ಯಮಂತ್ರಿಯವರಿಗಾಗಿ ಶೂನ್ಯ ಸಂಚಾರದಂತಹ ವ್ಯವಸ್ಥೆ ಕಲ್ಪಿಸುವುದರ ಪರ, ವಿರುದ್ಧದ ಮಾತುಗಳು ಮುಖ್ಯವಲ್ಲ. ಆದರೆ, ಅಂತಹ ವ್ಯವಸ್ಥೆ ಜಾರಿಯಲ್ಲಿದ್ದಾಗ ಒಬ್ಬ ಜನಪ್ರತಿನಿಧಿ ಈ ರೀತಿ ವರ್ತಿಸುವುದು ಪ್ರಶ್ನಾರ್ಹ.

ADVERTISEMENT

–ಶ್ರೀಕೃಷ್ಣ, ಬೇಲೂರು

**

ಸಾಲ ವಸೂಲಿ: ಅಧಿಕಾರಿಗಳಿಗೆ ಬೇಕು ಭದ್ರತೆ

ಸಾಲ ವಸೂಲಿಗಾಗಿ ಮನೆಬಾಗಿಲಿಗೆ ಬಂದ ಬ್ಯಾಂಕ್‌ ಅಧಿಕಾರಿಗಳನ್ನು ಮನೆಯಲ್ಲಿ ಕೂಡಿಹಾಕಿ ಗನ್‌ಪಾಯಿಂಟ್‌ನಿಂದ ಬೆದರಿಸಿದ ಪ್ರಕರಣ ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸಾಲ ವಸೂಲಿಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಎದುರಿಸುವ ಸಂಕಷ್ಟಕ್ಕೆ ಇನ್ನೊಂದು ಉದಾಹರಣೆ. ಸಾಲ ವಸೂಲಿಗೆ ಹೋದಾಗ ‘ಟಿ.ವಿ ನ್ಯೂಸ್‌ ಚಾನೆಲ್‌ನವರನ್ನು ಕರೆಸುತ್ತೇವೆ’, ‘ಮೊದಲು ವಿಜಯ್‌ ಮಲ್ಯ, ನೀರವ್‌ ಮೋದಿ ಅಂತಹವರ ಬಾಕಿ ಸಾಲ ವಸೂಲು ಮಾಡಿಕೊಂಡು ಬನ್ನಿ’ ಎನ್ನುವುದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು, ಲೇವಡಿ ಮಾಡುವುದು, ಅವರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಈಗ ಇದು ಕೂಡಿಹಾಕಿ ಗನ್‌ ತೋರಿಸುವ ಮಟ್ಟಕ್ಕೆ ಹೋಗಿರುವುದು ಆಘಾತಕಾರಿ ಬೆಳವಣಿಗೆ.

ಅಕಸ್ಮಾತ್‌ ಈ ಅಧಿಕಾರಿಗಳ ಜೀವಕ್ಕೆ ಸಂಚಕಾರ ಬಂದಿದ್ದರೆ ಅದಕ್ಕೆ ಯಾರು ಹೊಣೆ? ಕುಟುಂಬಗಳಿಗೆ ಬ್ಯಾಂಕ್‌ ಕೊಡಬಹುದಾದ ಪರಿಹಾರ ಈ ಅಧಿಕಾರಿಗಳ ಜೀವಕ್ಕೆ ಸಾಟಿಯಾಗಬಹುದೇ? ಬ್ಯಾಂಕ್ ಉದ್ಯೋಗಕ್ಕೆ ಸೇರಲು‌ ಮೊದಲಿನಷ್ಟು ಉತ್ಸುಕತೆ ಜನರಲ್ಲಿ ಇಲ್ಲ ಎನ್ನುವುದಕ್ಕೆ, ಬ್ಯಾಂಕ್‌ ಉದ್ಯೋಗಿಗಳಿಗೆ ದೇಶದಾದ್ಯಂತ ನಡೆಸುವ ವರ್ಗಾವರ್ಗಿ, ದಿನನಿತ್ಯದ ಕೆಲಸದಲ್ಲಿ ಗುರಿ ನಿಗದಿ, ಕೆಲಸದ ಒತ್ತಡ ಕಾರಣ ಎಂದು ಹೇಳಲಾಗುತ್ತಿತ್ತು. ಈಗ ಈ ಪಟ್ಟಿಗೆ ಸಾಲ ವಸೂಲಿ ಪ್ರಕ್ರಿಯೆಯಲ್ಲಿ ಜೀವಭಯವೂ ಸೇರಿದಂತೆ ಕಾಣುತ್ತದೆ. ಇಂತಹ ಪ್ರಕರಣಗಳಿಂದ ಸಾಲ ವಸೂಲಿ ಪ್ರಕ್ರಿಯೆಗೆ ಹಿನ್ನಡೆಯಾಗಬಹುದು ಎನ್ನುವ ಮಾತು ಬ್ಯಾಂಕಿಂಗ್‌ ವಲಯದಲ್ಲಿ ಕೇಳಿಬರುತ್ತಿದೆ.

–ರಮಾನಂದ ಶರ್ಮಾ, ಬೆಂಗಳೂರು 

**

ಗುರ್ಮೀತ್‌ಗೂ ಸಿಗುತ್ತಿರಬಹುದೇ ರಾಜಾತಿಥ್ಯ?

ಡೇರಾ ಸಚ್ಚಾ ಸೌದಾ ಧಾರ್ಮಿಕ ಗುಂಪಿನ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಎಂಬ ಅಪರಾಧಿಯು ಅತ್ಯಾಚಾರ ಹಾಗೂ ಕೊಲೆ‌ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದರೂ ವಿಶೇಷವಾಗಿ ಪಂಜಾಬ್, ಹರಿಯಾಣದಲ್ಲಿನ ಚುನಾವಣಾ ಸಮಯದಲ್ಲಿ‌ ಆತ ಪೆರೋಲ್ ಮೇಲೆ ಹೊರಬರುವಂತೆ ಮಾಡುವುದು ಅಕ್ಷ್ಯಮ ಅಪರಾಧ. ಇದರ ಬಗ್ಗೆ ಚುನಾವಣಾ ಆಯೋಗವು ಪದೇಪದೇ ನಿರ್ಲಕ್ಷ್ಯ ವಹಿಸುತ್ತಿರುವುದು ಆಯೋಗದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡುತ್ತಿದೆ.

ಒಬ್ಬ ಅಪರಾಧಿಯು ಪೆರೋಲ್ ಎಂಬ ಟ್ರಂಪ್ ಕಾರ್ಡ್ ಬಳಸಿ ಹೀಗೆ ಚುನಾವಣೆಯ ಸಮಯದಲ್ಲಿ ಹೊರಗೆ ಬಂದು ಚುನಾವಣೆ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಪರೋಕ್ಷವಾಗಿ ಭಾಗವಹಿಸಲು ಅನುವು ಮಾಡಿ
ಕೊಡುತ್ತಿರುವ ವ್ಯವಸ್ಥೆ ಬಗ್ಗೆ ಏನು ಹೇಳುವುದು?! ಇದನ್ನೆಲ್ಲಾ ನೋಡುವಾಗ, ಆತನಿಗೆ ಜೈಲಿನೊಳಗೆ ರಾಜಾತಿಥ್ಯ ವನ್ನು ನೀಡದೆ ಇರುತ್ತಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ರಾಜಕೀಯ ಪಕ್ಷಗಳು ಚುನಾವಣೆಗೆ ಇಂತಹ ಕೈದಿಗಳ ಬೆಂಬಲ ಪಡೆಯುತ್ತಿರುವುದು ನಾಚಿಕೆಗೇಡು. ಪದೇ ಪದೇ ಹೀಗೆ ಪೆರೋಲ್‌ಗೆ ಅನುಮತಿ ನೀಡಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯಬೇಕು. ಇಲ್ಲದಿದ್ದರೆ ಅಪರಾಧಿಗೆ ಅಪರಾಧ ಭಾವನೆಯೇ ಇಲ್ಲದಂತೆ ಆಗುತ್ತದೆ.

–ಸುರೇಂದ್ರ ಪೈ, ಭಟ್ಕಳ

**

ಮಹಾತ್ಮರ ವ್ಯಕ್ತಿತ್ವ ಅರ್ಥವಾಗುವುದು ಮಹಾತ್ಮರಿಗೇ

‘ಗಾಂಧಿ ಎಂಬ ವರ್ತಮಾನದ ಜರೂರು’ ಎಂಬ ಕಿರಣ್ ಎಂ. ಗಾಜನೂರು ಅವರ ಲೇಖನ (ಪ್ರ.ವಾ., ಅ. 2), ರಾಜೇಂದ್ರಕುಮಾರ್ ಡಿ. ಮುದ್ನಾಳ್ ಮತ್ತು ರೇವಣ್ಣ ಎಂ.ಜಿ. ಅವರ ಪತ್ರಗಳು (ವಾ.ವಾ., ಅ. 2, 3) ಗಾಂಧಿಯವರ ಚಾರಿತ್ರ್ಯಹನನ ಮಾಡುವವರ ಕುರಿತು ಆತಂಕ ವ್ಯಕ್ತಪಡಿಸಿವೆ. ಗಾಂಧೀಜಿ ಕುರಿತ ಕಪೋಲಕಲ್ಪಿತ ಅಸಹ್ಯ ವಿಚಾರಗಳಿಂದ ನಾನೂ ಗೊಂದಲಕ್ಕೀಡಾಗಿದ್ದೆ. ಆದರೆ ಇಬ್ಬರು ಮಹಾತ್ಮರು ಅವರ ಬಗೆಗೆ ವ್ಯಕ್ತಪಡಿಸಿದ ಅಭಿಪ್ರಾಯ ಗಳಿಂದ ನನ್ನಲ್ಲಿ ಉಂಟಾಗಿದ್ದ ತಪ್ಪುಕಲ್ಪನೆಯನ್ನು ಹೋಗಲಾಡಿಸಿಕೊಂಡೆ.

ಆತ್ಮಸಾಕ್ಷಾತ್ಕಾರದ ಅತ್ಯುನ್ನತ ನೆಲೆಗೇರಿದ್ದ ಮಹಾ ತಪಸ್ವಿ ರಮಣ ಮಹರ್ಷಿ ಹೀಗೆ ಹೇಳಿದ್ದಾರೆ: ‘ಹನುಮಂತ ಅತ್ಯಂತ ವಿನಯವಂತ, ನಮ್ರಜೀವಿ. ಆದರೆ ಅಪಾರ ಶಕ್ತಿವಂತ. ಅವನು ಚಿರಂಜೀವಿ ಎಂದು ನಾವು ಹೇಳುತ್ತೇವಷ್ಟೆ. ಅಂದರೆ ಅಂಥ ಒಬ್ಬ ನಿರ್ದಿಷ್ಟ ವಾನರವೀರ ಎಂದೆಂದೂ ಬದುಕಿರುತ್ತಾನೆ ಎಂದರ್ಥವಲ್ಲ. ಎಲ್ಲ ಕಾಲದಲ್ಲೂ ರಾಮಶಕ್ತಿಯನ್ನು ಆರಾಧಿಸುವ ಅಂಥ ಒಬ್ಬ ಅಸಾಧಾರಣ ವ್ಯಕ್ತಿ ಇರುತ್ತಾನೆಂದು ಅರ್ಥ. ಗಾಂಧಿ ಅಂಥ ಒಬ್ಬ ವ್ಯಕ್ತಿ’ (‘ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ’- ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ). ನಡೆದಾಡುವ ದೇವರೆಂದು ಖ್ಯಾತಿ ಪಡೆದ ಸಿದ್ಧೇಶ್ವರ ಸ್ವಾಮಿ ತಮ್ಮ ಪ್ರವಚನದಲ್ಲಿ ಗಾಂಧಿಯವರ ಸತ್ಯ, ಅಹಿಂಸೆ, ತ್ಯಾಗದ ಗುಣಗಳನ್ನು ಕೊಂಡಾಡು
ತ್ತಿದ್ದರು. ಈ ಇಬ್ಬರು ಮಹಾತ್ಮರು ಆಸೆ ಅಳಿದ ಸರ್ವಸಂಗ ಪರಿತ್ಯಾಗಿಗಳಾಗಿದ್ದರು. ಮಹಾತ್ಮರ ವ್ಯಕ್ತಿತ್ವ ಮಹಾತ್ಮರಿಗೇ ಅರ್ಥವಾಗುತ್ತದೆ ವಿನಾ ದುರಾತ್ಮರಿಗಲ್ಲ! ಗಾಂಧೀಜಿಯ ಚಾರಿತ್ರ್ಯವಧೆ ಮಾಡುವ ವ್ಯಕ್ತಿಗಳ ಉದ್ದೇಶವು ವಿಕೃತ ಆನಂದ ಪಡೆಯುವುದಾಗಿರುತ್ತದೆಯೇ ವಿನಾ ಬೇರೇನೂ ಅಲ್ಲ.

–ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.