ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
   

ಸಿಗ್ನಲ್‌ ಅವಾಂತರ: ಬೇಕು ಎಚ್ಚರ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ಜಿಲ್ಲೆಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲಿಗೆ ಸರಕು ಸಾಗಣೆ ರೈಲೊಂದು ಇತ್ತೀಚೆಗೆ ಹಿಂದಿನಿಂದ ಡಿಕ್ಕಿ ಹೊಡೆದು ಸಂಭವಿಸಿದ ಸಾವು– ನೋವಿನ ದುರಂತದ ಸುದ್ದಿಯನ್ನು ಓದಿದಾಗ, ನನ್ನ ಜೀವನದಲ್ಲಿ ನಡೆದ ರೈಲು ದುರಂತವೊಂದರಲ್ಲಿ ಕೂದಲೆಳೆಯ ಅಂತರದಲ್ಲಿ ನಾನು ಬದುಕಿಬಂದದ್ದು ನೆನಪಾಗಿ ಮೈ ಝುಂ ಎಂದಿತು. ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆ. ಆಂಧ್ರಪ್ರದೇಶದ ಪೆನುಕೊಂಡ ಬಳಿ, ನಿಂತಿದ್ದ ಸರಕು ಸಾಗಣೆ ರೈಲಿಗೆ ಇದೇ ರೀತಿ ನಮ್ಮ ರೈಲು ಡಿಕ್ಕಿ ಹೊಡೆಯಿತು. ಆಗ ಮೂರನೇ ಬೋಗಿಯಲ್ಲಿ ಕುಳಿತಿದ್ದ ಬಹುತೇಕರು ಮೃತರಾಗಿದ್ದರು. ಅದೇ ಬೋಗಿಯಲ್ಲಿದ್ದ ನಾನು, ಒಳಗಿದ್ದ ಫ್ಯಾನ್‌ನಲ್ಲಿ ಬೆಂಕಿಯ ಕಿಡಿ ಹಾರುತ್ತಿದ್ದುದನ್ನು ಕಂಡು ಕೂಡಲೇ ಬೋಗಿಯಿಂದ ಹೊರಕ್ಕೆ ಜಿಗಿದೆ. ಕೆಲವೇ ಸೆಕೆಂಡುಗಳಲ್ಲಿ ನಮ್ಮ ಬೋಗಿಯು ಹೊತ್ತಿ ಉರಿಯತೊಡಗಿತು.

ಯಾರದೋ ನಿಷ್ಕಾಳಜಿಯಿಂದ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡರು. ನಂತರ ನಮಗೆ ಬಸ್ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳಿಸಿಕೊಟ್ಟರು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಸಿಗ್ನಲ್ ಅವಾಂತರ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವ ಕೆಲಸ ಆಗಬೇಕಾಗಿದೆ.

ADVERTISEMENT

–ಕಾಶೀನಾಥ ಪಿ. ಸಾಲಿಮಠ, ನರೇಗಲ್ಲ 

**

ಸ್ವಾಯತ್ತತೆ ಇಲ್ಲದ ಸಂಸ್ಥೆಗಳಲ್ಲಿ...

ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿಗಳು, ಸಂಸ್ಥೆಗಳ ಕುರಿತು ಪ್ರಭುತ್ವದ ನಿಲುವು ಅಚ್ಚರಿ ಮೂಡಿಸದು. ಕುಮಾರವ್ಯಾಸ ಬಹಳ ಹಿಂದೆಯೇ ಹೇಳಿದಂತೆ ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ...’ ಎಂಬ ಮಾತು ಸಾರ್ವಕಾಲಿಕ ಸತ್ಯ. ಯಾವುದೇ ಪಕ್ಷದ ಅಥವಾ ಯಾವುದೇ ವ್ಯವಸ್ಥೆಯ ಪ್ರಭುತ್ವ ಇರಲಿ ಅದು ಬಯಸುವುದು ವಿಧೇಯತೆಯನ್ನು ಮಾತ್ರ. ಪ್ರಶ್ನಿಸುವ, ಪ್ರತಿಭಟಿಸುವ, ಸ್ವತಂತ್ರ ವಿಚಾರಧಾರೆಯನ್ನು ಪ್ರಭುತ್ವ ಸಹಿಸದು. ಇತ್ತೀಚಿನ ವರ್ಷಗಳಲ್ಲಿ, ಸಾಹಿತ್ಯಕ, ಬೌದ್ಧಿಕ ವಲಯದ ಕುರಿತು ರಾಜಕೀಯ ವಲಯದಲ್ಲಿ ಅಸಹನೆ ಇನ್ನೂ ಹೆಚ್ಚಾಗಿದೆ. ಆದರೆ ಇದೆಲ್ಲವನ್ನೂ ಸಾಹಿತ್ಯ ಮತ್ತು ಸಾಹಿತಿ ಆದವನು ಮೀರಬೇಕು. ಸಾಹಿತ್ಯದಿಂದ ದೂರವಾಗಿರುವ ರಾಜಕಾರಣ ಮತ್ತು ರಾಜಕಾರಣಿ, ರಾಜಕಾರಣಕ್ಕೆ ಹತ್ತಿರವಾಗಿರುವ ಸಾಹಿತಿ ಮತ್ತು ಸಾಹಿತ್ಯದ ಪರಿಸರದಲ್ಲಿ ಇದೆಲ್ಲ ನಿರೀಕ್ಷಿತವೇ. ಸಾಹಿತಿಗಳ ನೆರವಿ ರಾಜಕಾರಣಿಗಳ ಸುತ್ತ ಠಳಾಯಿಸುತ್ತಿರುವಾಗ ಮತ್ತು ‘ದಣಿ ಹೇಳುವ ಮೊದಲೇ ಕಾಲೊತ್ತುವ’ ಜನರಿರುವಾಗ ಇದೆಲ್ಲ ಸಹಜವಾಗುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ವಲಯದ ಸಂಸ್ಥೆಗಳನ್ನು ವೃತ್ತಿಪರ ರಾಜಕಾರಣಿಗಳೇ ಆಕ್ರಮಿಸಿಕೊಂಡು ಮೆರೆವ, ಮೊರೆವ ದಿನಗಳು ದೂರವಿಲ್ಲ. ಅದಾಗಲೇ ಆರಂಭಗೊಂಡಿದೆ. ಆಗಲಿ ಬಿಡಿ. ಹಾಗಾದರೂ ಅವರ ಅಧಿಕಾರಲಾಲಸೆ ತಣಿಯಲಿ ಅಥವಾ ಉಪಮುಖ್ಯಮಂತ್ರಿಯವರ ಊಹೆಯಂತೆ ಸಾಹಿತಿಗಳೇ ವೃತ್ತಿಪರ ರಾಜಕಾರಣಿಗಳಾಗಲೂಬಹುದು. 

ಕುವೆಂಪು ಆದಿಯಾಗಿ ನಮ್ಮ ಸಾಹಿತ್ಯ ಲೋಕದ ಪೂರ್ವಸೂರಿಗಳು ಪ್ರಭುತ್ವದ ಕುರಿತು ತಾಳಿದ ಮತ್ತು ತಾಳಬೇಕಾದ ನಿಲುವು, ನಡೆ-ನುಡಿಗಳು ಎಂದಿಗೂ ಎಲ್ಲ ಕಾಲಕ್ಕೂ ಸಾಹಿತಿಗಳಿಗೆ ಒದಗಿಬರುವ ನಿದರ್ಶನಗಳಾಗಬೇಕು. ಸ್ವಾಯತ್ತತೆ ಇಲ್ಲದ ಸಂಸ್ಥೆಗಳಲ್ಲಿ ಸ್ವಾಭಿಮಾನ ಒತ್ತೆ ಇಟ್ಟು ಸಾಧಿಸುವುದಾದರೂ ಏನನ್ನು?

–ವೆಂಕಟೇಶ ಮಾಚಕನೂರ, ಧಾರವಾಡ 

**

ಕೆ–ಸೆಟ್‌: ಬದಲಾಗಲಿ ಸಮಯದ ಅವಧಿ

ಇತ್ತೀಚೆಗೆ ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಓಎಂಆರ್ ಪದ್ಧತಿಯನ್ನು ತಂದಿದ್ದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಯಿತು. ಈ ಹಿಂದೆ ನೆಟ್ ಪರೀಕ್ಷೆಯನ್ನು ಕಂಪ್ಯೂಟರ್ ವ್ಯವಸ್ಥೆ ಮೂಲಕ ನಡೆಸಲಾಗುತ್ತಿತ್ತು. ಇದರಿಂದ ಅಭ್ಯರ್ಥಿಗಳಿಗೆ ಅದರಲ್ಲೂ ಕಂಪ್ಯೂಟರ್ ಜ್ಞಾನ ಇಲ್ಲದವರಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೆ ಈಗ ಓಎಂಆರ್ ಪದ್ಧತಿ ತಂದಿರುವುದರಿಂದ ಮತ್ತು ಪತ್ರಿಕೆ-1 ಹಾಗೂ ಪತ್ರಿಕೆ-2ರಿಂದ ಒಟ್ಟಿಗೆ 3 ಗಂಟೆಯ ಸಮಯ ನಿಗದಿಪಡಿಸಿರುವುದರಿಂದ ಎಲ್ಲಾ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ.

ಆದರೆ ರಾಜ್ಯದಲ್ಲಿ ಕೆ–ಸೆಟ್ ಪರೀಕ್ಷೆಯ ಪೇಪರ್-1 ಸಾಮಾನ್ಯ ಪತ್ರಿಕೆಗೆ 1 ಗಂಟೆ ಸಮಯ ನಿಗದಿಗೊಳಿಸಲಾಗಿದೆ. ಈ ಪತ್ರಿಕೆಯಲ್ಲಿ ಲೆಕ್ಕ ಮಾಡಬೇಕಾಗಿ ಬರುವುದರಿಂದ ಸಮಯದ ಅಭಾವ ತಲೆದೋರಿ, ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣವಾಗಿ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಂತರದಲ್ಲಿ ಒಂದು ಗಂಟೆ ಸಮಯ ವಿರಾಮ ಇರುತ್ತದೆ. ಆನಂತರ ಆಯಾ ವಿಷಯಕ್ಕೆ ಸಂಬಂಧಿಸಿದ ಪೇಪರ್- 2ಕ್ಕೆ 2 ಗಂಟೆ ಸಮಯವಿರುತ್ತದೆ. ಹೀಗೆ ಕೆ–ಸೆಟ್ ಪರೀಕ್ಷೆಯ ಸಮಯವನ್ನು ಪ್ರತ್ಯೇಕವಾಗಿ ನಿಗದಿಗೊಳಿಸಲಾಗಿದೆ. ಯುಜಿಸಿ-ನೆಟ್ ಪರೀಕ್ಷೆಯಂತೆ ಮುಂಬರುವ ಕೆ–ಸೆಟ್ ಪರೀಕ್ಷೆಯಲ್ಲಿ ಸಾಮಾನ್ಯ ಪತ್ರಿಕೆ ಮತ್ತು ಆಯಾ ವಿಷಯದ ಪತ್ರಿಕೆಯ ಸಮಯವನ್ನು ಪ್ರತ್ಯೇಕಗೊಳಿಸದೆ ಒಟ್ಟಿಗೆ 3 ಗಂಟೆ ಸಮಯವನ್ನು ನಿಗದಿಗೊಳಿಸಿ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು.

–ಮಹೇಶ್‍ ಕೂದುವಳ್ಳಿ, ಚಿಕ್ಕಮಗಳೂರು

**

ಮಶ್ರೂಮ್...ಮಶ್ರೂಮ್!

ಮನೆ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ ‘ಮಶ್ರೂಮ್, ಮಶ್ರೂಮ್...’ ಎಂಬ ಕೂಗು ಕೇಳಿತು. ಹೋಗಿ ನೋಡಿದರೆ ಪರಿಚಯದ ಈರಪ್ಪ ‘ಕೋಲ್ ಅಣಬೆ, ಕೊಡೆ ಅಣಬೆ ಕೊಡ್ಲಾ ಸಾರ್?’ ಎಂದ. ಮುಂಗಾರಿನ ಹದವಾದ ಮಳೆಗೆ ಮಲೆನಾಡಿನಲ್ಲಿ ಹಳೆಯ ಮರಗಳ ಕೆಳಗೆ, ಸಡಿಲ ಮಣ್ಣಿನ ಆಸರೆಯಲ್ಲಿ ಪುಟಿದೇಳುವ ಅಣಬೆಗಳು ಕೆಲವೇ ಗಂಟೆ ಜೀವಿಸಿರುತ್ತವೆ! ಇವುಗಳಿಂದ ಮಾಡುವ ಖಾದ್ಯ ತುಂಬಾ ರುಚಿ. ‘ನೀನೇನು ಅಣಬೆ ಅನ್ನುವುದು ಬಿಟ್ಟು ಮಶ್ರೂಮ್ ಅನ್ನುತ್ತಿದ್ದೀಯಲ್ಲ?’ ಎಂದೆ. ‘ಕಾಲ ಬದಲಾದಂತೆ ನಾವೂ ಅದಕ್ಕೆ ತಕ್ಕಂತೆ ಬದಲಾಗಬೇಕು ತಾನೇ?!’ ಎಂದನಾತ. ದರ ಕೇಳಿದರೆ ಕೆ.ಜಿ.ಗೆ ‘ನಾನೂರು’ ಅಂದ. ಚೌಕಾಸಿ ಮಾಡಿ ಕೊನೆಗೆ ₹ 240ಕ್ಕೆ ಕೊಂಡೆ. ಇದು ಬೇಕೆಂದಾಗಲೆಲ್ಲ ಸಿಗುವುದಿಲ್ಲ. ಮಳೆಗಾಲದ ಶುರುವಿನಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಸಿಗುವ ಅಣಬೆ; ಅಲ್ಲ, ಅಲ್ಲ... ಮಶ್ರೂಮ್! 

–ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.