ಚುಟುಕು ಸಾಹಿತ್ಯ ಕೃತಿ: ಕಡೆಗಣನೆ ಏಕೆ?
ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2021ನೇ ಸಾಲಿಗಾಗಿ ಸುಮಾರು 3,000 ಪುಸ್ತಕಗಳನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಈ ಸಲ ಚುಟುಕು ಸಾಹಿತ್ಯ ಪ್ರಕಾರದ ಒಂದೇ ಒಂದು ಕೃತಿಯನ್ನೂ ಆಯ್ಕೆ ಮಾಡಿಲ್ಲ ಎನ್ನಲಾಗಿದೆ. ಹಾಗಿದ್ದರೆ ಚುಟುಕು ಕಾವ್ಯ ಪ್ರಕಾರವಲ್ಲ ಎಂಬುದು ಆಯ್ಕೆ ಸಮಿತಿಯವರ ಭಾವನೆಯೇ? ಹಾಗೆ ಭಾವಿಸಿದ್ದರೆ ಅದು ಅವರ ತಪ್ಪುಕಲ್ಪನೆ. ಏಕೆಂದರೆ ಸಿ.ಪಿ.ಕೆ. ಅವರಂತಹ ವಿದ್ವಾಂಸರು ‘ಚುಟುಕು ಮನುಕುಲದ ಆದಿಕಾವ್ಯ’ ಎಂದು ಬಣ್ಣಿಸಿದ್ದಾರೆ. ದೇಜಗೌ, ಚದುರಂಗ, ದಿನಕರ ದೇಸಾಯಿ, ಅಕಬರ ಅಲಿ, ಚೆನ್ನವೀರ ಕಣವಿ, ಎಚ್.ಡುಂಡಿರಾಜ್, ಜಿನದತ್ತ ದೇಸಾಯಿ, ಬಿ.ಆರ್.ಲಕ್ಷ್ಮಣರಾವ್, ಬಿ.ಟಿ.ಲಲಿತಾ ನಾಯಕ್... ಇವರೆಲ್ಲ ಚುಟುಕು ಸಾಹಿತ್ಯ ರಚಿಸಿದ್ದಾರೆ, ಪ್ರಸಿದ್ಧರಾಗಿದ್ದಾರೆ.
ಹಿಂದಿನ ಮೂರು ದಶಕಗಳಲ್ಲಿ ರಾಜ್ಯದಾದ್ಯಂತ ಹನಿಗವನ ಬರೆಯುವವರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಬೆಳೆದಿದೆ ಮತ್ತು ಪ್ರತಿವರ್ಷ ಪ್ರಕಟವಾಗುವ ಚುಟುಕು ಕಾವ್ಯ ಕೃತಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸಾಹಿತ್ಯ ಸಮ್ಮೇಳನಗಳಲ್ಲೂ ಮೈಸೂರು ದಸರಾದಂತಹ ಸಂದರ್ಭಗಳಲ್ಲೂ ಚುಟುಕು ಕಾವ್ಯಗೋಷ್ಠಿಗಳಿಗೆ ಅವಕಾಶ ದೊರಕುವಂತಾಗಿದೆ. ಆದರೆ ಅದಾವ ಕಾರಣದಿಂದ ಸಮಿತಿಯು ಚುಟುಕು ಕಾವ್ಯಕೃತಿಗಳನ್ನು ಸ್ವೀಕರಿಸದಿರಲು ನಿರ್ಧರಿಸಿತೋ ತಿಳಿಯದು. ಚುಟುಕು ರಚನೆ ಸುಲಭವೇನಲ್ಲ. ಕಡಿಮೆ ಸಾಲು, ಕಡಿಮೆ ಪದಗಳಲ್ಲಿ ಹಿರಿದಾದ ಅರ್ಥ, ಸೊಗಸು ತರುವುದಕ್ಕೆ ವಿಶೇಷ ಕಾವ್ಯಪ್ರತಿಭೆ ಬೇಕು. ಇಲಾಖೆ ಕೂಡಲೇ ತನ್ನ ಈ ತಪ್ಪು ನಿರ್ಧಾರವನ್ನು ಹಿಂಪಡೆದು ಚುಟುಕು ಕಾವ್ಯದ ಉತ್ತಮ ಕೃತಿಗಳನ್ನು ಆಯ್ಕೆ ಮಾಡಲಿ. ಚುಟುಕು ಸಾಹಿತ್ಯಕ್ಕೆ ಸಲ್ಲಬೇಕಾದ ಮನ್ನಣೆಯನ್ನು ಸಲ್ಲಿಸಲಿ.
-ಎಲ್.ಎಸ್.ಶಾಸ್ತ್ರಿ, ಬೆಳಗಾವಿ
**
ಬಾಟಲಿ ನೀರಿನ ವ್ಯಾಪಾರಿ ತಂತ್ರ
ಈಗ ಕೆಲವು ಹೋಟೆಲುಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಆಹಾರ ವಿತರಿಸುವ ಮುಂಚೆ ಟೇಬಲ್ ಮೇಲೆ ಕಡ್ಡಾಯವಾಗಿ ಇಡುತ್ತಾರೆ. ಇದು ವ್ಯಾಪಾರಿ ತಂತ್ರವಿರಬಹುದು. ಆದರೆ ಗ್ರಾಹಕರಿಗೆ ಇದರಿಂದ ಆರ್ಥಿಕವಾಗಿ ಹೆಚ್ಚಿನ ಹೊರೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ಪ್ಲಾಸ್ಟಿಕ್ ಕಸದ ರಾಶಿ. ಏಕೆ ಎಲ್ಲ ಹೋಟೆಲ್‌ಗಳೂ ನೀರು ಶುದ್ಧೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಾರದು? ಇನ್ನು ಮದುವೆ ಕಾರ್ಯಕ್ರಮದಲ್ಲಿನ ಪ್ಲಾಸ್ಟಿಕ್ ನೀರಿನ ಬಾಟಲಿ ಹಾವಳಿ ನೋಡಿದರೆ ಬೇಸರವಾಗುತ್ತದೆ. ವಿದ್ಯಾವಂತರು, ಉಳ್ಳವರೇ ಹೀಗೆ ಮಾಡಿದರೆ ಜನರಲ್ಲಿ ಜಾಗೃತಿ ಮೂಡುವುದಾದರೂ ಹೇಗೆ?
-ಗುರು ಜಗಳೂರು, ಹರಿಹರ
**
ತಾಜ್‌ಮಹಲ್‌ಗೆ ಪುಸ್ತಕ ಒಯ್ಯಬಾರದೇಕೆ?
ವಿಶ್ವವಿಖ್ಯಾತ ಸ್ಮಾರಕ ತಾಜ್‌ಮಹಲ್ ಅನ್ನು ನೋಡಲು ಇತ್ತೀಚೆಗೆ ಪತಿ ಮತ್ತು ತಾಯಿಯೊಡನೆ ಹೋಗಿದ್ದೆ. ಪ್ರವೇಶದ್ವಾರದ ಬಳಿ ಎಲ್ಲಾ ಸ್ಮಾರಕಗಳಲ್ಲಿ ಇರುವಂತೆ ಇಲ್ಲೂ ಚೆಕಿಂಗ್ ಇತ್ತು. ಪುಸ್ತಕಪ್ರೇಮಿಯಾದ ನಾನು ನನ್ನ ಬ್ಯಾಗ್‍ನಲ್ಲಿ ಯಾವಾಗಲೂ ಯಾವುದಾದರೊಂದು ಪುಸ್ತಕವನ್ನು ಇಟ್ಟುಕೊಂಡಿರುತ್ತೇನೆ. ಹಾಗೆ ಅಂದೂ ಯಾವುದೋ ಒಂದು ಪುಸ್ತಕ ನನ್ನ ಚೀಲದಲ್ಲಿ ಇತ್ತು. ಚೆಕಿಂಗ್ ಅಧಿಕಾರಿಗಳು ನನ್ನ ಚೀಲವನ್ನು ಚೆಕ್ ಮಾಡಿ ಪುಸ್ತಕ ಹೊರತೆಗೆದು, ‘ಇದನ್ನು ಒಳಗೆ ಕೊಂಡುಹೋಗುವ ಹಾಗೆ ಇಲ್ಲ’ ಎಂದರು ಮತ್ತು ಅಲ್ಲೇ ಇದ್ದ ಕಸದಬುಟ್ಟಿಗೆ ನಿರ್ದಯವಾಗಿ ಎಸೆದರು. ‘ದಯವಿಟ್ಟು ಹಾಗೆ ಮಾಡಬೇಡಿ. ಇದು ಅಮೂಲ್ಯ ಪುಸ್ತಕ. ನನಗೆ ಬೇಕೇ ಬೇಕು. ಯಾಕೆ ಇದನ್ನು ಒಯ್ಯಬಾರದು? ಇದರಿಂದ ಆಗುವ ಹಾನಿ ಏನು?’ ಎಂದು ಕೇಳಿದೆ. ‘ಕ್ಷಮಿಸಿ. ಇದು ಇಲ್ಲಿನ ರೂಲ್ಸ್. ನಾವು ಏನೂ ಮಾಡುವ ಹಾಗೆ ಇಲ್ಲ’ ಎಂದರು. ‘ಹಾಗಾದರೆ ತೆಗೆದು ಇಡಿ. ವಾಪಸ್ ಬರುವಾಗ ತೆಗೆದುಕೊಳ್ಳುತ್ತೇನೆ’ ಎಂದು ವಿನಂತಿಸಿದೆ. ‘ಅದು ಆಗುವುದಿಲ್ಲ. ನೀವು ಹೊರಹೋಗುವ ದಾರಿಯೇ ಬೇರೆ’ ಎಂದು ಹೇಳಿದರು. ನಾನು ವಿನಂತಿಸಿದ್ದಷ್ಟೇ ಬಂತು. ಪುಸ್ತಕವನ್ನು ನನಗೆ ಕೊಡಲಿಲ್ಲ.
ಚೂರಿ, ಪಿಸ್ತೂಲ್, ಗ್ಯಾಸ್, ಮದ್ಯ, ಬೆಂಕಿಪೆಟ್ಟಿಗೆಯಂತಹ ವಸ್ತುಗಳನ್ನು ಒಳಗೆ ಬಿಡದೇ ಇರುವುದಕ್ಕೆ ಒಂದು ಅರ್ಥ ಉಂಟು. ಆದರೆ ನಿರುಪದ್ರವಿಯಾದ ಪುಸ್ತಕವನ್ನು ತಾಜ್‌ಮಹಲ್ ಆವರಣದ ಒಳಗೆ ಯಾಕೆ ಒಯ್ಯಬಾರದು ಎಂಬ ನನ್ನ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
-ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ
**
ಜಾತಿ ಜನಗಣತಿಯಿಂದ ಹಲವು ಪ್ರಶ್ನೆಗೆ ಉತ್ತರ
ರಾಜ್ಯದಲ್ಲಿ ಪ್ರಸ್ತುತ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವ ವಿದ್ಯಮಾನಗಳಲ್ಲಿ ಅತಿ ಮುಖ್ಯವಾದುದೆಂದರೆ ಜಾತಿ ಜನಗಣತಿ. ಸಿದ್ದರಾಮಯ್ಯ ಅವರ ಅಧಿಕಾರದ ಮೊದಲ ಅವಧಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಉಸ್ತುವಾರಿಯಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ವರದಿಯು ತಡವಾಗಿಯಾದರೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವಿಷಯ ಹೀಗಿರುವಾಗ, ವರದಿ ಬಿಡುಗಡೆಗೆ ಹಿಂದೆಮುಂದೆ ನೋಡುತ್ತಿರುವುದು ಏಕೆ ಎಂಬುದು ಸಾಮಾಜಿಕ ನ್ಯಾಯ ಪ್ರತಿಪಾದಕರ ಒಕ್ಕೊರಲಿನ ಪ್ರಶ್ನೆ. ರಾಜ್ಯದ ವಿವಿಧ ಸಮುದಾಯಗಳ ಸ್ಥಿತಿಗತಿ ಅರಿಯಲು ಇದರಿಂದ ಅನುಕೂಲ ಆಗಲಿದೆ.
ವಿರೋಧಿಸುವವರು ವಿರೋಧಿಸಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ರಾಜ್ಯದ ಬಹುಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗೆ ಸಂಬಂಧಿಸಿದ ಹಲವು ಆಯಾಮಗಳು ಈ ವರದಿಯ ಮುಖಾಂತರ ರಾಜ್ಯದ ಜನರಿಗೆ ಹಾಗೂ ಆಡಳಿತಾರೂಢರಿಗೆ ತಿಳಿಯುತ್ತವೆ. ವರದಿಯಲ್ಲಿ ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅಡಿಯಲ್ಲಿ ಆ ಸಮುದಾಯಗಳು ಅಭಿವೃದ್ಧಿಯಾಗಿವೆಯೋ ಅಥವಾ ಹಿಂದುಳಿದಿವೆಯೋ ಎಂಬಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಜೊತೆಗೆ ಹಿಂದುಳಿದವರ ಅಭಿವೃದ್ಧಿಗಾಗಿ ಸರ್ಕಾರ ಹಮ್ಮಿಕೊಳ್ಳುವ ಭವಿಷ್ಯದ ಕಾರ್ಯಕ್ರಮಗಳಿಗೆ ಇದು ದಿಕ್ಸೂಚಿಯೂ ಆಗುತ್ತದೆ.
-ಬೀರಪ್ಪ ಡಿ. ಡಂಬಳಿ, ಕೋಹಳ್ಳಿ, ಅಥಣಿ
**
‘ಕೈ’ಗೆ ಬಂದ ತುತ್ತು...
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ಸೋಲಿಗೆ ಸರಿಹೊಂದುವ ಗಾದೆ
‘ಕೈ’ಗೆ ಬಂದ ತುತ್ತು
ಬಾಯಿಗೆ ಬರಲಿಲ್ಲ!
-ಆನಂದ ರಾಮತೀರ್ಥ ಜಮಖಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.