ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
   

ಹಂಪನಾ ಅವರಿಗೆ ಹಕ್ಕು ಇದೆ

ನಾರಾಯಣರಾವ ಕುಲಕರ್ಣಿಯವರು ತಮ್ಮ ಪತ್ರದಲ್ಲಿ (ವಾ.ವಾ., ಅ. 5) ದಸರಾದಂತಹ ಸಾಂಸ್ಕೃತಿಕ, ಧಾರ್ಮಿಕ ವೇದಿಕೆಯೊಂದರಲ್ಲಿ ಸಾಹಿತಿ ಹಂಪನಾ ಅವರು ‘ಸರ್ಕಾರಗಳನ್ನು ಉರುಳಿಸುವ ದುರಾಲೋಚನೆಯ’ ಬಗ್ಗೆ ಮಾತನ್ನಾಡಿರುವ ಕುರಿತು ಆಕ್ಷೇಪ ಎತ್ತಿದ್ದಾರೆ.

ಆದರೆ, ಹಂಪನಾ ಮಾತನಾಡಿರುವುದರಲ್ಲಿ ತಪ್ಪೇನಿದೆ? ರಾಜಕೀಯ ಕ್ಷೇತ್ರವೂ ನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಚುನಾಯಿತ ಸರ್ಕಾರಗಳನ್ನು ಅಕ್ರಮವಾಗಿ ಉರುಳಿಸುವ ಕೆಟ್ಟ ಚಾಳಿ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗದೆ, ಎಲ್ಲ ಪಕ್ಷಗಳನ್ನೂ ಕಾಡುತ್ತಿರುವ ಸಾಂಕ್ರಾಮಿಕ ರೋಗದಂತೆ ಆಗಿದೆ! ಅದು ಬೀರುವ ದುಷ್ಪರಿಣಾಮವು ಸಮಾಜದ ಎಲ್ಲ ಕ್ಷೇತ್ರಗಳನ್ನೂ ಕಲುಷಿತಗೊಳಿ
ಸಿದೆ. ಈ ಬಗ್ಗೆ ಬಹಳಷ್ಟು ಚರ್ಚೆಗಳು ಸಾರ್ವಜನಿಕ ವೇದಿಕೆಗಳಲ್ಲಿ ನಡೆದಿವೆ, ನಡೆಯುತ್ತಿವೆ ಕೂಡ.

ADVERTISEMENT

ಹೀಗಾಗಿ ಈ ಬಗ್ಗೆ ಸಾಹಿತ್ಯದ ಮೂಲಕ ಅಥವಾ ನಡೆ, ನುಡಿಯ ಮೂಲಕ ಆಕ್ಷೇಪವನ್ನು ಸಾರ್ವಜನಿಕವಾಗಿ
ಅಭಿವ್ಯಕ್ತಿಸುವ ಸರ್ವ ಹಕ್ಕು ಹಂಪನಾರಂತಹ ಸಾಹಿತಿಗಳಿಗೆ ಇದ್ದೇ ಇದೆ!

–ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

**

ಸರ್ಕಾರಕ್ಕೆ ಕೊಂಚ ನಾಚಿಕೆ ಎಂಬುದಿದ್ದರೆ?

ನಾನು ಮತ್ತು ನನ್ನ ಮೊಮ್ಮಗ 3–4 ದಿನಗಳ ಮಟ್ಟಿಗೆ ಮಲೆನಾಡಿನ ಶೃಂಗೇರಿ, ಕೊಲ್ಲೂರು, ಕೊಡಚಾದ್ರಿ, ಜೋಗ ಮುಂತಾದ ಸ್ಥಳಗಳನ್ನು ನೋಡಿ ಬರುವುದೆಂದು ಅ. 2ರ ರಾತ್ರಿ 11ಕ್ಕೆ ಹೊರಟು ಶಿವಮೊಗ್ಗ ತಲುಪಿದೆವು. ಅಲ್ಲಿಂದ ನಮ್ಮ ಸ್ನೇಹಿತನ ಕಾರಿನಲ್ಲಿ ಹರಿಹರಪುರಕ್ಕೆ ಹೋಗಿ, ಅಲ್ಲಿ ಮೂರು ದಿನ ತಂಗಿದ್ದೆವು. ಅ. 6ರಂದು ವಾಪಸ್ ಬರಲು ರೈಲು ಸಿಗದ ಕಾರಣ ಅದೇ ರಾತ್ರಿ ಸರ್ಕಾರಿ ಐಷಾರಾಮಿ ಬಸ್‍ನಲ್ಲಿ ಬೆಂಗಳೂರಿಗೆ ಬರಬೇಕಾಯಿತು. ಆದರೆ ಆ ಸ್ಲೀಪಿಂಗ್ ಕೋಚ್ ಪ್ರಯಾಣ ಅತ್ಯಂತ ತ್ರಾಸದಾಯಕ ಆಗಿತ್ತು.

ಅದೊಂದು ಹಳೆಯ ಲಟಾರಿ ಬಸ್! ಮಲಗುವ ಆಸನಗಳ ಪಕ್ಕದ ಪರದೆಗಳು ಗಾಳಿಗೆ ಅತ್ತಿಂದಿತ್ತ ಸರಿದು ಹೋಗುತ್ತಿದ್ದವು! ಕಿಟಕಿಯ ಗ್ಲಾಸ್ ಲಾಕರ್‌ಗಳು ಚೇಳಿನ ಕೊಂಡಿಯಂತೆ ನೆಟ್ಟಗೆ ನಿಂತುಕೊಂಡಿದ್ದು ಒಂದಕ್ಕೊಂದು ಕೂಡುವುದೇ ಇಲ್ಲವಾಗಿತ್ತು; ಸಡಿಲ ಬೋಲ್ಟು–ನಟ್ಟುಗಳು ಕರ್ಕಶವಾಗಿ ಸದ್ದು ಮಾಡುತ್ತಿದ್ದವು; ರಸ್ತೆಯೋ ಗುಂಡಿ ಗುದ್ದರಗಳ ಆಗರ; ಬಹಿರ್ದೆಸೆಗೆ ಶೌಚಾಲಯಗಳಿಗೆ ಹೋದರೆ ಅಲ್ಲಿನ ದುರ್ನಾತ ನಮ್ಮ ಜೊತೆಗೆ ಬಸ್ಸಿಗೂ ಏರುವುದು! ಚಾಲಕನಿಗೆ ‘ಇದೇನಯ್ಯಾ ಇಂಥ ಪರಿಸ್ಥಿತಿ’ ಎಂದರೆ ಆತ ನಾಚಿ ತಲೆ ಬಾಗಿಸಿದ. ಸರ್ಕಾರಕ್ಕಾದರೂ ಇಂಥ ನಾಚಿಕೆ-ಲಜ್ಜೆ ಎಂಬುದಿದ್ದರೆ ಅನ್ನಿಸಿತು!

–ಪ್ರೊ.ಶಿವರಾಮಯ್ಯ, ಬೆಂಗಳೂರು

**

ಕಲಬೆರಕೆ: ಸರ್ಕಾರದ ಪಾತ್ರವೇನು?

‘ಲಾಭದ ಕನವರಿಕೆ: ಆಹಾರ ಕಲಬೆರಕೆ’ ಸುದ್ದಿ ಓದಿ (ಪ್ರ.ವಾ., ಅ.6) ಆಶ್ಚರ್ಯವಾಗಲಿಲ್ಲ. ಬದಲಾಗಿ, ಸರ್ಕಾರದ ಆಡಳಿತದ ಬಗ್ಗೆ ಕೋಪ ಬಂತು, ಬೇಸರವಾಯಿತು. ಮನುಷ್ಯನ ಜೀವ ಇರುವುದೇ ಆಹಾರದಿಂದ. ಆಹಾರ ಕಲಬೆರಕೆ ಆಗದಂತೆ ಕ್ರಮ ಕೈಗೊಳ್ಳುವ ಹೊಣೆ ಸರ್ಕಾರದ್ದು.

ಸಮಾಜದ ಆರೋಗ್ಯ ಉಳಿಸಲು ಪರಿಣಾಮಕಾರಿಯಾಗಿ ಇದುವರೆಗೆ ಯಾವ ಪಕ್ಷದ ನೇತೃತ್ವದ ಸರ್ಕಾರವೂ ಕ್ರಮ ಕೈಗೊಂಡಿಲ್ಲ. ಆಹಾರ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆಗಳು ಲಾಭದ ಉದ್ದೇಶದ ದಂಧೆಗಳಾಗಿವೆ. ಆಹಾರಕ್ಕೆ ಎಲ್ಲೆಲ್ಲಿ ಏನೇನು ಕಲಬೆರಕೆಯಾಗುತ್ತಿದೆ, ಆಹಾರಕ್ಕೆ ಹೀಗೆ ಬೆರಕೆಯಾಗುವ ವಸ್ತುಗಳಿಂದಾಗಿ ಮುಂದೆ ಅದು ಯಾವ ರೋಗಗಳನ್ನು ಹೊತ್ತು ತರಲಿದೆ ಎಂಬ ಮಾಹಿತಿ ಆರೋಗ್ಯ ಇಲಾಖೆಗೂ ತಿಳಿದಿದೆ. ಆದರೆ, ಕಲಬೆರಕೆಯನ್ನು ತಡೆಯುವ ಮನಸ್ಸು ಮತ್ತು ಪ್ರಯತ್ನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಮಾಡುತ್ತಿಲ್ಲವಾದ್ದರಿಂದ ಕಲಬೆರಕೆಯಲ್ಲಿ ಭಾಗಿಯಾಗಿರುವವರ ಜೊತೆಯಲ್ಲಿ ಸರ್ಕಾರಗಳೂ ಸೇರಿಕೊಂಡಿವೆ ಎಂದೇ ಹೇಳಬೇಕಾಗುತ್ತದೆ.

–ತಾ.ಸಿ.ತಿಮ್ಮಯ್ಯ, ಬೆಂಗಳೂರು

**

ಮಳೆಯಿಂದ ರಕ್ಷಣೆ ಇಲ್ಲವೆಂದರೆ ಹೇಗೆ?

‘ಯುವ ದಸರಾಗೆ ವರುಣಾತಂಕ’ (ಪ್ರ.ವಾ., ಅ. 6) ಸುದ್ದಿಯನ್ನು ಓದಿ ದಿಗಿಲಾಯಿತು. ಮೈಸೂರಿನಲ್ಲಿ ನಡೆಯುವ ಯುವ ದಸರಾ ಕಾರ್ಯಕ್ರಮ ಮಕ್ಕಳು ಮತ್ತು ಯುವಕರಿಗೆ ಅಚ್ಚುಮೆಚ್ಚು. ಇಂತಹ ಕಾರ್ಯಕ್ರಮವು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದಾಗ ಪ್ರತಿವರ್ಷ ಪೆಂಡಾಲ್ ವ್ಯವಸ್ಥೆ ಇರುತ್ತಿತ್ತು. ಮಳೆ ಬಂದರೂ ತೊಂದರೆಯಿಲ್ಲದೆ ಜನ ಕಾರ್ಯಕ್ರಮ ನೋಡುತ್ತಿದ್ದರು.

ಈ ಬಾರಿ ಕೂಡ ಮಹಾರಾಜ ಕಾಲೇಜು ಮೈದಾನದಲ್ಲೇ ಯುವ ದಸರಾ ನಡೆಸುವಂತೆ ಜನರಿಂದ ಒತ್ತಾಯ ಇದ್ದರೂ ಲೆಕ್ಕಿಸದೆ, ಲಕ್ಷ ಜನ ಸೇರುತ್ತಾರೆ ಎಂದು ಉತ್ತನಹಳ್ಳಿಯಲ್ಲಿ ನೂರು ಎಕರೆ ಜಾಗದಲ್ಲಿ ಕಾರ್ಯಕ್ರಮ
ನಡೆಸುತ್ತಿದ್ದಾರೆ. ಆದರೆ ಪೆಂಡಾಲ್ ಹಾಕಿಲ್ಲ, ಮಳೆ ಬಂದರೆ ಜನ ದಿಕ್ಕಾಪಾಲಾಗಿ ಓಡಬೇಕು. ಈ ರೀತಿ ಮಾಡಿದರೆ ಮಕ್ಕಳು, ಮಹಿಳೆಯರು, ವೃದ್ಧರ ಗತಿ ಏನಾಗಬೇಕು? ದಸರೆಗೆ ₹40 ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ, ಕಾರ್ಯಕ್ರಮ ಆಯೋಜಕರಿಗೆ ಈ ಬಗ್ಗೆ ಅರಿವು ಇರಬೇಕಾಗಿತ್ತು ಅಲ್ಲವೇ? ಜನರ ಮನರಂಜನೆಗಾಗಿ ಕಾರ್ಯಕ್ರಮ ಏರ್ಪಡಿಸಿ ಜನರಿಗೆ ಮಳೆಯಿಂದ ರಕ್ಷಣೆ ಇಲ್ಲವೆಂದರೆ ಹೇಗೆ? ಸರ್ಕಾರ ಕೂಡಲೇ ಪೆಂಡಾಲ್ ವ್ಯವಸ್ಥೆ ಮಾಡಲಿ.

–ಮುಳ್ಳೂರು ಪ್ರಕಾಶ್, ಮೈಸೂರು

**

ಸಣ್ಣ ಮನಸ್ಸಿಗೆ...

ಮಹಾತ್ಮ ಗಾಂಧಿ ಕುರಿತಾಗಿ ಪ್ರಕಟವಾಗುತ್ತಿರುವ ಸಂವಾದ ರೂಪದ ಪತ್ರಗಳು ಮೌಲಿಕವಾಗಿವೆ. ಈ ಸಂದರ್ಭದಲ್ಲಿ ದ.ರಾ. ಬೇಂದ್ರೆ ಅವರ ಅಮೂಲ್ಯ ರೂಪಕ ನುಡಿಯನ್ನು ಮನನ ಮಾಡುವುದು ಒಳಿತು.

‘ಸಣ್ಣ ಕಣ್ಣಿಗೆ ದೊಡ್ಡ ಸೂರ್ಯ ಕಂಡಾನು

ಸಣ್ಣ ಮನಸ್ಸಿಗೆ ಮಹಾತ್ಮ್ಯಾ ಒಪ್ಪಿಗಾಗೋದಿಲ್ಲ’

–ಜಿ. ಕೃಷ್ಣಪ್ಪ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.