ಸರಳಗೊಳಿಸುವ ದಾರಿ ಇದೆ
ಶಿಕ್ಷಕರ ಸ್ಮರಣೆ ಹೊಸ ಬಗೆಯಲ್ಲಿ ಸಾಧ್ಯವೇ ಎಂದು ಪ್ರಶ್ನಿಸುತ್ತಲೇ ಕೆಲವು ವಿವರಣೆಗಳನ್ನು ಅರವಿಂದ ಚೊಕ್ಕಾಡಿ ನೀಡಿದ್ದಾರೆ (ಪ್ರ.ವಾ., ಅ. 8). ಶಿಕ್ಷಕರ ದಿನಾಚರಣೆ ಸಂಕೀರ್ಣವಾಗಿದ್ದಾಗಿಯೂ ಸರಳಗೊಳಿಸುವ ದಾರಿ ಇದೆ. ಶಿಕ್ಷಣ ಆಸಕ್ತರು, ಶಿಕ್ಷಣ ಪ್ರೇಮಿಗಳು, ಪ್ರಾಯೋಜಕರಾದಿಯಾಗಿ ಎಲ್ಲರೂ ಸ್ವಯಂಪ್ರೇರಿತರಾಗಿ ಆಯೋಜನೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಬೇಕು. ಶಿಕ್ಷಕ ಸಂಘಟನೆಗಳು ಈ ಬಗ್ಗೆ ಸರಳ ನಿಲುವು ತಳೆಯಬೇಕು.
ಕಾರ್ಯಕ್ರಮದಲ್ಲಿ ಅದ್ದೂರಿತನದ ಬದಲು ಅರ್ಥಪೂರ್ಣತೆಗೆ ಪ್ರಾಧಾನ್ಯ ನೀಡಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳು ಹಾಗೂ ಮೌಲ್ಯಗಳು ಎಲ್ಲರ ಬದುಕಿನಲ್ಲೂ ಕಾಣುವಂತಾಗಬೇಕು. ಶಿಕ್ಷಣ ತಜ್ಞರಿಂದ ಶಿಕ್ಷಕ ವೃತ್ತಿಯ ಶ್ರೇಷ್ಠತೆಯನ್ನು ಪರಿಚಯಿಸುವ ಕೆಲಸವಾಗಬೇಕು. ವಿಪರ್ಯಾಸವೆಂದರೆ ಆಡಂಬರದ ನಡುವೆ ಇದು ಕಾಣುತ್ತಲೇ ಇಲ್ಲ. ವ್ಯವಸ್ಥೆ ಎಷ್ಟೇ ದೊಡ್ಡದಾಗಿದ್ದರೂ ವಿವಿಧ ಹಂತಗಳಲ್ಲಿ ಇಲಾಖೆಯ ಅನೇಕ ಅಧಿಕಾರಿಗಳು ವಿವಿಧ ಪ್ರಶಸ್ತಿಗಳಿಗೆ ಅರ್ಹರಾದ ಶಿಕ್ಷಕರನ್ನು ಆಯ್ಕೆ ಮಾಡುವುದು ತೀರಾ ಅಸಾಧ್ಯವಲ್ಲ. ಆದರೆ, ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದು, ಕೆಲಸ ಕೊಡಿ ಎನ್ನುವ ಹಾಗೆ ‘ನಾನು ಉತ್ತಮ ಶಿಕ್ಷಕ’ ಎಂದು ಅರ್ಜಿ ಹಾಕುವುದು ಸೇವಾ ಮನೋಭಾವನೆ ಹೊಂದಿರುವ ಶಿಕ್ಷಕರಿಗೆ ಇರುಸುಮುರುಸು ಉಂಟುಮಾಡಬಹುದು.
ಈ ವಿಚಾರವಾಗಿ, ಲೇಖಕರು ಪ್ರಸ್ತಾಪಿಸಿರುವ ಆಯ್ಕೆ ವಿಧಾನಗಳು ಯೋಗ್ಯವಾಗಿವೆ. ಉತ್ತಮ ಶಿಕ್ಷಕನನ್ನು ಸಮಿತಿ ಆಯ್ಕೆ ಮಾಡುವ ಬದಲು ಸಮಾಜ ಆಯ್ಕೆ ಮಾಡುವುದು ಒಳಿತು.
–ದೇವರಾಜ ಕೆ.ಎಸ್., ಟಿ. ದಾಸರಹಳ್ಳಿ
**
ವಿಧಾನಸಭೆ ವಿಸರ್ಜನೆ ಹುಡುಗಾಟವಲ್ಲ
‘...ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ, ಜಾತಿ ಜನಗಣತಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ’ ಎಂದು ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ವಿಧಾನಸಭೆ ವಿಸರ್ಜನೆ ಹಾಗೂ ಮತ್ತೆ ಚುನಾವಣೆ ಹುಡುಗಾಟವಲ್ಲ ಎಂಬ ಅರಿವು ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಕುಮಾರಸ್ವಾಮಿ ಅವರಿಗೆ ಇಲ್ಲದಿದ್ದುದು ವಿಷಾದನೀಯ. ಚುನಾವಣೆ ಎಂದರೆ ಕೋಟ್ಯಂತರ ರೂಪಾಯಿಗಳ ಖರ್ಚಿನ ಬಾಬತ್ತು ಮತ್ತು ಸಾವಿರಾರು ಜನರ ಶ್ರಮ ಅಲ್ಲಿರುತ್ತದೆ. ಯಾವುದೋ ಒಂದು ಕಾರಣಕ್ಕೆ ರಾಜೀನಾಮೆ ಕೇಳುತ್ತಾ ಅಥವಾ ವಿಧಾನಸಭೆ ವಿಸರ್ಜನೆ ಬಯಸುತ್ತಾ ಸಾಗಿದರೆ ಅಂಥ ಆಗ್ರಹಗಳಿಗೆ ಕೊನೆ ಮೊದಲಿಲ್ಲದಂತೆ ಆಗುತ್ತದೆ. ಸರ್ಕಾರದ ನಡೆಗಳಲ್ಲಿ ತಪ್ಪುಗಳಿದ್ದರೆ ಎಚ್ಚರಿಸಿ ತಿದ್ದಬೇಕಿರುವುದು ವಿರೋಧ ಪಕ್ಷದ ಕೆಲಸ. ರಾಜಿನಾಮೆ ಮತ್ತು ವಿಧಾನಸಭೆಯ ವಿಸರ್ಜನೆಯ ಅಪೇಕ್ಷೆಗಳು ಸಲ್ಲದು.
–ಪತ್ತಂಗಿ ಎಸ್. ಮುರಳಿ, ಬೆಂಗಳೂರು
**
ವಿಜಯೇಂದ್ರ ಎಂಬ ಬಿಸಿತುಪ್ಪ!
ಬಹುಮತ ಪಡೆದು ಸರ್ಕಾರ ರಚಿಸಿದ ಕಾಂಗ್ರೆಸ್ ಪಕ್ಷದಲ್ಲೀಗ ‘ಮುಡಾ’ ಹಗರಣದ ಕಾರಣಕ್ಕೆ ತಲ್ಲಣ ಉಂಟಾಗಿದೆ. ಅದರ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿಯೂ ಗೊಂದಲದ ಗೂಡಾಗಿದೆ. ಯಾವ ತಪ್ಪಿಗಾಗಿ ಕಳೆದ ಸಲ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆಯೋ ಆ ತಪ್ಪನ್ನು ಪಕ್ಷದ ನಾಯಕರು ತಿದ್ದಿಕೊಳ್ಳುವಂತೆ ಕಾಣುತ್ತಿಲ್ಲ.
ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರಹೋಗುವಂತಾಗಿ, ಮುಂದೆ ಅವರ ಶಕ್ತಿಯನ್ನರಿತ ಪಕ್ಷದ ವರಿಷ್ಠರು ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ನಂತರ ಅವರು ಮತ್ತೆ ಮುಖ್ಯಮಂತ್ರಿಯಾಗಿ, ವಯಸ್ಸಿನ ಕಾರಣ ಒಡ್ಡಿ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದಾಗ ವಿರೋಧಿ ಬಣ ಸಂತಸಪಟ್ಟಿತ್ತು. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ವಿಜಯೇಂದ್ರ ಪದೋನ್ನತಿಯು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನುಂಗಲಾರದ ತುತ್ತಾಯಿತು. ಮುಂದೆ ಪಕ್ಷಕ್ಕೆ ಸರ್ಕಾರ ರಚಿಸುವ ಶಕ್ತಿ ಬಂದಾಗ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೇ ಮುಖ್ಯ
ಮಂತ್ರಿಯಾದರೆ ತಮ್ಮ ಪಾಡೇನು ಎಂಬ ಚಿಂತೆ ಯತ್ನಾಳರಿಗೂ ಅವರ ಹಿಂಬಾಲಕರಿಗೂ ಆವರಿಸಿರ
ಬಹುದು. ಅವರು, ಪಕ್ಷದ ಚೌಕಟ್ಟು ಮೀರಿ ಯಡಿಯೂರಪ್ಪ, ವಿಜಯೇಂದ್ರರನ್ನು ನಿಂದಿಸುತ್ತಿದ್ದಾರೆ. ಪಕ್ಷಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ವರಿಷ್ಠರು ಇದನ್ನು ಗಮನಿಸದೇ ಹೋದಲ್ಲಿ ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶವೇ 2028ರಲ್ಲಿಯೂ ಮರುಕಳಿಸಬಹುದು! ಅಂತೂ ವಿಜಯೇಂದ್ರ ಅವರು ಪಕ್ಷದಲ್ಲಿನ ಕೆಲವು ನಾಯಕರಿಗೆ ಬಿಸಿತುಪ್ಪವಾಗಿರುವುದು ಸತ್ಯ. ಪಕ್ಷದಲ್ಲಿನ ಈ ಬೆಳವಣಿಗೆಯಿಂದ ಪಕ್ಷದ ಕಾರ್ಯಕರ್ತರಿಗೂ ಮತದಾರರಿಗೂ ತೀವ್ರ ಬೇಸರ ಉಂಟಾಗಿರುವುದೂ ಸತ್ಯ.
–ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ
**
ಪರಿಸ್ಥಿತಿಗೆ ಹಿಡಿದ ಕೈಗನ್ನಡಿ
‘ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ: ನಿಂತು ನೀರು?’ ಲೇಖನವು (ಸಂಗತ, ಪ್ರ.ವಾ., ಅ.4) ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಅಷ್ಟೇ ಏಕೆ, ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳು ಪ್ರಯೋಗ ಶಾಲೆಯಿಂದ ಕೃಷಿಕನ ಹೊಲಕ್ಕೆ ಇಳಿದು ಬಂದಿರುವ ಯಾವ ಸುಲಕ್ಷಣಗಳೂ ಕಾಣುತ್ತಿಲ್ಲ! ಸಂಶೋಧನೆಗಳು ಪ್ರಯೋಗಶಾಲೆಗಳಿಂದ ಹೊಲ, ಗದ್ದೆಗಳಿಗೆ ಇಳಿದು ಬರದಿದ್ದರೆ, ಅಂತಹ ಸಂಶೋಧನೆಗಳಿಂದ ಆಗುವ ಪ್ರಯೋಜನವಾದರೂ ಏನು?
–ಅನಿಲಕುಮಾರ ಮುಗಳಿ, ಧಾರವಾಡ
**
ನಿರಾಧಾರದ ಆರೋಪ ಏಕೆ?
ಹರಿಯಾಣ ಚುನಾವಣಾ ಫಲಿತಾಂಶ ಉಲ್ಲೇಖಿಸಿ, ಕಾಂಗ್ರೆಸ್‍ನ ಜೈರಾಮ್ ರಮೇಶ್ ಅವರು ‘ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳು ಚುನಾವಣೆಯಲ್ಲಿ ಸೋಲು ಕಂಡಾಗಲೆಲ್ಲ ಇವಿಎಂ ವಿಚಾರವಾಗಿ ಮಿಥ್ಯಾರೋಪ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿವೆ. ‘ನಾವು ಗೆದ್ದರೆ ಇವಿಎಂ ಸರಿ ಇತ್ತು, ನಾವು ಸೋತರೆ ಇವಿಎಂನಲ್ಲಿ ಲೋಪವಿತ್ತು’ ಎಂಬ ನಿಲುವು ಹೊಂದಿರುವುದು ಸರ್ವಥಾ ಸಮರ್ಥನೀಯವಲ್ಲ. ರಾಜಕೀಯ ನೇತಾರರು ಮುಂದಿನ ದಿನಗಳಲ್ಲಾದರೂ ಪ್ರಬುದ್ಧವಾಗಿ ವರ್ತಿಸಲಿ.
–ಚನ್ನು ಅ. ಹಿರೇಮಠ, ರಾಣೆಬೆನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.