ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 9 ಜುಲೈ 2024, 22:18 IST
Last Updated 9 ಜುಲೈ 2024, 22:18 IST
   

ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ನಿಷೇಧವೇ?

ಬೆಂಗಳೂರಿನ ರೈಲು ನಿಲ್ದಾಣದ ಸಮೀಪ ಇತ್ತೀಚೆಗೆ ನಡೆದ ಘಟನೆಯಿದು. ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವ ರೈಲನ್ನು ಹಿಡಿಯುವ ತರಾತುರಿಯಲ್ಲಿದ್ದೆ. ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಒಂದು ಪುಟ್ಟ ಅಂಗಡಿಯ ಬಳಿ ಜನ ಸೇರಿದ್ದರು. ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ, ಸಮೀಪದ ಹಳ್ಳಿಯೊಂದರಿಂದ ಬಂದಿದ್ದ ರೈತನೊಬ್ಬ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿ ಅಲ್ಲಿಯೇ ಸೇದುತ್ತಿದ್ದ ಸಮಯದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಬಂದು ರೈತನ ಕೈಹಿಡಿದುಕೊಂಡು, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ₹500 ದಂಡ ತೆರಬೇಕೆಂದು ಒತ್ತಾಯಿಸುತ್ತಿದ್ದ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬಾರದೆಂಬ ವಿಷಯ ತಮಗೆ ತಿಳಿಯದೆಂದೂ ದಂಡ ತೆರಲು ಅಷ್ಟು ಹಣ ತಮ್ಮ ಬಳಿ ಇಲ್ಲವೆಂದೂ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮಿಸಬೇಕೆಂದೂ ಆ ರೈತ ಅಂಗಲಾಚಿ ಬೇಡಿಕೊಳ್ಳುತ್ತಿದ್ದ. ನಾನು ಹಿಡಿಯಬೇಕಾದ ರೈಲಿನ ಸಮಯ ಸಮೀಪಿಸುತ್ತಿತ್ತು. ಆದುದರಿಂದ ನಾನು ಅಲ್ಲಿಂದ ಹೊರಟೆ. ಮುಂದೇನಾಯಿತೆಂದು ತಿಳಿಯದು.

ನಂತರ ಹಲವು ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಅರಿವಿಲ್ಲದೆ ರೈತ ಸಿಗರೇಟ್ ಸೇದಿದ್ದು ಅಪರಾಧವೆಂದಾದರೆ, ಸಾರ್ವಜನಿಕ ಸ್ಥಳಗಳ ಬಳಿಯ ಅಂಗಡಿಗಳಲ್ಲಿ ಸಿಗರೇಟ್‌ ಮಾರಾಟ ಮಾಡಲು ಅನುಮತಿ ನೀಡಿದ್ದೇಕೆ? ಅನುಮತಿ ನೀಡಿಲ್ಲವೆಂದಾದರೆ, ಸಿಗರೇಟ್‌ ಮಾರಾಟ ಮಾಡಿದ ಅಂಗಡಿಯವರನ್ನೂ ತಪ್ಪಿತಸ್ಥರನ್ನಾಗಿ ಪರಿಗಣಿಸಿ ಕ್ರಮ ಜರುಗಿಸಬೇಕಲ್ಲವೇ?

ADVERTISEMENT

ಧೂಮಪಾನವು ಆರೋಗ್ಯಕ್ಕೆ ಹಾನಿಕರ ಎಂದಾದಲ್ಲಿ, ಸಿಗರೇಟು ಸೇದುವುದನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ನಿಷೇಧಿಸಿರುವುದು ಏಕೆ? ಸಿಗರೇಟ್ ತಯಾರಿಸಲು ಕಂಪನಿಗಳಿಗೆ ಅನುಮತಿ ನೀಡುವುದೇಕೆ? ಸರ್ಕಾರದ ಖಜಾನೆ ತುಂಬಿಸಲು ಸಿಗರೇಟ್ ಕಂಪನಿಗಳೂ ಬೇಕು, ಸಿಗರೇಟ್ ಸೇದುವ ಪ್ರಜೆಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಂತೆಯೂ ಆಗಬೇಕು ಎಂಬ ಧೋರಣೆಯೇ?

⇒ಜಿ. ನಾಗೇಂದ್ರ ಕಾವೂರು, ಸಂಡೂರು

ಸ್ಕೈವಾಕ್ ನಿರ್ಮಾಣ: ವಿಸ್ತೃತ ಅಧ್ಯಯನ ಬೇಕು

ಬೆಂಗಳೂರಿನ 60ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಿಸಬೇಕೆಂಬ ಪ್ರಸ್ತಾವವನ್ನು ನಗರ ಸಂಚಾರ ಪೊಲೀಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸಿದ್ದಾರೆ (ಪ್ರ.ವಾ., ಜುಲೈ 8). ಇದು ಒಳ್ಳೆಯ ಪ್ರಸ್ತಾವ. ಆದರೆ ಬೆಂಗಳೂರಿನಾದ್ಯಂತ ಈಗಾಗಲೇ ನಿರ್ಮಿಸಿರುವ ಬಹಳಷ್ಟು ಸ್ಕೈವಾಕ್‌ಗಳು ಹೇಗೆ ಬಳಕೆ ಆಗುತ್ತಿವೆ ಎಂಬ ಬಗ್ಗೆ ವಿವರವಾದ ಅಧ್ಯಯನ ಮಾಡುವುದು ಉತ್ತಮ. ಬಹುತೇಕ ಕಡೆಗಳಲ್ಲಿ ಸ್ಕೈವಾಕ್‌ಗಳನ್ನು ಸಾರ್ವಜನಿಕರು ಉಪಯೋಗಿಸುವುದೇ ಇಲ್ಲ ಅಥವಾ ಕೆಲವೇ ಜನ ಅವನ್ನು ಬಳಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವುಗಳ ಎತ್ತರ ಹಾಗೂ ಹತ್ತಿ–ಇಳಿಯಲು ಇರುವ ಮೆಟ್ಟಿಲುಗಳು. ಸ್ಕೈವಾಕ್‌ಗಳನ್ನು ಬಳಕೆದಾರ ಸ್ನೇಹಿಯಾಗಿ ಮಾಡದ ಹೊರತು ಸಾರ್ವಜನಿಕರು ಅವುಗಳನ್ನು ಉಪಯೋಗಿಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಸ್ಕೈವಾಕ್‌ಗಳನ್ನು ಮಹಿಳೆಯರು, ವಯಸ್ಸಾದವರನ್ನು ಗಮನದಲ್ಲಿ ಇಟ್ಟುಕೊಂಡು ವಿನ್ಯಾಸಗೊಳಿಸಬೇಕು. ಸರಿಯಾದ ವಿನ್ಯಾಸದಲ್ಲಿ ಇವುಗಳನ್ನು ನಿರ್ಮಿಸದಿದ್ದರೆ ಇವು ನಗರದ ಸೌಂದರ್ಯವನ್ನು ಹಾಳುಮಾಡುತ್ತವೆ.

⇒ಕಡೂರು ಫಣಿಶಂಕರ್, ಬೆಂಗಳೂರು

ಮುಟ್ಟಿನ ರಜೆ: ಕಾನೂನಿನ ರೂಪದಲ್ಲಿ ಬೇಡ

ಮುಟ್ಟಿನ ರಜೆ ನೀಡುವ ಕುರಿತು ಚರ್ಚೆಗಳು ನಡೆದಿವೆ. ಮುಟ್ಟಿನ ರಜೆ ನೀಡಬೇಕು ಎಂಬ ಕಾನೂನು ಜಾರಿಗೆ ಬಂದರೆ ಉಪಯೋಗಕ್ಕಿಂತ ದುರ್ಬಳಕೆಯೇ ಹೆಚ್ಚಾಗಬಹುದು. ಮಹಿಳೆಯರು ಕೆಲಸದ ಒತ್ತಡಗಳನ್ನು ತಮ್ಮ ದೇಹಪ್ರಕೃತಿಗೆ ಅನುಗುಣವಾಗಿ ತಮ್ಮದೇ ಆದ ಬಗೆಯಲ್ಲಿ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಮುಟ್ಟಿನ ರಜೆ ಎರಡು ದಿನ ಇರಬೇಕು ಎಂಬ ವಾದ ಇದೆ. ಆದರೆ, ಕೆಲವು ಮಹಿಳೆಯರು ಒಂದು ವಾರದವರೆಗೂ ಸಮಸ್ಯೆ ಅನುಭವಿಸುತ್ತಾರೆ. ರಜೆ ನೀಡುವ ಕಾನೂನು ಜಾರಿಗೆ ತರುವುದಕ್ಕಿಂತ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಉದ್ಯೋಗದ ಸ್ಥಳದಲ್ಲಿ ಸೂಕ್ತ ಸ್ಯಾನಿಟರಿ ನ್ಯಾಪ್ಕಿನ್‌ ಲಭ್ಯವಾಗುವಂತೆ ಮಾಡುವುದು ಹೆಚ್ಚು ಒಳಿತು ಮಾಡಬಹುದು. ಮುಟ್ಟಿನ ರಜೆಯನ್ನು ಕಾನೂನಿನ ಮೂಲಕ ಜಾರಿಗೆ ತಂದರೆ ಮಹಿಳೆಯರಿಗೆ ಉದ್ಯೋಗದಲ್ಲಿ ತೊಡಗಿಕೊಳ್ಳುವುದಕ್ಕೆ ಅದೇ ಬಹುದೊಡ್ಡ ತೊಡಕಾಗಿ ಪರಿಣಮಿಸಬಹುದು. ಮೆನೋಪಾಸ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಕೆಲಸದ ಒತ್ತಡ ನಿಭಾಯಿಸಿಕೊಳ್ಳಲು ನೆರವಾಗುವ ದಿಸೆಯಲ್ಲಿ ಚಿಂತನೆ ನಡೆಯಬೇಕಿದೆ.

⇒ಸುಮಾ ವೀಣಾ, ಹಾಸನ

ಬಿಪಿಎಲ್‌: ಗಾಬರಿ ಮೂಡಿಸುವ ಅಂಕಿ–ಅಂಶ

ಮುಖ್ಯಮಂತ್ರಿಯವರು ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿ ಅರ್ಹರಿಗೆ ಬಿಪಿಎಲ್ ಕಾರ್ಡುಗಳನ್ನು ನೀಡುವಂತೆ ಸೂಚನೆ ನೀಡಿದ್ದಾರೆ (ಪ್ರ.ವಾ., ಜುಲೈ 9). ರಾಜ್ಯದಲ್ಲಿನ ಬಿಪಿಎಲ್ ಕಾರ್ಡುಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳು ನಿಜಕ್ಕೂ ಗಾಬರಿ ಹುಟ್ಟಿಸುವಂತಿವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಿದ್ದರೂ ಬಿಪಿಎಲ್ ಕಾರ್ಡುಗಳ ಸಂಖ್ಯೆ ಕಡಿಮೆಯಾಗದಿರಲು ಕಾರಣವೇನು ಎಂಬ ಪ್ರಶ್ನೆಯನ್ನು ಮುಖ್ಯಮಂತ್ರಿ ಕೇಳಿರುವುದರಲ್ಲಿ ಅರ್ಥವಿದೆ.

ರಾಜ್ಯದ ಬಡತನ ಪ್ರಮಾಣ, ಬಿಪಿಎಲ್ ಕಾರ್ಡುಗಳ ಸಂಖ್ಯೆ ಮತ್ತು ವಿಲೇವಾರಿಗೆ ಬಾಕಿಯಿರುವ ಅರ್ಜಿಗಳು, ಇವೆಲ್ಲವನ್ನೂ ತುಲನಾತ್ಮಕವಾಗಿ ಪರಿಶೀಲಿಸಿದರೆ ವಾಸ್ತವ ಬಯಲಿಗೆ ಬರಬಹುದು. ಅನುಕೂಲವಂತರು ಸಹ ಬಿಪಿಎಲ್‌ ಕಾರ್ಡುಗಳನ್ನು ಹಣ, ಪ್ರಭಾವ ಬಳಸಿ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಅರ್ಹ ಅನೇಕ ಮಂದಿ ಈ ಸೌಲಭ್ಯದಿಂದ ವಂಚಿತರಾಗಿರುವ ಸಾಧ್ಯತೆ ಇಲ್ಲದಿಲ್ಲ. ಹಾಗೆಯೇ ಕೆಲವು ಜಿಲ್ಲೆ, ತಾಲ್ಲೂಕುಗಳಲ್ಲಿ ಬಿಪಿಎಲ್ ಕಾರ್ಡುದಾರರು ಪಡಿತರ ಅಂಗಡಿಗಳಿಂದ ಪಡೆದ ಅಕ್ಕಿಯನ್ನು ಉಪಯೋಗಿಸದೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಬಲವಾದ ಆರೋಪ ಕೂಡ ಇದೆ. ಆದುದರಿಂದ ಬಿಪಿಎಲ್‌ ಕಾರ್ಡುಗಳ ಬಗ್ಗೆ ನಿಷ್ಪಕ್ಷ ಪಾತವಾಗಿ ತಳಮಟ್ಟದಿಂದ ತನಿಖೆ ನಡೆಸಿ ಅರ್ಹರಿಗೆ ಮಾತ್ರ ಈ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಈ ಸೌಲಭ್ಯ ನೀಡುವಾಗ ಸರಿಯಾದ ಮಾನದಂಡವೊಂದನ್ನು ಅನ್ವಯ ಮಾಡುವುದು ಒಳಿತು. ಹೀಗೆ ಮಾಡಿದರೆ, ಬೊಕ್ಕಸಕ್ಕೆ ಆಗುತ್ತಿರುವ ಅನಗತ್ಯ ಹೊರೆ ತಗ್ಗುವುದು ಖಚಿತ.

⇒ಹರೀಶ್‌ ಕುಮಾರ್‌ ಕುಡ್ತಡ್ಕ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.