ADVERTISEMENT

‘ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ: ಅಂತಿಮ ನಿರ್ಧಾರವಲ್ಲ,‘ನಪಾಸ್’ ರಹಿತ ಪ್ರಯೋಗ 

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 4:10 IST
Last Updated 9 ಅಕ್ಟೋಬರ್ 2019, 4:10 IST
   

‘ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ: ಆತುರದ ನಿರ್ಧಾರ ಸಲ್ಲದು’ ಸಂಪಾದಕೀಯ (ಪ್ರ.ವಾ., ಅ.7) ಸ್ವಾಗತಾರ್ಹ.ಸಂಪಾದಕೀಯಗಳಲ್ಲಿ ಇಂತಹ ವಿಷಯಗಳು ಚರ್ಚೆಯಾಗುವುದೇ ಅತ್ಯಂತ ಆರೋಗ್ಯಕರ ಸಂಗತಿ. ಇದು, ಆತುರದಿಂದ ತೆಗೆದುಕೊಂಡ ನಿರ್ಧಾರವಲ್ಲ. ಅದೇ ರೀತಿ ಅಂತಿಮ ನಿರ್ಧಾರವೂ ಅಲ್ಲ.

ನಾವು ಕೆಲ ಸ್ನೇಹಿತರು, ಆರು ವರ್ಷಗಳಿಂದ ನನ್ನ ಕ್ಷೇತ್ರವಾದ ರಾಜಾಜಿನಗರದಲ್ಲಿ ಎಸ್ಎಸ್ಎಲ್‌ಸಿ ಮಕ್ಕಳಿಗೆ ಪರೀಕ್ಷೆ ಎದುರಿಸಲು ಉಚಿತ ತರಗತಿಗಳನ್ನು ನಡೆಸಿಕೊಂಡು ಬಂದಿದ್ದೇವೆ. ಇಲ್ಲಿಗೆ ಬರುವವರು ಹೆಚ್ಚಿನಂಶ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳು. ಎಸ್ಎಸ್ಎಲ್‌ಸಿ ಪರೀಕ್ಷೆಗೆ ಕೂರುವ ಮಕ್ಕಳ ಗುಣಮಟ್ಟವನ್ನು ಗಮನಿಸಿದ್ದೇವೆ. ಪರೀಕ್ಷೆ ಹತ್ತಿರ ಬಂದಾಗ ಅವರಲ್ಲಾಗುವ ಚಡಪಡಿಕೆ ಕಂಡಿದ್ದೇವೆ. ಶಿಕ್ಷಕರೊಂದಿಗೆ ಮಾತನಾಡಿದ್ದೇವೆ. ಪಬ್ಲಿಕ್ ಪರೀಕ್ಷೆ ನಿರ್ಧಾರ ಪ್ರಕಟವಾದ ಬಳಿಕವೂ ಅನೇಕ ಶಿಕ್ಷಕರನ್ನು ವಿವಿಧ ಕಾರಣಗಳಿಗಾಗಿ ಭೇಟಿಯಾಗಿದ್ದೇನೆ. ಕೆಲ ಶಾಲೆಗಳಿಗೆ ಹೋಗಿ ಮಕ್ಕಳನ್ನೂ ಮಾತನಾಡಿಸಿದ್ದೇನೆ.‌ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಮುನ್ನ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆಯ ಅನುಭವವಾಗಬೇಕು ಎಂಬುದು ಬಹುತೇಕರ ಅಭಿಪ್ರಾಯ.‌ ನೊ ಡಿಟೆನ್ಷನ್‌ ಎಂಬ ನೀತಿಯು ಕಲಿಕೆಯ ಗಾಂಭೀರ್ಯವನ್ನು ಕಸಿದುಕೊಂಡುಬಿಟ್ಟಿದೆ ಎಂಬುದು ಶಿಕ್ಷಕರ ಅನುಭವ ಆಧಾರಿತ ಅಭಿಪ್ರಾಯ. ಪೋಷಕರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ಇಷ್ಟಾಗಿಯೂ ಈ ಬಾರಿಯ ಪರೀಕ್ಷೆಯಲ್ಲಿ ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ. ಆದರೆ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡಲಾಗುವುದು.‌ ಮಕ್ಕಳಿಗೆ ಪರೀಕ್ಷೆ ಕುರಿತು ಗಾಂಭೀರ್ಯ ಮತ್ತು ಪಬ್ಲಿಕ್ ಪರೀಕ್ಷೆ ಅನುಭವ ಎರಡೂ ಉಂಟಾಗಬೇಕೆಂಬ ಸದಾಶಯ ಇದರ ಹಿಂದಿದೆ. ಯಾರಿಗೂ ಆತಂಕ ಬೇಡ. ಈ ಬಾರಿಯ ಪರಿಣಾಮ ನೋಡಿ ನಂತರ ಆ ಬಗ್ಗೆ ಚರ್ಚೆ ನಡೆಯಲಿ.

ADVERTISEMENT

ಇನ್ನು ಡ್ರಾಪ್ ಔಟ್ ವಿಚಾರ. ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಮಟ್ಟದಲ್ಲಿಯೇ ಅದಕ್ಕೆ ಆಸ್ಪದ ಕೊಡಬಾರದು ಎಂಬುದು ನಮ್ಮ ದೃಢ ನಿಲುವು. ಏಳನೇ ತರಗತಿ ಬಗ್ಗೆಯೂ ಈ ವಿಚಾರವಾಗಿ ನಾವು ಚಿಂತನೆ ನಡೆಸಿದ್ದೇವೆ. ಇವೆಲ್ಲದರ ಹೊರತಾಗಿಯೂ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲೇಬೇಕೆಂಬುದು ನನಗೆ ಪ್ರತಿಷ್ಠೆಯ ವಿಷಯವಲ್ಲ. ಇದು, ಈ ಬಾರಿಯ ‘ನಪಾಸ್’ರಹಿತ ಪ್ರಯೋಗ. ಪ್ರತಿಷ್ಠಿತ ಶಾಲೆಗಳಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ, ಅದೂ ಎಲ್ಲಾ ಡಿಸ್ಟಿಂಕ್ಷನ್‌ ಬರಬೇಕೆಂಬ ಒಂದೇ ಕಾರಣಕ್ಕೆ, ಸ್ವಲ್ಪ ಕಡಿಮೆ ಅಂಕ ತೆಗೆಯುವ ಮಕ್ಕಳಿಗೆ ತಮ್ಮ ಶಾಲೆಯಿಂದ ‘ನಿರ್ಗಮಿಸುವಂತೆ’ ಹೇಳಿಕಳಿಸುವ ನಿದರ್ಶನಗಳೂ ಇವೆ. ಇದಕ್ಕೂ ಕಡಿವಾಣ ಹಾಕಬೇಕಲ್ಲವೇ?

-ಎಸ್‌.ಸುರೇಶ್‌ ಕುಮಾರ್‌,ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.