ADVERTISEMENT

ವಾಚಕರ ವಾಣಿ | ಚುನಾವಣೆ ಗೆಲ್ಲಲು ಸಿದ್ಧ ಸೂತ್ರ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:30 IST
Last Updated 21 ಮಾರ್ಚ್ 2022, 19:30 IST

ದೆಹಲಿ ಗದ್ದುಗೆ ಏರಿದ ನಂತರ ಪಂಜಾಬ್ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎಎಪಿ ನಾಯಕ ಅರವಿಂದ ಕ್ರೇಜಿವಾಲ್, ನೂತನ ಶಾಸಕರಿಗೆ ‘ಕೆಲಸ ಮಾಡದಿದ್ದರೆ ತಲೆದಂಡ’ ಎಂಬ ಎಚ್ಚರಿಕೆಯ ಸೂಚನೆಯನ್ನು ನೀಡಿದ್ದಾರೆ. ಪಕ್ಷದ ಎಲ್ಲ ಶಾಸಕರು ಒಂದು ತಂಡವಾಗಿ ಕೆಲಸ ಮಾಡಬೇಕು. ಯಾರ ಬಗ್ಗೆಯೂ ಆಕ್ಷೇಪಾರ್ಹ ಭಾಷೆ ಬಳಸಬಾರದು. ಒರಟಾಗಿ ನಡೆದುಕೊಳ್ಳಬಾರದು. ಕೆಲಸದ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕು ಎಂದು ಸಲಹೆ ನೀಡಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶಾಸಕರು ತಪ್ಪು ಮಾಡಿರುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು. ಅವಿಧೇಯತೆಯನ್ನು ಹಾಗೂ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುವುದನ್ನು ಸಹಿಸಿಕೊಳ್ಳುವುದಿಲ್ಲ. ಅಧಿಕಾರಿಗಳ ವರ್ಗಾವಣೆಗೆ ಸಚಿವರ ಅಥವಾ ಮುಖ್ಯಮಂತ್ರಿ ಕಚೇರಿಗೆ ಹೋಗಬೇಡಿ ಎಂದು ಶಾಸಕರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ.

ಈ ಸೂಚನೆಗಳು ಒಟ್ಟಾರೆ ಭಾರತದ ಎಲ್ಲ ರಾಜ್ಯಗಳ ಶಾಸಕರಿಗೆ ಪಾಠ ಎಂಬಂತಿವೆ. ಜನರಿಂದ ಆಯ್ಕೆಯಾದವರು ಜನರ ಸೇವಕರಾಗಬೇಕೇ ವಿನಾ ಅವರೆದುರು ಅಧಿಕಾರದ ದರ್ಪ ತೋರಬಾರದು. ಕೇಜ್ರಿವಾಲರ ಈ ಸೂಚನೆಯನ್ನು ಪಾಲಿಸಿದರೆ ಇದೊಂದು ಪಂಜಾಬಿನ ಮಾದರಿ ನಡೆಯಾಗುತ್ತದೆ. ಇದು ಪ್ರತಿಯೊಂದು ಚುನಾವಣೆಯನ್ನು ಗೆಲ್ಲಲು ಸಿದ್ಧ ಸೂತ್ರವೂ ಆಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

-ಗಣಪತಿ ಶಿರಳಗಿ, ಸಾಗರ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.