ಚಿಕ್ಕವಯಸ್ಸಿನಿಂದ ದಿನವೂ ಪ್ರಜಾವಾಣಿಯನ್ನು ಓದುತ್ತಿದ್ದೇನಾದರೂ ಪತ್ರಿಕೆಯ ಜೊತೆ ನನಗೆ ನೇರ ಸಂಪರ್ಕ ಬಂದಿದ್ದು 1980ರಲ್ಲಿ. ಆಗ ನಾನು ಬಿಎಸ್ಸಿ ಓದುತ್ತಾ, ಹವ್ಯಾಸೀ ರಂಗಭೂಮಿಯಲ್ಲೂ ತೊಡಗಿಕೊಂಡಿದ್ದೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳೇ ಆಗ ನನ್ನ ಪಾಠಶಾಲೆ. ಅಂದಿನ ಗುಂಡೂರಾವ್ ಸರ್ಕಾರ 1981ರಲ್ಲಿ ಮೈಸೂರಿನಲ್ಲಿ ಪ್ರಥಮ ವಿಶ್ವಕನ್ನಡ ಸಮ್ಮೇಳನ ನಡೆಸುವ ಘೋಷಣೆ ಮಾಡಿತ್ತು. ಅಲ್ಲಿ ಕನ್ನಡ ಹವ್ಯಾಸೀ ರಂಗಭೂಮಿ ಚರಿತ್ರೆಯ ಪ್ರದರ್ಶನ ಮಳಿಗೆಯೊಂದನ್ನು ಸ್ಥಾಪಿಸುವ ಯೋಜನೆಯೊಂದು ಸಿದ್ಧವಾಯಿತು. ಹವ್ಯಾಸೀ ರಂಗಭೂಮಿ ಚರಿತ್ರೆಯ ಮಾಹಿತಿ ಕಲೆಹಾಕಲು ಸಿಜಿಕೆಯವರಿಗೆ ವಹಿಸಲಾಯಿತು. ಸೇತುಮಾಧವ ಜೋಡೀದಾರ ಮತ್ತು ನನ್ನನ್ನು ತಮ್ಮ ಸಹಾಯಕರೆಂದು ಸಿಜಿಕೆ ಆಯ್ದುಕೊಂಡರು. ಮಾಸ್ತಿ, ಶ್ರೀರಂಗ, ಪರ್ವತವಾಣಿ, ಪ್ರೊಫೆಸರ್ ಬಿ. ಚಂದ್ರಶೇಖರ್ ಮೊದಲಾದವರನ್ನು ನಾವು ಭೇಟಿಯಾಗಿ ಅವರುಗಳ ಸಂದರ್ಶನಗಳನ್ನು ಪಡೆದೆವು. ನಂತರ ಪ್ರಕಟಿತ ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡುವಂತೆ ಸೇತುವಿಗೂ, ಪ್ರಜಾವಾಣಿಯ ಹಳೆಯ ಸಂಚಿಕೆಗಳಲ್ಲಿ ಪ್ರಕಟವಾದ ರಂಗಭೂಮಿ ಸುದ್ದಿಗಳನ್ನು ಕಲೆಹಾಕಿ ಟಿಪ್ಪಣಿ ಮಾಡುವಂತೆ ನನಗೂ ಸಿಜಿಕೆ ಸೂಚಿಸಿದರು.
ಸಿಜೆಕೆಯವರು ರಾಮಚಂದ್ರ ದೇವ ಅವರೊಡನೆ ಮಾತಾಡಿ, ನನ್ನನ್ನು ಕಳಿಸಿಕೊಟ್ಟರು. ನಾನು ಪ್ರಜಾವಾಣಿ ಕಚೇರಿಯಲ್ಲಿ ಅವರನ್ನು ಭೇಟಿಯಾದೆ. ರಾಮಚಂದ್ರ ದೇವ ನನ್ನನ್ನು ಹತ್ತು ನಿಮಿಷ ಮಾತಾಡಿಸಿ, ‘ಬನ್ನಿ, ನಮ್ಮ ಸಂಪಾದಕರೊಂದಿಗೆ ನಿಮ್ಮನ್ನು ಭೇಟಿ ಮಾಡಿಸುತ್ತೇನೆ, ಅವರಲ್ಲಿಯೂ ವಿಷಯ ತಿಳಿಸಿ’ ಎಂದು ಆಗಿನ ಪ್ರಧಾನ ಸಂಪಾದಕ ಶ್ರೀ ಕೆ.ಎನ್. ಹರಿಕುಮಾರ್ ಅವರ ಕಚೇರಿಗೆ ಕರೆದುಕೊಂಡು ಹೋದರು. ನಾನು ಅವರಲ್ಲಿ ‘ಪ್ರಜಾವಾಣಿಯ ಮೊದಲ ಸಂಚಿಕೆಯಿಂದ ಆ ವರೆಗಿನ ಪತ್ರಿಕೆಯ ಪುಟಗಳನ್ನು ಶೋಧಿಸಲು ಅವಕಾಶ ನೀಡಿ’ ಎಂದು ಕೇಳಿಕೊಂಡೆ. ಹರಿಕುಮಾರ್ ಅವರು, ‘ಅಷ್ಟನ್ನೂ ನೋಡುತ್ತೀರಾ!’ ಎಂದರು. ನನಗೂ ಅಂಥಾ ಕೆಲಸ ಮೊಟ್ಟಮೊದಲನೆಯದು, ಏನು ಹೇಳಬೇಕೆಂದು ತಿಳಿಯದೇ ಅಳುಕಿನಿಂದಲೇ ಮುಗುಳ್ನಕ್ಕೆ. ‘ಎಷ್ಟು ದಿನ ಬರ್ತೀರಿ?’ ಎಂದು ಕೇಳಿದರು. ‘ಸಿಜಿಕೆ ಒಂದು ತಿಂಗಳು ಸಮಯ ಕೊಟ್ಟಿದ್ದಾರೆ ಸರ್, ನಾನು ಪ್ರತಿದಿನ ಬೆಳಗಿನಿಂದ ಸಂಜೆಯವರೆಗೂ ನಿಮ್ಮ ಆರ್ಕೈವ್ಸ್‌ಗೆ ಬರಬೇಕೆಂದುಕೊಂಡಿದ್ದೇನೆ’ ಎಂದೆ. ಅವರು ‘ಸರಿ, ಮಾಡಿ’ ಎಂದರು. ನಾನು ಧನ್ಯವಾದ ತಿಳಿಸಿ ಚೇಂಬರಿನಿಂದ ಹೊರಡುವಾಗ ಅವರು ‘ನಮ್ಮ ಕ್ಯಾಂಟೀನಿನಲ್ಲೇ ಊಟ ಮಾಡಿ’ ಎಂದರು. ಅವರ ಈ ಮಾತು ನನಗೆ ತುಂಬಾ ಮೆಚ್ಚುಗೆಯಾಯಿತು.
ಮರುದಿನದಿಂದಲೇ ನನ್ನ ಕೆಲಸ ಆರಂಭಿಸಿದೆ. ಆ ಮೊದಲೇ ನನಗೆ ಪರಿಚಯವಿದ್ದ ಭಾಸ್ಕರ ರಾವ್ ಮೊದಲ ದಿನ ತಮ್ಮ ಜೊತೆಯಲ್ಲೇ ಕ್ಯಾಂಟಿನಿಗೆ ಕರೆದುಕೊಂಡು ಹೋಗಿ ಅಲ್ಲಿಯ ಸಿಬ್ಬಂದಿಗೆ ನನ್ನ ಪರಿಚಯ ಮಾಡಿಸಿ, ದಿನವೂ ಊಟ ಕೊಡುವಂತೆ ಹೇಳಿದರು. ಸತತ ಮೂವತ್ಮೂರು ದಿನ ಪ್ರಜಾವಾಣಿಯ ಮೊದಲ ಟ್ಯಾಬ್ಲಾಯ್ಡ್ ಸೈಜಿನ ಸಂಚಿಕೆಯಿಂದ ಅಂದಿನವರೆಗಿನ ಸಂಚಿಕೆಯವರೆಗೂ ತಿರುವಿಹಾಕಿ ನೋಡುವ ಭಾಗ್ಯ ನನಗೆ ಸಿಕ್ಕಿತು. ರಂಗಭೂಮಿಯ ಬಗೆಗೆ ಮಾತ್ರವಲ್ಲ, ಹಲವು ಚಾರಿತ್ರಿಕ ಮಹತ್ವದ ಸುದ್ದಿಗಳನ್ನೂ ಓದುವ ಅವಕಾಶವಾಯಿತು. ಅಷ್ಟೇ ಅಲ್ಲ, ಅಷ್ಟೂ ದಿನವೂ ಅಲ್ಲಿಯ ಕ್ಯಾಂಟೀನಿನಲ್ಲಿ ಒಂದು ಊಟಕ್ಕೆ ಬರೀ 70 ಪೈಸೆ ಕೊಟ್ಟು ರುಚಿಕಟ್ಟಾದ ಊಟ ಮಾಡುತ್ತಿದ್ದೆ.
ದೇವ ಅವರು ಆಗಾಗ ನನ್ನ ಕೆಲಸವನ್ನು ಗಮನಿಸುತ್ತಿದ್ದರು. ಮೊದಮೊದಲು ಒಂದೇ ಸಂಚಿಕೆಯನ್ನು ನೋಡುತ್ತಾ ಬಹಳ ಸಮಯ ಕಳೆದುಬಿಡುತ್ತಿದ್ದೆ. ನನಗೆ ಬೇಕಾದ ಮಾಹಿತಿಯನ್ನು ಹೇಗೆ ತ್ವರಿತವಾಗಿ ಹುಡುಕಬೇಕು ಎಂದು ದೇವ ತೋರಿಸಿಕೊಟ್ಟರು. ಅವರು ಹೇಳಿಕೊಟ್ಟ ಪಾಠವೇ ನನಗೆ ಇಂದು ವೆಬ್ ಜಾಲಾಡುವುದಕ್ಕೂ ಸಹಾಯ ಮಾಡಿದೆ. ಮುನ್ನೂರು ಪುಟದ ನೋಟ್ ಬುಕ್ ಅನ್ನು ಟಿಪ್ಪಣಿಗಳಿಂದ ತುಂಬಿಸಿ ಸಿಜಿಕೆಗೆ ಕೊಟ್ಟಿದ್ದೆ. ಆದರೆ, ಕಾರಣಾಂತರಗಳಿಂದ ಆಗ ವಿಶ್ವಕನ್ನಡ ಸಮ್ಮೇಳನವೇ ರದ್ದಾಯಿತು. ಚಲನಚಿತ್ರ ಮಾಧ್ಯಮದ ಬಗ್ಗೆ ಆ ಮೊದಲೇ ನನಗೆ ಒಲವು ಇಲ್ಲದ್ದಿದ್ದಲ್ಲಿ, ಬಹುಶಃ ನಾನೊಬ್ಬ ಪತ್ರಕರ್ತನಾಗುತ್ತಿದ್ದೆನೇನೋ! ಅಷ್ಟು ಉತ್ತೇಜಕರವಾಗಿತ್ತು ಆ ಅನುಭವ ಮತ್ತು ಅಲ್ಲಿಯ ವಾತಾವರಣ.
-ಕೇಸರಿ ಹರವೂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.