ADVERTISEMENT

ರಾಹುಲ್‌ ಹೇಳಿಕೆ ತಂದ ಮಿಶ್ರಭಾವ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST

ಕೇರಳದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತ ‘ಸಿಪಿಎಂ ಮುಕ್ತ ಭಾರತ ಎಂದೇಕೆ ಮೋದಿ ಹೇಳುತ್ತಿಲ್ಲ’ ಎಂದು ಪ್ರಶ್ನಿಸುತ್ತ ‘ಕಾಂಗ್ರೆಸ್ ಒಂದುಗೂಡಿಸುವ ಶಕ್ತಿಯೇ ಹೊರತು ಎಡಪಕ್ಷಗಳಂತೆ ವಿಭಜಕ ಶಕ್ತಿಯಲ್ಲ... ಎಡಪಕ್ಷಗಳು ಕೂಡಾ ಹಿಂಸೆಯ ಸಿದ್ಧಾಂತ ಹೊಂದಿವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಹೇಳಿರುವುದನ್ನು ಓದಿ (ಪ್ರ.ವಾ., ಏ. 4) ಇಷ್ಟು ವರ್ಷಗಳ ನಂತರವಾದರೂ ಕಾಂಗ್ರೆಸ್‍ನ ಒಬ್ಬ ಮುಖಂಡರೆಂಬುವವರಿಗೆ ಈ ದಿವ್ಯಜ್ಞಾನ ಉದಯಿಸಿತಲ್ಲಾ ಎಂದು ಸಂತೋಷವೂ ಆಶ್ಚರ್ಯವೂ ಅನುಮಾನವೂ ಏಕಕಾಲಕ್ಕೇ ಉಂಟಾದವು. ಆಶ್ಚರ್ಯವೇಕೆಂದರೆ, ರಾಹುಲ್‌ ಅವರ ಅಜ್ಜಿ ಮತ್ತು ಕಾಂಗ್ರೆಸ್‌ನ ಮಹಾನ್ ನಾಯಕಿ ಇಂದಿರಾ ಗಾಂಧಿ ಅವರಿಗೆ ಎಡಪಕ್ಷಗಳ ಬಗ್ಗೆ ಇದ್ದ ವ್ಯಾಮೋಹವಾದರೂ ಅದೆಷ್ಟು ತೀವ್ರವಾದದ್ದು! ತಮ್ಮ ಆಡಳಿತದುದ್ದಕ್ಕೂ ರಾಹುಲ್‌ ಅವರು ವರ್ಣಿಸಿರುವ ‘ವಿಭಜಕ ಮತ್ತು ಹಿಂಸಾ ಸಿದ್ಧಾಂತ’ದ ಎಡಪಕ್ಷಗಳೊಂದಿಗೆ ಅವರ ಸಖ್ಯ ಅದೆಷ್ಟು ಗಾಢವಾಗಿತ್ತು! ಅವರ ಸಂಪುಟದ ಕೆಲವರು ಎಡಪಕ್ಷಗಳ ಔರಸ ಪುತ್ರರಂತಿದ್ದುದು ಎಲ್ಲರಿಗೂ ತಿಳಿದೇ ಇದೆ. ತುರ್ತು ಪರಿಸ್ಥಿತಿಯಲ್ಲಿ ಎಡಪಕ್ಷಗಳವರೇ ಅವರಿಗೆ ಕುಲಗುರುಗಳಂತಿದ್ದರು.

ದೇಶದ ಉಳಿದೆಲ್ಲ ವಿರೋಧ ಪಕ್ಷಗಳು ಒಂದು ಕಡೆ ಇದ್ದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮಾತ್ರ ಗಾಢ ಮೈತ್ರಿಯಿಂದಿದ್ದವು. ಆಗ ಕಾಂಗ್ರೆಸ್‌ಗೆ ಮಾತ್ರ ಅವು ಹಿಂಸೆಯ ಸಿದ್ಧಾಂತ ಹೊಂದಿದ ಹಾಗೂ ವಿಭಜಕ ಶಕ್ತಿಯ ಪಕ್ಷಗಳೆನಿಸಿರಲಿಲ್ಲ ಅಥವಾ ಯಾರಿಗೆ ಗೊತ್ತು ಕೇರಳದಲ್ಲಿನ ನಂಬೂದಿರಿಪಾಡ್ ನೇತೃತ್ವದ ‘ದೇಶದ ಮೊದಲ ಕಮ್ಯುನಿಸ್ಟ್ ಸರ್ಕಾರ’ವನ್ನು ಇಂದಿರಾ ಗಾಂಧಿಯವರು ಉರುಳಿಸಿದ ಸೇಡನ್ನು ತುರ್ತು ಪರಿಸ್ಥಿತಿಯನ್ನು ಬೆಂಬಲಿಸುವ ಮೂಲಕ ಅವರ ಸರ್ಕಾರವನ್ನು ಉರುಳಿಸಲು ಅದು ಎಡಪಕ್ಷಗಳು ಹೂಡಿದ್ದ ಸಂಚೋ? ಏನೇ ಆಗಲಿ ಈ ಬಗ್ಗೆ ಸಂಶೋಧನೆಗೆ ಅವಕಾಶವಿದೆ! ಇನ್ನು ಅನುಮಾನವೇಕೆಂದರೆ, ಇದು ಕೇವಲ ಚುನಾವಣಾ ಸಮಯದ ಸ್ಟಂಟೋ ಎಂದು. ಮುಂದೆಂದಾದರೂ ಮೈತ್ರಿ ಮಾಡಿಕೊಳ್ಳಬೇಕಾಗಿ ಬಂದರೆ, ಕೋಮುವಾದಿ ಪಕ್ಷವನ್ನು ದೂರವಿಡಲು ಎಂಥ ಪಕ್ಷದೊಂದಿಗಾದರೂ ಮೈತ್ರಿ ಮಾಡಿಕೊಳ್ಳಲೂ ಸಿದ್ಧ ಎಂಬ ನುಡಿಮುತ್ತನ್ನು ಉರುಳಿಸಿದರಾಯಿತು ಅಷ್ಟೆ!

ಹಾಗೆ ನೋಡಿದರೆ ಎಡಪಕ್ಷಗಳನ್ನು ಹೊರತುಪಡಿಸಿದರೆ ನಮ್ಮ ದೇಶದಲ್ಲಿ ಯಾವ ಪಕ್ಷಕ್ಕೆ ತಾನೇ ಸಿದ್ಧಾಂತದ ಗೊಡವೆ ಇದೆ? ಎಡಪಕ್ಷಗಳಿಗೆ ದೇಶ, ಜನತೆ, ಅಧಿಕಾರ ಎಲ್ಲಕ್ಕಿಂತ ತಮ್ಮ ಸಿದ್ಧಾಂತ ಮುಖ್ಯ. ಸಿದ್ಧಾಂತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಬಲ್ಲ ಪಕ್ಷಗಳೆಂದರೆ ಎಡಪಕ್ಷಗಳು ಮಾತ್ರ! ಬಹುಶಃ ಸಿಪಿಎಂ ಮುಕ್ತ ಭಾರತ ಎಂದು ಮೋದಿ ಹೇಳದಿರಲು ಕಾರಣ, ಎಡಪಕ್ಷಗಳನ್ನು ಅವರು ಲೆಕ್ಕಕ್ಕೆ ಇಟ್ಟಿಲ್ಲದಿರುವುದೇ ಆಗಿರಬೇಕು!

ADVERTISEMENT

-ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.