ಬೆಂಗಳೂರಿನಲ್ಲಿ ಯುವಕರು ವಾಹನಗಳ ಸೈಲೆನ್ಸರ್ ಮಾರ್ಪಾಡು ಮಾಡಿಕೊಂಡು, ಕರ್ಕಶ ಶಬ್ದ ಉಂಟುಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ‘ಟ್ರೆಂಡ್’ ಕುರಿತು ವರದಿಯಾಗಿದೆ (ಪ್ರ.ವಾ., ನ. 20). ಇಂತಹ ಕ್ರೇಜ್ ರಾಜಧಾನಿಯಲ್ಲಷ್ಟೇ ಅಲ್ಲ ಹಳ್ಳಿಗಳಿಗೂ ಹಬ್ಬಿದೆ. ಜನರ ಗಮನವನ್ನು ತಮ್ಮತ್ತ ಸೆಳೆಯಲು ಕೆಲವು ‘ಶೋಕಿವಾಲಾ’ಗಳು ಮಾಡುವ ತಂತ್ರಗಳಿವು. ಸಾಮಾಜಿಕ ಮಾಧ್ಯಮ, ರೀಲ್ಸ್ ಪ್ರಭಾವದಿಂದ ಯುವಜನ ಇಂತಹ ಹುಚ್ಚುತನಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಈ ‘ಸೆಲೆಬ್ರಿಟಿಸಂ’ನ ವ್ಯಾಮೋಹ ಮನುಷ್ಯರ ಮನಸ್ಸುಗಳಲ್ಲಿ
ಎಷ್ಟರಮಟ್ಟಿಗೆ ಇದೆ ಎಂದರೆ, ಹೇಗಾದರೂ ಸರಿ ಜನ ತಮ್ಮನ್ನು ಗುರುತಿಸಬೇಕು ಎನ್ನುವ ಮನೋಭಾವ
ಜಾಸ್ತಿಯಾಗುತ್ತಿದೆ.
ಅತಿವೇಗದ ಬೈಕ್ ಸವಾರಿ, ವಿನಾಕಾರಣ ಹಾರ್ನ್ ಮಾಡುವಂತಹ ಕಸರತ್ತುಗಳ ಮೂಲಕ ಜನ ತಮ್ಮತ್ತ ತಿರುಗಿ ನೋಡುವಂತೆ ಮಾಡಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇದರಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಮಾರ್ಪಡಿಸಿದ ಸೈಲೆನ್ಸರ್‌ಗಳಿಂದ ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯ ಏಕಕಾಲದಲ್ಲಿ ಆಗುತ್ತವೆ. ಅಜಾಗರೂಕ ವಾಹನ ಚಾಲನೆಯಿಂದಲೇ ಅಪಘಾತಗಳಾಗುವ ಸಂದರ್ಭಗಳು ಹೆಚ್ಚು. ಸೈಲೆನ್ಸರ್ ಮೋಜು ಒಂದೆಡೆಯಾದರೆ, ರೀಲ್ಸ್ ಮೋಹಕ್ಕೆ ಬಲಿಯಾದವರ ಉದಾಹರಣೆಗಳೂ ಇವೆ. ಖುಷಿ- ಮನರಂಜನೆಯ ಹೊರತಾಗಿ ಇಂತಹ ಅದೆಷ್ಟೋ ವಿಚಾರಗಳಲ್ಲಿ ಇಂದಿನ ಯುವಪೀಳಿಗೆ ಹಾದಿ ತಪ್ಪುತ್ತಿರುವುದು ಶೋಚನೀಯ. ಈ ಬಗ್ಗೆ ಸಂಚಾರ ಪೊಲೀಸರು ಶೀಘ್ರವೇ ಕ್ರಮ ಕೈಗೊಳ್ಳುವುದು ಅಗತ್ಯ.
-ಮಂಜುನಾಥ್ ಹಾಲವರ್ತಿ, ಕೊಪ್ಪಳ
ಕೃಷಿಮೇಳಗಳ ಅನಪೇಕ್ಷಿತ ರೂಪಾಂತರವನ್ನು ಮಣ್ಣೆರಾಜು ಅವರ ‘ಖುಷಿ ಮೇಳ’ ಚುರುಮುರಿ (ಪ್ರ.ವಾ., ನ. 20) ಬಯಲುಗೊಳಿಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕನಾದ ನಾನು, ರಾಜ್ಯದ ವಿವಿಧ ಕೃಷಿಮೇಳಗಳಲ್ಲಿನ ಬದಲಾವಣೆಗಳನ್ನು ನಾಲ್ಕು ದಶಕಗಳಿಂದ ತೀವ್ರವಾಗಿ ಗಮನಿಸುತ್ತಾ ಬಂದಿದ್ದೇನೆ. ತಾಕುಗಳಲ್ಲಿನ ಬೆಳೆ ದರ್ಶನ ಮತ್ತು ಅದರಿಂದ ರೈತರಿಗೆ ಬೇಸಾಯ ಪದ್ಧತಿ ಕುರಿತು ಉಪಯುಕ್ತ ಮಾಹಿತಿ ಒದಗಿಸುವ ಪ್ರಮುಖ ಉದ್ದೇಶದಿಂದ ಪ್ರಾರಂಭವಾದಂತಹವು ಈ ಕೃಷಿಮೇಳಗಳು.
ಈಗ ವಾಣಿಜ್ಯೀಕರಣದ ಪ್ರಭಾವದಿಂದ (?) ತರಹೇವಾರಿ ವಸ್ತುಪ್ರದರ್ಶನಗಳಾಗಿ ಅವು ಮಾರ್ಪಟ್ಟಿರುವುದು
ಹಿತವೆನಿಸದು. ಜೊತೆಗೆ, ನಮ್ಮ ವಿಶ್ವವಿದ್ಯಾಲಯಗಳ ಧೋರಣೆಗಳು ಮತ್ತು ಕೃಷಿಕರ ಆಸಕ್ತಿಗಳು ಮೂಲ ಉದ್ದೇಶವನ್ನೇ ಮರೆಸುವಷ್ಟು ಬದಲಾದವೇ ಎಂಬ ಗುಮಾನಿ ಕಾಡುತ್ತಿದೆ.
-ಅನಿಲಕುಮಾರ ಮುಗಳಿ, ಧಾರವಾಡ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಗೊತ್ತು ಗುರಿಯಿಲ್ಲದ ವಿವಾದಗಳು ಅಂತ್ಯವಾಗುವ ಸೂಚನೆಯೇ ಕಾಣುತ್ತಿಲ್ಲ. ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಸಾಹಿತಿಗಳ ಸಭೆಯಲ್ಲಿ, ಸಾಹಿತ್ಯಕ್ಕೆ ಸಂಬಂಧವೇ ಇಲ್ಲದ ವಾಗ್ವಾದ, ಬಹಿರಂಗ ಜಗಳವೂ ನಡೆದಿರುವುದು ತೀರಾ ಅನಪೇಕ್ಷಣೀಯವಾಗಿತ್ತು. ‘ಮುಖ್ಯಮಂತ್ರಿ ಹಾಗೂ ಸಚಿವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮನೆಗೆ ಬರಬೇಕು, ನಾವು ಅವರ ಮನೆಗೆ ಹೋಗುವುದಲ್ಲ’ ಎಂಬ ಜೋಶಿ ಅವರ ಮಾತು ಏಕಾಏಕಿ ಎಲ್ಲಿಂದ ಬಂತು? ಇದೇ ಜೋಶಿಯವರು ಪರಿಷತ್ತಿನ ಅಧ್ಯಕ್ಷ ಗಾದಿಗೆ ಅಭ್ಯರ್ಥಿ
ಯಾಗಿದ್ದಾಗ, ಬಿಜೆಪಿಯ ಕಚೇರಿಯಲ್ಲಿ ಸ್ವತಃ ಪ್ರಚಾರ ಮಾಡಿದ್ದರಲ್ಲವೇ? ಆಗ ಇವರ ಈಗಿನ ಘನತೆ ಎಲ್ಲಿ ಹೋಗಿತ್ತು?
-ಪ್ರೊ. ಬಿ.ಕೆ.ಚಂದ್ರಶೇಖರ್, ಬೆಂಗಳೂರು
‘ವೇದಕಾಲದ ಋಷಿ ಭಾರಧ್ವಾಜ ಮೊದಲಿಗೆ ವಿಮಾನದ ಪರಿಕಲ್ಪನೆಯನ್ನು ಮೂಡಿಸಿದ್ದರು. ಆದರೆ ಆವಿಷ್ಕಾರದ ಗೌರವವು ರೈಟ್ ಸಹೋದರರ ಪಾಲಾಯಿತು’ ಎಂದು ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಹೇಳಿರುವುದು ಅವೈಜ್ಞಾನಿಕ ಅಷ್ಟೇ ಅಲ್ಲ ಆಧಾರರಹಿತವಾಗಿದೆ. ಇಂಥ ಮೂಢನಂಬಿಕೆಯಿಂದ, ವಿಜ್ಞಾನದಲ್ಲಿ ನಂಬಿಕೆ ಇಟ್ಟಿರುವವರ ಮನಃಸ್ಥಿತಿಯನ್ನೇನೂ ಬದಲಾಯಿಸಲು ಸಾಧ್ಯವಿಲ್ಲ. ಯಾವ ಸಂಶೋಧನೆಯನ್ನು ಯಾವ ದೇಶದವರೇ ಮಾಡಿರಲಿ ಅದನ್ನು ಒಪ್ಪಿಕೊಂಡು ಗೌರವಿಸಿ ‘ವಿಶ್ವಮಾನವ’ರಾಗೋಣ. ಈ ಬಗೆಯ ಹೇಳಿಕೆಗಳು ಭಾರತವನ್ನು ವೈಜ್ಞಾನಿಕ ಮನೋಭಾವದಿಂದ ಹಿಂದೆ ಸರಿಯುವಂತೆ ಮಾಡುತ್ತವೆ ಎನ್ನುವುದನ್ನು ಹೇಳಿಕೆ ಕೊಡುವ ಅಧಿಕಾರಸ್ಥರು ಅರಿತುಕೊಳ್ಳುವುದು ಒಳಿತು.
-ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ
ಜಿ.ನಾರಾಯಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ, ವಿದ್ವಜ್ಜನರ ಪರಿಶ್ರಮದಿಂದ ‘ಕನ್ನಡ ರತ್ನಕೋಶ’ವನ್ನು ಹೊರತಂದಿದ್ದರು. ಆಗ ಅದರ ಬೆಲೆ ಬರೀ ₹ 2 ಆಗಿತ್ತು. 2010ರಲ್ಲಿ ಅದರ ಪರಿಷ್ಕೃತ ಆವೃತ್ತಿಯ ಬೆಲೆ ₹ 20 ಆಯಿತು. 2019ರಲ್ಲಿ ಅದರ ಪುನರ್‌ಮುದ್ರಿತ ಬೆಲೆ ₹ 50. ಅದರ ಯಥಾವತ್ ಪುನರ್‌ಮುದ್ರಿತ ಬೆಲೆ ಈಗ ₹ 80ಕ್ಕೆ ಏರಿದೆ.
ಪ್ರತಿ ಕನ್ನಡಿಗನ ಮನೆಯಲ್ಲಿ ಇರಬೇಕಾದ ಈ ಉಪಯುಕ್ತ ಪುಟ್ಟ ಪುಸ್ತಕದ ಬೆಲೆಯನ್ನು ಎರಡು ರೂಪಾಯಿಯಿಂದ ಎಂಬತ್ತು ರೂಪಾಯಿಗೆ ಏರಿಸುವಾಗ ವಾಸ್ತವಿಕ ಲೆಕ್ಕಾಚಾರವೊಂದು ಇರಬೇಕಲ್ಲವೇ? ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ಹಿಂದಿನವರೇ ಸಿದ್ಧಪಡಿಸಿಟ್ಟು ಹೋದ ಅದರ ಪಠ್ಯ- ಸಾಮಗ್ರಿ ಇದೆ, ಪರಿಷತ್ತಿನದೇ ಆದ ಮುದ್ರಣಾಲಯ ಇದೆ, ಕೆಲಸ ಮಾಡುವ ಸಿಬ್ಬಂದಿಯೂ ಇದ್ದಾರೆ. ಪುನರ್‌ಮುದ್ರಣಕ್ಕೆ ಬೇಕಾದ ಕಾಗದ ಮಾತ್ರವೇ ಇಲ್ಲಿ ಖರ್ಚಾಗಿರುವುದು. ಅಷ್ಟಾದರೂ ಈ ಪುಸ್ತಕದ ಬೆಲೆಯನ್ನು ಈ ಪರಿ ಏರಿಸುವುದು ಎಷ್ಟು ಸರಿ?
-ಈರಪ್ಪ ಎಂ. ಕಂಬಳಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.