ADVERTISEMENT

ರಾಜಕೀಯ ಮೀಸಲಾತಿ: ಏಕೆ ದುರ್ಗತಿ?

ಸವಿತಾ ನಾಗಭೂಷಣ್
Published 10 ಮಾರ್ಚ್ 2019, 19:45 IST
Last Updated 10 ಮಾರ್ಚ್ 2019, 19:45 IST

ಇದೀಗ ತಾನೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ಸಭೆ, ಮೆರವಣಿಗೆ, ಮಹಿಳೆಯರ ಸಬಲೀಕರಣ ಮತ್ತು ಅವರ ಮೇಲಿನ ದೌರ್ಜನ್ಯಗಳನ್ನು ಕುರಿತ ಅರಿವು-ಪ್ರತಿಭಟನೆಗಳ ಜೊತೆಗೇ ಪ್ರಶಸ್ತಿ ಘೋಷಣೆ ಮತ್ತು ಭಾಷಣಗಳ ರೂಪದಲ್ಲಿ ಮುಗಿದಿದೆ.

ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣದ ಅತ್ಯಂತ ಪರಿಣಾಮಕಾರಿ ಮಾರ್ಗವಾದ ಶಾಸನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಕುರಿತ ಶಾಸನದ ಗತಿ ಏನಾಗಿದೆ ಎಂಬ ಸಂಗತಿ ಈ ಅಚರಣೆಗಳ ಮುಖ್ಯ ಕಾರ್ಯಸೂಚಿ ಆಗಿರುವುದರ ಬದಲಾಗಿ, ಎಲ್ಲೋ ಪ್ರಾಸಂಗಿಕವಾಗಿ ಮಾತ್ರ ಪ್ರಸ್ತಾಪಿತವಾಗಿರುವುದು ವಿಷಾದನೀಯ.

‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್’ ಘೋಷಣೆಯ ಮೋದಿ ನೇತೃತ್ವದ ಸರ್ಕಾರ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಒಮ್ಮೆಯೂ ಈ ಮಹಿಳಾ ಪ್ರಾತಿನಿಧ್ಯದ ಶಾಸನದ ಸೊಲ್ಲೆತ್ತಲಿಲ್ಲ. ಇನ್ನು ನಮ್ಮ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೊನ್ನೆಯ ಮಹಿಳಾ ದಿನಾಚರಣೆಯ ಸಭೆಯೊಂದರಲ್ಲಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ 33 ಮೀಸಲಾತಿ ಒದಗಿಸುವ ಶಾಸನವನ್ನು ಜಾರಿಗೆ ತರುವ ಮಾತನಾಡಿದ್ದಾರೆ.

ADVERTISEMENT

ಈ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರೂ ಇದನ್ನು ಪುಷ್ಟೀಕರಿಸಿದ್ದಾರೆ. ಆದರೆ ಇದೇ ಕಾಂಗ್ರೆಸ್ ಪಕ್ಷ, ಮೋದಿ ನೇತೃತ್ವದ ಸರ್ಕಾರಕ್ಕೆ ಮುನ್ನ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದೂ ಈ ಶಾಸನದ ಸಂಬಂಧವಾಗಿ ಎಂತಹ ಪ್ರಯತ್ನ ಮಾಡಿತು ಎಂಬುದನ್ನು ನೆನೆದಾಗ, ಅವರ ಈ ಮಾತನ್ನು ಯಾರೂ ಗಂಭೀರವಾಗಿ ಸ್ವೀಕರಿಸಲಾರರು ಎಂದೇ ಹೇಳಬೇಕು. ಇದಕ್ಕೆ ಇನ್ನೊಂದು ವಾಸ್ತವದ ಕಾರಣವೂ ಇದೆ. ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಕಾಂಗ್ರೆಸ್ ಸರ್ಕಾರದ 34 ಮಂತ್ರಿಗಳ ಸಂಪುಟದಲ್ಲಿ ಇದ್ದದ್ದು ಒಬ್ಬ ಮಹಿಳೆ ಮಾತ್ರ! ಸದ್ಯದ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಚಿವ ಸಂಪುಟದಲ್ಲಿ ಇರುವುದೂ ಒಬ್ಬ ಮಹಿಳೆ (ಇವರು ಕಾಂಗ್ರೆಸ್ಸಿನವರಾಗಿದ್ದು ಜೆಡಿಎಸ್‍ನಿಂದ ಮಹಿಳಾ ಪ್ರತಿನಿಧಿಯೇ ಇಲ್ಲ ಎಂಬುದನ್ನೂ ಗಮನಿಸಬೇಕು).

ಅಂದರೆ ಎರಡೂ ಸಚಿವ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 3ಕ್ಕಿಂತ ಕಡಿಮೆ! ಜೊತೆಗೆ ಈ ಇಬ್ಬರು ಮಹಿಳೆಯರೂ ಸಿನಿಮಾ ರಂಗಕ್ಕೆ ಸೇರಿದವರು. ಸಿನಿಮಾ ರಂಗದವರು ಸಚಿವರಾಗುವುದು ಬೇಡ ಎಂದು ನಾನು ಹೇಳುತ್ತಿಲ್ಲ. ಆದರೆ ಅವರು ಮಾತ್ರ ಸಚಿವರಾಗುವಂತಹ ಪರಿಸ್ಥಿತಿ ಏಕೆ ಬಂದಿದೆ ಎಂಬುದನ್ನು ನಾವು ಯೋಚಿಸಬೇಕಿದೆ.

ಇದಕ್ಕಿಂತ ಹೆಚ್ಚಿನ ದುರಂತದ ಸಂಗತಿ ಎಂದರೆ, ಸದರಿ ಪಕ್ಷಗಳ ಮಹಿಳಾ ಪ್ರತಿನಿಧಿಗಳಾಗಲೀ, ನಾಯಕರಾಗಲೀ ಸೊಲ್ಲೆತ್ತದಿರುವುದು ಅತ್ತ ಇರಲಿ, ರಾಜ್ಯದ ಮಹಿಳಾ ಜಾಗೃತಿ ಆಂದೋಲನ ಅಥವಾ ಗುಂಪುಗಳಾವುವೂ ಈ ಬಗ್ಗೆ ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಾಗಲೀ ಅಥವಾ ಈಗಾಗಲೀ ಒಂದೂ ಮಾತಾಡಿಲ್ಲ!ನಮ್ಮ ಮಹಿಳಾ ಆಂದೋಲನಗಳು ಇಂದು ಅರ್ಥ ಕಳೆದುಕೊಂಡಿರುವ ಪ್ರಗತಿಪರ ಅಥವಾ ಎಡಪಂಥೀಯ ಇತ್ಯಾದಿ ಹೆಸರುಗಳ ಬಂಧನಗಳಲ್ಲಿ ಸಿಕ್ಕಿ ಪಕ್ಷ ರಾಜಕಾರಣದ ಪಕ್ಷಪಾತ ಮತ್ತು ಪೋಷಣೆಗಳಿಂದ ಹೊರಬರದ ಹೊರತು, ಅವು ತಮ್ಮ ನಿಜ ಗುರಿ ಮುಟ್ಟಲಾರವೋ ಏನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.