ADVERTISEMENT

ವಾಚಕರ ವಾಣಿ: ಮೌಢ್ಯ ನಿಷೇಧ ಇಲ್ಲವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 16:03 IST
Last Updated 14 ಜೂನ್ 2023, 16:03 IST

ಮೌಢ್ಯ ನಿಷೇಧ ಇಲ್ಲವೇ ಇಲ್ಲ!

ಸಚಿವರು ತಮ್ಮ ಕಾರಿನ ಸಂಖ್ಯೆಯಲ್ಲಿ 9 ಇರಬೇಕು ಎಂದು ಒತ್ತಾಯಿಸುವ ಮೂಢನಂಬಿಕೆಯ ಕುರಿತು ವಿ.ತಿಪ್ಪೇಸ್ವಾಮಿ ಅವರು ವಿಷಾದಿಸಿದ್ದಾರೆ (ವಾ.ವಾ., ಜೂನ್‌ 14). ಇವರ ಅಭಿಪ್ರಾಯ ಸರಿಯೇ. ಆದರೆ, ಅವರು ಉಲ್ಲೇಖಿಸಿರುವ ಮೌಢ್ಯ ನಿಷೇಧ ಕಾಯ್ದೆಯ ಹೆಸರು ವಾಸ್ತವವಾಗಿ ಇರುವುದು, ‘ಅಮಾನವೀಯ, ದುಷ್ಟ ಪದ್ಧತಿಗಳು ಮತ್ತು ವಾಮಾಚರ ಪ್ರತಿಬಂಧನೆ ಮತ್ತು ನಿರ್ಮೂಲನೆ ಕಾಯ್ದೆ, 2017’ ಎಂದು.

2020ರಲ್ಲಿ ನಿಯಮಾವಳಿಗಳನ್ನೂ ಪಡೆದುಕೊಂಡು ಜಾರಿಗೆ ಬಂದ ಈ ಕಾಯ್ದೆಯಲ್ಲಿ ಜ್ಯೋತಿಷ, ಸಂಖ್ಯಾಶಾಸ್ತ್ರ, ವಾಸ್ತು, ಹಸ್ತಸಾಮುದ್ರಿಕದಂತಹ ಮೂಢನಂಬಿಕೆಗಳನ್ನು ಸೇರಿಸಲಾಗಿಲ್ಲ. ನಮ್ಮಲ್ಲಿ  ಪಕ್ಷಾತೀತವಾಗಿ ಶಾಸಕರು, ಪ್ರಾಧ್ಯಾಪಕರು, ಲೇಖಕರು, ಅಷ್ಟೇ ಏಕೆ ವಿಜ್ಞಾನಿಗಳೂ ಇಂಥ ಮೂಢನಂಬಿಕೆಗಳನ್ನು ಅನುಸರಿಸುವವರೇ. ಆದ್ದರಿಂದ, ಮೌಢ್ಯ ನಿಷೇಧ ಕಾಯ್ದೆ ನಮ್ಮಲ್ಲಿ ಸಾಧ್ಯವಿಲ್ಲವೆಂದು ಕಾಣಿಸುತ್ತದೆ.

ADVERTISEMENT

-ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ಉಚಿತ ವಿದ್ಯುತ್‌: ಸಾಮಾಜಿಕ ನ್ಯಾಯ ಸಿಗಲಿ

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಈ ಯೋಜನೆಯಡಿ 200 ಯೂನಿಟ್‌ಗಿಂತ ಹೆಚ್ಚು ಬಳಸಿದವರನ್ನು ಯೋಜನೆಯಿಂದ ಹೊರಗಿಡುವುದು ಒಪ್ಪತಕ್ಕದ್ದಲ್ಲ. ಹೆಚ್ಚಿನ ಪ್ರಮಾಣದ ವಿದ್ಯುತ್‌ ಬಳಸಿ ಶುಲ್ಕ ಪಾವತಿಸುವವರು ವಿದ್ಯುತ್ ಇಲಾಖೆಗೆ ಆಸ್ತಿ ಇದ್ದಂತೆ. ಆದರೆ ಇವರಿಗೆ ಯಾವ ರಿಯಾಯಿತಿಯೂ ಇಲ್ಲದಿರುವುದು ಸರಿಯಲ್ಲ.

ವಿದ್ಯುತ್ ಪ್ರಸರಣ ನಿಗಮ ಮತ್ತು ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ, ಇಂತಹವರಿಗೆ ಕನಿಷ್ಠ 100 ಯೂನಿಟ್‌ಗಳನ್ನಾದರೂ ಉಚಿತವಾಗಿ ನೀಡುವುದು ಸಾಮಾಜಿಕ ನ್ಯಾಯವಾಗುತ್ತದೆ.

-ಬಿ.ಮಂಜುನಾಥ್, ಕೆ.ಆರ್.ಪೇಟೆ

ಭಿಕ್ಷೆಯಲ್ಲ, ಸ್ವಾವಲಂಬಿಯಾಗಿಸುವ ಯೋಜನೆ

‘ನಮ್ಮಲ್ಲೂ ಆತ್ಮಗೌರವ ಇರಬೇಡವೇ?’ ಎಂದು ಮಾಲತಿ ಪಟ್ಟಣಶೆಟ್ಟಿ ಕೇಳಿದ್ದಾರೆ (ವಾ.ವಾ., ಜೂನ್‌ 14). ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದಡಿ, ಅರ್ಧ ಬಸ್ ಚಾರ್ಜ್ ಕೊಟ್ಟು ಪ್ರಯಾಣಿಸಿದರೆ ಮಹಿಳೆಯರು ಆತ್ಮಗೌರವ ಉಳಿಸಿಕೊಳ್ಳಬಹುದು ಎಂದಿದ್ದಾರೆ. ಮೇಡಂ, ಅದರ ಬದಲು ಪೂರ್ಣ ಚಾರ್ಜ್ ಕೊಟ್ಟು ಪ್ರಯಾಣಿಸುವಂತೆ ಕರೆ ಕೊಡಿ. ಆಗ ಮಹಿಳೆಯರ ಆತ್ಮಗೌರವ ಮತ್ತು ಸ್ವಾಭಿಮಾನ ಇನ್ನೂ ಹೆಚ್ಚಾಗುತ್ತದೆ. ಬಸ್ಸುಗಳಲ್ಲಿ ಮಹಿಳೆಯರು ಟಿಕೆಟ್ ತೆಗೆದುಕೊಳ್ಳುವುದಕ್ಕೂ ಅವಕಾಶವಿದೆ. ಇದು ಸರ್ಕಾರವು ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ತಂದಿರುವ ಯೋಜನೆಯೇ ವಿನಾ ಸರ್ಕಾರವು ಮಹಿಳೆಯರಿಗೆ ಕೊಡುವ ‘ಭಿಕ್ಷೆ’ಯಲ್ಲ. ಉಚಿತವಾಗಿ ಪ್ರಯಾಣಿಸುವ ಹೆಂಗಸರು ಭಿಕ್ಷುಕರೂ ಅಲ್ಲ.

ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದರೆ ತಮ್ಮ ಗೌರವಕ್ಕೆ ಚ್ಯುತಿ ಎಂದುಕೊಂಡಿದ್ದರೆ, ಪೂರ್ಣ ಬಸ್‌ಚಾರ್ಜ್ ಕೊಟ್ಟು ಪ್ರಯಾಣಿಸಲಿ. ಇನ್ನು ಗ್ಯಾರಂಟಿ ಯೋಜನೆಗಳಲ್ಲಿ, 5 ಕೆ.ಜಿ, ಅಕ್ಕಿ ಕೊಡಿ, ಇನ್ನೈದು ಕೆ.ಜಿ, ಅನಾಥಾಶ್ರಮಕ್ಕೆ ಕೊಡಿ, 200 ಯೂನಿಟ್ ಬದಲು 100 ಯೂನಿಟ್ ಕೊಡಿ ಎಂದಿದ್ದೀರಿ. ಸರ್ಕಾರವನ್ನು ಇಷ್ಟು ಕೊಡಿ ಎಂದು ಯಾರೂ ಕೇಳಿರಲಿಲ್ಲ. ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು, ಗ್ಯಾರಂಟಿ ಕೊಟ್ಟಿರುವಾಗ ಅದಕ್ಕೆ ಅಡ್ಡಿಪಡಿಸುವುದೇಕೆ? ಅದನ್ನು ಪಡೆಯುವುದು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ.

-ಬೂಕನಕೆರೆ ವಿಜೇಂದ್ರ, ಮೈಸೂರು

ಹೊಸಬರಿಗೆ ಅವಕಾಶ ಕೊಡುವುದು ಅಪರಾಧವೇ?

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಹೊಸಬರಿಗೆ ಟಿಕೆಟ್ ನೀಡಲು ಹೇಳಿದವರನ್ನು ನೇಣಿಗೆ ಹಾಕಿ ಅಥವಾ ಕಾಲನ್ನಾದರೂ ಕಡಿಯಿರಿ ಎಂದು ಸಂಸದ ರಮೇಶ್ ಜಿಗಜಿಣಗಿ ಅವರು ಹೇಳಿರುವುದು ಎಷ್ಟರಮಟ್ಟಿಗೆ ಸರಿ? ಅವರ ಪ್ರಕಾರ ಹೊಸಬರಿಗೆ ಅವಕಾಶ ಕೊಡುವುದೇ ಒಂದು ದೊಡ್ಡ ಅಪರಾಧವೇ?

ಈ ಬಾರಿಯ ಚುನಾವಣೆಯಲ್ಲಿ 70ಕ್ಕೂ ಹೆಚ್ಚು ಮಂದಿ ಹೊಸಬರಿಗೆ ಟಿಕೆಟ್‌ ಕೊಟ್ಟಿದೆ ಬಿಜೆಪಿ ಹೈಕಮಾಂಡ್. ಹಾಗಾದರೆ ಅವರನ್ನು ನೇಣಿಗೆ ಹಾಕಿ, ಕಾಲು ಕಡಿಯುವಿರಾ? ಹಿಂದೆ ಇದ್ದ ಬಿಜೆಪಿ ನೇತೃತ್ವದ ಸರ್ಕಾರದ ಭ್ರಷ್ಟ ಆಡಳಿತದಿಂದ ಸೋತು ಸುಣ್ಣವಾಗಿದ್ದ ಜನ, ಯಾವ ಹಿರಿಯ ತಲೆಗಳನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದರೂ ಬಿಜೆಪಿಗೆ ಮತ ಹಾಕುತ್ತಿರಲಿಲ್ಲ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ, ಬಿಜೆಪಿಯು 224 ಕ್ಷೇತ್ರಗಳಲ್ಲೂ ಹಿರಿಯರಿಗೇ ಟಿಕೆಟ್‌ ಕೊಟ್ಟಿದ್ದರೂ ಅಧಿಕಾರಕ್ಕೆ ಬರಲಾಗುತ್ತಿರಲಿಲ್ಲ.

-ನಾಗಾರ್ಜುನ್ ಎಂ.ವಿ., ದಾವಣಗೆರೆ

ವಿಕೃತಿಗೆ ಕಡಿವಾಣ ಹಾಕಬೇಕಿದೆ

‘ಮೃತದೇಹ ಮತ್ತು ಘನತೆಯ ಹಕ್ಕು’ ಎಂಬ ಸಿ.ಎಚ್.ಹನುಮಂತರಾಯ ಅವರ ಲೇಖನವು (ಪ್ರ.ವಾ ಜೂನ್‌ 14) ನಮ್ಮನ್ನು ಆತ್ಮಾವಲೋಕನಕ್ಕೆ ಈಡುಮಾಡುವಂತಿದೆ. ವಿಕೃತ ಮನಸ್ಸುಗಳು ನಡೆಸುತ್ತಿರುವ ಕುಕೃತ್ಯಗಳು ಈ ದಿನಗಳಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ವ್ಯಕ್ತಿಯನ್ನು ಕೊಂದು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರಿನಲ್ಲಿ ಬೇಯಿಸುವುದು, ಫ್ರಿಜ್ಜಿನಲ್ಲಿ ಇರಿಸುವುದು, ಮೂಟೆ ಕಟ್ಟಿ ಬಿಸಾಕುವುದು, ಗುರುತು ಪತ್ತೆಯಾಗದಂತೆ ದೇಹದ ಭಾಗಗಳನ್ನು ವಿರೂಪಗೊಳಿಸುವುದು ಕಂಡುಬರುತ್ತಿದೆ. ಮೃತದೇಹದ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವಿಕೃತಿಯನ್ನು ಕಠಿಣ ಶಿಕ್ಷೆಯ ಪರಿಧಿಯೊಳಗೆ ಸೇರಿಸಬೇಕಾಗಿದೆ.

‘ಮೃತದೇಹದ ಘನತೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ’ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವಾಗ, ‘ಘನತೆ ಮತ್ತು ನ್ಯಾಯಯುತ ನಡವಳಿಕೆಯ ಹಕ್ಕು ಜೀವಂತ ವ್ಯಕ್ತಿಗಷ್ಟೇ ಅಲ್ಲದೆ ಆತನ ಮೃತದೇಹಕ್ಕೂ ಲಭ್ಯವಿದೆ’ ಎಂಬುದನ್ನು ಎತ್ತಿಹಿಡಿದಿರುವಾಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ‘ಸತ್ತವರ ಘನತೆ, ಹಕ್ಕುಗಳನ್ನು ಗೌರವಿಸಬೇಕು’ ಎಂದು ಉಲ್ಲೇಖಿಸಿರುವಾಗ, ನಾವು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ದೇಶದಲ್ಲಿ ಇಂಥ ಅಪರಾಧಗಳು ಸಾಬೀತಾಗಿದ್ದರೂ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲದಿರುವುದು ಅಪರಾಧ ಹೆಚ್ಚಾಗಲು ಕಾರಣವಾಗಿರಬಹುದು. ಇನ್ನು ಮೇಲಾದರೂ ಭಾರತೀಯ ದಂಡಸಂಹಿತೆಗೆ ತಿದ್ದುಪಡಿ ತಂದು, ಶವಸಂಭೋಗವನ್ನು ಅಪರಾಧ ಎಂದು ಪರಿಗಣಿಸುವ ಮೂಲಕ ಇಂತಹ ವಿಕೃತಿಗೆ ಕಡಿವಾಣ ಹಾಕಬೇಕಾಗಿದೆ

- ಡಾ. ರಾಜಶೇಖರ ಸಿ.ಡಿ., ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.