ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 10 ಜುಲೈ 2024, 19:24 IST
Last Updated 10 ಜುಲೈ 2024, 19:24 IST
   

ರಾಯಚೂರಿನಲ್ಲಿ ಬೆಳೆಗಳ ಸಮೀಕ್ಷೆ ಆಗಲಿ

ಸಕಾಲಕ್ಕೆ ಮಳೆ ಬಾರದ ಕಾರಣ ರಾಯಚೂರು ತಾಲ್ಲೂಕಿನಲ್ಲಿ ಬೆಳೆಗಳು ನಾಶವಾಗುವ ಹಂತ ತಲುಪುತ್ತಿವೆ. ಸತತ ಬರಗಾಲದಿಂದ ಬೇಸತ್ತ ರೈತರಿಗೆ ಈಗ ಮತ್ತೊಮ್ಮೆ ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ಬಾರಿಯೂ ಮಳೆ ಕೈಕೊಟ್ಟಿದೆ ಎಂಬುದು ಇಲ್ಲಿನ ಬಹುತೇಕ ರೈತರ ಅಳಲು. ಮುಂಗಾರು ಮಳೆ ಆರಂಭದಲ್ಲಿ ಚೆನ್ನಾಗಿ ಸುರಿಯುವ ಸೂಚನೆ ನೀಡಿದ್ದರಿಂದ ರಾಯಚೂರು ಜಿಲ್ಲೆಯಲ್ಲಿ ರೈತರು ಸಾಲ ಮಾಡಿ ತೊಗರಿ, ಹತ್ತಿ, ಸಜ್ಜೆ, ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಈಗ ಮಳೆಯು ದಿನದಿನಕ್ಕೂ ಕಡಿಮೆಯಾಗುತ್ತಿದೆ, ವಿವಿಧ ಬೆಳೆಗಳ ಫಸಲು ವೃದ್ಧಿಯಾಗದೇ ಒಣಗಿ ಹೋಗುತ್ತಿವೆ. ಇಲ್ಲಿ ಈ ಬಾರಿಯೂ ಬರಗಾಲ ಎದುರಾಗುವ ಸಾಧ್ಯತೆಯಿದೆ.

ದೇವಸೂಗೂರು, ಯರಮರಸ್, ಚಿಕ್ಕಸೂಗೂರು, ಯದ್ಲಾಪುರ, ಗಂಜಳ್ಳಿ, ಕಾಡ್ಲೂರು, ಚಂದ್ರಬಂಡ, ಹೆಗ್ಗಸನಹಳ್ಳಿ, ಶಾಖವಾದಿ ಹಳ್ಳಿಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಬೆಳೆಗಳಿಗೆ ಬೇಕಾದಷ್ಟು ಮಳೆ ಆಗಿಲ್ಲ. ಈ ಗ್ರಾಮಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಾಶವಾಗುವ ಹಂತದಲ್ಲಿರುವ ಬೆಳೆಗಳ ಸಮೀಕ್ಷೆ ಮಾಡಿ, ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಬೇಕು.

ADVERTISEMENT

→⇒ವಿಜಯಕುಮಾರ್‌ ಎಚ್.ಕೆ., ರಾಯಚೂರು

ಗೌತಮ್ ನೇಮಕ ಸ್ವಾಗತಾರ್ಹ

ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿ ಮುಗಿದಿದ್ದು, ಅವರಿಂದ ತೆರವಾದ ಹುದ್ದೆಗೆ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ. ಭಾರತೀಯ ಕ್ರಿಕೆಟ್ ತಂಡದ ಆರಂಭ ಆಟಗಾರರಾಗಿದ್ದ ಗೌತಮ್ ಅವರು ಐಪಿಎಲ್‌ ಪಂದ್ಯಾವಳಿಯಲ್ಲಿ ತಮ್ಮ ಕೌಶಲ ಮೆರೆದಿದ್ದರು. ಅಲ್ಲದೆ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ಮಾಡುವ ಗುರುವಿನ ಸ್ಥಾನವನ್ನು ಅವರು ಅಲಂಕರಿಸುತ್ತಿರುವುದು ಮೆಚ್ಚತಕ್ಕ ಸಂಗತಿ. ವೃತ್ತಿ ಜೀವನದುದ್ದಕ್ಕೂ ಹಲವು ಏಳುಬೀಳುಗಳನ್ನು ಕಂಡ ಅವರು ಭಾರತೀಯ ಕ್ರಿಕೆಟ್‌ ತಂಡವನ್ನು ಮುನ್ನಡೆಸಲು ಅರ್ಹ ವ್ಯಕ್ತಿ.

⇒ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ನಿಜ ಸಂಗತಿಯನ್ನು ತೋರಿಸಿದೆ

‘ಜೀವನ ಇಷ್ಟೊಂದು ಅಗ್ಗ ಆಗಬಾರದು!’ ಬರಹದಲ್ಲಿ ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ (ಪ್ರ.ವಾ., ಜುಲೈ 10) ಇವತ್ತಿನ ನಿಜ ಸಂಗತಿಯನ್ನು ತೋರಿಸಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಕೂಡ ಅಪಘಾತಕ್ಕೆ ಕಾರಣ. ಮುಂಜಾನೆ ಎದ್ದು ರಸ್ತೆಗೆ ಇಳಿದರೆ ಸಾಕು, ಎಲ್ಲರಲ್ಲಿಯೂ ಅವಸರ ಎದ್ದು ಕಾಣುತ್ತಿರುತ್ತದೆ. ಇದರ ಪರಿಣಾಮವಾಗಿ, ಸಿಗ್ನಲ್ ಜಂಪ್ ಮಾಡುವುದು, ರಸ್ತೆ ದಾಟುವ ಪಾದಚಾರಿಗಳಿಗೆ ಡಿಕ್ಕಿ ಹೊಡೆಯುವುದು ಕೂಡ ಇತ್ತೀಚೆಗೆ ಹೆಚ್ಚಾಗಿವೆ. ಖಾಸಗಿ ಜೀವನದಲ್ಲಿ ಮೋಜು-ಮಸ್ತಿ ಮಾಡುವ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡುತ್ತೇವೆ. ಆದರೆ ಸಿಗ್ನಲ್‌ಗಳಲ್ಲಿ ಒಂದು ನಿಮಿಷ ನಿಂತು ಮುಂದೆ ಹೋಗುವ ತಾಳ್ಮೆ ಇರುವುದಿಲ್ಲ.

ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಮೇಲೆ ಕ್ಯಾಮೆರಾ ಮೂಲಕ ಕಣ್ಣಿಟ್ಟು, ಪ್ರಕರಣಗಳನ್ನು ದಾಖಲಿಸಿದರೂ ನಿಯಮಗಳನ್ನು ಗಂಭೀರವಾಗಿ ಪರಿಗಣಿಸದೆ, ಅಪಘಾತಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿ.

⇒ಮಲ್ಲಿಕಾರ್ಜುನ್ ತೇಲಿ ಗೋಠೆ, ಜಮಖಂಡಿ

ಭಾರತ–ರಷ್ಯಾ: ಸಾಂಸ್ಕೃತಿಕ ಸಂಬಂಧ ಹೆಚ್ಚಲಿ

ಭಾರತ ಮತ್ತು ರಷ್ಯಾ ನಡುವಿನ ಸಂಬಂಧವು ಬಹಳ ಮಧುರವಾದ ಭಾವನೆಗಳನ್ನು ಹೊಮ್ಮಿಸುವಂಥದ್ದು. ಈಗ ಪಾಶ್ಚಿಮಾತ್ಯ ದೇಶಗಳ ಕಡೆ, ಕೊಲ್ಲಿ ರಾಷ್ಟ್ರಗಳ ಕಡೆಗೆ ಸಾಗುವ ಭಾರತೀಯರ ಸಂಖ್ಯೆ ಬಹಳ ಹೆಚ್ಚಾಗಿರಬಹುದು. ರಷ್ಯಾಕ್ಕೆ ಉದ್ಯೋಗ ಅಥವಾ ವ್ಯಾಪಾರದ ಉದ್ದೇಶದಿಂದ ಹೋಗುವ ಭಾರತೀಯರ ಸಂಖ್ಯೆಯು ಕಡಿಮೆ ಆಗಿರಬಹುದು. ಹೀಗಿದ್ದರೂ ರಷ್ಯಾ ಎಂಬ ಹೆಸರು ಕೇಳಿದಾಗ ‘ನಂಬಿಕಸ್ತ’ ಎನ್ನುವ ಭಾವವೊಂದು ಮನಸ್ಸಿನಲ್ಲಿ ಹಾದುಹೋಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದಾಗ ಇದೇ ಮಾತನ್ನು ಹೇಳಿದ್ದಾರೆ.

ಭಾರತ ಮತ್ತು ರಷ್ಯಾ ನಡುವೆ ವ್ಯಾಪಾರ ವಹಿವಾಟು ಹೆಚ್ಚಾಗಬೇಕು ಎಂಬುದರ ಜೊತೆಯಲ್ಲೇ ಸಾಂಸ್ಕೃತಿಕ ಕೊಡು–ಕೊಳ್ಳುವಿಕೆ, ಜನರ ಓಡಾಟ ಹೆಚ್ಚಾಗಬೇಕು ಎಂಬ ದಿಸೆಯಲ್ಲಿಯೂ ಸರ್ಕಾರ ಕೆಲಸ ಮಾಡಬೇಕು. ಹಿಂದಿನ ಯುಎಸ್‌ಎಸ್‌ಆರ್‌ನ ಕೆಲವು ಪ್ರಕಾಶನ ಸಂಸ್ಥೆಗಳ ಪುಸ್ತಕಗಳು ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಾಗುತ್ತಿದ್ದವು. ಆದರೆ ಅವು ಈಗ ಪುಸ್ತಕದ ಅಂಗಡಿಗಳಿಂದ ಮರೆಯಾಗಿವೆ. ಅವು ಮತ್ತೆ ಸಿಗುವಂತಾಗಬೇಕು. ಜನರ ನಡುವೆ ಒಡನಾಟ ಹೆಚ್ಚಾದರೆ, ದೇಶಗಳ ಮಟ್ಟದಲ್ಲಿ ಸಂಬಂಧವು ಸಹಜವಾಗಿಯೇ ಬೆಳೆಯುತ್ತದೆ. 

⇒ರಾಮಚರಣ್ ಶೆಟ್ಟಿ, ಕುಂದಾಪುರ

ಇದೊಂದು ವಿಪರ್ಯಾಸ!

ಕೃತಕ ಬುದ್ಧಿಮತ್ತೆಯ ಕ್ಯಾಮೆರಾ ಕಣ್ಣುಗಳು ಸೆರೆಹಿಡಿದ ದೃಶ್ಯಗಳನ್ನಾಧರಿಸಿ, ಸಣ್ಣಪುಟ್ಟ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರ ಅಥವಾ ಚಾಲಕರಿಂದ ಕೋಟ್ಯಂತರ ರೂಪಾಯಿ ದಂಡ ವಸೂಲು ಮಾಡಲಾಗಿದೆ ಎಂದು ಪೊಲೀಸರು ಬೀಗಿದ್ದಾರೆ. ಆದರೆ, ವಿಪರ್ಯಾಸವೆಂದರೆ ಸರ್ಕಾರದ ಸಹಸ್ರಾರು ಕೋಟಿ ರೂಪಾಯಿಗಳನ್ನು ನುಂಗಿದ ಒಬ್ಬನೇ ಒಬ್ಬ ಪುಢಾರಿಯಿಂದ ಒಂದೇ ಒಂದು ರೂಪಾಯಿಯನ್ನು ವಸೂಲು ಮಾಡಲು ಸಹಜ ಬುದ್ಧಿಮತ್ತೆಯ ಯಾವುದೇ ಪೊಲೀಸರಿಂದಲೂ ಸಾಧ್ಯವಾಗಿಲ್ಲ!

⇒ಪಿ.ಜೆ.ರಾಘವೇಂದ್ರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.