ADVERTISEMENT

ಭಾಷಾವಾರು ರಾಜ್ಯಗಳ ಉದ್ದೇಶ ಮರೆತರೆ ಹೇಗೆ?: ಓದುಗರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:36 IST
Last Updated 10 ನವೆಂಬರ್ 2019, 19:36 IST
   

ಆಂಧ್ರಪ್ರದೇಶ ಸರ್ಕಾರವು ರಾಜ್ಯದ ತೆಲುಗು ಮಾಧ್ಯಮ ಶಾಲೆಗಳನ್ನೆಲ್ಲಾ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನಾಗಿ ಮಾರ್ಪಡಿಸಲು ನಿರ್ಧರಿಸಿದೆ.

ಭಾಷಾವಾರು ರಾಜ್ಯಗಳಿಗಾಗಿ ಹೋರಾಟ ನಡೆದು, ಆಂಧ್ರದ ಪೊಟ್ಟಿ ಶ್ರೀರಾಮುಲು ಆಮರಣ ಉಪವಾಸ ಸತ್ಯಾಗ್ರಹ ನಡೆಸಿ ನಿಧನರಾದ ಮೇಲೆ, ಭಾಷಾವಾರು ರಾಜ್ಯಗಳ ನಿರ್ಮಾಣಕ್ಕೆ ಅಂದಿನ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ಇಂಥ ತ್ಯಾಗ, ಬಲಿದಾನ ವನ್ನು ಹಿಂದಿನವರು ಮಾಡಿದ್ದಾದರೂ ಯಾಕೆ?

ಒಂದು ಭಾಷೆ ಯನ್ನಾಡುವ ಜನ ಒಂದೆಡೆ ಇರಬೇಕು, ಶಿಕ್ಷಣ ಮಾಧ್ಯಮವು ರಾಜ್ಯ ಭಾಷೆಯಲ್ಲಿ ಇರಬೇಕು, ಆಡಳಿತವೂ ಆ ಭಾಷೆಯಲ್ಲಿ ನಡೆದರೆ ಜನರಿಗೆ ಎಲ್ಲ ವಿಷಯಗಳು ಮನದಟ್ಟಾಗುತ್ತವೆ, ಪ್ರಜಾಪ್ರಭುತ್ವ ವ್ಯವಸ್ಥೆ ಸಹ ಗಟ್ಟಿಯಾಗುತ್ತದೆ ಎಂಬುದನ್ನು ನಮ್ಮ ಹಿರಿಯರು ಅರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ಚಿಂತಿಸದೆ, ಶಿಕ್ಷಣ ತಜ್ಞರ ಅಭಿ ಪ್ರಾಯವನ್ನೂ ಕೇಳದೆ ಸರ್ಕಾರ ನಿರ್ಣಯ ಕೈಗೊಂಡಿರುವುದು ಖಂಡನೀಯ.

ADVERTISEMENT

ಜಪಾನ್, ಜರ್ಮನಿ, ರಷ್ಯಾ ಮುಂತಾದ ರಾಷ್ಟ್ರಗಳು ತಮ್ಮ ಭಾಷೆಗಳನ್ನು ಶಿಕ್ಷಣದಲ್ಲಿ, ಆಡಳಿತದಲ್ಲಿ ಜಾರಿಗೆ ತಂದು ಮುಂದೆ ಬಂದಿವೆ. ನಾವು ಮಾತ್ರ ಇಂತಹ ಒಳ್ಳೆಯ ಮಾರ್ಗವನ್ನು ಅನುಸರಿಸು ತ್ತಿಲ್ಲ. ಶಿಕ್ಷಣ ಮಾಧ್ಯಮದ ಆಯ್ಕೆಯು ವಿದ್ಯಾರ್ಥಿಗಳ ಪಾಲಕರಿಗೆ ಬಿಟ್ಟದ್ದು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದಂದಿ ನಿಂದ ಶಿಕ್ಷಣ ಕ್ಷೇತ್ರದಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ.

ಆಂಧ್ರ ಸರ್ಕಾರದ ಧೋರಣೆ ಜನವಿರೋಧಿ ಮತ್ತು ಸಂಸ್ಕೃತಿ ವಿರೋಧಿಯಾದದ್ದು. ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ನೌಕರಿ ಸಿಗುತ್ತದೆ ಎಂಬುದೇ ಇದರ ಒಳಗುಟ್ಟು. 1ರಿಂದ 10ನೇ ತರಗತಿಯವರೆಗೆ ಆಯಾ ರಾಜ್ಯಭಾಷೆಯಲ್ಲೇ ಶಿಕ್ಷಣ ನಡೆಯಬೇಕು ಎಂಬುದನ್ನು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಸಂಸ್ಕೃತಿ ರೂಪುಗೊಳ್ಳುವುದೇ ಭಾಷೆಗಳ ಮೂಲಕ ಎಂಬುದನ್ನು ಮರೆಯಬಾರದು.
-ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.