ಎರಡು ವರ್ಷಗಳಿಂದ ವಿಚಾರಣೆಯೇ ಶುರುವಾಗದೆ ಹಲವು ನಾಗರಿಕ ಹಕ್ಕುಗಳ ಹೋರಾಟಗಾರರು ಸೆರೆಮನೆಗಳಲ್ಲಿ ಕೊಳೆಯುವಂತಾಗಿರುವ 2018ರ ಭೀಮಾ ಕೋರೆಗಾಂವ್ ಹಿಂಸಾಚಾರದ ಸಂಬಂಧವಾಗಿ ಒಂದು ತಿಂಗಳ ಹಿಂದೆ ಫಾದರ್ ಸ್ಟ್ಯಾನ್ ಸ್ವಾಮಿ ಎಂಬ 83 ವರ್ಷದ ಕ್ರೈಸ್ತ ಸನ್ಯಾಸಿಯೊಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿ ಸೆರೆಮನೆಯಲ್ಲಿಟ್ಟಿದೆ. ಈ ವ್ಯಕ್ತಿ ಜಾರ್ಖಂಡ್‍ನಲ್ಲಿ ಗಣಿಗಾರಿಕೆಯಿಂದ ನಿರ್ವಸಿತರಾಗುತ್ತಿರುವ ಆದಿವಾಸಿಗಳ ನಾಗರಿಕ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿದ್ದವರೆಂದು ಹೇಳಲಾಗಿದೆ. ಈ ವೃದ್ಧರೂ ಸೇರಿದಂತೆ ಈ ಪ್ರಕರಣದ ಆರೋಪಿಗಳನ್ನು ಅಕ್ರಮ ಚಟುವಟಿಕೆ ನಿರೋಧಕ ಕಾಯ್ದೆ (ಯುಎಪಿಎ) ಎಂಬ ಅತಿ ಕಠಿಣ ಕಾಯ್ದೆ ಪ್ರಕಾರ ಬಂಧಿಸಿರುವುದರಿಂದ ಇವರ‍್ಯಾರಿಗೂ ನ್ಯಾಯಾಲಯ ಜಾಮೀನು ನೀಡುವ ಸಂಭವ ಅತಿ ಕಡಿಮೆ. ಆದ್ದರಿಂದ ಈ ಆರೋಪಿಗಳಲ್ಲಿ ಬಹಳಷ್ಟು ಜನ ವೃದ್ಧಾಪ್ಯದ ಗಂಭೀರ ಕಾಯಿಲೆಗಳಿಂದ ನರಳುತ್ತಿದ್ದರೂ ಅವರಿಗೆ ಜಾಮೀನು ದೊರಕಿಲ್ಲ.
ಈ ಆರೋಪಿಗಳೆಲ್ಲರೂ ಸಂಬಂಧಿತ ಪ್ರಕರಣದ ಅಪರಾಧಿಗಳೇ ಇರಬಹುದು. ಅದು, ವಿಚಾರಣೆ ಪೂರ್ಣಗೊಂಡಾಗ ಸಾಬೀತೂ ಆಗಬಹುದು. ಆದರೆ ಸ್ಟ್ಯಾನ್ ಸ್ವಾಮಿ ಅವರಿಗೆ ಹಲವು ಕಾಯಿಲೆಗಳ ಜೊತೆ ಪಾರ್ಕಿನ್‍ಸನ್ ಕಾಯಿಲೆಯೂ ಇದ್ದು ಅದರಿಂದಾಗಿ ಅವರು ಲೋಟವನ್ನೂ ಸ್ಥಿರವಾಗಿ ಹಿಡಿದು ಸಹಜವಾಗಿನೀರು ಕುಡಿಯುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಅವರು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಾವುಲೋಟದಿಂದ ನೀರು ಕುಡಿಯಲು ಒಂದು ಹೀರುವ ಕೊಳವೆಯನ್ನು ಒದಗಿಸಬೇಕೆಂದು ಕೋರಿದ್ದಾರೆ.
ಆಶ್ಚರ್ಯವೆಂದರೆ ಇಂತಹ ಕೊಳವೆಯನ್ನು ಅವರಿಗೆ ಒದಗಿಸಬಹುದೇ ಎಂದು ನ್ಯಾಯಾಲಯವು ಎನ್‌ಐಎಯನ್ನು ಕೇಳಿದೆ! ಇನ್ನೂ ಆಶ್ಚರ್ಯದ ಮತ್ತು ಅತಿ ಖೇದದ ಸಂಗತಿ ಎಂದರೆ, ನ್ಯಾಯಾಲಯಕ್ಕೆ ಈ ಸಂಬಂಧವಾಗಿ ಪ್ರತಿಕ್ರಿಯಿಸಲು ತನಿಖಾ ಸಂಸ್ಥೆಯು 20 ದಿನಗಳ ಕಾಲಾವಕಾಶ ಕೇಳಿದೆ ಮತ್ತು ಅದಕ್ಕೆ ನ್ಯಾಯಾಲಯವು ಒಪ್ಪಿಗೆ ನೀಡಿದೆ! ಮತ್ತು ಈ ಬಗ್ಗೆ ನಮ್ಮ ಮಾಧ್ಯಮಗಳೂ ಸೇರಿದಂತೆ ಯಾರಿಂದಲೂ ಸದ್ದಿಲ್ಲ. ನ್ಯಾಯ ವ್ಯವಸ್ಥೆ ಇರುವುದೇ ಹಾಗೆ, ಯಾರೇನೂ ಮಾಡಲಾಗದೆಂಬ ಜಡ ವಿಧೇಯದಲ್ಲಿ ನಮ್ಮ ದಿನನಿತ್ಯದ ವ್ಯವಹಾರ ಕೊಂಚವೂ ವಿಚಲಿತವಾಗದೆ ನಡೆದಿದೆ.
ಇನ್ನೂ ವಿಚಾರಣೆಯೇ ಆರಂಭವಾಗದ ಪ್ರಕರಣದ ವೃದ್ಧ ಮತ್ತು ಅಸ್ವಸ್ಥ ಆರೋಪಿ ಸರಾಗವಾಗಿ ನೀರು ಕುಡಿಯಲು ಒಂದು ಸಣ್ಣ ಹೀರು ಕೊಳವೆ ಕೇಳಿದರೆ, ಅದರ ಬಗ್ಗೆ ತೀರ್ಮಾನ ಕೈಗೊಳ್ಳಲು ನಮ್ಮ ವ್ಯವಸ್ಥೆಗೆ 20 ದಿನಗಳುಬೇಕು! ಕಾನೂನು ಪಂಡಿತರು ಮತ್ತು ಪ್ರಭುತ್ವದ ರಾಜಕೀಯ ಬೆಂಬಲಿಗರು ಇದಕ್ಕೆ ತಾಂತ್ರಿಕವಾದ ಹಲವಾರು ಕಾರಣಗಳ ರಾಶಿಯನ್ನೇ ಒಟ್ಟಿಯಾರು. ಆದರೆ ಇದೆಲ್ಲ ಸಾಮಾನ್ಯ ಪರಿಜ್ಞಾನದ ಮತ್ತು ಸರಳ ಮಾನವೀಯತೆಯಸ್ಪಂದನಗಳನ್ನೇ ಕಳೆದುಕೊಂಡ ಪ್ರಭುತ್ವವೆಂಬ ಬೃಹತ್ ಕಾನೂನು ಯಂತ್ರದ ಬಿಡಿಭಾಗಗಳಂತಾಗಿರುವಜನರ ಬರಡು ಮಾತು ಮಾತ್ರವೆಂದು ಯಾರಿಗಾದರೂ ಎನ್ನಿಸುವುದಿಲ್ಲವೇ? ನಾವೇ ನಮ್ಮ ಕ್ಷೇಮಕ್ಕಾಗಿ ರೂಪಿಸಿಕೊಂಡ ಪ್ರಭುತ್ವವು ಒಂದು ನಿರ್ಮಮ ತಾಂತ್ರಿಕ ರಾಕ್ಷಸನಾಗಿ ಮಾರ್ಪಾಡಾಗಿ ನಾವು ಸಾಮಾನ್ಯ ಮನುಷ್ಯರಾಗಿ ಕೇಳಬಹುದಾದ ಸಾಮಾನ್ಯ ಪರಿಜ್ಞಾನದ ಪ್ರಶ್ನೆಗಳನ್ನೂ ಕೇಳಲಾಗದಷ್ಟು ನಮ್ಮನ್ನುಅಸೂಕ್ಷ್ಮರನ್ನಾಗಿಯೂ ಭಯಗ್ರಸ್ತರನ್ನಾಗಿಯೂ ಮಾಡಿ ಭಯಂಕರ ಅಮಾನವೀಕರಣಕ್ಕೆ ಒಳಪಡಿಸಿದೆಯಲ್ಲವೇ? ಪ್ರಜಾಪ್ರಭುತ್ವ, ಪ್ರಗತಿ, ಅಭಿವೃದ್ಧಿ ಎಂದರೆ ಇದೇನಾ? ಭಯವಾಗುತ್ತಿದೆ.
-ಡಿ.ಎಸ್.ನಾಗಭೂಷಣ,ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.