ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಮಹತ್ವಾಕಾಂಕ್ಷೆಗೆ ತಕ್ಕಂತೆ ಲಭ್ಯವಾಗದ ಸ್ಥಾನ 

ಇತ್ತೀಚೆಗೆ ನಿಧನರಾದ ನಟ, ರಾಜಕಾರಣಿ ಕೆ.ಶಿವರಾಂ ಅವರನ್ನು ಕನ್ನಡಿಗರು ಹೆಮ್ಮೆಯಿಂದ ನೆನೆಯಲೇಬೇಕು. ಅವರು ತುಂಬ ಮಹತ್ವಾಕಾಂಕ್ಷಿಯಾಗಿದ್ದರು. ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು, ಉತ್ತೀರ್ಣರಾಗಿ ಐಎಎಸ್‌ ಅಧಿಕಾರಿಯಾದ ಮೊದಲಿಗರು ಎನಿಸಿಕೊಂಡರು. ಕನ್ನಡದ ಮಟ್ಟಿಗೆ ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಐಎಎಸ್‌ನಂಥ ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್ ಭಾಷಾ ಪರಿಣತಿ ಬೇಕೇ ಬೇಕು ಎಂಬ ವಾತಾವರಣ ಇದ್ದಾಗ, ಅದಕ್ಕೆ ಸಡ್ಡು ಹೊಡೆದು, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಯಶಸ್ವಿಯಾಗಿ, ಕನ್ನಡ ಭಾಷಾ ಸಾಮರ್ಥ್ಯವನ್ನು ಎತ್ತಿಹಿಡಿದವರು ಅವರು. ಆದರೆ ರಾಜಕೀಯದಲ್ಲಿ ಶಿವರಾಂ ಅವರನ್ನು ಕೆಲವು ಪಕ್ಷಗಳು ಬಳಸಿಕೊಂಡವೇ ವಿನಾ ಅವರ
ಮಹತ್ವಾಕಾಂಕ್ಷೆಗೆ ತಕ್ಕಂತೆ ಅವಕಾಶ ನೀಡಲಿಲ್ಲ. ರಾಜಕೀಯ ಒಳಸುಳಿಗಳಲ್ಲಿ ಅವರಿಗೆ ಅನ್ಯಾಯವಾಯಿತು. 

ADVERTISEMENT

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

**

ಪರೀಕ್ಷೆ: ಧೈರ್ಯವೇ ಮೂಲಮಂತ್ರವಾಗಲಿ

ಇದು, ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆಯ ಕಾಲ. ಈಗಾಗಲೇ ಕೆಲವು ಪರೀಕ್ಷೆಗಳು ಪ್ರಾರಂಭವಾಗಿವೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದುವ ಮಕ್ಕಳ ಮನಸ್ಸಿನಲ್ಲಿ ಸಾಮಾನ್ಯವಾಗಿ ಪರೀಕ್ಷೆಯ ಕುರಿತು ಭಯ, ದುಗುಡ, ಆತಂಕ, ಒತ್ತಡನಿರ್ಮಾಣವಾಗಿರುತ್ತದೆ. ಪೋಷಕರು ಅವುಗಳನ್ನು ನಿವಾರಿಸಬೇಕು. ಮಕ್ಕಳಲ್ಲಿ ವಿಶ್ವಾಸ ತುಂಬಬೇಕು. ಸೋಲು– ಗೆಲುವು, ಯಶಸ್ಸು– ಹಿನ್ನಡೆಯ ಕುರಿತು ಮಕ್ಕಳು ಸದೃಢ ಮನಸ್ಸು ಹೊಂದಿರಬೇಕು.

ಬದುಕಿಗೆ ಪರೀಕ್ಷೆಯ ಅಂಕಗಳೇ ಮಾನದಂಡ ಎನ್ನುವ ರೀತಿಯಲ್ಲಿ ಪೋಷಕರು ಮಕ್ಕಳನ್ನು ಬೆಳೆಸಬಾರದು. ಧೈರ್ಯ ಮತ್ತು ತಾಳ್ಮೆ ಎಂಬ ಮೂಲಮಂತ್ರದೊಂದಿಗೆ ಅವರು ಪರೀಕ್ಷೆಯನ್ನು ಎದುರಿಸುವಂತೆ ಆಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶಲಭ್ಯವಾಗದಿದ್ದರೆ, ಹತಾಶರಾಗದೆ, ಪುಸ್ತಕದ ಪರೀಕ್ಷೆಗಿಂತಲೂ ಮಿಗಿಲಾಗಿ ಮುಂದೆ ಮೌಲ್ಯವರ್ಧಿತ ಬದುಕಿನ ಪರೀಕ್ಷೆ ಇದೆ ಎಂಬುದನ್ನು ಮಕ್ಕಳು ಮನಗಾಣುವಂತೆ ಆಗಬೇಕು.

ಮಲ್ಲಿಕಾರ್ಜುನ ತೇಲಿ, ಜಮಖಂಡಿ

**

ನಿರ್ವಾಹಕರ ಬವಣೆ ತಪ್ಪಿಸಿ

ರಾಜ್ಯ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ‘ಶಕ್ತಿ’ ಯೋಜನೆಯಿಂದ ಬಹಳಷ್ಟು ಮಹಿಳೆಯರಿಗೆ ಅನುಕೂಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಗದಿತ ಸ್ಥಳಕ್ಕೆ ಉಚಿತ ಟಿಕೆಟ್‌ ಪಡೆದ ಮಹಿಳೆಯರು ಕೆಲವೊಮ್ಮೆ ಮಧ್ಯದಲ್ಲೇ ಇಳಿಯಬೇಕಾಗಿ ಬರುತ್ತದೆ. ಆಗ ಅವರು ಅದನ್ನು ನಿರ್ವಾಹಕರ ಗಮನಕ್ಕೆ ತರಬೇಕಾಗುತ್ತದೆ. ಹಾಗೆ ಮಾಡದೇ ಅವರು ಇಳಿದುಹೋದಲ್ಲಿ, ಮಾರ್ಗಮಧ್ಯೆ ತಪಾಸಣಾ ತಂಡದವರೇನಾದರೂ ಬಂದು ತಪಾಸಣೆ ನಡೆಸಿದರೆ, ಟಿಕೆಟ್‌ಗಳು ತಾಳೆಯಾಗದೆ ಅವರು ನಿರ್ವಾಹಕರ ಮೇಲೆ ಕ್ರಮ ಜರುಗಿಸುತ್ತಾರೆ. ತಾನು ಮಾಡದ ತಪ್ಪಿಗೆ ನಿರ್ವಾಹಕ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮಹಿಳಾ ಪ್ರಯಾಣಿಕರು ಹಾಗೂ ನಿರ್ವಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ಸಾರಿಗೆ ಸಚಿವರು ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕಾಗಿದೆ. 

ಜಿ.ನಾಗೇಂದ್ರ ಕಾವೂರು, ಸಂಡೂರು

**

ಚಲನಚಿತ್ರ ಅಕಾಡೆಮಿ: ರಾಜಕೀಯ ಪ್ರಭಾವ ಸಲ್ಲ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ಸಾಧು ಕೋಕಿಲ ಅವರನ್ನು ನೇಮಿಸಿರುವುದನ್ನು ತಿಳಿದು ಆಘಾತವಾಯಿತು. ಅಕಾಡೆಮಿಯು ನಿಗಮ ಅಥವಾ ಮಂಡಳಿ ಅಲ್ಲ. ಸಾಧು ಕೋಕಿಲ ಅವರು ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರಾದರೂ ಮೂಲತಃ ಅವರು ಒಬ್ಬ ಹಾಸ್ಯನಟ. ಅಕಾಡೆಮಿಯ ಉದ್ದೇಶವಾದ ‘ಶಿಕ್ಷಣದಲ್ಲಿ ಸಿನಿಮಾ, ಸಿನಿಮಾದಲ್ಲಿ ಶಿಕ್ಷಣ’ಕ್ಕೂ ಅವರಿಗೂ ಸಂಬಂಧ ಇಲ್ಲ. ಹೀಗಾಗಿ, ಇದೊಂದು ಅಪಾರದರ್ಶಕ ರಾಜಕೀಯ ಉದ್ದೇಶದ ನೇಮಕ ಎಂದೇ ಹೇಳಬೇಕಾಗುತ್ತದೆ. ಅಕಾಡೆಮಿಗೆ ಅಧ್ಯಕ್ಷರಾಗಿ ನೇಮಕಗೊಂಡವರಲ್ಲಿ ಹೆಚ್ಚಿನವರು ತಾವು ಗುರುತಿಸಿಕೊಂಡಿದ್ದ ರಾಜಕೀಯ ಪಕ್ಷದ ವಕ್ತಾರರಂತೆಯೇ ವರ್ತಿಸಿದ್ದಾರೆ. ತಮ್ಮ ಕಡೆಯವರನ್ನು ಮೆರೆಸುವಂತಹ ಕಾರ್ಯಗಳಿಗೆ ಅಕಾಡೆಮಿಯನ್ನು
ಬಳಸಿಕೊಂಡಿದ್ದಾರೆ.

ಒಟ್ಟಿನಲ್ಲಿ, ಅಕಾಡೆಮಿಯು ಹೀಗೆ ಪಕ್ಷಭೇದವಿಲ್ಲದೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ರೋಗಗ್ರಸ್ತ ಸ್ಥಿತಿ ತಲುಪಿದೆ. ಅಸ್ತಿತ್ವಕ್ಕೆ ಬಂದು 14 ವರ್ಷಗಳಾದರೂ ತನ್ನ ಉದ್ದೇಶದ ಹತ್ತಿರ ಕೂಡ ಹೋಗಲು ಅದಕ್ಕೆ ಸಾಧ್ಯವಾಗಿಲ್ಲ. ಎಂ.ಎಸ್. ಸತ್ಯು ಅವರು ಆಶಿಸಿದಂತೆ, ಈ ಕಾರ್ಯ ತಡವಾಗಿಯಾದರೂ ನಡೆದಿಲ್ಲ. ಇದಕ್ಕೆ ಕಾರಣವೆಂದರೆ, ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಗೆ ಸೂಕ್ತ ಮಾನದಂಡವೇ ಇಲ್ಲದಿರುವುದು. ಪಶ್ಚಿಮ ಬಂಗಾಳ, ಕೇರಳದಲ್ಲೂ ಇಂಥ ರಾಜಕೀಯ ನೇಮಕ ಇದೆಯಾದರೂ ಅಲ್ಲಿನ ಚಲನಚಿತ್ರಗಳು ಗಮನಸೆಳೆಯುತ್ತಿವೆ. ಕನ್ನಡ ಚಿತ್ರರಂಗ ಈಗ ದಕ್ಷಿಣ ಭಾರತದಲ್ಲೇ ಕೊನೆಯ ಸ್ಥಾನದಲ್ಲಿದೆ. ರಾಜಕೀಯದವರು ತಮ್ಮನ್ನು ಒಡೆಯದಂತೆ ಚಿತ್ರಪ್ರೇಮಿಗಳು ಎಚ್ಚರ ವಹಿಸಬೇಕಾಗಿದೆ. ಮುಖ್ಯಮಂತ್ರಿಯವರು ಈ ನೇಮಕಾತಿಯ ಬಗ್ಗೆ ಮರುಪರಿಶೀಲನೆ ನಡೆಸಬೇಕು. ಈ ಸಂಬಂಧದ ಆಕ್ಷೇಪಗಳನ್ನು ಆಲಿಸಬೇಕು. 

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.