ಚುನಾವಣೆ ಸಮಯಕ್ಕೇ ಬಂದದ್ದೇಕೆ ಗೃಹಲಕ್ಷ್ಮಿ?
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮುನ್ನಾದಿನವಾದ ಮಂಗಳವಾರ, ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯ ಹಣವು ಹಾವೇರಿ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಜಮೆಯಾದ ಬಗ್ಗೆ ವರದಿಯಾಗಿದೆ (ಪ್ರ.ವಾ., ನ. 13). ನೀತಿಸಂಹಿತೆ ಜಾರಿಯಲ್ಲಿದ್ದರೂ ಗೃಹಲಕ್ಷ್ಮಿ ಹಣವನ್ನು ಹೀಗೆ ಜಮೆ ಮಾಡಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷವು ಸರ್ಕಾರದ ಹಣದಲ್ಲಿ ರಾಜಕೀಯ ಭ್ರಷ್ಟಾಚಾರ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಮತದಾನದ ಮುನ್ನಾ ದಿನ ಹಣ ಜಮೆ ಆಗಿರುವುದು ಈ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ರಾಜಕೀಯ ಪಕ್ಷಗಳು ಆಮಿಷ ಒಡ್ಡಿ ಮತ ಗಳಿಸಿ ಅಧಿಕಾರದ ಗದ್ದುಗೆ ಏರುವುದು ಹೊಸತೇನಲ್ಲ.
ನಮ್ಮ ರಾಜಕೀಯ ನಾಯಕರ ಬಾಯಿಂದ ‘ನಾವು ನಿಮಗಾಗಿ ಅಷ್ಟು ಅನುದಾನ ಕೊಟ್ಟಿದ್ದೇವೆ, ನಮ್ಮ ಪಕ್ಷ ಇಷ್ಟು ಯೋಜನೆಗಳನ್ನು ಜಾರಿ ಮಾಡಿದೆ’ ಎಂಬಂತಹ ಮಾತುಗಳೇ ಉದುರುತ್ತಿರುತ್ತವೆ. ಸರ್ಕಾರದಿಂದ ಜನರಿಗೆ ಸಿಗಬೇಕಾದ ಅಗತ್ಯ ಸೌಲಭ್ಯ, ಅನುದಾನವನ್ನು ರಾಜಕೀಯ ನಾಯಕರು ಅವರಿಗೆ ನೀಡುವ ವರಪ್ರಸಾದ ಎನ್ನುವಂತೆ ಬಿಂಬಿಸುತ್ತಾರೆ. ಬಹುತೇಕರಿಗೆ ತಮಗೆ ಕೊಡಮಾಡುವ ಸೌಲಭ್ಯಗಳನ್ನು ಪಡೆಯುವುದು ತಮ್ಮ ‘ಹಕ್ಕು’ ಎನ್ನುವ ಅರಿವೇ ಇರುವುದಿಲ್ಲ, ಜನಪ್ರತಿನಿಧಿಗಳು ತಮಗೆ ಮಾಡುವ ಉಪಕಾರ ಎಂದೇ ತಿಳಿಯುತ್ತಾರೆ. ಅಷ್ಟರಮಟ್ಟಿಗೆ ಜನರಲ್ಲಿ ಕೃತಜ್ಞತಾ ಭಾವ ಹುಟ್ಟಿಸಿ, ಭಾವನಾತ್ಮಕವಾಗಿ ಅವರನ್ನು ಹಿಡಿದಿಡುವ ರಾಜಕೀಯ ತಂತ್ರವನ್ನು ಅನುಸರಿಸಲಾಗುತ್ತದೆ. ಆಮಿಷಗಳಿಗೆ ಅಥವಾ ಜಾತಿ–ಮತದ ಹೆಸರಿನಲ್ಲಿ ನಡೆಯುವ ಧ್ರುವೀಕರಣಕ್ಕೆ ಮರುಳಾಗಿ ಯಾರೇ ಮತ ಹಾಕಲಿ, ಅವರು ಮತದ ಮೌಲ್ಯವನ್ನು ಕಳೆದಂತೆಯೇ ಸರಿ. ನಾಯಕನನ್ನು ಆಯ್ಕೆ ಮಾಡುವ ಹಕ್ಕಿಗೆ ಚ್ಯುತಿ ತಂದಂತೆ.
- ಮಂಜುನಾಥ್ ಹಾಲವರ್ತಿ, ಕೊಪ್ಪಳ
ಶಕ್ತಿ ಯೋಜನೆ: ಉಡಾಫೆಯ ವರ್ತನೆ ತರವಲ್ಲ
ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ‘ಶಕ್ತಿ’ ಯೋಜನೆ ಬಹಳಷ್ಟು ಮಹಿಳೆಯರಿಗೆ ನೆರವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಈ ಯೋಜನೆಯಡಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರನ್ನು ಕೆಲವು ಚಾಲಕರು ಮತ್ತು ನಿರ್ವಾಹಕರು ಅಗೌರವದಿಂದ ನಡೆಸಿ ಕೊಳ್ಳುವುದು ಖಂಡನೀಯ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಜ್ಯದ ಬಹಳಷ್ಟು ಬಸ್‌ಗಳು ಮಹಿಳೆಯರಿಂದಲೇ ತುಂಬಿರುತ್ತವೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಂದ ಹಿಡಿದು ಉದ್ಯೋಗಸ್ಥ ಹೆಣ್ಣುಮಕ್ಕಳವರೆಗೆ ಈ ಯೋಜನೆ ಬಲ ತುಂಬಿದೆ. ಆದರೆ ಮಹಿಳೆಯರು ಉಚಿತವಾಗಿ ತೆರಳುತ್ತಾರೆ ಎಂಬ ಕಾರಣಕ್ಕೆ ನಿರ್ವಾಹಕರು ಅವರೊಂದಿಗೆ ಉಡಾಫೆಯಿಂದ ವರ್ತಿಸುವುದು ಸರಿಯಲ್ಲ.
ಇತ್ತೀಚೆಗೆ ಕಾರ್ಯನಿಮಿತ್ತ ಭಗವತಿ ಗ್ರಾಮದಿಂದ ಬಾಗಲಕೋಟೆಗೆ ತೆರಳುವಾಗ, ಬಾಗಲಕೋಟೆ ಘಟಕದ ನಿರ್ವಾಹಕರೊಬ್ಬರು ಟಿಕೆಟ್ ನೀಡುವ ಸಂದರ್ಭದಲ್ಲಿ ಅನೇಕ ಮಹಿಳೆಯರಿಗೆ ಏಕವಚನ ಪ್ರಯೋಗ ಮಾಡುತ್ತಿದ್ದರು. ಇದರಿಂದ ಬಸ್‌ನಲ್ಲಿದ್ದ ಹೆಣ್ಣುಮಕ್ಕಳಿಗೆ ಮುಜುಗರ ಉಂಟಾದಂತಿತ್ತು. ‘ಬಸ್‌ನಲ್ಲಿ ಗಂಡನ ಮನೆಗೆ ಹೋಗಿ, ತವರು ಮನೆಗೆ ಹೋಗಿ, ಎಲ್ಲಿಗೆ ಹೋದರೂ ಫ್ರೀ’ ಎಂದು ಜನನಾಯಕರು ಹೇಳುತ್ತಾರೆ. ಆದರೆ, ಸಾರಿಗೆ ನಿಗಮಗಳ ಬಸ್‌ಗಳನ್ನು ಮಹಿಳಾಸ್ನೇಹಿಯಾಗಿ ಮಾರ್ಪಡಿಸುವ ಕೆಲಸ ಮೊದಲು ಆಗಬೇಕಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವಂತಹ ವಾತಾವರಣ ಮೂಡಿಸಬೇಕು. ತಮಗೆ ಅವಮಾನವಾಗುವಂತಹ ಸಂದರ್ಭ ಬಂದಾಗ ಮಹಿಳೆಯರು ದೂರು ಕೊಡುವ ವ್ಯವಸ್ಥೆ ಜಾರಿಯಾಗಲಿ.
- ಮಣಿಕಂಠ ಪಾ. ಹಿರೇಮಠ, ಬಾಗಲಕೋಟೆ
ವಿದ್ಯಾರ್ಥಿಗಳಿಗೆ ‘ಅಪಾರ್’ ಸಂಖ್ಯೆ ಅವಶ್ಯವೇ?
ವಿದ್ಯಾರ್ಥಿಗಳಿಗೆ ‘ಆಧಾರ್’ ಸಂಖ್ಯೆಯ ರೀತಿಯಲ್ಲಿ ‘ಅಪಾರ್’ ಎಂಬ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 13). ಇಂತಹದ್ದೊಂದು ವ್ಯವಸ್ಥೆಯ ಅವಶ್ಯಕತೆ ನಿಜಕ್ಕೂ ಇದೆಯೇ? ಇದು ಸರ್ಕಾರದ ಮತ್ತು ಜನರ ಅಮೂಲ್ಯ ಸಮಯ, ಹಣವನ್ನು ವ್ಯರ್ಥ ಮಾಡುವ ಕೆಲಸದಂತೆ ತೋರುತ್ತದೆ. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್‌ಇಪಿ) ಜಾರಿ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ ರಾಜ್ಯ ಸರ್ಕಾರ ಎನ್‌ಇಪಿಯನ್ನೇ ತಿರಸ್ಕರಿಸಿದೆಯಲ್ಲವೇ?
ವಿದ್ಯಾಥಿಗಳನ್ನು ಈಗಾಗಲೇ ಮೂರು ಸಂಖ್ಯೆಗಳಿಂದ ಗುರುತಿಸಲಾಗುತ್ತಿದೆ: 1. ಆಧಾರ್ ಸಂಖ್ಯೆ (ಒಕ್ಕೂಟ ಸರ್ಕಾರ), 2. ಎಸ್‌ಟಿಎಸ್ ಸಂಖ್ಯೆ (ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಂ ಐ.ಡಿ.– ರಾಜ್ಯ ಸರ್ಕಾರ), 3. ಪಿಇಎನ್ ಸಂಖ್ಯೆ (ಪರ್ಮನೆಂಟ್ ಎಜುಕೇಷನ್ ನಂಬರ್– ಒಕ್ಕೂಟ ಸರ್ಕಾರ). ಈ ಸಂಖ್ಯೆಗಳ ಜೊತೆಗೆ ಇನ್ನೊಂದು ಐ.ಡಿ. ಸಂಖ್ಯೆಯನ್ನು ಸೃಷ್ಟಿಸುವುದರಿಂದ ಆಗುವ ಪ್ರಯೋಜನವಾದರೂ ಏನು?
- ಪ್ರಕಾಶ ವಿ. ಹೆಬ್ಬಳ್ಳಿ, ಬೆಂಗಳೂರು
ತೃತೀಯ ರಂಗ ಕಟ್ಟುವುದು ಸುಲಭವಿರಲಿಲ್ಲ...
‘ತೃತೀಯ ರಂಗವನ್ನು ಸಂಘಟಿಸಬೇಕಿದ್ದ ಎಡಪಕ್ಷಗಳು ಯುಪಿಎ ಕೂಟಕ್ಕೆ ಜೋತುಬಿದ್ದುದು ದುರಂತ’ ಎಂದಿದ್ದಾರೆ ಭೀಮನಗೌಡ ಕಾಶಿರೆಡ್ಡಿ (ವಾ.ವಾ., ನ. 13). ಎಡಪಕ್ಷಗಳು ಮೊದಲು ತೃತೀಯ ರಂಗವನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿವೆ. ಆದರೆ ಅದು ಸಾಧ್ಯವಾಗದಿದ್ದಾಗ ಅನಿವಾರ್ಯವಾಗಿ ಯುಪಿಎ ಕೂಟವನ್ನು ಬೆಂಬಲಿಸಿವೆ. ಇದರಿಂದ ಎನ್‌ಡಿಎ ಮತಗಳಿಕೆಯ ಪ್ರಮಾಣ ಕಡಿಮೆಯಾಗಿರುವುದು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಇದು ದುರಂತವಲ್ಲ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರಂತಹ, ಆಗಾಗ ಬಣ್ಣ ಬದಲಾಯಿಸುವ ಪಕ್ಕಾ ಅಧಿಕಾರದಾಹಿ ರಾಜಕಾರಣಿಗಳು ಇರುವಾಗ ತೃತೀಯ ರಂಗವನ್ನು ಕಟ್ಟುವುದು ಅಷ್ಟು ಸುಲಭ ಇರಲಿಲ್ಲ. ಇದನ್ನು ಮನಗಂಡ ಎಡಪಕ್ಷಗಳು ಯುಪಿಎಯನ್ನು ಬೆಂಬಲಿಸಿದ್ದು ಸರಿಯಾಗಿಯೇ ಇದೆ.
- ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ಭಾಷಣ
ಒಂದೆಡೆ ದ್ವೇಷಭಾಷಣ,
ಮತ್ತೊಂದೆಡೆ ಆವೇಶಭಾಷಣ...
ಎಲ್ಲ ಕೂಡಿ ಕೂಡದೆ, ಒಟ್ಟಿನಲ್ಲಿ
ನಾಶಭಾಷಣ ಎನ್ನೋಣ!
(ಇದುವೆ ಅಲ್ಲವೆ ರಾಜಕಾ‘ರಣ’?)
- ಸಿ.ಪಿ.ಕೆ., ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.