ಸಂಚಾರ ಪೊಲೀಸರ ಮೇಲೆ ಹಲ್ಲೆ ಖಂಡನೀಯ
ಕರ್ತವ್ಯನಿರತ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಅ. 28). ಸಂಚಾರ ನಿಯಮ ಉಲ್ಲಂಘನೆ ಮಾಡಿದವರನ್ನು ಪ್ರಶ್ನಿಸುವುದು ಪೊಲೀಸರ ಕರ್ತವ್ಯ. ಆದರೆ ಈ ಮಹಿಳೆ ನಿಯಮ ಉಲ್ಲಂಘನೆ ಮಾಡಿದ್ದೂ ಅಲ್ಲದೆ ಸಂಚಾರ ಪೊಲೀಸರನ್ನೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕಾಲಿನಿಂದ ಒದ್ದು, ಅವರ ಕಾಲರ್ ಹಿಡಿದು ಕೂಗಾಡಿರುವುದು ಅಕ್ಷಮ್ಯ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರ ಇಬ್ಬರು ಪೊಲೀಸರು ಮತ್ತು ಹೊಯ್ಸಳ ವಾಹನದ ಸಿಬ್ಬಂದಿ ಮಹಿಳೆಯನ್ನು ತಡೆಯುವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಪೊಲೀಸರಿಂದ ಪೊಲೀಸರಿಗೇ ರಕ್ಷಣೆ ಇಲ್ಲವೆಂದಾದರೆ ಸಾಮಾನ್ಯ ಜನರ ಗತಿ ಏನು?
ಅದೇ ರೀತಿ ಶಿವಮೊಗ್ಗದಲ್ಲಿ ಕೂಡ ನಿಯಮ ಉಲ್ಲಂಘಿಸಿದ ಕಾರನ್ನು ತಡೆಯಲು ಯತ್ನಿಸಿದ ಕಾನ್‌ಸ್ಟೆಬಲ್ ಮೇಲೆ ಕಾರು ಚಲಾಯಿಸಲು ಮುಂದಾಗಿರುವುದು ನಡೆದಿದೆ. ಹೀಗಾದರೆ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸುವುದಾದರೂ ಹೇಗೆ? ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು.
– ತಿಮ್ಮೇಶ್ ಎಚ್. ಗೌರಿಪುರ, ಜಗಳೂರು
ಕೃಷಿ ಜಮೀನು ಖರೀದಿ: ನಿಯಂತ್ರಣ ಅಗತ್ಯ
ರೈತರು ಬರೀ ಬೆಳೆಗಾರರಾದರಷ್ಟೇ ಸಾಲದು ಕೃಷಿ ಉದ್ದಿಮೆಗಳಲ್ಲಿಯೂ ಗುರುತಿಸಿಕೊಳ್ಳಬೇಕು ಎಂಬ ಚಿಂತನೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ ನಿದರ್ಶನವಾಗಿದೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಹಾಗೂ ತಾಜಾ ಆಹಾರ ಪೂರೈಕೆ ಮಾಡುವುದು ಕೃಷಿ ಹಾಗೂ ಕೃಷಿ ಉದ್ಯಮಕ್ಕೆ ಸವಾಲಾಗಿದೆ. ಹೀಗಿರುವಾಗ, ಫಲವತ್ತಾದ ಜಮೀನುಗಳನ್ನು ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡಬೇಕು. ರೈತರಿಂದಲೇ ‘ಕೃಷಿಗೆ ಪೂರಕವಾದ’ ಉದ್ದಿಮೆಗಳನ್ನು ನಡೆಸಲು ಅನುವಾಗುವಂತಹ ವಾತಾವರಣವನ್ನು ಸೃಷ್ಟಿಸಿ ಪ್ರೋತ್ಸಾಹಿಸಿದರೆ ಅವರು ಸುಸ್ಥಿರ ಅಭಿವೃದ್ಧಿ ಸಾಧಿಸಲು ಹಾಗೂ ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ.
ಇತ್ತೀಚೆಗೆ, ಹಣವಂತರು ಹೂಡಿಕೆ ದೃಷ್ಟಿಯಿಂದ ಕೃಷಿ ಜಮೀನುಗಳನ್ನು ಖರೀದಿ ಮಾಡುತ್ತಿರುವುದು ಹೆಚ್ಚಾಗಿದೆ. ಇದರಿಂದ ದೀರ್ಘಾವಧಿಯಲ್ಲಿ ಬೇರೆ ಬೇರೆ ಬಗೆಯ ದುಷ್ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ನಿಯಂತ್ರಣದ ದಿಸೆಯಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಸಣ್ಣ ಹಿಡುವಳಿದಾರರ ಹಿತರಕ್ಷಣೆಗೆ ಮಾರ್ಗೋಪಾಯಗಳನ್ನು ಶೋಧಿಸಬೇಕು.
– ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ
ಫುಟ್‌ಪಾತ್ ಒತ್ತುವರಿ ಹಿಂದಿನ ‘ಪ್ರಬಲ’ರು
ಪಾದಚಾರಿ ಮಾರ್ಗ ಒತ್ತುವರಿಗೆ ಪರಿಹಾರ ಕಷ್ಟಸಾಧ್ಯ ಎಂದಿದ್ದಾರೆ (ವಾ.ವಾ., ನ. 15) ಕಡೂರು ಫಣಿಶಂಕರ್. ಕೆಲವೆಡೆ ಪಾದಚಾರಿ ಮಾರ್ಗವನ್ನು ಬರೀ ಒತ್ತುವರಿಯಲ್ಲ, ಸಂಪೂರ್ಣವಾಗಿ ಆಕ್ರಮಿಸಿ
ಕೊಂಡಿರುವುದನ್ನು ಕಾಣಬಹುದಾಗಿದೆ. ಮೈಸೂರು ನಗರದ ಮುಖ್ಯ ವಾಣಿಜ್ಯ ರಸ್ತೆಯಾದ ಸಯ್ಯಾಜಿರಾವ್ ರಸ್ತೆ ಇದಕ್ಕೊಂದು ಉದಾಹರಣೆ. ಜನಸಾಮಾನ್ಯರು ಓಡಾಡಲು ಇರುವ ಫುಟ್‌ಪಾತನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುವವರನ್ನು ಯಾವ ಪಕ್ಷದ ನೇತೃತ್ವದ ಸರ್ಕಾರ ಬಂದರೂ ಎತ್ತಂಗಡಿ ಮಾಡಿಸಲು ಸಾಧ್ಯವೇ ಆಗಿಲ್ಲ. ಮೈಸೂರಿನಲ್ಲಿ ರಸ್ತೆಬದಿ ವ್ಯಾಪಾರಿಗಳ ಸಂಘವೇ ಇದೆ. ಈ ಸಂಘ ಎಷ್ಟು ಪ್ರಬಲವಾಗಿದೆ ಎಂದರೆ, ರಸ್ತೆಬದಿಯ ಒಬ್ಬ ವ್ಯಾಪಾರಿಯನ್ನು ಪೊಲೀಸರು ಎತ್ತಂಗಡಿ ಮಾಡಿಸಿದರೂ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಎರಡೇ ನಿಮಿಷದಲ್ಲಿ ಜನಪ್ರತಿನಿಧಿಗಳಿಂದ ಪೊಲೀಸರಿಗೆ ಕರೆ ಬರುತ್ತದೆ! ಈ ಬಗ್ಗೆ ಜನಪ್ರತಿನಿಧಿಗಳಿಗೆ ಅಥವಾ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೆ, ‘ಆ ಬಡ ವ್ಯಾಪಾರಿಗಳ ಹೊಟ್ಟೆಯ ಮೇಲೆ ನೀವೇಕೆ ಹೊಡೆಯುತ್ತೀರಿ’ ಎಂದವರು ಕೇಳುತ್ತಾರೆ. ಇದು ಎಲ್ಲ ನಗರ, ಪಟ್ಟಣಗಳ ಫುಟ್‌ಪಾತ್ ಸಮಸ್ಯೆಯಾಗಿದ್ದು, ಯಾರೇ ಬಂದರೂ ಇದನ್ನು ಬಗೆಹರಿಸಲು ಸಾಧ್ಯವಿಲ್ಲವೇನೋ ಎನಿಸುತ್ತದೆ.
– ಬೂಕನಕೆರೆ ವಿಜೇಂದ್ರ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.