ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 30 ಜೂನ್ 2024, 22:15 IST
Last Updated 30 ಜೂನ್ 2024, 22:15 IST
   

ಸೇತುವೆ ಕುಸಿತ: ಯಾರು ಹೊಣೆ? 

ಈಚೆಗೆ ಒಂಬತ್ತು ದಿನಗಳಲ್ಲಿ ಬಿಹಾರದಲ್ಲಿ ಐದು ಸೇತುವೆಗಳು ಕುಸಿದುಬಿದ್ದಿವೆ. ಜಬಲ್‌ಪುರ ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ ಚಾವಣಿ ಕುಸಿದಿದೆ. ಮುಂಬೈನ ಅಟಲ್‌ ಸೇತುವಿನಲ್ಲಿ ಬಿರುಕು, ದೆಹಲಿ ಪ್ರತಿಷ್ಠಿತ ಪ್ರಗತಿ ಮೈದಾನದ ಸುರಂಗ ಕುಸಿತ, ಮೋರ್ಜಿ ಸೇತುವೆ ಕುಸಿತ. ದೇಶದಲ್ಲಿ ಈಗ ಕುಸಿತದ ಪರ್ವ ನಡೆದಂತೆ ಕಾಣುತ್ತದೆ. ಈ ಕುಸಿತದ ಹಿಂದೆ ಯಾರೇ ಇರಲಿ, ಯಾವ ರಾಜಕೀಯ ಪಕ್ಷವೇ ಇರಲಿ, ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆಗಳಲ್ಲಿ ಪೋಲಾಗುತ್ತಿರುವುದು ಬಡಬೋರೇಗೌಡನ ತೆರಿಗೆ ಹಣ. ಹಣದುಬ್ಬರದಿಂದ ಹೈರಾಣಾಗಿರುವ ಮಧ್ಯಮ ಮತ್ತು ಬಡ ವರ್ಗದವರಿಗೆ ‘ಗ್ಯಾರಂಟಿಗಳ’ ಮೂಲಕ ನಾಲ್ಕುಕಾಸು ನೀಡಿದರೆ ದೇಶದ ಅರ್ಥಿಕತೆಯ ಪತನವಾಗುತ್ತದೆ ಎಂದು ಬೊಬ್ಬೆ ಹೊಡೆಯುವವರು ಈ ‘ಕುಸಿತ’ಗಳು ದೇಶದ ಬೊಕ್ಕಸಕ್ಕೆ ಮಾಡುವ ಹಾನಿಯ ಬಗೆಗೆ ಏನು ಹೇಳುತ್ತಾರೆ?

–ರಮಾನಂದ ಶರ್ಮಾ, ಬೆಂಗಳೂರು

ADVERTISEMENT

****

ಕೇಂದ್ರ ಸರ್ಕಾರ ಸಂವೇದನಾಶೀಲತೆ ತೋರಲಿ

ಪಶ್ಚಿಮ ಬಂಗಾಳದ ರಾಜ್ಯಪಾಲರು ಅಲ್ಲಿನ ಮುಖ್ಯಮಂತ್ರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂಬ ಸುದ್ದಿ ಓದಿ ಆಶ್ಚರ್ಯ ಆಯಿತು. ರಾಜ್ಯಪಾಲರ ವಿರುದ್ಧ ಗುತ್ತಿಗೆ ಕಾರ್ಮಿಕರೊಬ್ಬರು ದೂರು ನೀಡಿದ ಕಾರಣ ಈ ಸಂಬಂಧ ಪೊಲೀಸ್ ತನಿಖೆ ಆರಂಭವಾಗಿದೆ.

ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಇವರು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಸರಿಯಲ್ಲ. ದೆಹಲಿ, ತಮಿಳುನಾಡಿನಲ್ಲಿ ಈ ಬಗೆಯ ಸಂಘರ್ಷ ಕಾಣಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬೇಕಾಗಿದೆ. ರಾಜ್ಯಪಾಲರನ್ನು ನೇಮಿಸುವ ಕೇಂದ್ರ ಸರ್ಕಾರ, ರಾಷ್ಟ್ರಪತಿ ಈ ಬಗ್ಗೆ ಮೌನ ತಾಳಿದ್ದಾರೆ. ಮಮತಾ ಬ್ಯಾನರ್ಜಿಯವರು ಯಾವಾಗಲೂ ಸರಿಯಾಗಿ ವರ್ತಿಸುತ್ತಾರೆ ಎಂದೇನೂ ಅಲ್ಲ. ಆದರೆ, ರಾಜ್ಯಪಾಲರು ರಾಜಭವನದಲ್ಲಿನ ಆಗುಹೋಗುಗಳಿಗೆ ಜವಾಬ್ದಾರಿ ಹೊರಬೇಕಾಗುತ್ತದೆ. ಸಾರ್ವಜನಿಕವಾಗಿ ವಿವರಣೆ ನೀಡಲು ಸಾಧ್ಯವಿಲ್ಲದಿದ್ದರೆ ತನಿಖೆ ಮಾಡುತ್ತಿರುವವರಿಗೆ ಮಾಹಿತಿ ನೀಡಬಹುದು. ಇದು ಮಹಿಳೆಗೆ ಸಂಬಂಧಪಟ್ಟ ವಿಷಯವಾದ್ದರಿಂದ ಕೇಂದ್ರ ಸರ್ಕಾರವೂ ಸಂವೇದನಾಶೀಲತೆ ತೋರಬೇಕು.

ರಾಜ್ಯಪಾಲ ಹುದ್ದೆಗೆ ವರ್ಗಾವಣೆ ಇದೆ. ರಜೆ ತೆಗೆದುಕೊಳ್ಳಲೂ ಸೂಚಿಸಬಹುದು- ತನಿಖೆ ಸರಿಯಾಗಿ ನಡೆಯಲು. ಈ ವಿವಾದದಿಂದ ಆ ರಾಜ್ಯದ ಘನತೆಗೆ ಕುಂದುಂಟಾಗುತ್ತದೆ. ‘ಅಲ್ಲಿಗೆ ಅವರೇ ಸರಿ’ ಎಂದು ಕೇಂದ್ರವು ರಾಜ್ಯಪಾಲರನ್ನು ನೇಮಿಸುತ್ತದೆ. ಆದರೆ, ಕೆಲವರು ತಪ್ಪು ಎಸಗಿದಾಗ ಸೂಕ್ತ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡಬಾರದು.

–ಎಚ್.ಎಸ್. ಮಂಜುನಾಥ, ಗೌರಿಬಿದನೂರು

****

ನೀಟ್‌: ಹಗರಣದ‌ ಇನ್ನೊಂದು‌ ಮುಖ

ನೀಟ್ ಪರೀಕ್ಷಾ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ದಿನ ಕಳೆದಂತೆ ಈ ಅಕ್ರಮದಲ್ಲಿ ಭಾಗಿಯಾದವರ ಮುಖಗಳು ಬೆಳಕಿಗೆ ಬರುತ್ತಿವೆ‌. ಇವುಗಳ‌ ಮಧ್ಯೆ ನಾವು ಒಮ್ಮೆ ಗಂಭೀರವಾಗಿ ಯೋಚಿಸಬೇಕಾದ ವಿಷಯವೆಂದರೆ, ಅರ್ಹತೆ ಇಲ್ಲದ ಅಭ್ಯರ್ಥಿಗಳು ಅಕ್ರಮ ಮಾರ್ಗದ ಮೂಲಕ ಉತ್ತೀರ್ಣ ಹೊಂದಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವೈದ್ಯಕೀಯ ‌ಪದವಿ ಪಡೆದು ವೈದ್ಯರಾಗಿ ಹೊರಹೊಮ್ಮುತ್ತಿರುವ ಸಂಗತಿ. ಇಂತಹ ವೈದ್ಯರಿಂದ ಸಮಾಜಕ್ಕೆ ಯಾವ ರೀತಿಯ ಸೇವೆಯನ್ನು ನಿರೀಕ್ಷಿಸಲು ಸಾಧ್ಯ? ಆರೋಗ್ಯ ಕ್ಷೇತ್ರದಲ್ಲಿ ಇಂತಹ ವೈದ್ಯರ ಸಂಖ್ಯೆ ದಿನೇ ದಿನೇ ಹೆಚ್ಚಲು ಪರೋಕ್ಷವಾಗಿ ನಮ್ಮ ಪರೀಕ್ಷಾ ವ್ಯವಸ್ಥೆಯೇ ಕಾರಣವೆಂಬುದನ್ನು ಈ ನೀಟ್ ಹಗರಣದಿಂದ ಮನವರಿಕೆಯಾಗಿದೆ. ಪದವಿ ಶಿಕ್ಷಣಕ್ಕೆ ಪ್ರವೇಶ ಗಿಟ್ಟಿಸಲು ಅಕ್ರಮ ಮಾರ್ಗ ಅನುಸರಿಸುವ ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಇಂತಹ ಅಭ್ಯರ್ಥಿಗಳು ಹಾಗೂ ಪಾಲಕರು, ವೈದ್ಯರಾದ ಬಳಿಕ ತಾವು ಹಾಕಿದ ಬಂಡವಾಳವನ್ನು ಮರಳಿ ಪಡೆಯಲು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಾರೆ, ಬೇಡದ ಪರೀಕ್ಷೆಗಳಿಗೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ರೋಗಿಗಳನ್ನು ದೂಡುತ್ತಾರೆ. ಈ ಬಗೆಯ ಅಕ್ರಮಗಳಿಗೆ ಕಡಿವಾಣ ಬೀಳಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು.

– ಸುರೇಂದ್ರ ಪೈ, ಭಟ್ಕಳ

****

ಬಾಧಿಸಿದ ಉಷ್ಣತೆ-ನಿಸರ್ಗದ ಎಚ್ಚರಿಕೆ ಗಂಟೆ 

‘ಜಾಗತಿಕವಾಗಿ 500 ಕೋಟಿ ಜನ ಜೂನ್‌ ತಿಂಗಳ 9 ದಿನ ಹವಾಮಾನ ಬದಲಾವಣೆಯಿಂದ ಉಂಟಾದ ತೀವ್ರ ಶಾಖವನ್ನು ಅನುಭವಿಸಿದ್ದಾರೆ’ ಎಂದು ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ (ಪ್ರ.ವಾ., ಜೂನ್‌ 29). ಇದು ನಿಸರ್ಗದ ಎಚ್ಚರಿಕೆ ಗಂಟೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಸಂಪೂರ್ಣ ವಿನಾಶ ಖಂಡಿತ. ವಾತಾವರಣದಲ್ಲಿ ಇಂಗಾಲದ ಪ್ರಮಾಣ ಏರಲು ಪಳೆಯುಳಿಕೆ ಇಂಧನ ಬಳಕೆ ಹೆಚ್ಚಾಗುತ್ತಿರುವುದು,
ಅರಣ್ಯ ನಾಶ ಇವೆಲ್ಲ ಕಾರಣ. ಪರಿಸರಸ್ನೇಹಿ ಸೌರ, ಪವನ ಇಂಧನಕ್ಕೆ ಹೆಚ್ಚು ಒತ್ತು ನೀಡಬೇಕಾದುದು ಇವತ್ತಿನ ತುರ್ತು. ಅರಣ್ಯ ಬೆಳೆಸುವ, ಸಂರಕ್ಷಿಸುವ ಕ್ರಮಗಳು ಪರಿಣಾಮಕಾರಿಯಾಗಿ ನಡೆಯಬೇಕು.

–ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

****

ನಾಗರಿಕ ಪ್ರಜ್ಞೆ ರೂಢಿಸಿಕೊಳ್ಳೋಣ

ಸಮಾಜದ ಬಗೆಗಿನ ಕಳಕಳಿ ನಮಲ್ಲಿ ದಿನೇ ದಿನೇ ಕಡಿಮೆಯಾಗುತ್ತಿದೆ. ನಾವು ಬರೀ ಗಿಳಿ ಪಾಠದ ಸಾಕ್ಷರರಾಗುತ್ತಿದ್ದೇವೆ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಹೊರದೇಶಕ್ಕೆ ಹೋದಾಗ ನೀತಿ–ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಭಾರತಕ್ಕೆ ಮರಳಿ ಬರುತ್ತಲೇ ಅವನ್ನೆಲ್ಲ ಮರೆಯುತ್ತೇವೆ. ನಾಗರಿಕ ಪ್ರಜ್ಞೆ ಎಂಬುದೇ ಕಾಣಸಿಗುವುದಿಲ್ಲ. ಕಸ ವಿಲೇವಾರಿಯಿಂದ ಸಂಚಾರ ನಿಯಮ ಪಾಲನೆವರೆಗೂ ಈ ಮಾತು ಅನ್ವಯಿಸುತ್ತದೆ. ದಂಡದ ಕಾರಣಕ್ಕೆ ಚೂರುಪಾರು ಅನುಸರಿಸುತ್ತೇವೆ ಅಷ್ಟೆ.

ಕಂಡಕಂಡಲ್ಲಿ ಕಸ ಸುರಿಯುತ್ತೇವೆ. ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತೇವೆ. ಸುಶಿಕ್ಷಿತ ಹಿರಿಯರೇ ಈ ಕೆಲಸ ಮಾಡಿದರೆ ಮಕ್ಕಳಿಗೆ ಮಾದರಿ ಆಗುವವರು ಯಾರು? ಅವು ಕಲಿಯುವುದಾದರೂ ಹೇಗೆ? ಶಿಕ್ಷಣ ಇಂತಹ ಮೂಲಭೂತ ಪಾಠಗಳನ್ನೂ ನಮ್ಮಲ್ಲಿ ರೂಢಿಸದಿದ್ದರೆ ಅದರಿಂದ ಪ್ರಯೋಜನವಾದರೂ ಏನು?

–ಸೌಮ್ಯಾ ಕಾಗಲ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.