ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 5 ಜುಲೈ 2024, 20:47 IST
Last Updated 5 ಜುಲೈ 2024, 20:47 IST
   

ಜಾತಿ ನೆಲಗಟ್ಟಿನಲ್ಲಿ ನೋಡುವುದು ತಪ್ಪು

ಕಿರಣ್ ಎಂ. ಗಾಜನೂರು ಬರೆದ ‘ಪಟೇಲ್, ಖರ್ಗೆ ದಾಖಲಿಸಿದ ಪ್ರತಿರೋಧ’ ಎಂಬ ಲೇಖನದಲ್ಲಿ (ಪ್ರ.ವಾ., ಜುಲೈ 5) ಆಹಾರದ ವಿಷಯದಲ್ಲಿಯೂ ಶುದ್ಧ ಮತ್ತು ಅಶುದ್ದ ಎನ್ನುವ ಜಾತಿ ಪರಿಭಾಷೆಗಳು ಅತ್ಯಂತ ಸಹಜವಾಗಿ ಬಳಕೆಯಾಗುತ್ತವೆ ಎಂದು ಬರೆಯಲಾಗಿದೆ. ಸಸ್ಯಾಹಾರಿ ಹೋಟೆಲ್‌ಗಳಲ್ಲಿ ‘ಶುದ್ಧ ಸಸ್ಯಾಹಾರಿ’ ಎಂಬ ಒಕ್ಕಣೆಯನ್ನು ಸೇರಿಸಲಾಗಿದೆ ಎಂದು ಲೇಖಕರು ಅಭಿಪ್ರಾಯ ದಾಖಲಿಸಿದ್ದಾರೆ.

ಮಾಂಸಾಹಾರಿ ಹೋಟೆಲ್‌ನವರು ‘ಶುದ್ಧ ಮಾಂಸಾಹಾರಿ’ ಹೋಟೆಲ್ ಎಂದು ಫಲಕ ಹಾಕಬೇಕಾಗಿಲ್ಲ. ಏಕೆಂದರೆ ಅಲ್ಲಿ ಸಸ್ಯಾಹಾರವೂ ದೊರೆಯುತ್ತದೆ. ಹೀಗಾಗಿ ‘ಶುದ್ಧ ಸಸ್ಯಾಹಾರಿ’ ಎಂದು ಹೋಟೆಲ್‌ಗಳಲ್ಲಿ ಫಲಕ ಹಾಕಿದರೆ ಮಾಂಸಾಹಾರಿಗಳು ಬೇಸರಪಡುವ ಅಗತ್ಯವಿಲ್ಲ. ಆಹಾರ ಪದ್ಧತಿಯಲ್ಲೂ ಜಾತಿವಾದ ಮತ್ತು ಶ್ರೇಷ್ಠ–ಕನಿಷ್ಠ ವಾಸನೆಯನ್ನು ಹಿಡಿದು, ಅದಕ್ಕೆ ಎಲ್ಲೆಲ್ಲಿಂದಲೋ ಸಾಕ್ಷ್ಯ ತರುವುದು ವಿಷಾದಕರ. ಆಹಾರ ಪದ್ಧತಿ ಮತ್ತು ಜಾತಿಯ ವಿಂಗಡಣೆಯ ಕಾಲ ಮುಗಿದುಹೋಗಿದೆ. 

ADVERTISEMENT

ರಾಜ್ಯಸಭೆಯ ಸಭಾಪತಿಯವರು ಜೈರಾಮ್ ರಮೇಶ್ ಅವರನ್ನು ಹೊಗಳಿದ್ದನ್ನು ಜಾತಿಯ ನೆಲಗಟ್ಟಿನಲ್ಲಿ ನೋಡುವುದೇ ಸರಿಯಲ್ಲ ಅನಿಸುತ್ತದೆ. ನೀರಸವಾದ ಚರ್ಚೆಗಳ ನಡುವೆ ಈ ರೀತಿಯ ಹಾಸ್ಯ ಚಟಾಕಿ ಹಾರಿಸುವುದು ಸಂಸತ್ತಿನಲ್ಲಿ ಹಿಂದಿನಿಂದಲೂ ನಡೆದುಬಂದಿದೆ. ಖರ್ಗೆಯವರ ವಿಚಾರದಲ್ಲಿ ದೇಶದ ಸ್ವಸ್ಥ ಮನಸ್ಸುಗಳಿಗೆ ಯಾವುದೇ ಆಕ್ಷೇಪ ಇರಲಾರದು. ಚರ್ಚೆಯ ಸಂದರ್ಭಗಳಲ್ಲಿ ಖರ್ಗೆಯವರು ಮಾತನಾಡುವ ಮುನ್ನವೇ ರಮೇಶ್ ಅವರು ಮಾತಿಗೆ ತೊಡಗುವುದರಿಂದ ಸಭಾಪತಿಯವರು ಸಹಜವಾಗಿ ವಿರೋಧ ಪಕ್ಷದ ನಾಯಕ ಸ್ಥಾನದ ಹೆಗ್ಗಳಿಕೆಯನ್ನು ರಮೇಶ್ ಅವರಿಗೆ ಪರೋಕ್ಷವಾಗಿ ತಿಳಿಸಲು ಹೇಳಿರಬಹುದಾದ ಮಾತುಗಳಲ್ಲೂ ಜಾತಿಯ ತಾರತಮ್ಯವನ್ನು ಗುರುತಿಸಲು ಮುಂದಾಗುವುದನ್ನು ಏನೆಂದು ಅರ್ಥೈಸುವುದು?

–ಮೋದೂರು ಮಹೇಶಾರಾಧ್ಯ, ಹುಣಸೂರು

***

ಬಿಜೆಪಿ ಸೋತಿರುವಲ್ಲಿ ಬಡವರ ಅಭಿವೃದ್ಧಿಯಾಗಲಿ!

ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋತಿರುವುದು ಹಿಂದೂಗಳ ಧಾರ್ಮಿಕ ನಂಬಿಕೆಯ ಸೋಲಲ್ಲ; ಬಡವರು ಆಮಿಷಗಳಿಗೆ ಒಳಗಾಗಿ ಬಿಜೆಪಿ ವಿರುದ್ಧ ಮತ ಹಾಕಿದ್ದರಿಂದ ಸೋಲಾಗಿದೆ ಎಂದು ಹೇಳಿದ್ದಾರೆ.

ಸ್ವಾಮೀಜಿಯವರು ಬಿಜೆಪಿಯ ವಕ್ತಾರರಾಗಿ ಮಾತಾಡಿದ್ದಾರೋ ಅಥವಾ ಕ್ಷೇತ್ರದ ಬಡವರನ್ನು ಬಡತನ ರೇಖೆಗಿಂತ ಮೇಲೆ ತರುವಂತೆ ಸರ್ಕಾರಕ್ಕೆ ಹಿತವಚನ ನೀಡಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆ ಪ್ರಕಾರ, ಬಿಜೆಪಿ ಅಭ್ಯರ್ಥಿಗಳು ಎಲ್ಲೆಲ್ಲಿ ಗೆದ್ದಿದ್ದಾರೋ ಅಲ್ಲೆಲ್ಲ ಬಡತನ ಕಡಿಮೆ ಇದೆ, ಸೋತಿರುವ ಕಡೆ ಬಡಜನ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂದಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಜೆಪಿ ಸೋತಿರುವ ಕ್ಷೇತ್ರಗಳಲ್ಲಿ ಬಡತನ ನಿರ್ಮೂಲನೆಗೆ ಕ್ರಮ ಕೈಗೊಂಡಲ್ಲಿ ಕಡು ಬಡವರ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ!

–ಶಾಂತಕುಮಾರ್, ಸರ್ಜಾಪುರ

***

ಉದ್ದೇಶಪೂರ್ವಕ ಮೌನವೇ?

ದೇಶದ ಪ್ರಮುಖ ದೂರಸಂಪರ್ಕ ಕಂಪನಿಗಳು ಶುಲ್ಕ ಹೆಚ್ಚಿಸಿ ಗ್ರಾಹಕರ ಮೇಲೆ ಬಲವಾದ ಪ್ರಹಾರ ನಡೆಸಿವೆ. ಮನೆಯಲ್ಲಿ ನಾಲ್ಕೈದು ಮೊಬೈಲುಗಳಿರುವ ಈ ಕಾಲಘಟ್ಟದಲ್ಲಿ ಮಧ್ಯಮ, ಕೆಳಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಇದು ತೀವ್ರ ಹೊರೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಜನಸಾಮಾನ್ಯರಾಗಲಿ ಯಾವುದೇ ಪ್ರತಿಭಟನೆಗೆ ಮುಂದಾಗದಿರುವುದು ಆಶ್ಚರ್ಯಕರ. ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳು ಅಥವಾ ಕೆಎಸ್ಆರ್‌ಟಿಸಿ ದರ ಏರಿಸಿದಾಗ ತೀವ್ರವಾಗಿ ಪ್ರತಿಭಟಿಸುವ ಹಾಗೂ ಪ್ರತಿಕ್ರಿಯಿಸುವ ವಿರೋಧ ಪಕ್ಷಗಳು ಈ ವಿಷಯದಲ್ಲಿ ಪ್ರತಿಕ್ರಿಯೆ ತೋರಿಸದೇ ಇರುವುದು ಉದ್ದೇಶಪೂರ್ವಕವೋ ಅಥವಾ ಸಂವೇದನಾಶೀಲತೆಯ ಕೊರತೆಯೋ?

–ಶಿವರಾಜು ಎ.ಆರ್., ಜೆಟ್ಟಿ ಅಗ್ರಹಾರ, ಕೊರಟಗೆರೆ

***

ಮುತ್ತು, ರತ್ನಗಳಿಂದ ಕಂಗೊಳಿಸಿದ ಮರೀನ್ ಡ್ರೈವ್

ಮಹಾರಾಣಿಯ ಕೊರಳ ಹಾರದಂತಿರುವ ಮುಂಬೈನ ಮರೀನ್ ಡ್ರೈವ್ ಪ್ರದೇಶವು ಗುರುವಾರ ಸಂಜೆ ನಿಜವಾದ ಮುತ್ತುರತ್ನಗಳಿಂದ ಕಂಗೊಳಿಸಿತ್ತು! ‘ಅಭಿಮಾನದ ಮಹಾಸಾಗರ’ ವರದಿಯ ಜೊತೆಗಿನ ಚಿತ್ರ ಆ ರೀತಿಯಲ್ಲಿ ಇತ್ತು! (ಪ್ರ.ವಾ., ಜುಲೈ 5).

ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ನಮ್ಮ ಟೀಮ್‌ ಇಂಡಿಯಾದ ಮುತ್ತು ರತ್ನಗಳು ಹದಿನೈದು ಸಾವಿರ ಮೈಲುಗಳ ಪ್ರಯಾಣದ ನಂತರವೂ ಮಳೆಯನ್ನೂ ಲೆಕ್ಕಿಸದೆ, ಅಭಿಮಾನಿಗಳ ಪ್ರೀತಿ ಗೌರವದ ಮಹಾಸಾಗರದಲ್ಲಿ ಮಿಂದೆದ್ದ ದೃಶ್ಯಾವಳಿಗಳು ಮನಸೂರೆಗೊಳ್ಳುವಂತಿದ್ದವು. ಪಕ್ಕದಲ್ಲಿದ್ದ ಸಮುದ್ರವನ್ನೇ ಮೀರಿಸುವಂತಿತ್ತು ಜನಸಾಗರ.

–ನಿಖಿತಾ ಜಿ, ಹೊಸನಗರ

***

ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚು

‘ಲೋಕಸಭಾ ಅಧಿವೇಶನ: ಸದನದಲ್ಲಿ ಕಾಣಿಸಿದ್ದು ಅಪನಂಬಿಕೆ, ವೈಷಮ್ಯ’ ಎಂಬ ಸಂಪಾದಕೀಯವು (ಪ್ರ.ವಾ., ಜುಲೈ 5) ವಾಸ್ತವಕ್ಕೆ ಹತ್ತಿರವಾಗಿದೆ. ಪ್ರತಿಪಕ್ಷಗಳ ಮೈತ್ರಿಕೂಟದ ಆತ್ಮವಿಶ್ವಾಸ ಮತ್ತು ಪ್ರಬುದ್ಧತೆಯ ಕೊರತೆಯೂ ಸದನದಲ್ಲಿ ಎದ್ದು ಕಂಡಿತು. ಸಂಸದೀಯ ಅಧಿಕಾರವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವುದಕ್ಕಿಂತಲೂ ದುರುಪಯೋಗ ಮಾಡಿಕೊಳ್ಳುವುದನ್ನು ನೋಡುವುದೇ ನಮಗೆ ಅಭ್ಯಾಸವಾಗಿರುವಂತೆ ಕಾಣುತ್ತಿದೆ!

ಆಳುವುದೆಂದರೆ ದಬ್ಬಾಳಿಕೆಯೆಂದೇ ಆಳುವ ಪಕ್ಷ ಅರ್ಥೈಸಿಕೊಂಡಂತಿದೆ. ಪ್ರತಿ ಮಾತಿಗೂ ಅಪಾರ್ಥ ಕಲ್ಪಿಸಿ ಅಬ್ಬರದ ಅಪಪ್ರಚಾರ ನಡೆಸುವ ಅದರ ಗತ್ತು ಹಿಂದಿನಂತೆಯೇ ಇದೆ. ಈಗ ಸಂಖ್ಯಾಬಲ ವರ್ಧಿಸಿದ್ದರೂ ಪ್ರತಿಪಕ್ಷವು ಸಂಸದೀಯ ಚೌಕಟ್ಟಿನ ಪರಿಮಿತಿಯಲ್ಲೇ ಆಡಳಿತ ಪಕ್ಷವನ್ನು ಹಣಿಯುವ ಚಾಕಚಕ್ಯತೆಯನ್ನು ಬೆಳೆಸಿಕೊಂಡಿಲ್ಲ. ಆಳುವ ಪಕ್ಷದ ಬಲವನ್ನು ಅದು ನೈತಿಕ ಶಕ್ತಿಯಿಂದ ಮಾತ್ರವೇ ಎದುರಿಸಬೇಕು. ನಿರೀಕ್ಷೆಯಂತೆ ವಂದನಾ ನಿರ್ಣಯ ಪಾಸಾಯಿತು. ಇನ್ನೆಲ್ಲ ನಿರ್ಣಯಗಳೂ ಹೀಗೇ ಆಗುತ್ತವೆ ಎನ್ನುವುದಕ್ಕೆ ಈ ಅಧಿವೇಶನ ಮುನ್ನುಡಿ ಬರೆಯಿತು!

–ಆರ್.ಕೆ. ದಿವಾಕರ, ಎಳೇನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.