ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 12 ಸೆಪ್ಟೆಂಬರ್ 2024, 19:30 IST
Last Updated 12 ಸೆಪ್ಟೆಂಬರ್ 2024, 19:30 IST
   

ಮಾಹಿತಿ ಆಯೋಗದ ವಿಳಂಬ ಧೋರಣೆ ನಿಲ್ಲಲಿ

ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕಾದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಮಾಹಿತಿ ಆಯೋಗವು ನಿಷ್ಕ್ರಿಯವಾಗಿದೆಯೇನೋ ಎಂಬ ಸಂಶಯ ಮೂಡುತ್ತಿದೆ. ಅಧಿಕಾರಿಗಳಿಂದ ಸರಿಯಾಗಿ ಮಾಹಿತಿ ಸಿಗದ ಕಾರಣಕ್ಕೆ ತನ್ನ ಬಳಿ ಬಂದವರನ್ನು ಮಾಹಿತಿ ಆಯೋಗ ಸಹ ವರ್ಷಗಟ್ಟಲೆ ಅಲೆದಾಡಿಸುತ್ತಿದೆ. ಮಾಹಿತಿಗಾಗಿ ಮೇಲ್ಮನವಿ, ಮಾಹಿತಿ ನೀಡದವರ ವಿರುದ್ಧ ದೂರು ಸಲ್ಲಿಸಿ ವರ್ಷಕ್ಕೂ ಹೆಚ್ಚು ಅವಧಿ ಕಳೆದರೂ ಆಯೋಗ ವಿಚಾರಣೆಗೆ ದಿನಾಂಕವನ್ನೇ ನೀಡಿಲ್ಲ. ಒಂದೂವರೆ ವರ್ಷವಾದರೂ ಮಾಹಿತಿ ಕೊಡದ ಅಧಿಕಾರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸದ ಆಯೋಗದಿಂದ ತ್ವರಿತ ನ್ಯಾಯ ನಿರೀಕ್ಷೆ ಹೇಗೆ ಸಾಧ್ಯ?

ಶ್ರೀಸಾಮಾನ್ಯನ ಕೈಯಲ್ಲಿರುವ ಮಾಹಿತಿ ಹಕ್ಕು ಎಂಬ ಪ್ರಬಲ ಅಸ್ತ್ರವನ್ನು ಆಯೋಗವು ತನ್ನ  ವಿಳಂಬ ನೀತಿಯಿಂದ ದುರ್ಬಲಗೊಳಿಸುತ್ತಿದೆ. ಇನ್ನಾದರೂ ಅದು ತನ್ನ ಸಂವಿಧಾನದತ್ತ ಕರ್ತವ್ಯದತ್ತ ಮುಖ ಮಾಡಲಿ, ಜನಸಾಮಾನ್ಯರಿಗೆ ಶಕ್ತಿ ತುಂಬಲಿ.

ADVERTISEMENT

–ಜಿ.ಜಗದೀಶ್, ದಾವಣಗೆರೆ

***

ಕೋಮು ಸಂಘರ್ಷ: ಬೇಕು ಕಟ್ಟುನಿಟ್ಟಿನ ಕ್ರಮ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆ ತರುವ ಕಿಡಿಗೇಡಿಗಳ ದುಷ್ಕೃತ್ಯವೇ ಸರಿ. ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಿರುವುದು ದುರದೃಷ್ಟಕರ. ಈ ರೀತಿಯ ಸಂಘರ್ಷದ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಮತ–ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಲು ಯತ್ನಿಸುವ ಮತಾಂಧರು ಯಾವುದೇ ಜಾತಿ,
ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಸ್ಥಳೀಯರು ಸಹ ದುರುಳರ ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ, ಸಂಯಮ ಕಾಪಾಡಿಕೊಳ್ಳುವುದು ಅವಶ್ಯ. ಕೋಮು ದಳ್ಳುರಿಗೆ ಅವಕಾಶ ನೀಡಿದರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ, ಜನರ ಪ್ರಾಣಹಾನಿಗೂ ಕುತ್ತು ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇಂತಹ ಸೂಕ್ಷ್ಮ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ಹೊತ್ತಿ ಉರಿಯುತ್ತಿರುವ ಮನೆಯಲ್ಲಿ ಚಳಿ ಕಾಯಿಸಿಕೊಳ್ಳುವ ಪ್ರವೃತ್ತಿಯನ್ನು ಮೊದಲು ಬಿಡಬೇಕಿದೆ.

–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

***

ಗಾಂಧಿ ಅಪ್ರಸ್ತುತ ಆದರೇಕೆ?

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ನಿಮಿತ್ತ ‘ಬನ್ನಿ, ಪ್ರಜಾಪ್ರಭುತ್ವಕ್ಕಾಗಿ ಕೈ ಜೋಡಿಸೋಣ’ ಎನ್ನುವ ಘೋಷಣೆಯಿರುವ ಸರ್ಕಾರದ ಪೂರ್ಣಪುಟದ ಜಾಹೀರಾತು (ಪ್ರ.ವಾ., ಸೆ. 12) ನೋಡಿ ಅಭಿಮಾನದ ಜೊತೆಗೆ ಅಚ್ಚರಿಯೂ ಆಯಿತು. ಸದರಿ ಚಿತ್ರಪಟದ ಹೃದಯ ಭಾಗದಲ್ಲಿ ಅದೂ ಚಿಕ್ಕದಾಗಿ ಅಂಬೇಡ್ಕರ್ ಫೋಟೊವನ್ನು ಮಾತ್ರ ಅಳವಡಿಸಲಾಗಿದೆ. ಇಲ್ಲಿ ರಾಷ್ಟ್ರಪಿತನ ನೆನಪೇ ಆಗಲಿಲ್ಲವೆ? ಪ್ರಜಾಪ್ರಭುತ್ವ ಸ್ಥಾಪನೆಗಿಂತ ಮೊದಲು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಇಲ್ಲಿ ಅಪ್ರಸ್ತುತರಾದರೆ? ಮರಕ್ಕೆ ಕಾರಣವಾದ ತಾಯಿ ಬೇರನ್ನು ನಾವು ಮರೆಯಬಾರದು ಅಲ್ಲವೆ?

–ಈರಪ್ಪ ಎಂ. ಕಂಬಳಿ, ಬೆಂಗಳೂರು

***

ಸಿಜೆಐ ಮನೆಗೆ ಪ್ರಧಾನಿ: ಅನಪೇಕ್ಷಣೀಯ ನಡೆ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಮನೆಯಲ್ಲಿ ಬುಧವಾರ ನಡೆದ ಗಣೇಶ ಪೂಜೆಯಲ್ಲಿ ತಾವು ಭಾಗಿಯಾಗಿದ್ದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಫೋಟೊ ಸಮೇತ ಹಂಚಿಕೊಂಡಿದ್ದಾರೆ. ಭಾರತದಂಥ ಧರ್ಮನಿರಪೇಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗವು ಶಾಸಕಾಂಗ, ಕಾರ್ಯಾಂಗದಿಂದ ಅಂತರ ಕಾಯ್ದುಕೊಳ್ಳುವುದು ಅಪೇಕ್ಷಣೀಯ ಮತ್ತು ಪ್ರಜಾತಂತ್ರಕ್ಕೆ ಆರೋಗ್ಯಕರವೂ ಹೌದು. ಹೀಗಿರುವಾಗ, ಮುಖ್ಯ ನ್ಯಾಯಮೂರ್ತಿಯವರ ಮನೆಯಲ್ಲಿ ಪ್ರಧಾನಿ ಪೂಜೆ ಪುನಸ್ಕಾರದಂಥ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಎಷ್ಟು ಸರಿ? ಇದು ನ್ಯಾಯಾಂಗದ ಒಟ್ಟಾರೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಿಲ್ಲವೇ?

ಒಕ್ಕೂಟ ಸರ್ಕಾರದ ನೀತಿ, ನಿಯಮಾವಳಿಗಳು ಜನವಿರೋಧಿಯಾದಾಗ ಅದನ್ನು ಪ್ರಶ್ನಿಸಿ, ನ್ಯಾಯ ಕೋರಿ ಹಲವು ಮೊಕದ್ದಮೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನು ಹತ್ತುತ್ತಿರುವ ಹೊತ್ತಿನಲ್ಲಿ ಈ ಪ್ರಕರಣ ದೇಶಕ್ಕೆ ಯಾವ ಸಂದೇಶವನ್ನು ನೀಡುತ್ತದೆ? ನ್ಯಾಯಾಂಗ ಮತ್ತು ಶಾಸಕಾಂಗದ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಏಳುವುದಿಲ್ಲವೇ? ಜನರಲ್ಲಿ ಏಳುವ ಇಂತಹ ಪ್ರಶ್ನೆಗಳಿಗೆ ಪ್ರಧಾನಿ ಮತ್ತು ಮುಖ್ಯ ನ್ಯಾಯಮೂರ್ತಿಯವರು ಉತ್ತರ ನೀಡಬೇಕು. 

–ಚಂದ್ರಪ್ರಭ ಕಠಾರಿ, ಬೆಂಗಳೂರು

***

ಗಡಿಯಲ್ಲೂ ಬಹುಭಾಷಾ ಸವಾಲು

ತರಗತಿಗಳಲ್ಲಿ ವಿವಿಧ ಭಾಷೆಗಳನ್ನು ಮಾತನಾಡುವ ಮಕ್ಕಳಿಗೆ ಕಲಿಸುವಲ್ಲಿ ಶಿಕ್ಷಕರು ಎದುರಿಸುತ್ತಿರುವ ಸವಾಲನ್ನು ಎಚ್‌.ಬಿ.ಚಂದ್ರಶೇಖರ್‌ ತಮ್ಮ ಲೇಖನದಲ್ಲಿ (ಸಂಗತ, ಸೆ. 12) ವಿವರಿಸಿದ್ದಾರೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಇಂತಹ ಬಹುಭಾಷಾ ಸನ್ನಿವೇಶವು ಶಾಲೆಗಳಿಗೆ ಮಾತ್ರವಲ್ಲ ಎಲ್ಲ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೆಲವು ಗಡಿ ಭಾಗದ ಹಳ್ಳಿಗಳಲ್ಲಿ ಗ್ರಾಮಸಭೆ ಅಥವಾ ಜನಸಂಪರ್ಕ ಸಭೆ ನಡೆಸುವಾಗ, ಕನ್ನಡದಲ್ಲಿ ಪ್ರಾರಂಭ ಮಾಡಿದ ಸಭೆ ನಂತರ ತೆಲುಗಿನಲ್ಲಿ ಮುಂದುವರಿಯುತ್ತದೆ. ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಸಭೆಯ ಅಧ್ಯಕ್ಷತೆ ವಹಿಸುವ ಕ್ಷೇತ್ರದ ಶಾಸಕರು, ಇತರ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳಿಗೆ ಕನ್ನಡದ ಬಗ್ಗೆ ಖಂಡಿತ ಅಸಡ್ಡೆಯಿಲ್ಲ. ಆದರೆ ಸ್ಥಳೀಯರ ಕುಂದುಕೊರತೆಗಳನ್ನು ಅರಿಯಲು ಇದು ಅನಿವಾರ್ಯ. ಗಡಿಭಾಗದ ಜಿಲ್ಲೆಗಳಲ್ಲಿ ದ್ವಿಭಾಷಾ ಸನ್ನಿವೇಶ ಸಾಮಾನ್ಯ ಎಂಬುದನ್ನು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಕುಂದುಕೊರತೆಗಳನ್ನು ಅರಿಯುವ ಜನಸಂಪರ್ಕ ಸಭೆಗಳ ಉದ್ದೇಶವೇ ವಿಫಲವಾಗುತ್ತದೆ.

–ಟಿ.ಜಯರಾಂ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.