ADVERTISEMENT

ಕ್ಷಮೆ ಯಾಚಿಸಿ

ರಘುನಂದನ
Published 15 ಅಕ್ಟೋಬರ್ 2018, 16:18 IST
Last Updated 15 ಅಕ್ಟೋಬರ್ 2018, 16:18 IST

‘ಶಿವ’ ನಾಟಕ ಪ್ರದರ್ಶನಕ್ಕೆ ವಿಶ್ವ ಹಿಂದೂ ಪರಿಷತ್ತಿನಕಾರ್ಯಕರ್ತರು ತಡೆ ಒಡ್ಡಿದ ಸುದ್ದಿಗೆ (ಪ್ರ.ವಾ., ಅ.15)
ಈ ಪ್ರತಿಕ್ರಿಯೆ. ಆ ಸಂಘಟನೆಯ ಮೂರು ತಂಡಗಳು ಜಾಗೃತಿ ರಂಗಮಂದಿರಕ್ಕೆ ಹೋಗಿ ಹೇಗೆ ಬೆದರಿಕೆ ಒಡ್ಡಿವೆ ಎಂಬುದೂ ಬೇರೆ ಬೇರೆ ಕಡೆಗಳಲ್ಲಿ ಸುದ್ದಿಯಾಗಿದೆ. ಎಲ್‍ಜಿಬಿಟಿಕ್ಯೂ ಜನರ ಕಷ್ಟಸುಖಗಳನ್ನು ನಾಟ್ಯವಾಗಿಸುವ ಪ್ರಯೋಗವನ್ನು– ಯಾವುದೇ ವಿಷಯ, ಯಾವುದೇ ಕಥೆಯುಳ್ಳ ಯಾವುದೇ ಪ್ರಯೋಗವನ್ನು– ಹೀಗೆಲ್ಲ ತಡೆಯುವುದು ಸರ್ವಥಾ ಸರಿಯಲ್ಲ. ಅಚ್ಚರಿಯ ಮಾತೆಂದರೆ, ಪೊಲೀಸರು ಆ ಸಂಘಟನೆಯ ಯಾರನ್ನೂ ಬಂಧಿಸದೆ, ಮರೆವೆಗೆ ಸಂದ, ಆದರೆ ಜೀವಂತವಿರುವ ಬ್ರಿಟಿಷರ ಕಾಲದ ಕರಾಳ ಕಾನೂನೊಂದನ್ನು ಆಧರಿಸಿ ಆ ಪ್ರದರ್ಶ
ನದ ಮೇಲೆಯೇ ನಿರ್ಬಂಧ ಹೇರಿದ್ದಾರೆ; ಮತ್ತು ಆ ನಾಟಕದ ಪ್ರಯೋಗಕ್ಕೆ ಅನುಮತಿ ಬೇಕಾದರೆ, ಅದರ ಸಾಹಿತ್ಯದ ಪಾಠವನ್ನು ತಾವು ಮೊದಲು ಪರಿಶೀಲಿಸಬೇಕೆಂದು ಹೇಳಿದ್ದಾರೆ! ಅಸಂಗತ ನಡವಳಿಕೆ ಮತ್ತು ತೀರ್ಮಾನ ಅದು.

ಅಸಲಿಗೆ, ಆ ಕಾನೂನು ಪ್ರಜಾಸತ್ತೆಗೆ ವಿರುದ್ಧವಾದದ್ದುಎಂದು ಎಲ್ಲ ಬರಹಗಾರರು, ಕಲಾವಿದರು ಮತ್ತು ಪ್ರಜ್ಞಾವಂತರು ಮೊದಲಿನಿಂದ ಹೇಳುತ್ತ ಬಂದಿದ್ದಾರೆ. ಆ ಕಾನೂನು ಹೋಗಬೇಕು ಮತ್ತು ಬೆದರಿಕೆಯೊಡ್ಡಿದವರ ದಸ್ತಗಿರಿಯಾಗಬೇಕು.

ಈಚೆಗೆ, ಆರ್‌ಎಸ್‌ಎಸ್‌ನ ಮೋಹನ ಭಾಗವತ್ ಅವರು ತಮ್ಮ ಸಂಘಟನೆ ಮತ್ತು ಅದರ ಪರಿವಾರಕ್ಕೆ ಉದಾರ
ವಾದಿ ಲೇಪವೊಂದನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಅವರ ಆ ಉದ್ದೇಶ ಮತ್ತು ಮಾತುಗಳು ಪ್ರಾಮಾಣಿಕ ಎಂದಾದರೆ, ಮೊದಲು ಕರ್ನಾಟಕದ ಆರ್‌ಎಸ್‌ಎಸ್‌ ಮತ್ತು ವಿಎಚ್‍ಪಿ ನಾಯಕರ ಇಂಥ ವರ್ತನೆಗಳಿಗೆ ಛೀಮಾರಿ ಹಾಕಿ, ಅವರ ಪರವಾಗಿ ಕ್ಷಮೆ ಕೇಳಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.