ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕುರಿತು ಎಸ್.ಬಿ.ಸುಧಾಕರ್ ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾಗ್ರಾಮದ ಆವರಣದಲ್ಲಿ ಗುರುವಾರ ನಿಗದಿಯಾಗಿತ್ತಷ್ಟೆ. ಆದರೆ, ಹಿಂದೂ ಜನಜಾಗೃತಿ ಸಮಿತಿಯವರೆಂದು ಹೇಳಿಕೊಂಡ ಕೆಲವರು ತಕರಾರು ತೆಗೆದು, ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟು, ಕೊನೆಗೆ ಕಲಾಗ್ರಾಮದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದ್ದರಿಂದ ಲೇಖಕರು ತಮ್ಮ ಮನೆಯಲ್ಲೇ ಪುಸ್ತಕ ಬಿಡುಗಡೆ ಮಾಡಿದ ಸುದ್ದಿ (ಪ್ರ.ವಾ., ಅ. 28) ಓದಿ ವಿಷಾದವಾಯಿತು. ಜೊತೆಗೆ, ಪ್ರತಿಭಟನೆ ಮಾಡಿದವರ ಬಗ್ಗೆ ಹೇವರಿಕೆಯೂ ಹುಟ್ಟಿತು. ಏಕೆಂದರೆ, ಹೀಗೆ ಗಲಾಟೆ ಮಾಡಿದವರ್‍ಯಾರೂ ಈ ಪುಸ್ತಕವನ್ನು ಓದಿದವರಲ್ಲ. ಕೇವಲ ‘ಇಮ್ರಾನ್ ಖಾನ್’ ಎನ್ನುವ ಶೀರ್ಷಿಕೆಯನ್ನು ನೋಡಿಯೇ ಇವರೆಲ್ಲ ಹೀಗೆ ಕುಪಿತರಾಗಿ ವರ್ತಿಸಿರುವುದು ಯಾರಿಗೇ ಆದರೂ ಗೊತ್ತಾಗುತ್ತದೆ. ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ಸರಿಯಾದ ಬೌದ್ಧಿಕ ತರಬೇತಿ ಕೊಡದೆ ಇರುವುದರ ದುಷ್ಪರಿಣಾಮವಿದು. ಜೊತೆಗೆ, ಎಲ್ಲ ಸಂಘಟನೆಗಳೂ ತಮ್ಮೊಳಗೊಂದು ‘ಪೊಲಿಟಿಕಲ್ ಅಜೆಂಡಾ’ವನ್ನು ಸಲಹುತ್ತಿರುವ ಪ್ರವೃತ್ತಿಯನ್ನು ಇದು ತೋರಿಸುತ್ತದೆ.
ಆದರೆ, ಹಿಂದೂ ಧರ್ಮವು ಸಂವಾದ ಮತ್ತು ವಾಗ್ವಾದಗಳಲ್ಲಿ ನಂಬಿಕೆ ಇಟ್ಟುಕೊಂಡಿರುವ ಉದಾರ ಧರ್ಮವೇ ವಿನಾ ಸಂಕುಚಿತ ಮನೋಧರ್ಮ ಇಲ್ಲಿಲ್ಲ. ಇಂತಹ ಪ್ರತಿಭಟನೆಗಳು ಒಮ್ಮುಖ ವಿಚಾರಗಳಿಗೆ ಆತುಕೊಂಡಿರು
ವವರಲ್ಲಿ ಇರುವ ಐಬು. ಇಂತಹ ಅವಲಕ್ಷಣವು ಈಗ ಹಿಂದೂ ಧರ್ಮಕ್ಕೂ ಬರುತ್ತಿರುವುದು ಒಳ್ಳೆಯದಲ್ಲ. ಹಿಂದೂ ಜನಜಾಗೃತಿ ಸಮಿತಿಯವರು ಇದನ್ನು ಅರಿಯಬೇಕು. ಇದನ್ನು ಬಿಟ್ಟು ಒಬ್ಬ ಲೇಖಕನಲ್ಲಿ ಆತಂಕವನ್ನು ಸೃಷ್ಟಿಸುವುದು ಖಂಡನೀಯ.
-ಬಿ.ಎಸ್.ಜಯಪ್ರಕಾಶ ನಾರಾಯಣ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.