ADVERTISEMENT

ವಾಚಕರ ವಾಣಿ | ಉದ್ಯೋಗ ಮೇಳ: ಉದ್ದೇಶ ಈಡೇರಲಿ

ವಾಚಕರ ವಾಣಿ
Published 1 ಜನವರಿ 2024, 0:21 IST
Last Updated 1 ಜನವರಿ 2024, 0:21 IST
   

ಉದ್ಯೋಗ ಮೇಳ: ಉದ್ದೇಶ ಈಡೇರಲಿ

ಬೆಂಗಳೂರಿನಲ್ಲಿ ಜನವರಿ ಕೊನೆಯ ವಾರ ರಾಜ್ಯ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಅದಕ್ಕಾಗಿ ಸಚಿವರ ತಂಡ ರಚಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳು ಉದ್ಯೋಗದ ಅನ್ವೇಷಣೆಯಲ್ಲಿದ್ದಾರೆ. ಈ ಉದ್ಯೋಗ ಮೇಳದಿಂದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಮೇಳಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಸರ್ಕಾರವು ಸಾರಿಗೆ,
ವಸತಿ, ಊಟೋಪಚಾರದ ವ್ಯವಸ್ಥೆ ಮಾಡಬೇಕು. ಉದ್ಯೋಗದಾತರು ಉದ್ಯೋಗ ಮೇಳ ಮುಗಿದ
ದಿನವೇ ತಾವು ಎಷ್ಟು ಮಂದಿಗೆ ಉದ್ಯೋಗ ನೀಡಿದ್ದೇವೆ ಎಂಬ ವಿವರವನ್ನು ಸರ್ಕಾರಕ್ಕೆ ತಿಳಿಸಬೇಕು.
ನಂತರ, ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಉದ್ಯೋಗದಾತರು ಉದ್ಯೋಗ ನೀಡಿದ್ದಾರೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ದೊರೆತರೆ, ಯುವನಿಧಿ ಗ್ಯಾರಂಟಿಗೆ ಸರ್ಕಾರ ಮಾಡಬೇಕಾದ ವೆಚ್ಚ ಕಡಿಮೆ ಆಗುತ್ತದೆ. ಜೊತೆಗೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಉದ್ಯೋಗ ಮೇಳವನ್ನು ಕಾಟಾಚಾರಕ್ಕೆ ಮಾಡದೆ, ನಿರೀಕ್ಷೆ ಇಟ್ಟುಕೊಂಡು ಬಂದವರಿಗೆ ಉದ್ಯೋಗ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡಬೇಕು.

ADVERTISEMENT

-ಚನ್ನಕೇಶವ ಜಿ.ಕೆ., ತರೀಕೆರೆ

ಜನಜಾಗೃತಿ: ಪ್ರಶಂಸನೀಯ ಕಾರ್ಯ

‘ನನ್ನ ಮೈತ್ರಿ’ ಎಂಬ ಯೋಜನೆಗೆ ಹಿರಿತೆರೆ ನಟಿ ಸಪ್ತಮಿ ಗೌಡ ಅವರನ್ನು ರಾಯಭಾರಿಯನ್ನಾಗಿ ಮಾಡಿ, ಬಿಗ್‌ಬಾಸ್ ರಿಯಾಲಿಟಿ ಷೋಗೆ ಕಳುಹಿಸುವ ಮೂಲಕ, ಆ ಯೋಜನೆಯ ಉಪಯೋಗ ಹಾಗೂ ಪೂರ್ಣ ಮಾಹಿತಿಯು ರಾಜ್ಯದ ಜನರಿಗೆ ತಿಳಿಯುವ ಹಾಗೆ ಮಾಡಿದ ಆರೋಗ್ಯ ಇಲಾಖೆಯ ಕಾರ್ಯ ಪ್ರಶಂಸನೀಯ. ಈ ಯೋಜನೆಯು ಮುಟ್ಟಿನ ಕಪ್ ಬಳಕೆಯನ್ನು ಉತ್ತೇಜಿಸುತ್ತದೆ. ಪುನರ್ಬಳಕೆ ಮಾಡಬಹುದಾದ ಈ ಕಪ್‌
ಪರಿಸರಸ್ನೇಹಿಯಾಗಿದ್ದು ಸರಳ ವಿಧಾನದಿಂದ ಕೂಡಿದೆ. ಇದರಿಂದ ಸಾಮಾನ್ಯವಾಗಿ ಹೆಣ್ಣುಮಕ್ಕಳು ಬಳಸುವ ನ್ಯಾಪ್ಕಿನ್‍ಗಿಂತ ದುಪ್ಪಟ್ಟು ನೈರ್ಮಲ್ಯ ಕಾಯ್ದುಕೊಳ್ಳಬಹುದಾಗಿದೆ.

ಮಹಿಳೆಯರ ಸುರಕ್ಷತೆಗೆ ಪೂರಕವಾದ ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ರಿಯಾಲಿಟಿ ಷೋ ಮೂಲಕ
ಅರಿವು ಮೂಡಿಸಿದ ಇಲಾಖೆಯ ಕಾರ್ಯ ಮಾದರಿಯದ್ದಾಗಿದೆ. ಇದೇ ತೆರನಾಗಿ ಎಲ್ಲಾ ಇಲಾಖೆಗಳು
ತಮ್ಮ ತಮ್ಮ ನವೀನ ಯೋಜನೆಗಳನ್ನು ಟಿ.ವಿ. ಷೋಗಳ ಮೂಲಕ ಬೆಳಕಿಗೆ ತರುವುದರಿಂದ, ಯೋಜನೆಗಳು ಸುಲಭವಾಗಿ ಜನರನ್ನು ತಲುಪಿ ಯಶಸ್ಸು ಕಾಣಲು ಸಾಧ್ಯ.

-ಮಲ್ಲಮ್ಮ ಪೂಜಾರಿ, ವಿಜಯಪುರ

ಉಲ್ಫಾ ಜೊತೆಗಿನ ಒಪ್ಪಂದ: ಹಿಂಜರಿಕೆ ದೂರವಾಗಲಿ

ಕೇಂದ್ರ ಸರ್ಕಾರವು ಉಲ್ಫಾ ಸಂಘಟನೆಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿರುವ ಸುದ್ದಿ
(ಪ್ರ.ವಾ., ಡಿ.30) ಓದಿ ನೆಮ್ಮದಿ ಉಂಟಾಯಿತು. ಅದರ ಹಿರಿಯ ನಾಯಕ ಪರೇಶ್ ಬರೂವ ಇದರಿಂದ ಅಂತರ ಕಾಯ್ದುಕೊಂಡಿರುವುದು ಆತಂಕಕಾರಿ. ಅಸ್ಸಾಂ ಹೋರಾಟಗಾರರ ನಡುವೆಯೂ ಈ ಹಿಂದೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. 2015ರಲ್ಲಿ ನಾಗಾ ಫ್ರೇಮ್‌ವರ್ಕ್ ಒಪ್ಪಂದ ಏರ್ಪಟ್ಟರೂ ಒಂದು ಬಣ ಅದರಿಂದ ದೂರ ಉಳಿಯಿತು, ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ಪ್ರಸ್ತುತ ಒಪ್ಪಂದದ ಅನುಷ್ಠಾನಕ್ಕೆ ಎನ್‌ಆರ್‌ಸಿ– ಸಿಎಎ ಬಗೆಗಿನ ಅಂತಿಮ ತೀರ್ಪು ಹಾಗೂ ಡಿಲಿಮಿಟೇಷನ್‌ ಸರಿಯಾಗಿ ನಡೆಯುವುದು ನಿರ್ಣಾಯಕ. ಆದ್ದರಿಂದ  ‘ಸಾಧಿಸಿದ್ದೇವೆ, ಚರಿತ್ರಾರ್ಹ’ ಎಂದು ಈಗಲೇ ಹೇಳಿಕೊಳ್ಳುವುದು ಅವಸರದ ನಡೆಯಾದೀತು.

ಒಪ್ಪಂದ ಕಾರ್ಯಗತಗೊಂಡಾಗ ಹೊರಗಿನವರಿಗೆ (ಉದಾಹರಣೆಗೆ, ನಾನು ಎರಡು ಬಾರಿ ಹೋಗಿ ಬಂದಿದ್ದೇನೆ) ಈಶಾನ್ಯದ ರಾಜ್ಯಗಳಿಗೆ ಭೇಟಿ ನೀಡಲು ಹಿಂಜರಿಕೆ ಕಡಿಮೆಯಾಗುತ್ತದೆ. ಅಸ್ಸಾಮಿನ ಯುವಕರಿಗೆ ಜೀವನೋಪಾಯ ಅರಸಿ ಬೆಂಗಳೂರನ್ನೂ ಒಳಗೊಂಡಂತೆ ಬೇರೆ ರಾಜ್ಯಗಳ ಮಹಾನಗರಗಳನ್ನು ಸೇರಿಕೊಳ್ಳುವ ಅನಿವಾರ್ಯ ಇಲ್ಲವಾಗುತ್ತದೆ. ಸೇತುವೆಗಳು, ರೈಲು- ವಿಮಾನ ಮಾರ್ಗ ನಿರ್ಮಾಣಗಳಷ್ಟೇ ಬ್ರಹ್ಮಪುತ್ರ ನದಿಯ ಪ್ರವಾಹ ನಿಯಂತ್ರಣವೂ ಆ ಪ್ರದೇಶದ ಸುಸ್ಥಿತಿಗೆ ಮುಖ್ಯ. ಉಲ್ಫಾ ನಾಯಕರು ‘ನಮಗೆ ರಾಜಕೀಯ ಆಕಾಂಕ್ಷೆಗಳಿಲ್ಲ’ ಎಂದಿದ್ದಾರೆ, ಹಾಗೆಯೇ ನಡೆದುಕೊಳ್ಳಲಿ.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಆಘಾತಕಾರಿ ಸುದ್ದಿ...

ಚಿತ್ರದುರ್ಗದಲ್ಲಿನ ಪಾಳುಮನೆಯೊಂದರಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿದ್ದು, ಈ ವ್ಯಕ್ತಿಗಳು ಬಹುಶಃ 2019ರಲ್ಲಿಯೇ ಮೃತಪಟ್ಟಿರಬಹುದು ಎಂಬ ಸುದ್ದಿಯನ್ನು ಓದಿ ನಿಜಕ್ಕೂ ಆಘಾತವಾಯಿತು. ಜನನಿಬಿಡ ನಗರದ ಮನೆಯಿಂದ ಸತ್ತ ಜೀವಿಯ ಕೊಳೆತ ವಾಸನೆ ಬರುತ್ತಿದ್ದರೂ ಅದನ್ನು ನಿರ್ಲಕ್ಷಿಸಿದ ನೆರೆಹೊರೆಯವರು, ಇಡೀ ಸಮುದಾಯ, ಸಂಬಂಧಪಟ್ಟ ಇಲಾಖೆಗಳು, ಅಷ್ಟೇ ಏಕೆ ತನ್ನನ್ನು ಸಂವೇದನೆಯುಳ್ಳ ಸಮಾಜಜೀವಿ, ಸಂಘಜೀವಿ ಎಂದೆಲ್ಲ ಕರೆದುಕೊಳ್ಳುವ ಇಡೀ ಮನುಷ್ಯ ಕುಲವೇ ನಾಚಿಕೆಪಡುವಂತಹ ಪ್ರಕರಣ ಇದಾಗಿದೆ. ಇನ್ನು ಮುಂದಾದರೂ ಕನಿಷ್ಠ ನೆರೆಹೊರೆಯವರ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿಯನ್ನು ಬೆಳೆಸಿಕೊಳ್ಳಬೇಕಾದುದು ನಮ್ಮೆಲ್ಲರ
ಹೊಣೆಗಾರಿಕೆಯಾಗಿದೆ.

-ಚಂದನಶಂಕರ, ವರಕೋಡು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.