ADVERTISEMENT

ವಾಚಕರ ವಾಣಿ | ಸರ್ಕಾರಿ ಶಾಲೆಗೆ ಹೆಮ್ಮೆ ತಂದ ವಿದ್ಯಾರ್ಥಿನಿ

ವಾಚಕರ ವಾಣಿ
Published 10 ಮೇ 2024, 23:23 IST
Last Updated 10 ಮೇ 2024, 23:23 IST
   

ಸರ್ಕಾರಿ ಶಾಲೆಗೆ ಹೆಮ್ಮೆ ತಂದ ವಿದ್ಯಾರ್ಥಿನಿ

ಮೊರಾರ್ಜಿ ದೇಸಾಯಿ ವಸತಿಶಾಲೆ ಎಂದರೆ ಸರಿಯಾದ ಸೌಲಭ್ಯವಿಲ್ಲ, ಕ್ಲಾಸ್ ರೂಂ, ಬೆಂಚ್, ಊಟ ಸರಿಯಿಲ್ಲ, ಸರಿಯಾದ ಶಿಕ್ಷಣ ಸಿಗುವುದಿಲ್ಲ ಎನ್ನುವವರು ಬಾಯಿಯ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡಿದ್ದಾಳೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ವಜ್ಜರಮಟ್ಟಿಯ ಅಂಕಿತಾ ಬಸಪ್ಪ ಕೊಣ್ಣೂರ. ಈ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಊಟ, ವಸತಿ ಎಲ್ಲವೂ ಉಚಿತವಾಗಿ ಸಿಗುತ್ತವೆ. ಕೆಲವು ಕಡೆ ಹಾಸ್ಟೆಲ್‌ಗೆ ಸ್ವಂತ ಕಟ್ಟಡ ಇರದಿದ್ದರೂ ಅಲ್ಲಿಯ ಶಿಕ್ಷಕರು ಹೆಚ್ಚು ಶ್ರಮವಹಿಸಿ ಮಕ್ಕಳಿಗೆ ಬೋಧನೆ ಮಾಡುತ್ತಾರೆ. ಅವರ ನಿರಂತರ ಶ್ರಮದಿಂದ ಪ್ರತಿವರ್ಷವೂ ಎಲ್ಲ ಮೊರಾರ್ಜಿ ದೇಸಾಯಿ ವಸತಿಶಾಲೆಗಳು ಒಳ್ಳೆಯ ಫಲಿತಾಂಶ ನೀಡುತ್ತಾ ಬಂದಿವೆ. ಸರ್ಕಾರಿ ಹುದ್ದೆ ಮಾತ್ರ ಬೇಕು, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಬೇಡ ಎನ್ನುವ ಮನಃಸ್ಥಿತಿಯವರಿಗೆ ಅಂಕಿತಾ ಮಾದರಿಯಾಗಿದ್ದಾಳೆ.

-ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

ADVERTISEMENT

****

ಪಟಾಕಿ ಅವಘಡ: ಪರಿಣಾಮದ ಅರಿವಾಗಲಿ

ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿರುವ ಪಟಾಕಿ ಸ್ಫೋಟದಲ್ಲಿ 8 ಜನರು ಸಾವಿಗೀಡಾಗಿ
ರುವುದು ವರದಿಯಾಗಿದೆ (ಪ್ರ.ವಾ., ಮೇ 10). ಶಿವಕಾಶಿಯು ಪಟಾಕಿ ತಯಾರಿಕೆಗೆ ದೇಶದಾದ್ಯಂತ ಹೆಸರುವಾಸಿ ಆಗಿದೆ ಹಾಗೂ ಇದೇ ಸ್ಥಳದಲ್ಲಿ ಮೇಲಿಂದ ಮೇಲೆ ಇಂತಹ ಅವಘಡಗಳು‌ ಘಟಿಸುತ್ತಲೇ ಇರುತ್ತವೆ. ಇಲ್ಲಿ ಅಸುನೀಗಿದ ಬಡ ಕೂಲಿಕಾರ್ಮಿಕರ ಸಾವಿಗೆ ಬೆಲೆ ಇಲ್ಲವೇ? ಸರ್ಕಾರವಾಗಲೀ ಜನ
ಸಾಮಾನ್ಯರಾಗಲೀ ಈ ಸಾವುಗಳ ಹೊಣೆ ಹೊರುವರೇ? ಯಾರದೋ ಹುಟ್ಟುಹಬ್ಬಕ್ಕೋ ಇನ್ನಾರದೋ ಸಾವಿಗೋ ಮತ್ಯಾರದೋ ಮದುವೆಗೋ ಇಲ್ಲವೇ ಚುನಾವಣಾ ಪ್ರಚಾರಕ್ಕೋ ಗೆಲುವಿಗೋ ಹಬ್ಬ ಹರಿದಿನಕ್ಕೋ ಒಟ್ಟಿನಲ್ಲಿ ಪಟಾಕಿಗಳ ಸದ್ದಂತೂ ವರ್ಷಪೂರ್ತಿ ಅನುರಣಿಸುತ್ತಲೇ ಇರುತ್ತದೆ. ಇಷ್ಟೊಂದು ಪಟಾಕಿಗಳನ್ನು ತಯಾರಿಸಲು ಬಳಸಲಾಗುವ ರಾಸಾಯನಿಕಗಳು, ಅವುಗಳನ್ನು ತಯಾರಿಸುವವರ ಸ್ಥಿತಿಗತಿ, ಇವೇ ಪಟಾಕಿಗಳು ನಾಳೆ ನಮ್ಮ ಕೈಸೇರಿ ಉರಿದಾಗ ಅವು ಹೊರಬಿಡುವ ಹೊಗೆ, ದೂಳು, ಕರ್ಕಶ ಶಬ್ದ ತಂದೊಡ್ಡುವ ಅನಾಹುತಗಳ‌ ಬಗ್ಗೆ ಕಿಂಚಿತ್ತೂ ಯೋಚಿಸದೇ ಇರುವ ಸಮಾಜದಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ.

ಒಂದು ಪಟಾಕಿ ಸುಟ್ಟರೆ ಏಕಕಾಲದಲ್ಲಿ ಜಲ, ನೆಲ, ವಾಯು ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇವುಗಳಿಂದ ಹೊರಹೊಮ್ಮುವ ದಟ್ಟಹೊಗೆಯು ಎಳೆಯ ಮಕ್ಕಳು ಹಾಗೂ ವೃದ್ಧರಿಗೆ ಅತೀವವಾದ ಉಸಿರಾಟದ ತೊಂದರೆಗಳನ್ನು ನೀಡುತ್ತದೆ. ಇವುಗಳ ಕಿವಿಗಡಚಿಕ್ಕುವ ಶಬ್ದವಂತೂ ಹಲವಾರು ಜನರ ಶ್ರವಣ ಸಾಮರ್ಥ್ಯ ಹಾಗೂ ರಕ್ತದೊತ್ತಡವನ್ನು ಏರುಪೇರಾಗಿಸುತ್ತದೆ. ಇವು ಉರಿದಾಗ ಸುತ್ತಲೂ ಸಿಂಪಡಣೆ
ಗೊಳ್ಳುವ ರಾಸಾಯನಿಕಗಳು ಭೂಮಿಗಿಳಿದು ನೆಲಮಾಲಿನ್ಯಕ್ಕೂ ಜಲಮಾಲಿನ್ಯಕ್ಕೂ ಕಾರಣವಾಗುತ್ತವೆ. ಇಷ್ಟೇ ಅಲ್ಲದೆ ಇವು ವಾತಾವರಣ ಹಾಗೂ ಪ್ರಾಣಿ-ಪಕ್ಷಿಗಳ ಮೇಲೆ ಬೀರುವ ಪರಿಣಾಮವಂತೂ ಅತ್ಯಂತ ಭೀಕರ ಆಗಿರುತ್ತದೆ. ಇಷ್ಟೆಲ್ಲಾ ತೊಂದರೆ ಕೊಡುವ ಈ ಪಟಾಕಿಗಳನ್ನು ಆಳುವ ವರ್ಗದವರು ನಿಷೇಧಿಸದೇ ಇರುವುದು ಹಾಗೂ ಜನಸಾಮಾನ್ಯರು ಬಳಸುವುದನ್ನು ನಿಲ್ಲಿಸದೇ ಇರುವುದು ದುರಂತವೇ ಸರಿ.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

****

ಕುಟುಂಬದ ಪಾತ್ರ ನಿರ್ಣಾಯಕ

‘ಒಮ್ಮೆ ಆಳವಾಗಿ ಆಲೋಚಿಸಿದ್ದರೆ…?’ ಎನ್ನುವ ಲೇಖನದಲ್ಲಿ (ಪ್ರ.ವಾ., ಮೇ 10) ಡಾ. ಎಚ್‌.ಎಸ್‌.ಅನುಪಮಾ ಅವರು ವ್ಯಕ್ತಿಯನ್ನು ರೂಪಿಸುವುದರಲ್ಲಿ ಸಮಾಜದ ಪಾತ್ರವನ್ನು ಸರಿಯಾಗಿ ಗುರುತಿಸಿದ್ದಾರೆ. ಸಮಾಜವು ವ್ಯಕ್ತಿಯೊಬ್ಬನ ಬದುಕಿನಲ್ಲಿ ಹೆಚ್ಚು ಪ್ರಭಾವಶಾಲಿಯಾಗುವುದು ಆತನ 10-12ನೇ ವಯಸ್ಸಿನ ನಂತರ. ಅಲ್ಲಿಯವರೆಗೆ ಕೌಟುಂಬಿಕ ವಾತಾವರಣ ಮಾತ್ರ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಮಗುವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಅದರ ಬದುಕಿನ ಮೊದಲ ಏಳೆಂಟು ವರ್ಷಗಳು ಅತಿ ಮುಖ್ಯವಾದವು ಎಂದು ವೈಜ್ಞಾನಿಕ ಸಂಶೋಧನೆಗಳು ತೋರಿಸಿವೆ. ನಮಗೆಲ್ಲಾ ವಿವೇಚನೆಯನ್ನು ಬಳಸುವುದಕ್ಕೆ ಹಾಗೂ ಮಾತು, ವರ್ತನೆಯ ಮೇಲೆ ಹಿಡಿತ ಸಾಧಿಸುವುದಕ್ಕೆ ಬಾಲ್ಯದಲ್ಲಿ ಸೂಕ್ತವಾದ ಕೌಟುಂಬಿಕ ವಾತಾವರಣದ ಅಗತ್ಯವಿದೆ. ಇಂತಹ ವಾತಾವರಣದಲ್ಲಿ ಮಾತ್ರ ತುಡಿತಗಳ ಮೇಲೆ ಹಿಡಿತ ಸಾಧಿಸಲು ಅಗತ್ಯವಾದ ಮಿದುಳಿನ ಸಂಕೀರ್ಣ ಸಂಪರ್ಕ ಜಾಲಗಳು ಸಮರ್ಥವಾಗಿ ಬೆಳವಣಿಗೆಯಾಗುತ್ತವೆ. ಅಂತಹ ಸಂಪರ್ಕ ಜಾಲಗಳ ಬೆಳವಣಿಗೆ ಆಗದಿದ್ದಾಗ ವ್ಯಕ್ತಿಯು ವಯಸ್ಕನಾದ ಮೇಲೆ ಬರೀ ಬುದ್ಧಿಯನ್ನು ಬಳಸಿ ಹಿಡಿತ ಸಾಧಿಸುವುದು ಕಷ್ಟ. ನರವಿಜ್ಞಾನಿ ಮತ್ತು ಮಕ್ಕಳ ಮನೋವೈದ್ಯ ಡಾ. ಬ್ರೂಸ್‌ ಪೆರಿ ಮತ್ತು ಟಿ.ವಿ. ನಿರೂಪಕಿ ಓಪ್ರಾ ವಿನ್‌ಫ್ರೇ ಅವರು ಬರೆದಿರುವ ಪುಸ್ತಕ ‘ವಾಟ್‌ ಹ್ಯಾಪನ್ಡ್‌ ಟು ಯೂ?’ದಲ್ಲಿ ಮಗುವಿನ ಮನೋದೈಹಿಕ ಬೆಳವಣಿಗೆಯ ಕುರಿತು ವೈಜ್ಞಾನಿವಾಗಿ ಚರ್ಚಿಸಲಾಗಿದೆ.

ಗ್ರೀಕ್‌ ತತ್ವಶಾಸ್ತ್ರಜ್ಞ ಅರಿಸ್ಟಾಟಲ್‌ ‘ಏಳು ವರ್ಷದ ಮಗುವನ್ನು ನನಗೆ ತೋರಿಸಿ. ಅದರಲ್ಲಿ ಇರುವ ವಯಸ್ಕನನ್ನು ನಾನು ತೋರಿಸುತ್ತೇನೆ’ ಎಂದು ಒಮ್ಮೆ ಹೇಳಿದ್ದ. ಇಂದಿನ ಮಕ್ಕಳಲ್ಲಿ ತುಡಿತಗಳನ್ನು ನಿರ್ವಹಿಸುವ ಶಕ್ತಿ ಕಡಿಮೆ ಆಗುತ್ತಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಈ ಕುರಿತು ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕಾಗಿದೆ.

-ನಡಹಳ್ಳಿ ವಸಂತ್‌, ಶಿವಮೊಗ್ಗ

****

ಜಾತಿ ಪ್ರಾಬಲ್ಯ

ಬಾಯಿ ಬಿಟ್ಟರೆ 
‘ಇವನಾರವ...’ ವಚನ
ಹೇಳುವವರು ಕೇಳುತ್ತಾರೆ
ಕೈ-ಕುಲುಕಿ... ನೀವು ಯಾರ 
ಪೈಕಿ?!

-ವಿಜಯಮಹಾಂತೇಶ್ ಬಂಗಾರಗುಂಡ್, ಬಾಗಲಕೋಟೆ

****

ಹಿಂದೆ - ಮುಂದೆ ?!

ಈ ಬಾರಿಯ
ಎಸ್ ಎಸ್ ಎಲ್ ಸಿ
ಪರೀಕ್ಷಾ ಫಲಿತಾಂಶದಲ್ಲೂ
ಬಾಲಕಿಯರದೇ ಮೇಲುಗೈ !
ಹೌದು, ಹುಡುಗಿಯರು
ಯಾವಾಗಲೂ ಮುಂದೆ..
ಅವರನ್ನು ಹಿಂಬಾಲಿಸುವ
ಹುಡುಗರು ಪ್ರತಿ ಬಾರಿ
ಪರೀಕ್ಷಾ ಫಲಿತಾಂಶದಲ್ಲೂ
ಹಿಂದೆ ಹಿಂದೆ...!

-ಮ.ಗು.ಬಸವಣ್ಣ, ನಂಜನಗೂಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.