ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವ ಮುನ್ನ...
2025ರ ಒಳಗೆ 500 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಆದರೆ ವಾಸ್ತವ ಸಂಗತಿಗಳತ್ತ ಗಮನಹರಿಸದಿದ್ದರೆ ಇಂತಹ ಶಾಲೆಗಳನ್ನು ತೆರೆಯುವುದರ ಉದ್ದೇಶ ಸಫಲವಾಗುವುದಿಲ್ಲ. ಶಾಲೆಯು ಸರ್ಕಾರದ್ದಾಗಿರಲೀ ಅಥವಾ ಖಾಸಗಿಯದ್ದಾಗಿರಲೀ, ಅಲ್ಲಿ ಮಗುವಿನ ಮಾತೃಭಾಷೆ ಅಥವಾ
ಪರಿಸರ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಮಾತ್ರ ಆ ಶಿಕ್ಷಣ ಫಲಕಾರಿಯಾಗುತ್ತದೆ. ಅದುಬಿಟ್ಟು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡಲು ಹೋಗಿ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಾ ಹೋಗುವುದು ಅವಿವೇಕತನ. ಅದರಿಂದ ಶೈಕ್ಷಣಿಕ ಯಶಸ್ಸು ಸಾಧ್ಯವಿಲ್ಲ. ಈಗಿರುವ ಸರ್ಕಾರಿ ಶಾಲೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿ, ಅಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಸರಿಯಾಗಿ ಕಲಿಸಲಿ. ಆಗ ಶೈಕ್ಷಣಿಕ ಪ್ರಗತಿ ತಾನಾಗಿಯೇ ಆಗುತ್ತದೆ.
-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
****
ಪಿಂಚಣಿ ಸೌಲಭ್ಯ: ಭ್ರಷ್ಟಾಚಾರ ತಪ್ಪಲಿ
ಪಿಂಚಣಿ ಹಾಗೂ ಇತರ ಸೌಲಭ್ಯದ ಕಡತ ತಯಾರಿಸಿಕೊಡಲು ನಿವೃತ್ತ ಶಿಕ್ಷಕಿಯಿಂದ ಲಂಚ ಸ್ವೀಕರಿಸುತ್ತಿದ್ದ ಬೀದರ್‌ನ ಮುಖ್ಯ ಶಿಕ್ಷಕ ತುಕಾರಾಮ ಕಾಂಬಳೆ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿರುವುದನ್ನು ಓದಿ (ಪ್ರ.ವಾ., ಫೆ. 16) ಬಹಳ ಬೇಸರವಾಯಿತು. ಈ ಶಿಕ್ಷಕಿ 2020ರಲ್ಲಿ ನಿವೃತ್ತಿ ಹೊಂದಿದ್ದು, ಇದುವರೆಗೆ ಪಿಂಚಣಿ ಹಣ ಅವರ ಕೈಸೇರದಿದ್ದರೆ ಅವರ ದೈನಂದಿನ ಜೀವನ ನಿರ್ವಹಣೆ ಹೇಗೆ? ಇಳಿವಯಸ್ಸಿನಲ್ಲಿ ಅವರ ಆರೋಗ್ಯದ ಪಾಡೇನು? ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ವಯೋನಿವೃತ್ತಿ ಆದಾಗ ಈ ಬಗೆಯ ನಡವಳಿಕೆ ಬಹುತೇಕ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ದಿನಗಳಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಉತ್ತಮ ಆಡಳಿತ ಮಂಡಳಿಯನ್ನು ಹೊಂದಿರುವ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಗೌರವಯುತ ಬೀಳ್ಕೊಡುಗೆ ನೀಡಲಾಗುತ್ತದೆ. ಮುಖ್ಯ ಶಿಕ್ಷಕ ಅಥವಾ ಪ್ರಾಂಶುಪಾಲರ ಮೂಲಕ ನಿವೃತ್ತ ನೌಕರರಿಗೆ ಹಣ ಇಲ್ಲವೇ ಕಟ್ಟಡ ನಿರ್ಮಾಣ ಅಥವಾ ಪೀಠೋಪಕರಣದ ರೂಪದಲ್ಲಿ ವಂತಿಗೆಗೆ ಷರತ್ತು ವಿಧಿಸಲಾಗುತ್ತದೆ. ಮಣಿಯದಿದ್ದರೆ ಕಡತ ಒದಗಿಸಲು ವಿಳಂಬ ಮಾಡಲಾಗುತ್ತದೆ. ಬೀದರ್‌ನ ಶಾಲೆಯಲ್ಲಿ ಆಗಿರುವುದೂ ಇದೇ. ಕೆಲವು ಶಾಲಾ ಕಾಲೇಜುಗಳಲ್ಲಿ ಮುಖ್ಯ ಶಿಕ್ಷಕ ಅಥವಾ ಪ್ರಾಂಶುಪಾಲರು ಆಡಳಿತ ಮಂಡಳಿಗೆ ಸೇರಿದವರಾಗಿದ್ದ
ರಂತೂ ನೌಕರರನ್ನು ಈ ರೀತಿ ಪೀಡಿಸುವುದು ಮತ್ತಷ್ಟು ಹೆಚ್ಚು. ಹಾಗಾಗಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತ ನೌಕರರು ಪಿಂಚಣಿ ಸೌಲಭ್ಯ ಪಡೆಯಲು ತಿಂಗಳಾನು
ಗಟ್ಟಲೆ ಕಾಯಬೇಕಾಗುತ್ತದೆ, ಕೆಲವು ಸಂದರ್ಭಗಳಲ್ಲಿ ವರ್ಷಗಳೇ ಉರುಳುತ್ತವೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳನ್ನು ತೃಪ್ತಿಪಡಿಸಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವ ವೇಳೆಗೆ ನಿವೃತ್ತ ನೌಕರರಿಗೆ ಇಡೀ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಜುಗುಪ್ಸೆ ಬಂದುಬಿಟ್ಟಿರುತ್ತದೆ. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು ಸುಲಭವಾಗಿ ಪಿಂಚಣಿ ಸೌಲಭ್ಯ ಪಡೆಯುವಂತಾಗಲು ಸರ್ಕಾರ ಸೂಕ್ತ ಕಾನೂನು ರೂಪಿಸಬೇಕಿದೆ.
-ಎಂ.ಜಿ.ರಂಗಸ್ವಾಮಿ, ಹಿರಿಯೂರು
****
ಚುನಾವಣಾ ಬಾಂಡ್: ಸೈದ್ಧಾಂತಿಕ ವಿಜಯ
ಚುನಾವಣಾ ಬಾಂಡುಗಳನ್ನು ಅಸಿಂಧುಗೊಳಿಸಿರುವ ಸುಪ್ರೀಂ ಕೊರ್ಟ್ ತೀರ್ಪು, ಪ್ರಜಾಪ್ರಭುತ್ವ ವ್ಯವಸ್ಥೆಯ ಸೈದ್ಧಾಂತಿಕ ವಿಜಯವಾಗಿದೆ. ಆದರೆ ಇದರಿಂದ ಪ್ರಸಕ್ತ ಚುನಾವಣಾ ವ್ಯವಸ್ಥೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ರಾಜಕೀಯ ಅವ್ಯವಹಾರದ ಸರ್ವವ್ಯಾಪಕತ್ವಕ್ಕೆ ಕಿಂಚಿತ್ ಕಡಿವಾಣವಾದರೂ ಬಿದ್ದೀತೇ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿಯುತ್ತದೆ. ಚುನಾವಣೆಯೆಂಬ ಜೂಜಿನಲ್ಲಿ ತೊಡಗಿಸಿಕೊಳ್ಳುವ ಪಕ್ಷಗಳು ಮತ್ತು ಪಾಲುದಾರರು ಚುನಾವಣೆಯ ಅಗಾಧ ಖರ್ಚಿನ ಬಗ್ಗೆ ಆಗಿಂದಾಗ್ಗೆ ದುಮ್ಮಾನ ಹೊರಹಾಕುತ್ತಿರುತ್ತಾರೆ. ಈ ಮೂಲಕ, ಅವರ ವಿಜಯದ ಹಿಂದೆ ಎಷ್ಟೆಲ್ಲಾ ಭ್ರಷ್ಟ ವ್ಯವಹಾರ ನಡೆದಿರುತ್ತದೆ ಎನ್ನುವುದು ಅವರಿಗೇ ಅರಿವಿಲ್ಲದಂತೆ ಬಹಿರಂಗವಾಗಿರುತ್ತದೆ! ಇಂತಹ ಮಾತುಗಳನ್ನು ಅವರು ಸದನದ ಪವಿತ್ರ ಸ್ಥಾನದಿಂದಲೇ ಆಡುವುದು ವಿಪರ್ಯಾಸವೇ ಸರಿ.
ಅತಂತ್ರ ಸಭೆಯ ‘ಸಂಖ್ಯಾ ಸಂಕಷ್ಟದ ಸಂದರ್ಭ’ದಲ್ಲಿ, ಜನಪ್ರತಿನಿಧಿಗಳು ತಮ್ಮನ್ನೇ ಹಣಕ್ಕಾಗಿ ಮಾರಿಕೊಳ್ಳುವುದಂತೂ ನಾಚಿಕೇಡಿನ ನಡವಳಿಕೆ. ಈ ‘ಬೆಲೆಬಾಳುವಿಕೆ’ಯ ಪೂರ್ವಸಿದ್ಧತೆಯಾಗಿ ನಗದು, ಸಾಮಗ್ರಿ ಮತ್ತು ಅವುಗಳ ಭದ್ರತೆಗಾಗಿ ಅಗತ್ಯ ತೋಳ್ಬಲ ದಳಗಳನ್ನು ಸಾಕಿಕೊಳ್ಳುವುದಕ್ಕಾಗಿ ಲೆಕ್ಕಪತ್ರಗಳಿಗೆ ಮೀರಿದ ಧನಕೋಟಿ ಬೇಡವೇ? ಅದೀಗ ಒಪ್ಪಿತ ಮಾನವೇ ಆಗಿಹೋಗಿದೆ! ಸುಪ್ರೀಂ ಕೋರ್ಟಿನ ಹಾಲಿ ತೀರ್ಪು, ಇಂತಹ ವಿಶೇಷ ವಿಶಿಷ್ಟ ಮೊತ್ತವನ್ನು ಅರ್ಧದಷ್ಟಾದರೂ ಇಳಿಸಬಹುದೇನೋ ಎಂಬ ವಿಶ್ವಾಸ ಇಟ್ಟುಕೊಳ್ಳೋಣ.
-ಆರ್.ಕೆ.ದಿವಾಕರ, ಬೆಂಗಳೂರು
****
ಸರ್ವರ ಕಲ್ಯಾಣಕ್ಕೂ ಸಿಗಲಿ ಆದ್ಯತೆ
ಒಂದೆಡೆ ಕೇಂದ್ರ ಸರ್ಕಾರವು ರಾಮಮಂದಿರವನ್ನು ಚುನಾವಣಾ ಸುದ್ದಿಯನ್ನಾಗಿ ಮಾಡಿಕೊಂಡು ಮತ ಗಳಿಸಲು ಹೊರಟಿದೆ. ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವೂ ದೇವಸ್ಥಾನಗಳ ಜೀರ್ಣೋದ್ಧಾರದ ಮಾತನಾಡುತ್ತಿದೆ. ದೇವಸ್ಥಾನಗಳ ನಿರ್ಮಾಣ, ಜೀರ್ಣೋದ್ಧಾರವನ್ನು ಆಯಾ ದೇವರ ವಕ್ಕಲು ನೋಡಿಕೊಳ್ಳುತ್ತಾರೆ. ಸರ್ಕಾರ ಎಲ್ಲ ಜಾತಿ, ಧರ್ಮೀಯರ ತೆರಿಗೆ ಹಣದಿಂದ ನಡೆಯುತ್ತಿದ್ದು ಎಲ್ಲ ಜನರ ಕಲ್ಯಾಣಕ್ಕೆ ಆದ್ಯತೆಯನ್ನು ನೀಡಬೇಕು. ನಮ್ಮ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪವಾಗಬೇಕಿದೆ, ನಮ್ಮ ಆಸ್ಪತ್ರೆಗಳು ಬದಲಾಗಬೇಕಾಗಿದೆ. ಹಾಗೆಯೇ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕಾಗಿದೆ. ಇದನ್ನು ಬಿಟ್ಟು ಕೇಂದ್ರ- ರಾಜ್ಯ ಸರ್ಕಾರಗಳು ಬರೀ ಮತ ಗಳಿಕೆಯ ಕಡೆಗೆ ಹೊರಳಿರುವುದು ವಿಷಾದನೀಯ.
- ಈ.ಬಸವರಾಜು, ಬೆಂಗಳೂರು
****
ನಿಜವಾದ ಸೌಂದರ್ಯ!
ಅನ್ಯರ ಮನೆಯಲ್ಲಿ
ಮುಸುರೆ ತಿಕ್ಕುತ್ತಿದ್ದ
ಸವಿತಾ ಕಾಂಬಳೆ
ಈಗ ಬೆಳಗಾವಿ
ಮೇಯರ್ ಆಗಿ
ಕಾರಲ್ಲಿ ತಮ್ಮ ಪುಟ್ಟ
ಮನೆಯ ಮುಂದೆ
ಬಂದಿಳಿದದ್ದೇ
ಪ್ರಜಾಪ್ರಭುತ್ವದ
ನಿಜವಾದ ಸೌಂದರ್ಯ.
ನಂಜನಹಳ್ಳಿ ನಾರಾಯಣ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.