ADVERTISEMENT

ವಾಚಕರ ವಾಣಿ | ರೈತರ ನೋವು, ಯಾರಿಗೋ ಹೂವು

ವಾಚಕರ ವಾಣಿ
Published 21 ಅಕ್ಟೋಬರ್ 2024, 0:30 IST
Last Updated 21 ಅಕ್ಟೋಬರ್ 2024, 0:30 IST
ಮಾರುಕಟ್ಟೆಗೆ ಬಂದಿದ್ದ ಹೂವು
ಮಾರುಕಟ್ಟೆಗೆ ಬಂದಿದ್ದ ಹೂವು   

ಸ್ವದೇಶಿ ಸ್ವಾರ್ಥಿಗಳಿಂದ ಪಾರಾಗುವುದು ಹೇಗೆ?

ಬಾಲ್ಯದಲ್ಲಿ ನಮಗೆ ಪ್ರೇಮಚಂದ್ ಅವರ ‘ಜಿಸ್ ಕಾ ಲಕಡಿ ಉಸ್‌ ಕಾ ಭೈಸ್’ (ಯಾರ ಕೈಯಲ್ಲಿ ಕೋಲಿದೆಯೋ ಅವರದೇ ಎಮ್ಮೆ) ಎಂಬ ಪಾಠ ಇತ್ತು. ಹಾಗೇ ಈಗಿನ ಚುನಾವಣಾ ಅಭ್ಯರ್ಥಿಗಳನ್ನು ನೋಡಿದರೆ, ಯಾರ ಕೈಯಲ್ಲಿ ಹಣ, ಅಧಿಕಾರ ಬಲವಿದೆಯೋ ಅವರೇ ಅಭ್ಯರ್ಥಿಗಳು ಎಂಬುದು ಸ್ಪಷ್ಟವಾಗುತ್ತದೆ. ವಿಶೇಷವಾಗಿ, ತಮ್ಮ ಕುಟುಂಬದ ಪರಿಧಿಯಲ್ಲಿಯೇ ಅಧಿಕಾರ ಇರಬೇಕೆಂಬ ಇರಾದೆ. ಇದಕ್ಕೆ ಅಂತ್ಯ ಹಾಡುವುದಾದರೂ ಯಾರು? ತಂದೆ, ಮಗ, ಹೆಂಡತಿ, ಸಹೋದರ... ಹೀಗೆ ಒಂದೇ ಕುಟುಂಬದಲ್ಲಿ ಗಿರಕಿ ಹೊಡೆಯುವ ರಾಜಕಾರಣದ ಈ ಕೆಟ್ಟ ಪದ್ಧತಿ ಪಕ್ಷಾತೀತವಾಗಿ ನಡೆದುಬರುತ್ತಿದೆ. ಇದರಿಂದ ಸಾಮಾನ್ಯ ಕಾರ್ಯಕರ್ತರು ಅವಮಾನಕರ ಸ್ಥಿತಿ ಎದುರಿಸಬೇಕಾಗಿದೆ. ವೇದಿಕೆಯ ಮೇಲೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಲೋಕೋದ್ಧಾರದ ಮುತ್ತು ಸುರಿಸುವವರು ಅಧಿಕಾರದ ತುತ್ತನ್ನು ಮಾತ್ರ ತಾವೇ ನುಂಗಿಬಿಡುತ್ತಾರೆ.

ಚುನಾವಣೆ ಎದುರಿಸಲು ಭಾರಿ ಮೊತ್ತದ ಹಣ ಬೇಕಾಗುತ್ತದೆ ಎಂಬುದು ಇದರ ಹಿಂದಿನ ಉದ್ದೇಶ. ಬೀದಿಯಲ್ಲಿ ಬಾಯಿ ಬಡಿದುಕೊಂಡು ಕಚ್ಚಾಡುವ ಕಾರ್ಯಕರ್ತರ ಕೈಯಲ್ಲಿ ಅಷ್ಟೊಂದು ಹಣ ಎಲ್ಲಿರುತ್ತದೆ? ದೇಶ, ಧರ್ಮ, ಜಾತಿ ಎಂಬ ಅಮಲಿನಲ್ಲಿ ಅವರನ್ನು ಅಡ್ಡ ಕೆಡವಲಾಗಿರುತ್ತದೆ. ದಿನಬೆಳಗಾದರೆ ಪರಸ್ಪರ ಕೆಸರೆರಚಾಡಿಕೊಂಡು ನೈತಿಕತೆಯ ಗಡಿ ದಾಟಿ ಲಾಭಕೋರತನದಿಂದ ನಡೆದುಕೊಳ್ಳುತ್ತಿರುವ ಮಂದಿಯನ್ನು ಜನ ತೀಕ್ಷ್ಣ ದೃಷ್ಟಿಯಿಂದ ಗಮನಿಸಬೇಕಾಗಿದೆ. ವಿದೇಶಿಯರನ್ನು ತೊಲಗಿಸಲು ಬಹು ದೊಡ್ಡ ಸಂಗ್ರಾಮ ನಡೆಯಿತು. ಆದರೆ ಈಗ ಸ್ವದೇಶಿ ಸ್ವಾರ್ಥಿಗಳಿಂದ ಪಾರಾಗುವುದಾದರೂ ಹೇಗೆ?

ADVERTISEMENT

-ತಿರುಪತಿ ನಾಯಕ್, ಕಲಬುರಗಿ

****

ರೈತರ ನೋವು, ಯಾರಿಗೋ ಹೂವು

ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಗೆ ವಿವಿಧ ಬಗೆಯ ಹೂವುಗಳನ್ನು ತಂದಿದ್ದ ರೈತರು, ಬೆಲೆ ತೀವ್ರವಾಗಿ ಕುಸಿದದ್ದರಿಂದ ಆ ಹೂವುಗಳನ್ನು ರಸ್ತೆಗೆ ಚೆಲ್ಲಿ ನಿರಾಸೆಯಿಂದ ಮನೆಗೆ ತೆರಳಿದರು ಎಂದೂ, ಮಾರುಕಟ್ಟೆಗೆ ಬಂದಿದ್ದ ಜನ ಉಚಿತವಾಗಿ ಸಿಕ್ಕ ಹೂವನ್ನು ಚೀಲಕ್ಕೆ ತುಂಬಿಸಿಕೊಂಡರು ಎಂದೂ ವರದಿಯಾಗಿದೆ (ಪ್ರ.ವಾ., ಅ. 20). ಇಂತಹ ಅನ್ಯಾಯದ ಅನೇಕ ಸಂದರ್ಭಗಳನ್ನು ರೈತ ಅನುಭವಿಸಿದ್ದಾನೆ. ಈರುಳ್ಳಿ, ಟೊಮ್ಯಾಟೊ, ಬೀಟ್ರೂಟ್, ಆಲೂಗಡ್ಡೆಯಂತಹ ಹೆಚ್ಚುಕಾಲ ಸಂಗ್ರಹಿಸಿಡಲಾಗದ ಬೆಳೆಗಳನ್ನು ಬೆಳೆದು, ಸೂಕ್ತ ಬೆಲೆ ಸಿಗದೆ ರಸ್ತೆಗೆ ಸುರಿಯುವುದರ ಜೊತೆಗೆ ಕಣ್ಣೀರನ್ನೂ ಸುರಿಸಿದ್ದಾನೆ. ಬೆಳೆ ಬೆಳೆಯಲು ರೈತ ಕುಟುಂಬ ಎಷ್ಟು ಬೆವರು ಸುರಿಸಿರುತ್ತದೆ, ಎಷ್ಟು ಹಣ ಖರ್ಚು ಮಾಡಿರುತ್ತದೆ ಎಂಬ ಅರಿವು, ಉತ್ಪನ್ನವನ್ನು ಚೀಲಕ್ಕೆ ಉಚಿತವಾಗಿ ತುಂಬಿಸಿಕೊಳ್ಳುವ ಜನರಿಗೆ ಇರಬೇಕು.

ರೈತರ ಸಮಸ್ಯೆಗಳನ್ನು ಭಾಷಣಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಮಾರುಕಟ್ಟೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಇದುವರೆಗೆ ವಿಫಲವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನ ಸೌಜನ್ಯಕ್ಕಾದರೂ ಒಂದಿಷ್ಟು ಹಣವನ್ನು ಕೊಟ್ಟು ರೈತನ ಕೈ ಹಿಡಿಯಬಹುದಲ್ಲವೇ? ಮಾಡಿದ ಖರ್ಚಾದರೂ ಬಂದರೆ ರೈತನ ಕಣ್ಣೀರು ಒರೆಸಿದಂತೆ ಆಗುವುದಿಲ್ಲವೇ?

-ದಾಸೇಗೌಡ ಎಂ.ಆರ್., ಚಿತ್ರದುರ್ಗ

****

ಬ್ಯಾಂಕ್‌ ಖಾತೆ ಬ್ಲಾಕ್‌ ಮಾಡುವುದೇಕೆ?

ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಇತ್ತೀಚೆಗೆ ಹಣ ಪಡೆಯಲು ಚೆಕ್ ಕೊಟ್ಟೆ. ‘ಸರ್, ನಿಮ್ಮ ಖಾತೆ ಫ್ರೀಜ್ ಆಗಿದೆ’ ಎಂದ ಕ್ಯಾಷಿಯರ್ ಒಳಕ್ಕೆ ಕಳುಹಿಸಿದರು. ಅಲ್ಲಿದ್ದ ಮಹಿಳಾ ಅಧಿಕಾರಿ ಇ–ಕೆವೈಸಿ ಆಗಬೇಕು ಎಂದು ಒಂದು ಫಾರ್ಮ್ ಕೈಗಿತ್ತು ‘ಆಧಾರ್, ಪ್ಯಾನ್, ಫೋಟೊ ಎಲ್ಲ ತನ್ನಿ’ ಎಂದರು. ‘ನಾನು ಮಾಜಿ ಸಿಬ್ಬಂದಿ, ನನ್ನ ಮಾಹಿತಿ (ನೊ ಯುವರ್‌ ಕಸ್ಟಮರ್‌–ಕೆವೈಸಿ ಅಂದರೆ ಅದೇ ತಾನೆ) ನಿಮ್ಮಲ್ಲಿ ಇದೆಯಲ್ಲ’ ಎಂದು ಹೇಳಿದರೂ ಒಪ್ಪಲಿಲ್ಲ. ಆ ದಾಖಲೆಗಳನ್ನು ಕೊಟ್ಟು, ಫಾಲೊಅಪ್ ಫೋನ್ ಮಾಡಿದ ಕೆಲವು ದಿನಗಳ ನಂತರವೇ ಖಾತೆ ನಾರ್ಮಲ್ ಆಗಿದ್ದು. ಖಾಸಗಿ ಬ್ಯಾಂಕ್ ಒಂದರಲ್ಲಿ ಇನ್ನೂ ಕಷ್ಟವಾಯಿತು. ಎಡಗೈ ಹೆಬ್ಬೆಟ್ಟು, ಹಲವು ಫಾರ್ಮ್‌ಗಳಲ್ಲಿ ಸಹಿ ಹಾಕಿಕೊಡಬೇಕಾಯಿತು. ಪ್ರಕ್ರಿಯೆ ಅದೇ ದಿನವಂತೂ ಮುಗಿಯಲಿಲ್ಲ.

ಪ್ರಸ್ತುತ ಬ್ಯಾಂಕ್‌ಗಳು ಸಾಲ ಹೆಚ್ಚು ಕೊಟ್ಟು, ಠೇವಣಿ ಸಂಗ್ರಹದತ್ತ ಗಮನ ನೀಡಬೇಕೆಂದು ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಇ– ಕೆವೈಸಿಯನ್ನು ಕೂಡ ಅದರ ನಿರ್ದೇಶನದ ಅನುಸಾರವಾಗಿಯೇ ಮಾಡಲಾಗುತ್ತಿದೆ. ಕೆಲವು ಬ್ಯಾಂಕ್‌ಗಳು ಆಧಾರ್ ಅನುಷ್ಠಾನದಂತೆ ಇದನ್ನೂ ಕೆಟ್ಟದಾಗಿ ನಿರ್ವಹಿಸುತ್ತಿವೆ. ಖಾತೆಯನ್ನು ಬ್ಲಾಕ್ ಮಾಡುವುದು ಅನಗತ್ಯ, ಅಸಮರ್ಥನೀಯ. ಇದರಿಂದ ಗ್ರಾಹಕನಿಗೆ ತೊಂದರೆಯಾಗುತ್ತಿದೆ. ಬ್ಯಾಂಕಿಂಗ್ ಓಂಬುಡ್ಸ್‌ಮನ್‌ ದೂರುಗಳಿಗಾಗಿ ಕಾಯದೆ ಬ್ಯಾಂಕ್‌ಗಳಿಗೆ ಸೂಕ್ತ ಮಾರ್ಗದರ್ಶನ, ನಿರ್ದೇಶನ ನೀಡಬೇಕು.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

****

ನಗರದಲ್ಲಿ ನಡೆಯಲಿ ‘ಗೆಂಬಾ ನಡಿಗೆ’

ದಿನವೊಂದಕ್ಕೆ ಬರೀ 10 ಸೆಂ.ಮೀ. ಒಳಗಿನ ಮಳೆಯ ಕಾರಣಕ್ಕೇ ಬೆಂಗಳೂರು ನಗರದಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತಿರುವುದು ಶೋಚನೀಯ. ಎಂದಿನಂತೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವುದು, ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡುವಂತಹ ಪ್ರಹಸನ ನಡೆಯುತ್ತಿದೆ. ಸಮಸ್ಯೆಗಳ ವಸ್ತುಸ್ಥಿತಿ ಅರಿಯಬೇಕಾದರೆ ಮಳೆಗಾಲಕ್ಕೆ ಮುಂಚಿತವಾಗಿಯೇ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಲ್ನಡಿಗೆಯಲ್ಲಿ ಓಡಾಡಬೇಕು. ಜಪಾನಿ ಭಾಷೆಯಲ್ಲಿ ಗೆಂಬುಟ್ಸು ಎಂದರೆ ‘ನೈಜ ಸಂಗತಿ’ ಎಂದು ಅರ್ಥ. ಈ ಪದದಿಂದ ಬಂದಿರುವ ‘ಗೆಂಬಾ ನಡಿಗೆ’ ಎಂಬುದು ಕಾರ್ಖಾನೆಗಳ ಮುಖ್ಯಸ್ಥರು ಎಲ್ಲಾ ವಿಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಓಡಾಡಿ ಸಮಸ್ಯೆಗಳನ್ನು ಖುದ್ದು ತಿಳಿಯುವ ಬಹು ಉಪಯುಕ್ತ ಪದ್ಧತಿ. ಈ ಪದ್ಧತಿಯನ್ನು ನಮ್ಮ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಾರಕ್ಕೊಮ್ಮೆ ಅಥವಾ ತಿಂಗಳಲ್ಲಿ ಎರಡು ದಿನ ಅಳವಡಿಸಿಕೊಳ್ಳಬೇಕು. ಆಗ ಜನ ಹೇಗೆ ಜೀವವನ್ನು ಕೈಯಲ್ಲಿ ಹಿಡಿದು ರಸ್ತೆ ದಾಟಲು ಕಷ್ಟಪಡುತ್ತಾರೆ, ಪಾದಚಾರಿ ಅಂಡರ್‌ಪಾಸ್‌ಗಳು ಎಷ್ಟು ದುರ್ನಾತ ಬೀರುತ್ತಿವೆ, ಯಾವ ರಸ್ತೆಬದಿಯಲ್ಲಿ ಕಸದ ರಾಶಿ ಇದೆ, ಯಾವ್ಯಾವ ಚರಂಡಿಗಳಲ್ಲಿ ನೀರು ಹರಿಯಲು ಸಾಧ್ಯವಾಗದಷ್ಟು ಕಸಕಡ್ಡಿ ತುಂಬಿಹೋಗಿದೆ, ಎಷ್ಟು ಕಂಬಗಳಲ್ಲಿ ಬೀದಿದೀಪಗಳು ಕಾಣೆಯಾಗಿವೆ ಎಂಬಂತಹ ಎಲ್ಲ ಸಮಸ್ಯೆಗಳನ್ನು ಖುದ್ದು ಅರಿಯಬಹುದು. ಈ ಸಮಸ್ಯೆಗಳನ್ನು ತಕ್ಕಮಟ್ಟಿಗಾದರೂ ಪರಿಹರಿಸಿದರೆ, ಮಳೆಯಿಂದ ಉಂಟಾಗುವ ಹಾನಿಯ ತೀವ್ರತೆಯನ್ನು ಖಂಡಿತ ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು.⇒ಟಿ.ಜಯರಾಂ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.