ಪರೀಕ್ಷೆಯಿಂದ ನಷ್ಟ: ಹಣದ ಮೌಲ್ಯ ಅರಿವಾಗಲಿ
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದಿದ್ದ ಪೂರ್ವಭಾವಿ ಪರೀಕ್ಷೆ ರದ್ದಾಗಿದ್ದರಿಂದ, ಈ ಪರೀಕ್ಷೆಗೆ ಖರ್ಚಾಗಿದ್ದ ₹ 13.40 ಕೋಟಿ ನಷ್ಟದ ಬಾಬ್ತಿಗೆ ಕಾರಣರಾದವರ ಮೇಲೆ ಇನ್ನೂ ಕ್ರಮ ಜರುಗಿಸಿಲ್ಲ ಎಂಬ ವರದಿಯನ್ನು (ಪ್ರ.ವಾ., ಅ. 21) ಓದಿ ದಿಗ್ಭ್ರಮೆಯಾಯಿತು. ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವವರಿಗೆ ಹಣದ ಮೌಲ್ಯ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ತಪ್ಪು ಮಾಡಿದವರ ವಿರುದ್ಧ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಂಡು, ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.
-ಶಿವಪ್ರಸಾದ್, ಗುಂಡ್ಲುಪೇಟೆ
****
ಬೆಂಗಳೂರಿನ ದಾಹ ತೀರಿಸಲು...
ರಾಜ್ಯ ರಾಜಧಾನಿ ಬೆಂಗಳೂರು ಮಳೆನೀರಿನ ಕಾರಣಕ್ಕೆ ಸುದ್ದಿಯಾಗುತ್ತಿರುವುದು ವಿಷಾದಕರ. ನಗರದಲ್ಲಿ ಹಿಂದೆ ಇದ್ದ ನೂರಾರು ಕೆರೆಗಳನ್ನು ನುಂಗಿ ನೀರು ಕುಡಿದಿರುವುದರ ಪರಿಣಾಮವನ್ನು ಇಂದು ಬೆಂಗಳೂರಿನ ನಿವಾಸಿಗಳು ಅನುಭವಿಸುವಂತಾಗಿದೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಬಂದರೂ ಇದೇ ಹಣೆಬರಹವೇ ವಿನಾ ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ.
ಬೇಸಿಗೆ ಬಂತೆಂದರೆ ನೀರಿಗೆ ಹಾಹಾಕಾರ, ಮಳೆಗಾಲ ಬಂತೆಂದರೆ ಜಲಾವೃತ ಎಂಬಂತಾಗಿದೆ ಬೆಂಗಳೂರಿನ ಪರಿಸ್ಥಿತಿ. ಎರಡೂ ಬಗೆಯ ಈ ಸ್ಥಿತಿಗಳನ್ನು ಸಮರ್ಪಕವಾಗಿ ನಿಭಾಯಿಸಲು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ. ಕಾಲಮಿತಿಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಮಳೆನೀರು ಸಂಗ್ರಹವು ವ್ಯವಸ್ಥಿತವಾಗಿ ನಡೆದರೆ ನಗರದ ನೀರಿನ ದಾಹವನ್ನು ತೀರಿಸಬಹುದು. ರಾಜಕಾಲುವೆ, ಚರಂಡಿಗಳನ್ನು ಸುಸ್ಥಿತಿಯಲ್ಲಿ ಇರಿಸುವುದೂ ಸೇರಿದಂತೆ ಮಳೆಗಾಲವನ್ನು ಎದುರಿಸಲು ಮೊದಲೇ ಸರಿಯಾದ ಸಿದ್ಧತೆ ಮಾಡಿಕೊಂಡರೆ ಮಳೆನೀರು ವಸತಿ ಪ್ರದೇಶಗಳಿಗೆ ನುಗ್ಗುವುದನ್ನು ತಪ್ಪಿಸಬಹುದು.
-ಮುರುಗೇಶ ಡಿ., ದಾವಣಗೆರೆ
****
ಹಾಸನಾಂಬೆ ದರ್ಶನ: ಸೂಕ್ತ ವ್ಯವಸ್ಥೆ ಅಗತ್ಯ
ಇದೇ 25ರಿಂದ ಹಾಸನದ ಹಾಸನಾಂಬೆ ದೇವಾಲಯ ತೆರೆಯಲಿದೆ. ಹಾಸನಾಂಬೆಯ ದರ್ಶನ ಪಡೆಯಲು ಜನ ಮುಗಿಬೀಳುತ್ತಾರೆ. ಈಗ ಎಲ್ಲರ ಬಳಿಯೂ ಕಾರು, ಬೈಕುಗಳಿರುವುದರಿಂದ ದರ್ಶನ ಬಯಸಿ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಹೋದ ವರ್ಷ ಹಾಸನಾಂಬೆಯ ದರ್ಶನಕ್ಕೆ ಭಾರಿ ಜನ ಸೇರಿದ್ದರಿಂದ, ದರ್ಶನ ತುಂಬಾ ವಿಳಂಬವಾಗಿ ಜನ ತೊಂದರೆಪಟ್ಟಿದ್ದು ವರದಿಯಾಗಿತ್ತು. ಜಿಲ್ಲಾಡಳಿತವು ಇದೀಗ ಹಾಸನಾಂಬೆಯ ದರ್ಶನದ ಬಗ್ಗೆ ಮೈಸೂರು ಆಕಾಶವಾಣಿಯಲ್ಲಿ ಜಾಹೀರಾತು ನೀಡಿದೆ. ಆದರೆ ಇಂತಹ ಪ್ರಚಾರ ನೀಡಿ ಜನರನ್ನು ಸೆಳೆದರಷ್ಟೇ ಸಾಲದು. ಅಲ್ಲಿಗೆ ಬರುವವರಿಗೆ ಸೂಕ್ತ ಮೂಲ ಸೌಲಭ್ಯಗಳ ವ್ಯವಸ್ಥೆಯನ್ನೂ ಕಲ್ಪಿಸಬೇಕು.
ಸಾವಿರಾರು ಮಂದಿ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯುತ್ತಿದ್ದರೂ ಪೂಜೆಯ ಕಾರಣಕ್ಕೆ ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚದೆ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಿ. ಕುಂದುಕೊರತೆಗಳ ಬಗ್ಗೆ ಭಕ್ತರಿಂದ ಸಲಹೆ ಪಡೆದು, ಅದರ ಅನುಸಾರ ಕ್ರಮ ಜರುಗಿಸಲಿ. ದರ್ಶನ ಬಯಸಿ ಬರುವ ವಿಐಪಿಗಳಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳ ಬಗ್ಗೆ ಗಮನಹರಿಸಲಿ.
-ಮುಳ್ಳೂರು ಪ್ರಕಾಶ್, ಮೈಸೂರು
****
ಮಳೆಹಾನಿ: ನಡೆಯಲಿ ತುರ್ತು ಸಮೀಕ್ಷೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಕೃಷಿ ಬೆಳೆಗಳು ಕಟಾವಿನ ಹಂತದಲ್ಲಿವೆ. ಈಗ ಹಿಂಗಾರು ಮಳೆಯ ಪರಿಣಾಮವಾಗಿ ಕೃಷಿ ಬೆಳೆಗಳು ಹೊಲಗಳಲ್ಲಿಯೇ ಉಳಿಯುವಂತಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಇನ್ನು ಕೆಲವು ಕಡೆ ಮನೆಗಳು ಕುಸಿದು ಅಪಾರ ಹಾನಿ ಉಂಟಾಗಿದೆ. ಇಂತಹ ಬೆಳವಣಿಗೆಗಳಿಂದ ರಾಜ್ಯದ ಲಕ್ಷಾಂತರ ರೈತರು ಸಂಕಷ್ಟದಲ್ಲಿದ್ದಾರೆ. ಹಿಂದಿನ ಬಾರಿಯ ಬರ ಪರಿಹಾರ ಸಹ ಸರಿಯಾಗಿ ರೈತರ ಕೈಸೇರಿಲ್ಲ. ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ತುರ್ತು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರವನ್ನು ಶೀಘ್ರವೇ ಒದಗಿಸಿಕೊಡುವ ಮೂಲಕ, ಸರ್ಕಾರವು ರೈತರ ನೆರವಿಗೆ ಧಾವಿಸಬೇಕು.
-ನಬಿ ಆರ್.ಬಿ. ದೋಟಿಹಾಳ, ಕುಷ್ಟಗಿ
****
ಅಂಕಿಅಂಶವಷ್ಟೇ ಸಾಲದು, ಪರಿಹಾರವೂ ಬೇಕು
ದೇಶದ ಗ್ರಾಮೀಣ ಭಾಗದಲ್ಲಿ ಐದು ವರ್ಷಗಳಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ಕಡಿಮೆ ಆಗಿರುವುದು, ಕೃಷಿ ಮತ್ತು ಕೃಷಿಯೇತರ ಕುಟುಂಬಗಳ ತಿಂಗಳ ಖರ್ಚಿನಲ್ಲಿ ಏರಿಕೆ ಆಗಿರುವುದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ (ನಬಾರ್ಡ್) ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ (ಪ್ರ.ವಾ., ಸಂಖ್ಯೆ–ಸುದ್ದಿ, ಅ. 21). ಕೃಷಿ ಕುಟುಂಬಗಳ ಆದಾಯವು ಕೃಷಿಯೇತರ ಕಸುಬುಗಳನ್ನು ಆಧರಿಸಿದ ಕುಟುಂಬಗಳ ಆದಾಯಕ್ಕಿಂತ ಹೆಚ್ಚಿಗೆ ಇರುವುದು ಗಮನಿಸಬೇಕಾದಂತಹ ವಿಚಾರ. ಆದರೆ ಈ ಸಮೀಕ್ಷೆಯು ಅಂಕಿ ಅಂಶಗಳನ್ನು ಮಾತ್ರ ಒಳಗೊಂಡಿದೆ. ಅಂಕಿಅಂಶಗಳನ್ನು ವಿಶ್ಲೇಷಿಸಿ, ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಸೂಕ್ತ ಪರಿಹಾರವನ್ನು ಸೂಚಿಸಿದಾಗ ಆ ವರದಿ ಪರಿಪೂರ್ಣವಾಗುತ್ತದೆ.
ಬರೀ ಅಂಕಿಅಂಶಗಳು ವಾಸ್ತವ ಅಂಶಗಳನ್ನು ಹೊರಗೆಡಹುವುದಿಲ್ಲ. ಸರಾಸರಿ ಅಂಕಿಅಂಶಗಳನ್ನು ನಂಬಿಕೊಂಡು ನದಿ ದಾಟಲು ಹೋಗಿ ಮುಳುಗಿದವನ ಕಥೆ ನೆನಪಾಗುತ್ತದೆ. ನದಿಯಲ್ಲಿ ನೀರಿನ ಆಳ ಒಂದು ಅಡಿಯಿಂದ 10 ಅಡಿವರೆಗೆ ಇದೆ ಅಂದರೆ, ಸರಾಸರಿ ಐದು ಅಡಿ ಮಾತ್ರ ಎಂದು ತಿಳಿದು, ನದಿ ದಾಟಲು ಹೋಗಿ, 10 ಅಡಿ ನೀರಿನಲ್ಲಿ ಮುಳುಗಿದವನಂತೆ ಅಂಕಿಅಂಶಗಳು ಯಾರನ್ನಾದರೂ ಮೂರ್ಖರನ್ನಾಗಿಸಬಲ್ಲವು. ಆದ್ದರಿಂದ ಸಮೀಕ್ಷಾ ವರದಿಯ ಆಳ– ಅಗಲಕ್ಕೆ ಹೋಗಿ ವಿಶ್ಲೇಷಣೆ ನಡೆಸಬೇಕಾದ ಅಗತ್ಯವಿರುತ್ತದೆ. ಆಗ ಮಾತ್ರ ಸಮೀಕ್ಷೆಯ ಉದ್ದೇಶ ಸಫಲವಾಗುತ್ತದೆ.
-ಟಿ.ವಿ.ಬಿ. ರಾಜನ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.