ADVERTISEMENT

ವಾಚಕರ ವಾಣಿ | ಕುಸಿದುಬಿದ್ದ ಮಹತ್ವಾಕಾಂಕ್ಷೆಯ ಲೆಕ್ಕ ಇಡುವಿರಾ?!

ವಾಚಕರ ವಾಣಿ
Published 22 ಅಕ್ಟೋಬರ್ 2024, 23:54 IST
Last Updated 22 ಅಕ್ಟೋಬರ್ 2024, 23:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕುಸಿದುಬಿದ್ದ ಮಹತ್ವಾಕಾಂಕ್ಷೆಯ ಲೆಕ್ಕ ಇಡುವಿರಾ?!

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದಿದ್ದ ಪೂರ್ವಭಾವಿ ಪರೀಕ್ಷೆ ರದ್ದಾಗಿದ್ದರಿಂದ, ಈ ಪರೀಕ್ಷೆಗೆ ಖರ್ಚಾಗಿದ್ದ ₹ 13.40 ಕೋಟಿ ನಷ್ಟವಾದಂತಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಅ. 21). ಹೀಗೆ, ಪರೀಕ್ಷೆಗೆ ಖರ್ಚಾದ ಹಣವನ್ನೇನೋ ಸುಲಭವಾಗಿ ಲೆಕ್ಕ ಹಾಕಿಬಿಡಬಹುದು. ಅದನ್ನು ದಂಡದ ರೂಪದಲ್ಲೋ ಶುಲ್ಕದ ರೂಪದಲ್ಲೋ ಹೇಗಾದರೂ ಭರಿಸಬಹುದು. ಆದರೆ ಪರೀಕ್ಷೆ ರದ್ದಾಗಿದ್ದರಿಂದ, ಹುತ್ತಗಟ್ಟಿಗೊಂಡು ತಯಾರಿ ನಡೆಸಿದ್ದ ಆಕಾಂಕ್ಷಿಗಳ ಮಹತ್ವಾಕಾಂಕ್ಷೆ ಕುಸಿದುಬಿತ್ತಲ್ಲ, ಅದರ ನಷ್ಟವನ್ನು ಲೆಕ್ಕ ಹಾಕುವುದು ಹೇಗೆ?

ADVERTISEMENT

-ಜೆ.ಬಿ.ಮಂಜುನಾಥ, ಪಾಂಡವಪುರ

****

ಪ್ರಜಾಸತ್ತೆಗೆ ಎಸಗುವ ಪ್ರಮಾದ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಹಟಕ್ಕೆ ಬಿದ್ದಿರುವ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್‌, ವಿಧಾನಪರಿಷತ್ತಿನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್ತು ಹಾಗೂ ರಾಜ್ಯಸಭೆಯು ಸರ್ಕಾರಗಳಿಗೆ ಸಲಹೆ, ಮಾರ್ಗದರ್ಶನಗಳನ್ನು ನೀಡುವ ಪ್ರಬುದ್ಧರ ಮನೆಗಳೆಂದು ಎಲ್ಲರೂ ತಿಳಿದಿದ್ದಾರೆ. ತಮ್ಮನ್ನು ಆರಿಸಿದವರು ಚುನಾಯಿತ ಸದಸ್ಯರು ಎನ್ನುವುದನ್ನು ಮರೆತು, ಅವುಗಳ ಸದಸ್ಯರು ರಾಜಕೀಯ ಕಾರಣಗಳಿಗೆ ಅವಧಿಯ ನಡುವೆಯೇ ತಮ್ಮ ಸ್ಥಾನ ತ್ಯಜಿಸುವುದು ಪ್ರಜಾಸತ್ತೆಗೆ ಎಸಗುವ ಪ್ರಮಾದವಲ್ಲವೇ? ‘ಕೊಟ್ಟ ಕುದುರೆಯನ್ನೇರದೆ’ ಇನ್ನೊಂದು ದೊಡ್ಡ ‘ಜವಾಬ್ದಾರಿ’ಯತ್ತ ಹೊರಡುವುದು ಸರಿಯೇ?

-ಬಿಂಡಿಗನವಿಲೆ ಭಗವಾನ್, ಬೆಂಗಳೂರು

****

ತುಷ್ಟೀಕರಣದಿಂದ ಸಮಾಜಘಾತುಕರಿಗೆ ಕುಮ್ಮಕ್ಕು

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ವಾಪಸ್‌ ಪಡೆಯುವಂತೆ ರೋಷನ್ ಬೇಗ್ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಮಾಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಅ. 22). ಇತ್ತೀಚೆಗಷ್ಟೆ ಕೆಲ ಮುಖಂಡರ ಆಣತಿಯಂತೆ, ಹುಬ್ಬಳ್ಳಿ ಹಿಂಸಾಚಾರ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಹೀಗೆ ಎಲ್ಲೆಲ್ಲಿ ಗಲಾಟೆ, ದೌರ್ಜನ್ಯ, ಹಿಂಸಾಚಾರ ನಡೆದಿರುತ್ತವೆಯೋ ಅವುಗಳಿಗೆ ಕಾರಣರಾದ ಆರೋಪ ಎದುರಿಸುತ್ತಿರುವವರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಾಪಸ್ ಪಡೆಯುತ್ತಾ ಹೋದರೆ ಇದಕ್ಕೆ ಕೊನೆಯೆಂಬುದೇ ಇರುವುದಿಲ್ಲ. ಇವೇನು ಸಣ್ಣಪುಟ್ಟ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲ. ಇಂತಹ ಗಂಭೀರ ಪ್ರಕರಣಗಳನ್ನು ವಾಪಸ್ ಪಡೆದರೆ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟಂತೆ ಆಗುವುದಿಲ್ಲವೇ?

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಕೃತ್ಯದ ಆರೋಪಿಯನ್ನು ಸಹ ಬಿಡುಗಡೆ ಮಾಡಬೇಕೆಂದು ಮುಂದೊಂದು ದಿನ ಒತ್ತಡ ಬರಬಹುದು. ಈ ರೀತಿಯ ತುಷ್ಟೀಕರಣ ಕಾನೂನುಬಾಹಿರ. ಯಾವುದೇ ಪ್ರಕರಣ ಒಮ್ಮೆ ದಾಖಲಾದ ನಂತರ ಅದು ಕೋರ್ಟ್‌ನಲ್ಲೇ ಇತ್ಯರ್ಥವಾಗಬೇಕು. ಸುಖಾಸುಮ್ಮನೆ ಕೆಲವು ಪ್ರಭಾವಿ ವ್ಯಕ್ತಿಗಳ ಶಿಫಾರಸಿನಂತೆ ಅದನ್ನು ವಾಪಸ್‌ ತೆಗೆದುಕೊಳ್ಳಬಾರದು.

-ಎಚ್.ವಿ.ಶ್ರೀಧರ್, ಬೆಂಗಳೂರು

****

ಭಾಷಾ ಸಂವರ್ಧನೆ: ಚಿತ್ಪಾವನಿಯನ್ನೂ ಪರಿಗಣಿಸಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಹಲವು ‘ಕಿರು’ ಭಾಷೆಗಳ ಸಂವರ್ಧನೆಗೆ ಯೋಜನೆ ಪ್ರಕಟಿಸಿರುವುದು ಕ್ರಾಂತಿಕಾರಕ ಕ್ರಮ. ಕರ್ನಾಟಕದಲ್ಲಿ ಇರುವ ಎಲ್ಲ ಭಾಷೆಗಳ ಹೊಣೆಯೂ ತನ್ನದು ಎಂಬ ನಿಲುವು ತಳೆದ ಪ್ರಾಧಿಕಾರಕ್ಕೆ ಅಭಿನಂದನೆ. ರಾಜ್ಯದಲ್ಲಿ ಇರುವ ಒಂದು ವಿಶಿಷ್ಟ ಆಡುಮಾತು, ಚಿತ್ಪಾವನ ಬ್ರಾಹ್ಮಣರು ಮಾತನಾಡುವ ಚಿತ್ಪಾವನಿ ಭಾಷೆ. ಇದು ಜನವರ್ಗದ ಮೂಲ ಭಾಷೆ ಹಾಗೂ ಮಹಾರಾಷ್ಟ್ರೀಯ ಪ್ರಾಕೃತದ ಒಂದು ರೂಪ. ಬಹುಶಃ ಸುಮಾರು 10ನೇ ಶತಮಾನದಲ್ಲಿ ಕವಲಾದ ಈ ಭಾಷೆಯು ಮಹಾರಾಷ್ಟ್ರದ ಪ್ರಾಚೀನ ಕಾವ್ಯಗಳ ಭಾಷೆಯನ್ನು ಹೋಲುತ್ತದೆ.

ಕರ್ನಾಟಕ ಕರಾವಳಿಗೆ ಸುಮಾರು 1,600ರಲ್ಲಿ ವಲಸೆ ಬಂದ ಚಿತ್ಪಾವನರು ಇಂದಿಗೂ ಆಡುವ ವಿಶಿಷ್ಟ ಭಾಷೆ ಇದಾಗಿದೆ. ಮಹಾರಾಷ್ಟ್ರದ ಮೂಲಸ್ಥಾನವಾದ ರತ್ನಾಗಿರಿ, ಚಿಪಳೂಣದಲ್ಲಿ ಈ ಭಾಷೆ ಲುಪ್ತವಾಗಿ ಹೋಗಿದ್ದು, ಅಲ್ಲಿ ಚಿತ್ಪಾವನರೂ ಆಧುನಿಕ ಮರಾಠಿ ಭಾಷೆಯನ್ನು ಬಳಸುತ್ತಾರೆ! ಗೋವಾದಲ್ಲಿ ಇದು ಸ್ವಲ್ಪಮಟ್ಟಿಗೆ ಉಳಿದುಕೊಂಡಿದೆ. ದಕ್ಷಿಣ ಕನ್ನಡದಲ್ಲಿ ಹಾಲಾಡಿಯಿಂದ ಅರಸಿನಮಕ್ಕಿವರೆಗೆ ಜೀವಂತವಾಗಿ ಉಳಿದ ಭಾಷೆಯಾಗಿದೆ. ಮಹಾರಾಷ್ಟ್ರದ ಮರಾಠಿ ಭಾಷೆಯ ಹಳೆಯ ರೂಪ ಈಗ ಕರ್ನಾಟಕದಲ್ಲಿ ಉಳಿದಿದೆ. ಬೇರೆ ಭಾಷೆಗಳ ಮಧ್ಯದಲ್ಲಿ ಉಳಿದುಕೊಂಡ ಒಂದು ಪ್ರತ್ಯೇಕ ಭಾಷೆಯಾಗಿರುವ ಇದು ಒಂದು ವಿಶಿಷ್ಟ ಭಾಷಾ ವಿದ್ಯಮಾನ, ಸಂಶೋಧನಾ ನಿಧಿ. ಥಾಮಸ್ ಗ್ರಿಯರ್ಸನ್‌ನ ಮಹಾಭಾಷಾ ಸಮೀಕ್ಷೆಗಳಲ್ಲೂ ಇದು ದಾಖಲಾಗಿದೆ. ಕರ್ನಾಟಕ ಮತ್ತು ವಿಶ್ವದ ಬೇರೆಡೆ ವಲಸೆ ಹೋದ ದಕ್ಷಿಣ ಕನ್ನಡದ ಚಿತ್ಪಾವನರು ಸೇರಿದಂತೆ ಕೆಲವೇ ಸಾವಿರ ಜನ ಇದನ್ನು ಬಳಕೆ ಮಾಡುತ್ತಿದ್ದಾರೆ. ರಕ್ಷಿಸಲ್ಪಡಬೇಕಾದ ಈ ಭಾಷಾ ಸಂಪದದ ಬಗ್ಗೆ ಪ್ರಾಧಿಕಾರವು ಗಮನಹರಿಸಬೇಕು.

-ಎಂ.ಪ್ರಭಾಕರ ಜೋಶಿ, ಮಂಗಳೂರು

****

ಜಾತಿ ಜನಗಣತಿಯಿಂದ ಆಗುವ ದುಷ್ಪರಿಣಾಮ ವಿವರಿಸಲಿ

ಜಾತ್ಯತೀತವಾಗಿರುವ ದೇಶದಲ್ಲಿ ಜಾತಿ ಜನಗಣತಿ ನಡೆಸಬೇಕಾದ ಅಗತ್ಯ ಇದೆಯೇ ಎಂಬ ವಿಚಾರವನ್ನು ಮುನ್ನೆಲೆಗೆ ತಂದಿರುವ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಒಂದು ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದ್ದಾರೆ. ರಾಜ್ಯದಲ್ಲೇ ಆಗಲಿ, ದೇಶದಲ್ಲೇ ಆಗಲಿ ನಾಗರಿಕರನ್ನು, ನಾಯಕರನ್ನು, ಅಷ್ಟೇ ಏಕೆ ಮಠಾಧೀಶರನ್ನೂ ಗುರುತಿಸುವುದು ಅವರವರ ಜಾತಿಯ ಮುಖಾಂತರ. ಹಾಗಿರುವಾಗ ಜಾತಿ ಜನಗಣತಿ ನಡೆಸುವುದು ಬೇಡವೇ?

ಸ್ವಾಮೀಜಿ ಮೊದಲ ಬಾರಿಗೆ ಜಾತ್ಯತೀತತೆ ಬಗ್ಗೆ ಮಾತನಾಡಿರುವುದು ಜನರನ್ನು ಚಕಿತಗೊಳಿಸಿದೆ. ಬರೀ ಹೇಳಿಕೆಗಿಂತ ಜಾತಿ ಜನಗಣತಿಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿವರಿಸಿ ಸಮಾಜದ ಗಮನ ಸೆಳೆಯುತ್ತಾರೆಂದು ಆಶಿಸೋಣವೇ?

-ಶಾಂತಕುಮಾರ್, ಸರ್ಜಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.