ಕನ್ನಡ ನೆಲದ ನೀರು ಕುಡಿದು...
ಬಿಜಾಪುರ– ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಈಚೆಗೆ ಬಾಗಲಕೋಟೆಯಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದೆ. ಗದಗ ಬಂದಾಗ ‘ವಾಟರ್-ಪಾನೀ...’ ಎಂದು ಜೋರಾಗಿ ಕೂಗುತ್ತ ನೀರು ಮಾರುವ ಯುವಕನೊಬ್ಬ ನಮ್ಮ ಬೋಗಿಗೆ ಬಂದ. ಅವನು ಕನ್ನಡಿಗನಾಗಿದ್ದ. ನಾನು ಅವನಿಗೆ ‘ವಾಟರ್-ಪಾನೀ’ ಎನ್ನುವ ಬದಲು ನೀರು ಎಂದು ಹೇಳಬಾರದಾ?’ ಎಂದೆ. ಅದಕ್ಕೆ ಅವನು ‘ನೀರು ಎಂದರೆ ಬೆಂಗಳೂರಿನವರಿಗೆ ಅರ್ಥ ವಾಗುವುದಿಲ್ಲ’ ಎಂದ. ಆಗ ನಾನು ‘ಹಾಗಾದರೆ ಇನ್ನು ಮುಂದೆ ನೀನು ವಾಟರ್-ಪಾನೀ-ನೀರೂ ಎಂದು ಹೇಳು’ ಎಂದೆ. ಅವನು ‘ಆಯಿತು’ ಎನ್ನುತ್ತಾ ಅಲ್ಲಿಂದ ಹೊರಟ. ಸ್ವಲ್ಪವಾದರೂ ಕನ್ನಡ ಉಳಿಸಿದೆನಲ್ಲ ಎಂದು ನಾನು ಮನದಲ್ಲೇ ಸಂತೋಷಪಟ್ಟೆ. ಮುಂದೆ ಹೋಗುತ್ತಾ ಅವನು ‘ವಾಟರ್-ಪಾನೀ...’ ಎಂದೇ ಕೂಗುತ್ತಾ ಹೋದ. ನನ್ನ ಮಾತು ಭೋರ್ಗಲ್ಲ ಮೇಲೆ ಮಳೆ ಸುರಿದಂತೆ ಆಯಿತು.
ಕನ್ನಡ ನೆಲದ ನೀರನ್ನು ಕುಡಿದು, ‘ನೀರು’ ಎಂದು ಹೇಳಿದರೆ ಹೊಟ್ಟೆಪಾಡು ಸಾಗದ ಬದುಕು ಕನ್ನಡದ ನೆಲದಲ್ಲೇ ಕನ್ನಡಿಗರಿಗೆ ಆಯಿತಲ್ಲ. ಇದಕ್ಕೆ ಏನು ಮಾಡುವುದು?
-ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ
****
ದೇಣಿಗೆ ಆರೋಪ: ವಿರೋಧ ಪಕ್ಷ ಮಾಡಿದ್ದೇನು?
‘ಸಂವಿಧಾನದೊಂದಿಗೆ ನೇರವಾಗಿ ಸಂಘರ್ಷಕ್ಕೆ ಇಳಿದಿರುವ ಆರ್‌ಎಸ್‌ಎಸ್‌ನ ಚಟುವಟಿಕೆಯಲ್ಲಿ ಭಾಗವಹಿಸಲು ಸರ್ಕಾರಿ ನೌಕರರಿಗೆ ಅವಕಾಶ ನೀಡಿರುವುದು ಸರಿಯೇ’ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ.ಚಂದ್ರಶೇಖರ್ ಅವರ ಪತ್ರಿಕಾ ಹೇಳಿಕೆಗೆ (ಪ್ರ.ವಾ., ಅ. 23) ಸಂಬಂಧಿಸಿದಂತೆ ಎರಡು ಸಂಗತಿಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಬೇಕು.
1. ದೇಣಿಗೆ ಮಾಹಿತಿ ಗೋಪ್ಯ. 2002ರಲ್ಲಿಯೇ ದೇಶದ ಪ್ರಮುಖ ಪತ್ರಿಕೆಗಳು ಈ ಸಂಘಟನೆಯ ಚಟುವಟಿಕೆಗಳಿಗೆ ದೇಣಿಗೆ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದ್ದವು ಎಂದು ಚಂದ್ರಶೇಖರ್ ಹೇಳಿದ್ದಾರೆ. ಸಂಘದ ಪ್ರಮುಖರೇನೋ ಉತ್ತರ ನೀಡಲಿಲ್ಲ. ಆನಂತರ ಪತ್ರಿಕೆಗಳು ಮಾಡಿದ್ದೇನು? ಈ ದೇಶದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಆಡಳಿತ ನಡೆಸಿದ್ದು ಹೌದು ತಾನೇ? ವಿದೇಶದಿಂದ ದೇಣಿಗೆ ಪಡೆಯುವಲ್ಲಿ ಕಾನೂನು ನಿಯಮಗಳನ್ನು ಆರ್‌ಎಸ್‌ಎಸ್ ಪರಿಪಾಲಿಸಿದೆಯೇ ಎನ್ನುವುದರ ಬಗ್ಗೆ ಅಂದಿನ ಸರ್ಕಾರ ಏಕೆ ತನಿಖೆ ಮಾಡಲಿಲ್ಲ? ಅಥವಾ ತನಿಖೆ ನಡೆಸಿ ಉಲ್ಲಂಘನೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿತ್ತೇ?
2. ಕೋವಿಡ್ ವೇಳೆ ಸಂಘಕ್ಕೆ 8.33 ಲಕ್ಷ ಡಾಲರ್ ಸಲ್ಲಿಕೆಯಾಗಿದೆ ಎಂಬ ಅಂಕಿ- ಅಂಶ ಕುರಿತು. ಇಲ್ಲಿಯೂ ಪತ್ರಿಕೆಗಳು ಮತ್ತು ವಿರೋಧ ಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಮಾಡಿದ್ದೇನು? ಕೇಂದ್ರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದವೇ? ಏನು ಉತ್ತರ ಬಂತು? ಅಥವಾ ಸರ್ಕಾರ ಉತ್ತರಿಸಲು ನಿರಾಕರಿಸಿತೇ? ನಿರಾಕರಣೆಗೆ ಏನಾದರೂ ಕಾರಣಗಳನ್ನು ಸರ್ಕಾರ ಕೊಟ್ಟಿತೇ? ಪತ್ರಿಕೆಗಳು ಮತ್ತು ವಿರೋಧ ಪಕ್ಷಗಳು ಆಮೇಲೆ ಮಾಡಿದ್ದೇನು? ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲು ಸಾಧ್ಯವಿರಲಿಲ್ಲವೇ? ಈಗಲೂ ಸಾಧ್ಯವಿಲ್ಲವೇ? ಈ ಪ್ರಶ್ನೆಗಳಿಗೆ ಯಾರು ಉತ್ತರಿಸುವವರು?
-ಸಾಮಗ ದತ್ತಾತ್ರಿ, ಬೆಂಗಳೂರು
****
ನೇಮಕಾತಿ ನಡೆಯಲಿ, ತೊಂದರೆ ತಪ್ಪಲಿ
‘ರಾಜ್ಯದಲ್ಲಿ 48 ಲಕ್ಷ ಪಹಣಿಗಳು ಸತ್ತವರ ಹೆಸರಿನಲ್ಲೇ ಇವೆ’ ಎಂದು ಕಂದಾಯ ಸಚಿವರೇ ಹೇಳಿದ್ದಾರೆ (ಪ್ರ.ವಾ., ಅ. 23). ಯಾಕೆ ಹೀಗೆ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರ ತುಂಬ ಸರಳವಾಗಿ ದೊರೆಯುತ್ತದೆ. ಇಲಾಖೆಯ ಕಚೇರಿಗೆ ರೈತರು ಯಾವಾಗ ಹೋದರೂ ಅಧಿಕಾರಿಗಳು ಇನ್ನಿತರ ಯಾವುದೋ ಕೆಲಸಗಳಲ್ಲಿ ತೊಡಗಿರುತ್ತಾರೆ. ಹೀಗಾಗಿ, ಇಲಾಖೆಯಲ್ಲಿ ಅಗತ್ಯವಾದ ಸಿಬ್ಬಂದಿಯೇ ಇಲ್ಲದಂತಾಗಿ, ರೈತರ ಪೌತಿ ಖಾತೆ, ಹೊಲದ ದಾರಿ ತಕರಾರು, ಬೆಳೆ ನಾಶದ ಪರಿಹಾರ, ಹೊಲದ ಹಕ್ಕು ಬದಲಾವಣೆಯಂತಹ ನೂರಾರು ಸಮಸ್ಯೆಗಳು ಪರಿಹಾರ ಕಾಣದಾಗಿವೆ. ಸರ್ಕಾರ ಮೊದ
-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
****
ಜಾತಿ ಜನಗಣತಿಯಿಂದ ವಾಸ್ತವಾಂಶದ ಅರಿವು
‘ಜಾತ್ಯತೀತವಾಗಿರುವ ದೇಶದಲ್ಲಿ ಜಾತಿಗಣತಿ ಏಕೆ ಬೇಕು? ಅಷ್ಟೊಂದು ಹಣ ಖರ್ಚು ಮಾಡಿ ತಯಾರಿಸಲಾದ ಜಾತಿಗಣತಿ ವರದಿಯನ್ನು ಇಷ್ಟು ವರ್ಷ ಮುಚ್ಚಿಟ್ಟಿದ್ದು ಏಕೆ?’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿರುವುದು (ಪ್ರ.ವಾ., ಅ. 22) ಅವರ ದ್ವಂದ್ವ ನಿಲುವನ್ನು ವ್ಯಕ್ತಪಡಿಸುತ್ತದೆ. ಪುರೋಹಿತಶಾಹಿ ವ್ಯವಸ್ಥೆಯೇ ಪ್ರಮುಖ ಕಾರಣವಾಗಿ ಹುಟ್ಟಿಕೊಂಡಿರುವ ನಮ್ಮ ಶ್ರೇಣೀಕರಣ ಸಮಾಜದಲ್ಲಿ ಕೆಲವು ಜನರು ಅಥವಾ ಗುಂಪುಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರಲು ಜಾತಿಯೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ಯಾವ ಯಾವ ಜಾತಿಯವರು ಈ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಹಿಂದುಳಿದಿದ್ದಾರೆ ಎಂಬುದು ಜಾತಿ ಜನಗಣತಿ ಮಾಡಿದಾಗಲೇ ಸ್ಪಷ್ಟವಾಗಿ ತಿಳಿಯುವುದು. ಆ ವಾಸ್ತವಾಂಶ ತಿಳಿಯದಿದ್ದರೆ ಯಾರ್‍ಯಾರಿಗೆ ಎಷ್ಟೆಷ್ಟು ಶೇಕಡಾವಾರು ಮೀಸಲಾತಿ ಎಂದು ತೀರ್ಮಾನ ಮಾಡುವುದಾದರೂ ಹೇಗೆ? ಆ ಕಾರಣದಿಂದ ಜಾತಿ ಜನಗಣತಿ ಮಾಡುವ ಅನಿವಾರ್ಯ ಇದೆಯೇ ವಿನಾ ಜಾತಿಭೇದ ಅಥವಾ ತಾರತಮ್ಯದ ಉದ್ದೇಶದಿಂದ ಅಲ್ಲ. ಅದರಿಂದಾಗಿ ತಾರತಮ್ಯ ಉಂಟಾಗುವುದೂ ಇಲ್ಲ.
ನಮ್ಮಲ್ಲಿ ಜಾತಿ ಕಾರಣದಿಂದಾಗಿಯೇ ಕೆಲವರು ತುಂಬಾ ಹಿಂದುಳಿದಿದ್ದಾರೆ ಅಥವಾ ಹಿಂದೂಡಲ್ಪಟ್ಟಿದ್ದಾರೆ. ಉದಾಹರಣೆಗೆ, ಒಕ್ಕಲಿಗರಲ್ಲಿಯೇ ಕೆಲವು ಉಪಜಾತಿಗಳವರು ಇಂದಿಗೂ ಅದೇ ಜಾತಿಯ ಪ್ರಭಾವಿ ಉಪಜಾತಿಗಳವರ ಹಾಗೆ ಪ್ರಗತಿ ಸಾಧಿಸಲಾಗಿಲ್ಲ. ಇಂತಹ ಅಂಶಗಳನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
-ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು
****
ಕೆರೆಯಲ್ಲಿ ಮನೆ!
ಕೆರೆಯ ಒಳಗೊಂದು ಮನೆಯ ಮಾಡಿ
ನೀರಿಗೆ ಅಂಜಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯಾ,
ಬೆಂಗಳೂರಿನ ಕೆರೆಯಲಿ ಮನೆ ಕಟ್ಟಿ
ನೆಲಸಿದ ಬಳಿಕ, ಜಲಸಂಕಷ್ಟಗಳು ಬಂದಡೆ
ಸುಮ್ಮನೆ ‘ಬಿಡಿಎ’ಯನ್ನು ದೂರದೆ
ಜಲವಿಹಾರವನ್ನು ಆನಂದಿಸಬೇಕಯ್ಯ!
(ಅಕ್ಕನ ಕ್ಷಮೆ ಕೋರಿ)
-ರಾಜಶೇಖರ ಕುಕ್ಕುಂದಾ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.