ADVERTISEMENT

ವಾಚಕರ ವಾಣಿ | ಜಾತಿ ಮೇಲಾಟಕ್ಕೆ ಶಿಕ್ಷೆ: ಜೀವನಪಾಠವಾಗಲಿ

ವಾಚಕರ ವಾಣಿ
Published 26 ಅಕ್ಟೋಬರ್ 2024, 0:30 IST
Last Updated 26 ಅಕ್ಟೋಬರ್ 2024, 0:30 IST
<div class="paragraphs"><p>ಬಂಧನ</p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಜಾತಿ ಮೇಲಾಟಕ್ಕೆ ಶಿಕ್ಷೆ: ಜೀವನಪಾಠವಾಗಲಿ

ADVERTISEMENT

‘98 ಜನರಿಗೆ ಜೀವಾವಧಿ ಶಿಕ್ಷೆ’ ವಿಧಿಸಿರುವ ವರದಿ (ಪ್ರ.ವಾ., ಅ. 25) ಓದಿ ಮನಸ್ಸಿಗೆ ನೋವಾಯಿತು. ಒಂದು ದಶಕದ ಹಿಂದೆ ಗಂಗಾವತಿಯ ಚಿತ್ರಮಂದಿರವೊಂದರಲ್ಲಿ ಸಿನಿಮಾ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು ದುರದೃಷ್ಟಕರ. ದಲಿತರ ಓಣಿಗೆ ಸವರ್ಣೀಯರು ಬಂದು ಜಾತಿನಿಂದನೆ ಮಾಡಿ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದ ಈ ಪ್ರಕರಣ ನಿಜಕ್ಕೂ ಎಲ್ಲರಿಗೂ ಒಂದು ಜೀವನಪಾಠ ಆಗಬೇಕು. ನಮ್ಮವರು ಮೇಲು, ನಿಮ್ಮವರು ಕೀಳು ಎನ್ನುವ ಮನೋಭಾವ ಜನರಲ್ಲಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಾಗಿದ್ದ ನಮ್ಮ ನಾಡು ಕೋಮು, ಜಾತಿಯ ದಳ್ಳುರಿಯಿಂದ ನಲುಗಿದೆ. ಅಷ್ಟಾದರೂ ಜನರಿಗೆ ಯಾಕೆ ಇನ್ನೂ ಪರಿಜ್ಞಾನ ಇಲ್ಲ? 98 ಜನರ ಕುಟುಂಬಗಳ ಮುಂದಿನ ಪಾಡೇನು? ಜೈಲಿನ ಹೊರಗೆ ಅವರ ಕುಟುಂಬ ಸದಸ್ಯರು ರೋದಿಸುತ್ತಿದ್ದುದು ಇದಕ್ಕೆ ನಿದರ್ಶನದಂತಿತ್ತು.

ಕೋಪದ ಕೈಗೆ ಬುದ್ಧಿ ಕೊಟ್ಟಿದ್ದರ ಫಲವೋ ಯಾರದೋ ಕುತಂತ್ರದ ಕಾರಣವೋ ಇಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ. ಹಳ್ಳಿಗಳಲ್ಲಿ ಜನ ತುಂಬಾ ಸಾಮರಸ್ಯದಿಂದ ಇರುತ್ತಾರೆ. ಒಮ್ಮೊಮ್ಮೆ ಯಾರದೋ ಮಾತು ಕೇಳಿಕೊಂಡು ತಮ್ಮ ಅಮೂಲ್ಯ ಜೀವನವನ್ನೇ ನರಕವನ್ನಾಗಿ ಮಾಡಿಕೊಳ್ಳುತ್ತಾರೆ. ಇಂತಹ ಪ್ರಕರಣಗಳನ್ನು ಈಗಿನ ಪೀಳಿಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಒಂದು ಪಾಠವೆಂದು ಪರಿಗಣಿಸಬೇಕು.

-ರಾಜು ಬಿ. ಲಕ್ಕಂಪುರ, ಜಗಳೂರು

****

ಇದು ಚಿಲ್ಲರೆ ವಿಷಯವಲ್ಲ...

ಗ್ರಾಹಕರೊಬ್ಬರಿಗೆ 50 ಪೈಸೆ ಚಿಲ್ಲರೆ ನೀಡದ ಕಾರಣಕ್ಕೆ ₹ 15,000ದಷ್ಟು ಭಾರಿ ಮೊತ್ತದ ಪರಿಹಾರ ನೀಡುವಂತೆ ತಮಿಳುನಾಡಿನ ಕಾಂಚೀಪುರ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಅಂಚೆ ಇಲಾಖೆಗೆ ಆದೇಶಿಸಿರುವುದು (ಪ್ರ.ವಾ., ಅ. 24) ಸರಿಯಷ್ಟೆ. ಆದರೆ ಇದೊಂದು ಚಿಲ್ಲರೆ ವಿಷಯ ಎಂದು ಯಾವ ಇಲಾಖೆಯೂ ತಾತ್ಸಾರ ಮಾಡುವಂತಿಲ್ಲ ಎಂಬ ಸಂದೇಶ ಇದರ ಹಿಂದೆ ಇದೆ. ವಿಶೇಷವಾಗಿ ನಗರ ಸಾರಿಗೆ ಬಸ್ ನಿರ್ವಾಹಕರು ಮರೆಯದೆ ಚಿಲ್ಲರೆ ಕೊಡಲು ಈ ಪ್ರಕರಣ ದಾರಿದೀಪವಾಗುತ್ತದೆ. ಇಲ್ಲಿ ಅರ್ಜಿದಾರರ ನಾಗರಿಕ ಪ್ರಜ್ಞೆ ಅನುಕರಣೀಯ ಮತ್ತು ಪ್ರಶಂಸನೀಯ.

ನಾವು ನಿತ್ಯವೂ ಹಲವಾರು ರೀತಿಯ ಸೇವಾ ನ್ಯೂನತೆಗಳಿಂದ ಬಾಧೆಗೆ ಒಳಗಾಗುತ್ತಿರುತ್ತೇವೆ. ಬಹುಶಃ ಹೋರಾಟ ಮನೋಭಾವದ ಕೊರತೆಯ ಕಾರಣದಿಂದ ಬಹುತೇಕರು ಗ್ರಾಹಕರ ವೇದಿಕೆಯ ಬಾಗಿಲು ತಟ್ಟುವುದಿಲ್ಲ. ಇಂತಹ ಪ್ರಕರಣಗಳಿಂದ ನಮಗೆ ಗ್ರಾಹಕರ ವೇದಿಕೆಯ ಪ್ರಾಮುಖ್ಯದ ಅರಿವಾಗುತ್ತದೆ ಮತ್ತು ಸೇವೆಯಲ್ಲಿ ವ್ಯತ್ಯಯವಾದಾಗ ಸಕ್ಷಮ ವೇದಿಕೆಗಳಲ್ಲಿ ಪ್ರಶ್ನಿಸಲು ಇವು ಮಾದರಿಯಾಗಿ ನಿಲ್ಲುತ್ತವೆ.

-ವೆಂಕಟೇಶ್ ಮುದಗಲ್, ಕಲಬುರಗಿ

****

ವಂಶಾಡಳಿತ ರಾಜಕೀಯ: ಯಾರು ಹೊರತು?!

ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಿರುವುದಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ವಂಶಾಡಳಿತ ರಾಜಕೀಯದ ಆರೋಪ ಮಾಡಿ ತೀವ್ರ ವಾಗ್ದಾಳಿ ನಡೆಸಿರುವುದನ್ನು ಓದಿ (ಪ್ರ.ವಾ., ಅ. 25) ನಗಬೇಕೋ ಅಳಬೇಕೋ ತಿಳಿಯದಾಯಿತು. ಕಾರಣ, ಬಿಜೆಪಿಯು ಮುಂಬರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳಿಗೆ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಕ್ಷದ ಹಿರಿಯ ನಾಯಕರ ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳಿಗೇ ಆದ್ಯತೆ ನೀಡಲಾಗಿದೆ. ಅಲ್ಲದೆ ಕರ್ನಾಟಕದಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಟಿಕೆಟ್ ನೀಡಲಾಗಿದ್ದರೆ, ಇತ್ತ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಮಿತ್ರಪಕ್ಷ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದು ವಂಶಾಡಳಿತ ರಾಜಕೀಯದ ಗೆಲುವು ಮತ್ತು ಅರ್ಹತೆಯ ಪರಾಜಯ ಅಲ್ಲವೇ ಭಾಟಿಯಾ ಅವರೆ? ರಾಜಕಾರಣಿಗಳು ಇಷ್ಟೊಂದು ಪ್ರಮಾಣದ ಬೂಟಾಟಿಕೆಯನ್ನು ಯಾವ ಮಾರುಕಟ್ಟೆಯಿಂದ ಖರೀದಿಸುತ್ತಾರೋ ಗೊತ್ತಿಲ್ಲ! ಅಂದಹಾಗೆ ಕುಟುಂಬ ರಾಜಕಾರಣವು ಭಾರತದ ಪ್ರಜಾಪ್ರಭುತ್ವಕ್ಕೆ ಅಂಟಿದ ಒಂದು ಜಾಡ್ಯ ಎಂಬುದು ಸಾರ್ವಕಾಲಿಕ ಸತ್ಯ.

-ಇಸ್ಮಾಯಿಲ್ ಜೋಕಟ್ಟೆ, ಮಂಗಳೂರು

****

ಒತ್ತುವರಿ ತೆರವು: ಹೈದರಾಬಾದ್‌ ಮಾದರಿ

ಬೆಂಗಳೂರು ಮಳೆಯಿಂದ ತೊಯ್ದು, ಕೆಲವೆಡೆ ನಿವಾಸಿಗಳ ಜಲ ದಿಗ್ಬಂಧನ ಮುಂದುವರಿದಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ರಾಜಕಾಲುವೆಯ ಅಕ್ಕಪಕ್ಕ 50 ಅಡಿ ಅಂತರದಲ್ಲಿ ಕಟ್ಟಡ ನಿರ್ಮಾಣ ನಿಷೇಧ ಮಾಡಲಾಗುವುದು’ ಎಂದು ಹೇಳಿರುವುದು ಒಂದು ಒಳ್ಳೆಯ ನಿರ್ಧಾರ. ಇದನ್ನು ತಕ್ಷಣ ಅನುಷ್ಠಾನಗೊಳಿಸಿ ರಾಜಕಾಲುವೆಗಳನ್ನು ಉಳಿಸಿದರೆ, ಮುಂದಿನ ಮಳೆಗಾಲವನ್ನು ಬೆಂಗಳೂರಿಗರು ಧೈರ್ಯವಾಗಿ ಎದುರಿಸಬಹುದು. ಈ ಕಾನೂನು ಕಟ್ಟುನಿಟ್ಟಾಗಿ ರಾಜ್ಯದಾದ್ಯಂತ ಅನ್ವಯವಾಗುವಂತೆ ಜಾರಿ ಮಾಡಿ ಬದ್ಧತೆ ತೋರಬೇಕಾದ ಅನಿವಾರ್ಯ ಇದೆ. ಈ ದಿಸೆಯಲ್ಲಿ ಪಕ್ಕದ ತೆಲಂಗಾಣ ರಾಜ್ಯದ ಹೈದರಾಬಾದಿನ ಮೂಸಿ ನದಿಯ ಅಕ್ಕಪಕ್ಕ ಕಟ್ಟಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆಯಿಂದ ನಮ್ಮ ಸರ್ಕಾರ ಪ್ರೇರಣೆ ಪಡೆದುಕೊಳ್ಳಬಹುದು.

-ಶಾಂತಕುಮಾರ್, ಸರ್ಜಾಪುರ

****

ಕಾಂಗ್ರೆಸ್‌ ಲ್ಯಾಬ್‌ನಲ್ಲಿ ರಕ್ತಪರೀಕ್ಷೆ!

‘ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ’ ಎಂದಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌. ರಾಜಕೀಯದವರಲ್ಲಿ ಆಗಾಗ ಈ ರಕ್ತ ಬದಲಾಗುವುದುಂಟು ಅನ್ನಿ, ಆಯಾಯ ಪಕ್ಷಕ್ಕೆ ಆಗಾಗ ಅವರವರ ನಿಷ್ಠೆ
ಬದಲಾದಂತೆ! ಬಹುಶಃ ಕಾಂಗ್ರೆಸ್ ಲ್ಯಾಬ್‌ನಲ್ಲಿ ಯೋಗೇಶ್ವರ್‌ ಅವರ ರಕ್ತದ ಮಾದರಿ ಪರಿಶೀಲಿಸಿ
ನಂತರ ಪಕ್ಷಕ್ಕೆ ಬರಮಾಡಿಕೊಂಡಿರಬಹುದು!

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.