ADVERTISEMENT

ವಾಚಕರ ವಾಣಿ | ಭೂಕುಸಿತ: ಇಂಗುಗುಂಡಿಯ ಪಾತ್ರ?

ವಾಚಕರ ವಾಣಿ
Published 1 ಆಗಸ್ಟ್ 2024, 0:30 IST
Last Updated 1 ಆಗಸ್ಟ್ 2024, 0:30 IST
<div class="paragraphs"><p>ವಯನಾಡಿನಲ್ಲಿ ಭೂಕುಸಿತ</p></div>

ವಯನಾಡಿನಲ್ಲಿ ಭೂಕುಸಿತ

   

(ರಾಯಿಟರ್ಸ್ ಚಿತ್ರ)

ಅನ್ಯರ ಹಕ್ಕು ಕಸಿದರೆ...!

ADVERTISEMENT

ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ನಾವು ದುರುಪಯೋಗ
ಪಡಿಸಿಕೊಂಡರೆ ಅಥವಾ ಬೇರೆಯವರ ಹಕ್ಕು, ಸ್ವಾತಂತ್ರ್ಯವನ್ನು ನಾವು ಕಸಿದುಕೊಂಡರೆ ಅಥವಾ ಅವಕ್ಕೆ ಧಕ್ಕೆಪಡಿಸಿದರೆ ಏನಾಗುತ್ತದೆ? ಊಟ, ಬಟ್ಟೆ, ಹಾಸಿಗೆ ಹಾಗೂ ಪುಸ್ತಕಕ್ಕಾಗಿ ಹೈಕೋರ್ಟಿನ ಮೊರೆ ಹೋಗಬೇಕಾಗುತ್ತದೆ! ಇದು, ಇತ್ತೀಚಿನ ಪ್ರಕರಣವೊಂದರಿಂದ ಕಲಿಯಬೇಕಾದ ಪಾಠ!

-ಪಿ.ಜೆ.ರಾಘವೇಂದ್ರ, ಮೈಸೂರು

****

ಕನಿಷ್ಠ ಮೊತ್ತ ಇಡದವರಿಗೆ ದಂಡ: ಸಲ್ಲದ ಕ್ರಮ

ಬ್ಯಾಂಕ್‍ನಲ್ಲಿ ಕನಿಷ್ಠ ಮೊತ್ತ ಇಡದ ಗ್ರಾಹಕರ ಖಾತೆಗಳಿಗೆ ಹಿಂದಿನ 5 ವರ್ಷಗಳಲ್ಲಿ ಸುಮಾರು ₹ 8,500 ಕೋಟಿ ದಂಡ ವಿಧಿಸಲಾಗಿದೆ ಎಂಬ ಮಾಹಿತಿಯನ್ನು ಲೋಕಸಭೆಯಲ್ಲಿ ಇತ್ತೀಚೆಗೆ ನೀಡಲಾಗಿದೆ. ಬಡತನ, ಸಮರ್ಪಕ ದುಡಿಮೆ ಇಲ್ಲದಿರುವುದು, ತಿಳಿವಳಿಕೆಯ ಕೊರತೆ ಅಥವಾ ಮರಣದಂತಹ ಸಂದರ್ಭಗಳಲ್ಲಿ ಲಕ್ಷಾಂತರ ಗ್ರಾಹಕರ ಖಾತೆಗಳಲ್ಲಿ ಕನಿಷ್ಠ ಮೊತ್ತ ಉಳಿದಿರುವ ಸಾಧ್ಯತೆ ಇರುವುದಿಲ್ಲ. ಅಂಥ ಪ್ರಸಂಗಗಳಲ್ಲಿ ನೋಟಿಸ್ ನೀಡಿ ಖಾತೆಯನ್ನು ಮುಕ್ತಾಯಗೊಳಿಸುವುದು ಬಿಟ್ಟು ಬ್ಯಾಂಕ್‍ಗಳು ದಂಡದ ರೂಪದಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸುವುದು ಸಮರ್ಥನೀಯವಲ್ಲ. ಎಲ್ಲದರಲ್ಲೂ ಲಾಭ ಗಳಿಕೆಗೆ ಮುಂದಾಗುವ ಪ್ರವೃತ್ತಿ ನಾಗರಿಕರನ್ನು ಹತಾಶೆಗೀಡು ಮಾಡುತ್ತದೆ. ಮುಂದಿನ ದಿನಗಳಲ್ಲಾದರೂ ಬ್ಯಾಂಕ್‍ಗಳು ಇಂಥ ಕ್ರಮ ಬಿಟ್ಟು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಲಿ.

-ಚನ್ನು ಅ. ಹಿರೇಮಠ, ರಾಣೆಬೆನ್ನೂರು

****

ಪರಿಸರ ಸಂರಕ್ಷಣೆ: ಈಗಲಾದರೂ ಏಳೋಣ

ಕೇರಳದಲ್ಲಿ ಸಂಭವಿಸಿರುವ ಭೂಕುಸಿತದ ಘನಘೋರ ಚಿತ್ರಗಳನ್ನು ನೋಡಿದರೆ ಕರುಳು ಕಿತ್ತುಬಂದಂತೆ ಆಗುತ್ತದೆ. ಇಡೀ ಊರಿಗೆ ಊರೇ ಮಸಣವಾಗಿ, ಸಾವಿನ ಸಂಖ್ಯೆ ಲೆಕ್ಕಕ್ಕೇ ಸಿಗುತ್ತಿಲ್ಲ. ಇದು ಪ್ರಕೃತಿಯ ವಿಕೋಪವಾದರೂ ಪ್ರಕೃತಿಯ ಮೇಲಣ ಮನುಷ್ಯನ ವಿಕೃತಿಯೂ ಹೌದು ಎಂದರೆ ಅತಿಶಯವಾಗದು. ಪರಿಸರ ಸಂರಕ್ಷಣೆಯ ದಿಸೆಯಲ್ಲಿ ನೇಮಿಸಿದ್ದ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ಸಮಿತಿಗಳ ವರದಿಗಳನ್ನು ತಿರಸ್ಕರಿಸಿದ್ದರ ಪ್ರತಿಫಲ ಇದಾಗಿದೆ. ಇನ್ನಾದರೂ ಎಚ್ಚೆತ್ತು ಪರಿಸರ ಸಂರಕ್ಷಣೆಯತ್ತ ಗಮನಹರಿಸುವುದು ಅನಿವಾರ್ಯ.

ಸರ್ಕಾರವಷ್ಟೇ ಈ ಕೆಲಸ ಮಾಡಲಿ ಎಂದು ಕಾಯದೆ, ಜನರ ಸಹಭಾಗಿತ್ವವೂ ಇದ್ದರೆ ಯಶಸ್ಸು ಸಾಧ್ಯ. ಪರಿಸರ ಸಂರಕ್ಷಣೆಯಂತಹ ಕೆಲಸಗಳಿಗೆ ಜನರನ್ನು ಪ್ರೇರೇಪಿಸಲು ಸರ್ಕಾರಿ ಹುದ್ದೆಗಳಲ್ಲಿ ಭೂ ರಕ್ಷಕ, ಹಸಿರು ರಕ್ಷಕ ಎಂಬ ಪ್ರಮಾಣಪತ್ರಗಳನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಆಗ ಪರಿಸರ ಸಂರಕ್ಷಣೆಯಲ್ಲಿ ಜನಸಾಮಾನ್ಯರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.⇒

-ಡಿ.ಎಂ.ಬಸೆಟ್ಟೆಪ್ಪ, ಬೆಂಗಳೂರು

****

ಇದು, ಉತ್ತಮ ಆಡಳಿತದ ಲಕ್ಷಣವೇ?

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್‌ ಅವರು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ, ಅವರ ಆಪ್ತ ಎನಿಸಿಕೊಂಡಿರುವ ರೌಡಿಶೀಟರ್ ಕಂದಿಗೆರೆ ಜಗದೀಶ್‌ ಎನ್ನುವವರು ಪಾಲ್ಗೊಂಡು, ಅಧಿಕಾರಿಗಳನ್ನು ಪ್ರಶ್ನಿಸುತ್ತಾ ಅವರ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 31). ಶ್ರೀರಂಗಪಟ್ಟಣ- ಬೀದರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ವಶಪಡಿಸಿಕೊಳ್ಳಲಾಗಿರುವ ತಮ್ಮ ಜಮೀನಿಗೆ ಪರಿಹಾರ ವಿತರಣೆಯ ಸಂಬಂಧ ಹೈಕೋರ್ಟ್‌ನಲ್ಲಿ ಹೂಡಿರುವ ದಾವೆ ಕುರಿತಂತೆ ರೌಡಿಶೀಟರ್‌ನ ಅಹವಾಲು ಆಲಿಸಲು ಸಚಿವರು ಆತನನ್ನು ಸಭೆಗೆ ಕರೆಸಿದ್ದರು, ಆದರೆ ಆತ ಅಧಿಕಾರಿಗಳೊಡನೆ ಕುಳಿತುಕೊಂಡದ್ದು ದುರದೃಷ್ಟಕರ ಎಂದು ಜಿಲ್ಲಾಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದನ್ನು ಗಮನಿಸಿದರೆ, ಆ ರೌಡಿ ಎಷ್ಟು ಪ್ರಭಾವಿ ಎನ್ನುವುದು ಅರಿವಾಗುತ್ತದೆ.

ಸಚಿವರಿಗೆ ಆಪ್ತರೆನಿಸಿಕೊಂಡ ಏಕೈಕ ಕಾರಣಕ್ಕಾಗಿ ಇಂತಹ ವ್ಯಕ್ತಿಯು ಅಧಿಕಾರಿಗಳ ಮೇಲೆ ಹೀಗೆ ದಬ್ಬಾಳಿಕೆ ನಡೆಸುವುದಕ್ಕೆ ಅವಕಾಶ ನೀಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಈಗಾಗಲೇ ಮಠಾಧೀಶರು ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ. ಈಗ ರೌಡಿಗಳ ಸರದಿ. ಮುಂದಿನದ್ದು ಕಳ್ಳಕಾಕರು ಮತ್ತು ಭೂಗಳ್ಳರದ್ದಾದರೂ ಆಶ್ಚರ್ಯ ಪಡಬೇಕಾಗಿಲ್ಲ! ತಮ್ಮ ಜಾತಿಯ ಅಥವಾ ಮತ್ತಾವುದೇ ನೆಲೆಯವರ ಒಂದಷ್ಟು ಮತಗಳು ತಮ್ಮ ಬುಟ್ಟಿಗೆ ಬೀಳುವುದು ಖಚಿತವೆಂದಾದರೆ, ಅವರು ಸಮಾಜಘಾತುಕರು ಎನಿಸಿಕೊಂಡಿದ್ದರೂ ಸರಿ, ನಮ್ಮ ಜನಪ್ರತಿನಿಧಿಗಳು ಆಡಳಿತದ ನೀತಿ-ನಿಯಮಗಳನ್ನೆಲ್ಲಾ ಗಾಳಿಗೆ ತೂರಲು ಸಿದ್ಧರಿರುತ್ತಾರೆ ಎನ್ನುವುದನ್ನು ಈ ಪ್ರಕರಣ ಸಾಬೀತುಪಡಿಸಿದೆ.

-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

****

ಭೂಕುಸಿತ: ಇಂಗುಗುಂಡಿಯ ಪಾತ್ರ?

ಕೇರಳದಲ್ಲಿ ಸಂಭವಿಸಿರುವ ಮಹಾ ಭೂಕುಸಿತದಲ್ಲಿ ಇಂಗುಗುಂಡಿಯ ಪಾತ್ರ ಇರಬಹುದೇ? ಸರ್ಕಾರವು ಗುಡ್ಡದ ಮೇಲೆ ಸದುದ್ದೇಶದಿಂದ ಹಲವಾರು ಇಂಗುಗುಂಡಿಗಳನ್ನು ದೊಡ್ಡಪ್ರಮಾಣದಲ್ಲಿ ನಿರ್ಮಿಸಿತ್ತು. ಈ ಹಿಂದೆ ಆ ಪ‍್ರದೇಶ ಹೀಗಿತ್ತು ಎಂದು ಹೇಳಲು ಅಲ್ಲಿ ಯಾವುದೇ ಸಾಕ್ಷ್ಯ ಈಗ ಉಳಿದಿಲ್ಲ. ಆದರೆ ಸರ್ಕಾರಿ ಕಚೇರಿಗಳ ಕಡತವನ್ನು ಹುಡುಕಿದರೆ, ಎಲ್ಲೆಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿತ್ತು ಎಂಬುದನ್ನು ಅದರ ನಕಾಶೆಯಿಂದ ನಿಖರವಾಗಿ ತಿಳಿಯಬಹುದು. ಈಗ ನಡೆದ ಭೂಕುಸಿತದ ಭಾಗದಲ್ಲಿ ಇಂಗುಗುಂಡಿ ಇರುವ ಭಾಗವನ್ನು ಹಾಗೂ ಇಲ್ಲದ ಭಾಗವನ್ನು ಸಮಗ್ರವಾಗಿ ಪರಿಶೀಲಿಸಿದರೆ, ಇಂಗುಗುಂಡಿಯ ಭವಿಷ್ಯವನ್ನು ನಿರ್ಧರಿಸಲು ಅನುಕೂಲವಾಗುತ್ತದೆ.

-ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

****

ಭೂಕುಸಿತ... ತಕಥೈ ಕುಣಿತ

ಪಶ್ಚಿಮಘಟ್ಟ, ಹಿಮಾಲಯ ಪರ್ವತ ಪ್ರದೇಶದಲ್ಲಿ
ಮಳೆಗಾಲದಲ್ಲಿ ಸರ್ವೇಸಾಮಾನ್ಯವೀಗ ಭೂಕುಸಿತ
ಆದರೇನಂತೆ, ಪ್ರವಾಸೋದ್ಯಮದ ಹೆಸರಲ್ಲಿ ನಿಲ್ಲುತ್ತಿಲ್ಲ
ಪರಿಸರದ ಮೇಲೆ ಮನುಷ್ಯನ ತಕಥೈ ಕುಣಿತ.

 -ಆನಂದ ರಾಮತೀರ್ಥ, ಜಮಖಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.