ADVERTISEMENT

ವಾಚಕರ ವಾಣಿ | ಉದ್ಧಟತನದ ಮಾತು ಸಲ್ಲದು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಏಪ್ರಿಲ್ 2023, 22:45 IST
Last Updated 19 ಏಪ್ರಿಲ್ 2023, 22:45 IST

ಉದ್ಧಟತನದ ಮಾತು ಸಲ್ಲದು

ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುವುದಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ (ಪ್ರ.ವಾ., ಏ. 19). ಬಿಜೆಪಿಯಲ್ಲಿರುವ ಕೆಲವು ಸಜ್ಜನರಲ್ಲಿ ಕಾಗೇರಿಯವರೂ ಒಬ್ಬರು ಎಂಬ ಅಭಿಪ್ರಾಯ ಹಲವರಲ್ಲಿದೆ. ಆದ್ದರಿಂದ ಇಂಥ ಉದ್ಧಟತನದ ಮಾತುಗಳು ಅವರಿಂದ ಬರುತ್ತವೆ ಎಂದರೆ ಅದು ನಿರೀಕ್ಷಿತವಾದುದಲ್ಲ.

ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಿದ್ದಿದ್ದರೆ ಅದನ್ನು ಜನ ಹೇಳಬೇಕೆ ವಿನಾ ತಾವೇ ಹೇಳಿಕೊಳ್ಳುವಂತಹ ಮಟ್ಟಕ್ಕೆ ಕಾಗೇರಿಯವರು ಇಳಿಯಬಾರದಿತ್ತು. ಪ್ರಜಾಪ್ರಭುತ್ವದಲ್ಲಿ ಇನ್ನೊಬ್ಬರ ಬಗ್ಗೆ ಆರೋಗ್ಯಕರವಾದ ಟೀಕೆಗೆ ಎಲ್ಲರಿಗೂ ಅವಕಾಶ ಇದೆ. ಇದು ಸ್ಪೀಕರ್ ಹುದ್ದೆಯನ್ನು ನಿರ್ವಹಿಸಿರುವ ಕಾಗೇರಿಯವರಿಗೆ ಗೊತ್ತಿಲ್ಲವೇ?!→→ ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ADVERTISEMENT

ಖರೀದಿ ಖಯಾಲಿಯ ಹುರಿಯಾಳುಗಳೇ ಹುಷಾರು...

ಪೇಟೆಯಲ್ಲಿರುವ ಜೆರಾಕ್ಸ್ ಅಂಗಡಿಯೊಂದರಲ್ಲಿ ಬಾಗಲಕೋಟೆ ಕಡೆಯ ಅರೆ ಕಲಿತ ರೈತನೊಬ್ಬ ಜೆರಾಕ್ಸ್ ಮಾಡಿಸಲು ಬಂದ. ಯಾರೋ ಕೇಳಿದರು, ‘ನಿಮ್ಮ ಕಡೆ ಹ್ಯಾಂಗಪಾ? ಹ್ಯಾಂಗೈತಿ ಇಲೆಕ್ಷನ್?’ ಆತ ಉತ್ಸಾಹಿತನಾಗಿ, ‘ಭಾರೀ ಜೋರೈತ್ರಿ ಸಾಹೇಬ್ರ, ದಿನಾ ಏನೇನರ ಕೊಟ್ಟ ಹೊಕ್ಕಾರ್‍ರಿ, ಕುಕ್ಕರ್‍ರು, ಟೇಬಲ್‌ಫ್ಯಾನು, ಅಡುಗೆ ತವಾ, ಇಸ್ತ್ರಿಪೆಟ್ಟಿಗೆ... ಹಿಂಗೇ ಎಲ್ಲಾ ಪಕ್ಷದ ಉಮೇದುವಾರರ ಕಡೆಯವರು ಬಲು ಉಮೇದಿಯಿಂದ ಕೊಟ್ಟು, ಒಂದೊಂದು ದೇವರ ಮುಟ್ಟಿಸಿ, ಆಣೆ ಪ್ರಮಾಣ ಮಾಡಿಸ್ಕೋತಾರ್‍ರಿ’ ಎಂದ. ‘ಹಾಂಗಾದ್ರ ಫಜೀತಿ ಆತಲ್ಲಪಾ’ ಎಂದರೆ, ಆ ಚಾಲಾಕಿ ರೈತ ಹೇಳಿದ್ದು, ‘ಯಾರ್ ಏನ್ ಕೊಟ್ರೂ ತೊಗೊಂಡು, ಕೊನೆಗೆ ಒಬ್ಬರಿಗೆ ವೋಟು ಹಾಕೂದ್ರಿ. ಎಲ್ಲಾ ದೇವರ ಮ್ಯಾಲೂ ಆಣೆ ಮಾಡೀರ್ತೇವ್ರಿ, ಎಲ್ಲಾ ದೇವರೂ ಒಂದರಿ, ದೇವನೊಬ್ಬ ನಾಮ ಹಲವು’.

ಇದೀಗ ಮತದಾರನೂ ಧೂರ್ತನಾಗಿದ್ದಾನೆ. ರಂಗೋಲಿ ಕೆಳಗೂ ನುಸುಳಲು ಕಲಿತಿದ್ದಾನೆ. ಮತಗಳನ್ನು ಖರೀದಿಸುವ ಖಯಾಲಿಯ ಹುರಿಯಾಳುಗಳೇ, ಹುಷಾರು!

ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

ಉನ್ನಾವೊ ಪ್ರಕರಣ: ಇದೆಂತಹ ಧೂರ್ತತನ?

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಶೆಡ್‌ಗೆ ಆರೋಪಿಗಳು ಬೆಂಕಿ ಹಚ್ಚಿರುವುದು ವರದಿಯಾಗಿದೆ (ಪ್ರ.ವಾ.,
ಏ. 19). ಒಬ್ಬ ಸಂತ್ರಸ್ತೆಗೆ ಸಹಾಯಹಸ್ತ ನೀಡದ ಸರ್ಕಾರ ಏತಕ್ಕೆ ಬೇಕು? ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ತ್ವರಿತಗತಿಯಲ್ಲಿ ತೀರ್ಮಾನ ಕೊಡಬೇಕು ಇಲ್ಲವೇ ಸರ್ಕಾರವು ಸಂತ್ರಸ್ತ ಮಹಿಳೆಗೆ ಸರಿಯಾದ ಪೊಲೀಸ್‌ ರಕ್ಷಣೆ ಒದಗಿಸಿ ಕಾಪಾಡಬೇಕು. ಉನ್ನಾವೊ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಸರ್ಕಾರದ ಮಹಿಳಾ ವಸತಿಗೃಹದಲ್ಲಿ ಅಥವಾ ಬೇರೆಲ್ಲಿಯಾದರೂ ಸುರಕ್ಷಿತವಾದ ಜಾಗದಲ್ಲಿ ಇರಿಸಬಹುದಿತ್ತು.

ಈಗ ಅತ್ಯಾಚಾರದ ಆರೋಪಿಗಳು ಆಕೆಯ ಶೆಡ್‌ಗೆ ಬೆಂಕಿ ಹಚ್ಚಿದ್ದಲ್ಲದೆ ಎರಡು ಶಿಶುಗಳನ್ನು ಬೆಂಕಿಗೆ ಆಹುತಿ ಮಾಡಲು ಪ್ರಯತ್ನಿಸಿದ್ದಾರೆ. ಇದೆಂತಹ ಧೂರ್ತತನ? ಪ್ರಕರಣ ವಾಪಸು ಪಡೆಯಲು ಒತ್ತಾಯಿಸಿ ಇಂತಹ ಕೃತ್ಯಕ್ಕೆ ಕೈ ಹಾಕಿದವರು, ಮುಂದೆ ಇವರಿಗೆ ತಕ್ಕ ಶಿಕ್ಷೆ ಆಗದಿದ್ದಲ್ಲಿ ಇನ್ನೇನೇನು ಕೆಟ್ಟ ಕಾರ್ಯಗಳಿಗೆ ಮುಂದಾಗುವರೋ ತಿಳಿಯದು. ಇನ್ನಾದರೂ ಸರ್ಕಾರವು ಸಂತ್ರಸ್ತೆಗೆ ಸೂಕ್ತ ರಕ್ಷಣೆ ಒದಗಿಸಲಿ.

ಬಾಲಕೃಷ್ಣ ಎಂ.ಆರ್., ಬೆಂಗಳೂರು

ಎಲ್ಲರೂ ಕೋಟಿವೀರರು!

ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಶಾಸನಸಭೆಗೆ ಹೋಗಲು ಇಚ್ಛಿಸುತ್ತಿರುವ ಅಭ್ಯರ್ಥಿಗಳ ಸ್ಥಿರಾಸ್ತಿ, ಚರಾಸ್ತಿಯ ಸ್ವ ಘೋಷಣೆಯ ವಿವರಗಳನ್ನು ನೋಡಿದಾಗ ಕಣ್ಣುಗಳು ಆನಂದದಿಂದ ಮಂಜಾದವು. ವಿಶ್ಪದ ಬೃಹತ್
ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡಿತು. ಕೆಲವೊಂದು ಅಪವಾದಗಳನ್ನು
ಹೊರತುಪಡಿಸಿ, ಸಾವಿರ, ಲಕ್ಷಗಳಲ್ಲಿ ಬಿಡಿ, ಎಲ್ಲ ಅಭ್ಯರ್ಥಿಗಳೂ ಕೋಟಿವೀರರೆ. ಅಲ್ಲಿಗೆ, ಪ್ರಜಾತಂತ್ರ ವ್ಯವಸ್ಥೆ ‘ಉಳ್ಳವರಿಗೆ’ ಮಾತ್ರ ಎಂದು ಅರ್ಥೈಸಿಕೊಳ್ಳಬಹುದೇ? ಜೊತೆಗೆ, ಮತದಾರನಿಗೆ ಹಂಚುವ ಸಲುವಾಗಿ ಕೊಂಡೊಯ್ಯು
ತ್ತಿರುವಾಗ ನಗದು ಮತ್ತು ಇತರ ವಸ್ತುಗಳು ಚೆಕ್‌ಪೋಸ್ಟ್‌ಗಳಲ್ಲಿ ಸಿಕ್ಕಿಬೀಳುತ್ತಿವೆ. ಖಂಡಿತವಾಗಿಯೂ ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಈ ತರಹ ಕೋಟಿ ಕೋಟಿ ಮೌಲ್ಯದ ಆಸ್ತಿ ಹಾಗೂ ಅದರ ನಿರಂತರ ಹೆಚ್ಚಳಕ್ಕೆ ಮೂಲ ಯಾವುದು ಎಂದು ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು.

ವೆಂಕಟೇಶ್ ಮುದಗಲ್, ಕಲಬುರಗಿ

ಮಾನಸಿಕವಾಗಿ ಗಾಸಿಗೊಳಿಸುವ ಹುನ್ನಾರ

ಹಿಂದೂ ಹಾಗೂ ಭಾರತೀಯ ಮಹಿಳೆಯರು ಸಭ್ಯ ಉಡುಗೆ ಧರಿಸಬೇಕು ಎಂಬ ಬಿಜೆಪಿಯ ಮಧ್ಯಪ್ರದೇಶ ಮಹಿಳಾ ಮೋರ್ಚಾ ಮುಖ್ಯಸ್ಥೆ ಮಾಯಾ ನರೋಲಯ ಅವರ ಹೇಳಿಕೆ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವಂತಿದೆ. ಈ ಹಿಂದೆ ಕುಂಕುಮ, ಶೂರ್ಪನಖಿ ಆಯ್ತು ಈಗ ಸಭ್ಯ ಉಡುಗೆ! ಕೆಲವು ಬಿಜೆಪಿಗರು ಮಹಿಳೆಯರ ಮೇಲೆ ಸಂಸ್ಕೃತಿ, ಧರ್ಮ ಎಂದು ಹೇರುವುದನ್ನು ನೋಡಿದರೆ, ಮಹಿಳೆಯರಿಗಿರುವ ವೈಯಕ್ತಿಕ ಸ್ವಾತಂತ್ರ್ಯವನ್ನು ನಾಶ ಮಾಡುವ ಉದ್ದೇಶ ಅವರಿಗಿದೆ ಅನಿಸುತ್ತದೆ.

ಸ್ವಾತಂತ್ರ್ಯ ಬರುವ ಮೊದಲು ಮಹಿಳೆಯರು ಹಾಗೂ ದಲಿತರಿಗೆ ತಮಗೆ ಇಷ್ಟ ಬಂದ ರೀತಿ ಇರಲು ಸಾಧ್ಯವಾಗಿರಲಿಲ್ಲ. ಸಂವಿಧಾನದ ಮೂಲಕ ಸ್ವಾತಂತ್ರ್ಯದ ಹಕ್ಕು ದೊರಕಿದ್ದರೂ, ಅನುಭವಿಸಲು ಈ ರಾಜಕಾರಣಿಗಳು ಬಿಡುತ್ತಿಲ್ಲ. ಶೂರ್ಪನಖಿಯಂತೆ ಕಾಣುತ್ತಾರೆ, ಸಭ್ಯ ಉಡುಗೆ ಧರಿಸುತ್ತಿಲ್ಲ ಎನ್ನುವುದು ಮಾನಸಿಕವಾಗಿ ಗಾಸಿಗೊಳಿಸುವ ವಿಷಯ ಕೂಡ ಆಗಿದೆ. ಮಾಯಾ ಅವರು ಮಹಿಳೆಯರ ಉಡುಪಿನ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ್ದು ಸಮಂಜಸವಲ್ಲ.

ಪ್ರದೀಪ್ ಶಾಕ್ಯ, ಮಂಗಳೂರು

ಇದು ನಮ್ಮ ವಾದ

ಮಂಗನಿಂದ ಮಾನವ

ಇದು ಡಾರ್ವಿನ್ನನ ವಿಕಾಸವಾದ,

ಪಕ್ಷದಿಂದ ಪಕ್ಷಕ್ಕೆ ನೆಗೆಯುವ

ನಾಯಕರನ್ನು ನೋಡಿದರೆ

ಮಾನವನೇ ಮಂಗನಾದ

ಎಂಬುದು ನಮ್ಮ ವಾದ!

ಎನ್.ಎಂ.ರಾಯಬಾಗಿ

ಬೆಟಗೇರಿ, ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.