ADVERTISEMENT

ವಾಚಕರ ವಾಣಿ | ಅಧಿಕಾರದ ಚಪ್ಪರದಲ್ಲಿ ವಂಶವೃಕ್ಷದ ಬಳ್ಳಿಗಳು!

ವಾಚಕರ ವಾಣಿ
Published 25 ಅಕ್ಟೋಬರ್ 2024, 0:00 IST
Last Updated 25 ಅಕ್ಟೋಬರ್ 2024, 0:00 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಅಧಿಕಾರದ ಚಪ್ಪರದಲ್ಲಿ ವಂಶವೃಕ್ಷದ ಬಳ್ಳಿಗಳು!

ADVERTISEMENT

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೊನೆಗೂ ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯನ್ನಾಗಿ ಜೆಡಿಎಸ್‌ ಘೋಷಿಸಿದೆ. ಮೊನ್ನೆಯೇ ಅವರ ಹೆಸರು ಅಂತಿಮಗೊಂಡಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದರೆ, ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿಯಿಂದ ಹೊರ ಹೋಗುವುದನ್ನೇ ಜೆಡಿಎಸ್‌ನವರು ಕಾಯುತ್ತಿದ್ದರು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಸಂಡೂರಿನಲ್ಲಿ ಸಂಸದ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದರೆ, ಶಿಗ್ಗಾವಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಬಿಜೆಪಿ ಮಣೆ ಹಾಕಿದೆ. ಅತ್ತ ವಯನಾಡಿನಲ್ಲಿ ರಾಹುಲ್ ಗಾಂಧಿ ಅವರಿಂದ ತೆರವಾದ ಲೋಕಸಭಾ ಸದಸ್ಯ ಸ್ಥಾನದ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ ಲಗ್ಗೆ ಇಟ್ಟಿದ್ದಾರೆ! ಅಂತೂ ವಂಶವೃಕ್ಷದ ಬಳ್ಳಿಗಳು ಅಧಿಕಾರದ ಚಪ್ಪರಕ್ಕೆ ಹಬ್ಬುತ್ತಿವೆ. ಜನರಿಗೆ ಸಂತೋಷವಾಗಿದೆ. ಕುಟುಂಬ ರಾಜಕಾರಣಕ್ಕೆ ಮತ್ತೊಮ್ಮೆ ಜೈ! 

-ಮುಳ್ಳೂರು ಪ್ರಕಾಶ್, ಮೈಸೂರು

****

ಸಮ್ಮೇಳನ: ಉಚಿತ ಊಟ ಸಲ್ಲ

ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದುಂದುವೆಚ್ಚಕ್ಜೆ ಕಡಿವಾಣ ಹಾಕಿ, ಅದನ್ನು ಸರಳ, ಸುಂದರವಾಗಿ ಆಚರಿಸಬೇಕೆಂಬ ಅಭಿಪ್ರಾಯ ಕೆಲವರಿಂದ ಕೇಳಿಬಂದಿದೆ. ನನ್ನ ವೈಯಕ್ತಿಕ ಸಲಹೆಯೆಂದರೆ, ಸಮ್ಮೇಳನಕ್ಕೆ ಬರುವವರಿಗೆ ಉಚಿತವಾಗಿ ನೀಡುವ ಊಟವನ್ನು ನಿಲ್ಲಿಸಬೇಕು. ಇಲ್ಲಿಯೇ ಗೊಂದಲ, ನೂಕುನುಗ್ಗಲು ಹೆಚ್ಚಾಗಿ ಉಂಟಾಗುವುದು. ಹೆಚ್ಚು ಹೋಟೆಲ್ ಕೌಂಟರ್‌ಗಳನ್ನು ತೆರೆಯಲು ಖಾಸಗಿಯವರಿಗೆ ಅವಕಾಶ ನೀಡಬೇಕು. ತಿಂಡಿ ಮತ್ತು ಊಟಕ್ಕೆ ಕನಿಷ್ಠ ದರ ನಿಗದಿಪಡಿಸುವಂತೆ ಅವರಿಗೆ ಷರತ್ತು ವಿಧಿಸಬೇಕು‌. ಆಸಕ್ತರು ದುಡ್ಡು ಕೊಟ್ಟು ಊಟ ಮಾಡಿ, ಸಮ್ಮೇಳನದ ಆನಂದವನ್ನು ಸವಿಯುತ್ತಾರೆ. ಇದರಿಂದ ಸರ್ಕಾರಕ್ಕೆ ₹ 8 ಕೋಟಿಯಿಂದ ₹ 10 ಕೋಟಿವರೆಗೂ ಉಳಿತಾಯವಾಗುತ್ತದೆ.

-ಗುರು ಜಗಳೂರು, ಹರಿಹರ

****

ದರ ರೌಂಡ್‌ಆಫ್ ಮಾಡಲು ಅಡ್ಡಿಯೇನು?

50 ಪೈಸೆ ಚಿಲ್ಲರೆ ವಾಪಸ್‌ ನೀಡದ ಕಾರಣಕ್ಕೆ ಮಾನಸಿಕವಾಗಿ ನೊಂದಿರುವ ಗ್ರಾಹಕರೊಬ್ಬರಿಗೆ ಪರಿಹಾರ ಹಾಗೂ ಮೊಕದ್ದಮೆ ವೆಚ್ಚವಾಗಿ ₹ 15,000 ನೀಡಲು ತಮಿಳುನಾಡಿನ ಕಾಂಚೀಪುರ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಅಂಚೆ ಇಲಾಖೆಗೆ ಆದೇಶಿಸಿರುವುದು ವರದಿಯಾಗಿದೆ (ಪ್ರ.ವಾ., ಅ. 24).  ಬರೀ 50 ಪೈಸೆಗೆ ಇಷ್ಟು ರಂಪ ರಾಮಾಯಣ ಬೇಕಿತ್ತೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಗ್ರಾಹಕರ ಹಿತರಕ್ಷಣೆಯನ್ನು ನ್ಯಾಯಾಲಯ ಸಮರ್ಪಕವಾಗಿ ಮಾಡುತ್ತಿದೆ ಎಂಬ ನಂಬಿಕೆ ಇಂತಹ ತೀರ್ಪುಗಳಿಂದ ಜನರಿಗೆ ಉಂಟಾಗುತ್ತದೆ.

ಅಂಚೆ ಇಲಾಖೆ, ಬ್ಯಾಂಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹ ಪರಿಸ್ಥಿತಿ ಇದೆ. ಕೆಲವು ಕಂಪನಿಯ ಚಪ್ಪಲಿಗಳಿಗೆ ₹ 499.95 ಎಂದೆಲ್ಲ ದರಪಟ್ಟಿ ಹಾಕಲಾಗಿರುತ್ತದೆ. ಅನೇಕ ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳ ಬೆಲೆಯನ್ನೂ ಅದೇ ಮಾದರಿಯಲ್ಲಿ ನಿಗದಿಪಡಿಸಲಾಗಿರುತ್ತದೆ. ಬಸ್ ಪ್ರಯಾಣದಲ್ಲೂ (11, 21, 31, 19, 29, 39...) ಚಿಲ್ಲರೆ ನೀಡಲು ಕಷ್ಟವಾಗುವಂತಹ ದರಗಳು ಇರುತ್ತವೆ. ಸಾರ್ವಜನಿಕರೊಂದಿಗೆ ಹಣಕಾಸು ವ್ಯವಹಾರ ನಡೆಸುವ ಯಾವುದೇ ಇಲಾಖೆ ಅಥವಾ ಕೈಗಾರಿಕೆಯು ಶುಲ್ಕ ಮತ್ತು ವಸ್ತುಗಳ ಮೇಲೆ ದರದ ಸಮೀಪದ ರೌಂಡ್‌ಆಫ್ ಮಾಡಲು ಅಡ್ಡಿಯೇನು? ಹೀಗೆ ರೌಂಡ್‌ಆಫ್ ಮಾಡಿದಲ್ಲಿ ಅನಗತ್ಯ ಕಿರಿಕಿರಿಗಳಿಗೆ ಆಸ್ಪದ ಇರುವುದಿಲ್ಲ. ಸರ್ಕಾರ ಶೀಘ್ರವೇ ಈ ಕುರಿತು ಒಂದು ನಿರ್ಧಾರ ಕೈಗೊಳ್ಳಲಿ. ಆಗಮಾತ್ರ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಚಿಲ್ಲರೆ ಹಣಕ್ಕಾಗಿ ತಿಕ್ಕಾಟ ಇಲ್ಲವಾಗುತ್ತದೆ. 

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

****

ಬಡಜನರ ಬಿಪಿಎಲ್‌ ಕಾರ್ಡ್‌ ಕಸಿದವರು

ರಾಜ್ಯದಲ್ಲಿ 13.87 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿದ್ದು, ಈ ಪೈಕಿ 3.63 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ಪ್ರಕಟಿಸಿದ್ದಾರೆ. ಇವರಲ್ಲಿ ಸುಮಾರು 4,000 ಸರ್ಕಾರಿ ನೌಕರರು ಇದ್ದಾರೆ ಎಂದು ಹೇಳಿದ್ದಾರೆ. ಕಾನೂನುಬಾಹಿರವಾಗಿ ಮತ್ತು ನಿಯಮ ಉಲ್ಲಂಘಿಸಿ ಬಡವರ ಪಾಲಿನ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವ ಸರ್ಕಾರಿ ನೌಕರರ ಮೇಲೆ ಸರ್ಕಾರ ಏಕೆ ಕ್ರಮ ಕೈಗೊಳ್ಳಬಾರದು? ನನಗೆ ತಿಳಿದಿರುವಂತೆ, ಗ್ರಾಮೀಣ ಪ್ರದೇಶದಲ್ಲಿ ಈಗಲೂ 10-15 ಎಕರೆ ಜಮೀನು ಹೊಂದಿರುವ ರೈತರು ಸಹ ಬಿಪಿಎಲ್ ಕಾರ್ಡ್‌ನ ಉಪಯೋಗ ಪಡೆಯುತ್ತಿದ್ದಾರೆ. ಇಂತಹವರನ್ನು ಸಹ ಗುರುತಿಸುವ ಕೆಲಸವಾಗಬೇಕು. ಬೂಕನಕೆರೆ ವಿಜೇಂದ್ರ, ಮೈಸೂರು

ಯಾವುದು ಅಪಶಕುನ? ಯಾರು ಅಮಂಗಲರು?

‘ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜದವರು ಅಮಂಗಲ, ಅವರನ್ನು ನೋಡುವುದು ದುರದೃಷ್ಟ ಎಂಬ ಮಾತುಗಳು ಅನುಚಿತವಾದವು’ ಎಂಬ ಶೃಂಗೇರಿ ಪೀಠಾಧೀಶ ವಿಧು ಶೇಖರ ಭಾರತಿ ಸ್ವಾಮೀಜಿ ಅವರ ಹೇಳಿಕೆ
(ಪ್ರ.ವಾ. ಅ. 24) ಸರಿಯಾಗಿದೆ. ಕ್ಷೌರಿಕ ಕಾಯಕ ಮಾಡುತ್ತಿದ್ದ 12ನೇ ಶತಮಾನದ ವಚನಕಾರ ಹಡಪದ
ಅಪ್ಪಣ್ಣನವರನ್ನು ಕ್ರಾಂತಿಕಾರಿ ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ಮೌಢ್ಯಕ್ಕೆ ಸಡ್ಡು ಹೊಡೆದಿದ್ದರು. ಆದರೂ ಇಂಥ ಕುರುಡು ನಂಬಿಕೆ ಚಾಲ್ತಿಯಲ್ಲಿರುವುದು ದುರದೃಷ್ಟಕರ.

ಕೆಲವು ನಿರ್ದಿಷ್ಟ ವೃತ್ತಿಗಳಲ್ಲಿ ತೊಡಗಿರುವವರ ಹಾಗೂ ಕೆಲವೊಂದು ಜಾತಿಗಳಿಗೆ ಸೇರಿದವರ ಮುಖ ನೋಡುವುದು ಅಮಂಗಲ ಎನ್ನುವ ಮೂಢನಂಬಿಕೆ ಸಮಾಜದಲ್ಲಿ ಬೇರೂರಿದೆ. ಇದೇ ರೀತಿ ವಿಧವೆಯ ಮುಖ, ಬೆಕ್ಕಿನ ಮುಖ ನೋಡುವುದು ಕೂಡ ಅಪಶಕುನ! ಮುಂಗುಸಿ, ಕಂಬಾರ, ಕಾಗೆ ಮುಖ ನೋಡುವುದು ಶುಭ ಶಕುನ! ಅಂತೂ ಮೌಢ್ಯಕ್ಕೆ ಕೊನೆ ಮೊದಲಿಲ್ಲ. ಸ್ವಾಮೀಜಿಗಳು, ಮಠಾಧೀಶರೇ ಮೊದಲಾದ ಧಾರ್ಮಿಕ ನೇತಾರರು ಇಂಥ ಮೂಢನಂಬಿಕೆಗಳನ್ನು ಸಮೂಲ ನಾಶಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಇಂಥ ಅನಿಷ್ಟಗಳ ವಿರುದ್ಧ ಜನಜಾಗೃತಿ ಮೂಡಬೇಕು. ಯಾರ ಮುಖವೂ ಅಮಂಗಲವೂ ಅಲ್ಲ, ಸುಮಂಗಲವೂ ಅಲ್ಲ ಎಂಬುದನ್ನು ಅರಿಯಬೇಕು.

-ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.