ಕತ್ತೆ ಎಂದರೆ...?!
ಬಟ್ಟೆ ತೊಳೆಯುವವನೊಬ್ಬ ಒಮ್ಮೆ ತನ್ನ ಕತ್ತೆಯ ಮೇಲೆ ಅಪಾರ ಹೊರೆಯನ್ನು ಹೊರಿಸಿಕೊಂಡು ರಸ್ತೆಯಲ್ಲಿ ನಡೆದುಹೋಗುತ್ತಿದ್ದ. ಆಗ ಅವನಿಗೆ ಹಸಿವು, ಬಾಯಾರಿಕೆಯಾದ್ದರಿಂದ, ಅವನು ಕತ್ತೆಯನ್ನು ಒಂದು ಬದಿಗೆ ನಿಲ್ಲಿಸಿ, ತಾನು ಪಕ್ಕದಲ್ಲಿದ್ದ ಹೋಟೆಲ್‌ಗೆ ತಿನ್ನಲು ಹೋದ. ಇದನ್ನು ಗಮನಿಸುತ್ತಿದ್ದ ಒಬ್ಬ ವ್ಯಕ್ತಿ, ಆ ಕತ್ತೆಯ ಬಳಿ ಬಂದು ‘ನಿನ್ನನ್ನು ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ, ನಾನು ಸಹ ಬಟ್ಟೆ ತೊಳೆಯುವವನೇ. ಪಕ್ಕದ ಊರು. ನೀನು ನನ್ನ ಜೊತೆಗೆ ಬರುತ್ತೀಯ? ನಿನ್ನನ್ನು ಚೆನ್ನಾಗಿ ನೋಡಿಕೊಳ್ತೀನಿ’ ಎಂದಾಗ, ಆ ಕತ್ತೆಯು ಕ್ಷಣಕಾಲ ಯೋಚಿಸಿ, ಆನಂತರ ‘ಇಲ್ಲಪ್ಪ ನಾನು ನಿನ್ನ ಜೊತೆ ಬರುವುದಿಲ್ಲ. ನೀನೇನು ನನ್ನನ್ನು ಸಿಂಹಾಸನದ ಮೇಲೆ ಕೂರಿಸುತ್ತೀಯ? ಇಲ್ಲವಲ್ಲ, ಇದೇ ಹೊರೆ ಹೊರುವ ಚಾಕರಿಗೆ ತಾನೇ ನನ್ನನ್ನು ಬಳಸುತ್ತೀಯ’ ಎಂದಾಗ, ಅವನು ನಿರ್ವಾಹವಿಲ್ಲದೆ ‘ನಿನ್ನ ಹಣೆಬರಹ’ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದ. ಈಗ ಹೇಳಿ ಕೇಳಿ ಚುನಾವಣೆ ಹತ್ತಿರವಾಗುತ್ತಿರುವ ಸಮಯ. ಇದನ್ನು ನಾವು, ಬಟ್ಟೆ ತೊಳೆಯುವವನು ಎಂದರೆ ಸರ್ಕಾರ, ಕತ್ತೆ ಎಂದರೆ ಮತದಾರ, ಹೊರೆ ಎಂದರೆ ಏರುತ್ತಿರುವ ಅಗತ್ಯ ವಸ್ತುಗಳ ದರಗಳು, ತೆರಿಗೆಗಳು... ಎಂದುಕೊಳ್ಳಬಹುದೇನೊ! ವಿ.ವಿಜಯೇಂದ್ರ ರಾವ್, ಬೆಂಗಳೂರು
ಕಾರ್ಖಾನೆ ಸ್ಥಗಿತ ಸಲ್ಲ
ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮುಚ್ಚುವುದರ ವಿರುದ್ಧ
ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಹಾಗೂ ಆ ಭಾಗದ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರು ಈ ಕಾರ್ಖಾನೆಯನ್ನು
ಉಳಿಸಿಕೊಳ್ಳಬೇಕೆಂಬ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಈ ಕಾರ್ಖಾನೆಯನ್ನು ಮುಚ್ಚಲು ಅವಕಾಶ ನೀಡುವುದಿಲ್ಲ’ ಎಂಬ ಭರವಸೆಯನ್ನು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ನಷ್ಟದ ನೆಪವೊಡ್ಡಿ ಈ ಕಾರ್ಖಾನೆಯನ್ನು ಮುಚ್ಚುವುದಾಗಿ ಹೇಳಿರುವುದು ಕಾರ್ಮಿಕ ವಲಯದಲ್ಲಿ ಅಭದ್ರತೆಯನ್ನು ಸೃಷ್ಟಿಸಿದೆ. ನಷ್ಟದ ನೆಪದಲ್ಲಿ ಈಗಾಗಲೇ ರಾಜ್ಯದ ಹಲವಾರು ಪ್ರತಿಷ್ಠಿತ ಕಾರ್ಖಾನೆಗಳು ಮುಚ್ಚಿವೆ. ಕೇಂದ್ರ ಸರ್ಕಾರವು ಪ್ರತಿಷ್ಠಿತ ಕಾರ್ಖಾನೆಗಳನ್ನು ಮುಚ್ಚುವ ಬದಲು, ಅವುಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ರಾಜ್ಯಕ್ಕೆ ಹರಿದುಬರುತ್ತಿರುವಾಗ, ಸರ್ಕಾರಿ ಕಾರ್ಖಾನೆಗಳ ಪುನಶ್ಚೇತನ ಏಕೆ ಸಾಧ್ಯವಿಲ್ಲ? ಈ ವಿಚಾರವನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡು, ಈ ಹೆಸರಾಂತ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಲಿ.
ಕೆ.ವಿ.ವಾಸು,ಮೈಸೂರು
ನಾವು ಏನಾಗಿದ್ದೇವೆ ಅನ್ನುವುದಕ್ಕಿಂತ...
ಭಾರತೀಯ ಆಡಳಿತ ಸೇವೆಯಲ್ಲಿರುವ ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿರುವ ಇಬ್ಬರು ಮಹಿಳಾ ಅಧಿಕಾರಿಗಳ ಕಿತ್ತಾಟ ಬೀದಿಗೆ ಬಿದ್ದಿದೆ. ಸಮಾಜದಲ್ಲಿ ಹೆಚ್ಚಿನ ಅಧಿಕಾರ ಮತ್ತು ಹೆಚ್ಚಿನ ಗೌರವಕ್ಕೆ ಪಾತ್ರರಾದವರು ಈ ರೀತಿ ಕಿತ್ತಾಡುವುದನ್ನು ನೋಡಿದರೆ, ಅವರ ಹುದ್ದೆಗೆ ಮತ್ತು ಅವರ ಶಿಕ್ಷಣಕ್ಕೆ ಅರ್ಥವಿಲ್ಲ ಎನಿಸುತ್ತದೆ.
ಈ ಸಂದರ್ಭದಲ್ಲಿ, ಭಾರತದ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಟಿ.ಎನ್.ಶೇಷನ್ ಅವರ ಮಾತು ಜ್ಞಾಪಕಕ್ಕೆ ಬರುತ್ತದೆ. ಶೇಷನ್ ಅವರು ಕುಟುಂಬ ಸಮೇತ ಉತ್ತರಪ್ರದೇಶದಲ್ಲಿ ಪ್ರವಾಸ ಮಾಡುತ್ತಿರುತ್ತಾರೆ. ಕಾರಿನಲ್ಲಿ ಹೋಗುತ್ತಿರುವಾಗ, ಒಂದು ಮಾವಿನ ಮರದಲ್ಲಿನ ಗುಬ್ಬಚ್ಚಿ ಗೂಡು ಶೇಷನ್ ಅವರ ಪತ್ನಿಯ ಕಣ್ಣಿಗೆ ಬೀಳುತ್ತದೆ. ಅದನ್ನು ಕಿತ್ತು ತರುವಂತೆ ಅವರ ಜೊತೆಯಲ್ಲಿದ್ದ ಕಾನ್‌ಸ್ಟೆಬಲ್‌ಗೆ ಹೇಳುತ್ತಾರೆ. ಕಾನ್‌ಸ್ಟೆಬಲ್ ಮರದ ಹತ್ತಿರ ಹೋಗಿ, ಅಲ್ಲಿಯೇ ದನ ಕಾಯುತ್ತಿದ್ದ ಹುಡುಗನನ್ನು ಗುಬ್ಬಚ್ಚಿಗೂಡು ಕಿತ್ತುಕೊಡುವಂತೆ ಕೇಳುತ್ತಾನೆ.
ಆ ಹುಡುಗ ಒಪ್ಪುವುದಿಲ್ಲ. ಕೇಳಿದಷ್ಟು ಹಣ ಕೊಡುವುದಾಗಿ ಹೇಳುತ್ತಾನೆ. ಅದಕ್ಕೂ ಆ ಹುಡುಗ ಒಪ್ಪುವುದಿಲ್ಲ. ಕಾರಿನಲ್ಲಿ ಕುಳಿತಿರುವವರು ಭಾರತದ ದೊಡ್ಡ ಅಧಿಕಾರಿಗಳು, ಆ ರೀತಿ ಆಗುವುದಿಲ್ಲ ಎಂದು ಹೇಳಬಾರದು ಎಂದು ಕಾನ್‌ಸ್ಟೆಬಲ್ ಹೇಳಿದಾಗ, ಹುಡುಗ ಹೇಳುತ್ತಾನೆ, ‘ಗೂಡಿನಲ್ಲಿ ಮರಿಗಳಿವೆ. ಅವುಗಳಿಗೆ ಆಹಾರ ತರಲು ಅಮ್ಮ ಗುಬ್ಬಿ ಹೊರಗೆ ಹೋಗಿದೆ. ಅದು ವಾಪಸ್ ಬಂದಾಗ, ಗೂಡು ಮತ್ತು ಮರಿಗಳು ಇಲ್ಲದ್ದನ್ನು ತಿಳಿದು ಅಳುತ್ತದೆ. ಅದನ್ನು ನೋಡಿ ಸಹಿಸುವ ಶಕ್ತಿ ನನಗಿಲ್ಲ’. ಹುಡುಗನ ಈ ಮಾತನ್ನು ಕೇಳಿಸಿಕೊಂಡ ಶೇಷನ್ ಅವರಿಗೆ ಆಘಾತವಾಗುತ್ತದೆ. ಅವರು ಹೇಳುತ್ತಾರೆ, ‘ನನ್ನ ಐಎಎಸ್ ಪದವಿ, ನಾನು ಅಲಂಕರಿಸಿರುವ ಹುದ್ದೆ ಎಲ್ಲವೂ ಆ ಹುಡುಗನ ಮುಂದೆ ಆವಿಯಾಯಿತು. ಆ ಹುಡುಗನ ಎದುರಲ್ಲಿ ನಾನು ಕುಬ್ಜನಾಗಿ ಹೋದೆ’. ಅದರಿಂದ, ನಾವು ಏನಾಗಿದ್ದೇವೆ
ಅನ್ನುವುದಕ್ಕಿಂತ, ನಾವು ಹೇಗೆ ನಡೆದುಕೊಳ್ಳುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ.
ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
ಕನಸಿನ ಮಾತು!
ರಾಜ್ಯದಲ್ಲಿ ಚುನಾವಣಾ ಪ್ರಚಾರ ಬಿರುಸುಗೊಳ್ಳುತ್ತಿದೆ. ಮತದಾರರ ಮನವೊಲಿಕೆಗೆ ಕಸರತ್ತು ಚುರುಕುಗೊಂಡಿದೆ. ಇದು ಮಾಮೂಲಿ ಎಂದುಕೊಂಡರೂ ಈ ಬಾರಿಯ ಪ್ರಚಾರದ ವೈಖರಿ ಆತಂಕ ಮೂಡಿಸುವಂತಿದೆ! ಸೀರೆ, ಬಾಗಿನ, ತುಂಡು– ಗುಂಡಿನ ಊಟ ಅಂತ ದಿನಬೆಳಗಾದರೆ ಯಾವುದೋ ಒಂದು ಆಮಿಷ ಮತದಾರರನ್ನು ಎದುರುಗೊಳ್ಳುತ್ತಿದೆ. ಇಷ್ಟೆಲ್ಲ ವೆಚ್ಚ ಮಾಡುವ ಅಭ್ಯರ್ಥಿಗಳು ಗೆದ್ದ ಮೇಲೆ ಅದನ್ನು ಬಡ್ಡಿಸಹಿತ ವಸೂಲಿ ಮಾಡದೇ ಬಿಡುವರೆ? ಇನ್ನು ಮುಂದೆ ಜನಸಾಮಾನ್ಯರು ಚುನಾವಣೆಗೆ ನಿಂತು ಗೆಲ್ಲುವುದು ಹಾಗೂ ಚುನಾವಣೆಗಳನ್ನು ನೀತಿಯುತವಾಗಿ ನಡೆಸುವುದು ಕನಸಿನ ಮಾತಾಗಬಹುದೇನೋ?! ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರ್, ಕೊಪ್ಪ
ಲಾಡು ಏನಾಯ್ತು ಮಗಾ...?!
ಅಂದು ಏಳನೇ ವೇತನ ಆಯೋಗ ರಚನೆಯಾದಾಗ ಎಲ್ಲರೂ ನೌಕರರಿಗೆ ಹೇಳಿದರು ‘ಲಾಡು ಬಿತ್ತು ಮಗಾ’ ಎಂದು! (ಆಗ ನೌಕರರ ಸಂಘದವರು ಬಾಕ್ಸ್‌ನಲ್ಲಿ ಏಳೇಳು ಲಾಡು ತುಂಬಿ ಹಂಚಿದ್ದರು).
ಈಗ ಬಜೆಟ್‌ನಲ್ಲಿ ವೇತನ ಆಯೋಗದ ಬಗ್ಗೆ ಸೊಲ್ಲಿಲ್ಲದ ವಿಚಾರ ತಿಳಿದು, ನೌಕರರನ್ನು ಎಲ್ಲರೂ ಕೇಳುತ್ತಿದ್ದಾರೆ ‘ಲಾಡು ಬಿದ್ದೋಯ್ತಾ ಮಗಾ’ ಎಂದು! ಜೆ.ಬಿ.ಮಂಜುನಾಥ, ಪಾಂಡವಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.