ADVERTISEMENT

ವಾಚಕರ ವಾಣಿ: ಮನವಿ ನೀಡಿಕೆ: ನಡೆಯಲಿ ಆತ್ಮಾವಲೋಕನ

ವಾಚಕರ ವಾಣಿ
Published 15 ಜುಲೈ 2024, 23:38 IST
Last Updated 15 ಜುಲೈ 2024, 23:38 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಮನವಿ ನೀಡಿಕೆ: ನಡೆಯಲಿ ಆತ್ಮಾವಲೋಕನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮರಾಜನಗರದಲ್ಲಿ ರೈತರು ಕೊಟ್ಟ ಮನವಿಪತ್ರ ಕಸದಬುಟ್ಟಿಗೆ ಸೇರಿದ್ದು ನೇರವಾಗಿ ಗಮನಕ್ಕೆ ಬಂದದ್ದರಿಂದ ರೈತರು ಅದನ್ನು ಖಂಡಿಸಿ ಪ್ರತಿಭಟನೆ ನಡೆಸುವಂತಾಯಿತು. ಆದರೆ, ವಾಸ್ತವದಲ್ಲಿ ಯಾವುದೇ ಪರಿಣಾಮ ಬೀರದ ಮನವಿಪತ್ರಗಳೆಲ್ಲವೂ ಕಸದಬುಟ್ಟಿ ಸೇರಿದಂತೆಯೇ ತಾನೆ? ಸ್ಪರ್ಧೆಗೆ ಇಳಿದು ಮನವಿಪತ್ರ ಕೊಡುವುದು, ಹೀಗೆ ಕೊಟ್ಟಿದ್ದು ಪತ್ರಿಕೆಗಳಲ್ಲಿ ಸುದ್ದಿಯಾದ ಮಾತ್ರಕ್ಕೇ ತೃಪ್ತರಾಗುವ ಮನೋಭಾವವನ್ನು ಹಲವು ರೈತ ಮುಖಂಡರು ರೂಢಿ ಮಾಡಿಕೊಂಡಿದ್ದಾರೆ. ಹೀಗಾಗಿಯೇ ರೈತ ಸಂಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದು ಅಪರೂಪವಾಗುತ್ತಿದೆ. ಮೊದಲು ನಮಗೆ ಗೌರವ ಸಿಕ್ಕಿದರೆ ನಂತರ ಅದು ನಮ್ಮ ಮನವಿಗೂ ಸಲ್ಲುತ್ತದೆ. ನಮ್ಮನ್ನೇ ಹಗುರವಾಗಿ ನೋಡುವಾಗ ಇನ್ನು ನಮ್ಮ ಮನವಿಗೆ ಯಾವ ಮನ್ನಣೆ ಸಿಕ್ಕೀತು? ಈ ಬಗ್ಗೆ ಇನ್ನಾದರೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ವೈಯಕ್ತಿಕ ಮಾನ್ಯತೆಗೆ ಸಂತಸಪಡುವುದರ ಜೊತೆಗೆ ಒಗ್ಗೂಡಿ ಅರ್ಹ ಬೇಡಿಕೆಗಳನ್ನು ಮಂಡಿಸಿದರೆ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದೇನೊ.

ADVERTISEMENT

-ತೇಜಸ್ವಿ ವಿ. ಪಟೇಲ್, ಕಾರಿಗನೂರು

ಬಂದೂಕು ನೀತಿ ಬದಲಾಗಲಿ

ಅಮೆರಿಕದಲ್ಲಿ ಬಂದೂಕು ಎಂಬುದು ಆಟಿಕೆಯ ಬಳಕೆಯಂತೆ ಆಗಿರುವುದನ್ನು ತಿಳಿದು (ಪ್ರ.ವಾ., ಜುಲೈ 15) ದಿಗ್ಭ್ರಮೆಯಾಯಿತು. ಬಂದೂಕು ಹೊಂದುವುದು ಆ ದೇಶದಲ್ಲಿ ಪ್ರತಿಷ್ಠೆಯ ಸಂಕೇತವಾಗಿದೆ. ಪ್ರತಿದಿನವೂ ಅಲ್ಲಿ ಬಂದೂಕಿನ ದಾಳಿಯಿಂದ ಸಾವು ಹಾಗೂ ಆತ್ಮಹತ್ಯೆಗಳು ಸಂಭವಿಸುತ್ತಿರುವುದು ನಾಗರಿಕ ಸಮಾಜಕ್ಕೆ ಸವಾಲೇ ಸರಿ. ತಮ್ಮದು ಪ್ರಪಂಚದ ಅತ್ಯುನ್ನತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವ ಅಮೆರಿಕದ ರಾಜಕೀಯ ಪಕ್ಷಗಳೇ ಬಂದೂಕು ಹೊಂದುವುದನ್ನು ಮೂಲಭೂತ ಹಕ್ಕು ಎನ್ನುವಂತೆ ಪ್ರತಿಪಾದಿಸುತ್ತಿರುವುದು ವಿಪರ್ಯಾಸ.

ಬಂದೂಕಿನ ಬಳಕೆಯನ್ನು ಉತ್ತೇಜಿಸುವ ಸಲುವಾಗಿಯೇ ಅಮೆರಿಕದ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಎಂಬ ಸಂಸ್ಥೆ ಇರುವುದು ಹಾಗೂ ಅದು 30 ಲಕ್ಷ ಸದಸ್ಯರನ್ನು ಹೊಂದಿರುವುದು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಅದು ದೇಣಿಗೆ ನೀಡುತ್ತಿರುವುದು ಅಲ್ಲಿ ಆ ಸಂಸ್ಥೆ ಎಷ್ಟು ಬಲಾಢ್ಯವಾಗಿದೆ ಎನ್ನುವುದರ ದ್ಯೋತಕ. ಬಂದೂಕು ನಿಯಂತ್ರಣ ಕಾನೂನಿನ ವಿರುದ್ಧ ಇರುವ ಡೊನಾಲ್ಡ್ ಟ್ರಂಪ್‌, ಅದರ ಪರಿಣಾಮವನ್ನು ಈಗ ಸ್ವತಃ ಅನುಭವಿಸಿದ್ದಾರೆ. ಅಮೆರಿಕದಲ್ಲಿ ಯಾರನ್ನು, ಯಾರು, ಎಲ್ಲಿ, ಹೇಗೆ ಬೇಕಾದರೂ ಕೊಲ್ಲುವುದೇ ಸ್ವಾತಂತ್ರ್ಯ ಎಂಬಂತೆ ಆಗಿರುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಇನ್ನಾದರೂ ಬಂದೂಕು ಹೊಂದುವುದಕ್ಕೆ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಕಠಿಣ ನಿರ್ಬಂಧ, ಕಡಿವಾಣದ ಅಗತ್ಯ ಇದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವ, ನಾಗರಿಕ ಸಮಾಜ ಎಂಬ ಪದಗಳಿಗೆ ಅರ್ಥವೇ ಇರುವುದಿಲ್ಲ.

-ಮುಳ್ಳೂರು ಪ್ರಕಾಶ್, ಮೈಸೂರು

ಓದುವ ಮನಸ್ಸಿದೆ: ಓದಿಸುವವರಾರು?

‘ಜ್ಞಾನವೆಂಬ ದೀಪದ ಕೆಳಗಿನ ಕತ್ತಲೆ’ ಎಂಬ ಗೀತಾ ವಸಂತ ಅವರ ಲೇಖನ (ಪ್ರ.ವಾ., ಜುಲೈ 15) ಶೈಕ್ಷಣಿಕ ವ್ಯವಸ್ಥೆಯ ಬಗೆಗೆ ಸಾರ್ವಜನಿಕವಾಗಿ ಇರುವ ಹಲವು ಆತಂಕಗಳನ್ನು ತೆರೆದಿಟ್ಟಿದೆ. ಪ್ರಸ್ತುತ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳ ಅಧ್ಯಾಪಕರು ಸ್ವ ಅವಲೋಕನ ಮಾಡಿಕೊಳ್ಳುವಲ್ಲಿ ವಿಫಲರಾಗಿರುವುದು ಕಳವಳಕಾರಿ. ಪಠ್ಯಕೇಂದ್ರಿತ ಓದಿಗಿಂತ ವಿದ್ಯಾರ್ಥಿಕೇಂದ್ರಿತ ಓದು ಮುನ್ನೆಲೆಗೆ ಬರಬೇಕು ಎಂಬ ಆಶಯ ಮರೀಚಿಕೆಯಾಗಿದೆ. ವಿಶ್ವವಿದ್ಯಾಲಯದ ಓದು ಬದುಕಿಗೆ ದಾರಿದೀಪವಾಗಬೇಕೇ ವಿನಾ ದಾರಿಗೆ ಮುಳ್ಳಾಗಬಾರದು. ಹೆಚ್ಚಿನ ತಿಳಿವಳಿಕೆ, ಜ್ಞಾನಕ್ಕಾಗಿ ಹಂಬಲಿಸಿದ ನಾನು ಕೂಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದುಕೊಂಡು ಅರಿವನ್ನು ವಿಸ್ತರಿಸಿಕೊಳ್ಳಲು ಮುಂದಾದೆ. ಆದರೆ ಅಲ್ಲಿನ ಜ್ಞಾನದ ಅವಸ್ಥೆ ಕಂಡು ಮರುಗಬೇಕಾಯಿತು,ಮೂಕನಾಗಬೇಕಾಯಿತು. ಅಧ್ಯಾಪಕರು ಕೌಶಲರಹಿತರಾಗಿ ಪಾಠ ಮಾಡುತ್ತಿದ್ದರು. ಹೆಚ್ಚಿನ ವಿಚಾರಗಳ ಬಗ್ಗೆ ಚರ್ಚೆ ಕೂಡ ಆಗುತ್ತಿರಲಿಲ್ಲ. ಒಬ್ಬ ಅಧ್ಯಾಪಕರಂತೂ ತರಗತಿಗೆ ಸರಿಯಾಗಿ ಬರುತ್ತಿರಲೇ ಇಲ್ಲ. ಅವರ ಪಾಠ ಕೇಳಬೇಕೆಂಬ ಆಸೆ ಇತ್ತಾದರೂ ಅವರು ಕೈಗೆಟಕುತ್ತಿರಲಿಲ್ಲ. ಸ್ವ ಕಲಿಕೆಗೂ ಸೂಕ್ತ ಮಾರ್ಗದರ್ಶನ ಲಭ್ಯವಾಗಲಿಲ್ಲ. ಯಾಕಾದರೂ ವಿಶ್ವವಿದ್ಯಾಲಯಕ್ಕೆ ಬಂದೆನೋ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಇಂದಿಗೂ ಕಾಡುತ್ತದೆ.

ತಮ್ಮ ಬರವಣಿಗೆ, ಪುಸ್ತಕಗಳನ್ನು ಹೊರತರುವುದರಲ್ಲೇ ಹೆಚ್ಚಿನ ಅಧ್ಯಾಪಕರು ಮುಳುಗಿರುತ್ತಾರೆ. ‘ಕಲಿಸಿದಾತಂ ವರ್ಣಮಾತ್ರಂ ಗುರು’ ಎಂಬ ಮಾತು ಈಗ ಹುಸಿಯಾಗತೊಡಗಿದೆ. ಜ್ಞಾನಧಾರೆಯ ಸಂಸ್ಕೃತಿ ಮಾಯವಾಗುತ್ತಿದೆ. ಅಹಂನ ಕತ್ತಲೆಯೊಳಗೆ ನಾವೆಲ್ಲರೂ ಮುಳುಗುತ್ತಿದ್ದೇವೆ. ಓದುವ ಮನಸ್ಸುಗಳಿಗೆ ಓದಿಸುವವರು ಯಾರು ಎಂಬ ಸಮಸ್ಯೆ ಸವಾಲಾಗಿ ನಿಂತಿದೆ. ಇದರ ಬಿಡುಗಡೆಯ ದಾರಿಗಳು ಯಾವುವು ಎಂದು ಹುಡುಕಬೇಕಾಗಿದೆ. 

-ರಾಜೇಂದ್ರಕುಮಾರ್ ಕೆ. ಮುದ್ನಾಳ್, ಯಾದಗಿರಿ

ಸದನ ಇರುವುದು ಗದ್ದಲಕ್ಕಲ್ಲ

ಸೋಮವಾರ ಆರಂಭವಾಗಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಆದರೆ ಇತ್ತೀಚೆಗೆ ಅಧಿವೇಶನ ಎಂದರೆ ಆಡಳಿತ ಹಾಗೂ ವಿರೋಧ ಪಕ್ಷಗಳ‌ ನಡುವಿನ ಜಟಾಪಟಿ, ಜಂಗಿ ಕುಸ್ತಿಗೆ ವೇದಿಕೆ ಎಂಬಂತಾಗಿದೆ. ಈ ಬಾರಿಯಾದರೂ ಬರೀ ಸದ್ದುಗದ್ದಲ, ಪ್ರತಿಪಕ್ಷಗಳ ಸಭಾತ್ಯಾಗಗಳಿಗಷ್ಟೇ ಸದನದ ಸಮಯ ವ್ಯರ್ಥವಾಗದಿರಲಿ.

ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡ ಹತ್ತಾರು ವಿಷಯಗಳ ವಿಸ್ತೃತವಾದ ಚರ್ಚೆಗೆ ಸದನದಲ್ಲಿ ಸಮಯ ಮೀಸಲಿದ್ದರೆ ಒಳ್ಳೆಯದು. ಆಡಳಿತ ಮತ್ತು ವಿರೋಧಿ ಪಾಳಯ ಎರಡೂ ಕಡೆಯ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪ, ಏರುದನಿ, ನಿಂದನೆಯ ಮಾತುಗಳಿಗೆ ಸೀಮಿತರಾಗದೆ, ದಾಖಲೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಲಿ. ಅದಕ್ಕೆ ಉತ್ತರ ನೀಡುವ ನಿರ್ದಿಷ್ಟ ಸಮಯ ಬಂದಾಗ ಸರ್ಕಾರ ಸಹ ದಾಖಲೆ ಸಮೇತ ಉತ್ತರಿಸಿದರೆ ಸದನದ ಸಮಯ ಸದ್ವಿನಿಯೋಗವಾದಂತೆಯೇ ಸರಿ. ಸದಸ್ಯರು ತಮಗೆ ಸಿಕ್ಕಿದ ಸಮಯಾವಕಾಶವನ್ನು ಅರ್ಥಪೂರ್ಣ ವಿಷಯಗಳಿಗೆ ಸದ್ಬಳಕೆ ಮಾಡಿಕೊಳ್ಳುವುದು ಒಳ್ಳೆಯದು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.