ಬಹುಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಮಾಡಬೇಕು ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟಿದ್ದರೆ, ಸಮ್ಮೇಳನದ ಸ್ವರೂಪ ಬದಲಾಗಲಿ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರತಿಪಾದಿಸಿದ್ದಾರೆ (ಪ್ರ.ವಾ., ನ. 21). ನದಿಯ ನೀರೊಳಗೆ ಬಯಲಿನ ನೀರು ಹರಿದರೂ ನದಿ ನೀರಿನ ಅಸ್ತಿತ್ವ ಕೆಡದಂತೆ ಇರಬೇಕೇ ವಿನಾ ನದಿ ತನ್ನ ಅಸ್ತಿತ್ವವನ್ನೇ ಬಿಟ್ಟುಕೊಟ್ಟು, ಬಯಲಿನ ಬಣ್ಣಕ್ಕೆ ಬದಲಾಗಬಾರದು. ಇದು ಬಹು
ಸಂಸ್ಕೃತಿಯನ್ನು ಒಪ್ಪಿಕೊಳ್ಳಲು ಕನ್ನಡ ತನಗೆ ತಾನೇ ಹಾಕಿ
ಕೊಳ್ಳಬೇಕಾದ ಪರಿಮಿತಿ.
ಭಾರತ ಜನನಿಯ ಜೊತೆಯಲ್ಲೇ ಕನ್ನಡ ಮಾತೆ ಇದ್ದರೂ, ಕನ್ನಡ ತಾಯಿಗೆ ತನ್ನದೇ ಆದ ಜೀವಂತಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಿಂದ ಉದ್ಯೋಗ, ವ್ಯಾಪಾರಕ್ಕಾಗಿ ರಾಜ್ಯಕ್ಕೆ ಬರುವ ವಲಸಿಗರು ಇಲ್ಲಿಯೇ ಬೇರು ಬಿಡುತ್ತಿದ್ದಾರೆ. ಅಂತಹವರು ಕನ್ನಡ ಭಾಷೆಯನ್ನು ಕಲಿಯಲೇಬೇಕಾದ ಅನಿವಾರ್ಯ ರಾಜ್ಯದಲ್ಲಿಲ್ಲ. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗದಿದ್ದರೆ, ಮುಂದೊಂದು ದಿನ ಬಯಲು ನೀರಿನ ಗಾತ್ರಕ್ಕೆ ಸಿಕ್ಕಿ ನದಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ. ಈಗಾಗಲೇ ಹಿಂದಿ ಭಾಷೆಯು ಕನ್ನಡವನ್ನು ಗದರಿಸುವಷ್ಟು
ವ್ಯಾವಹಾರಿಕವಾಗಿ ಬೆಳೆಯುತ್ತಿದೆ. ಇಷ್ಟು ವರ್ಷಗಳಾದರೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನೂ ಕಡ್ಡಾಯ ಮಾಡುವಲ್ಲಿ ನಾವು ಸೋತಿದ್ದೇವೆ. ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಕಚೇರಿ ಮತ್ತು ಕಾರ್ಖಾನೆಗಳಲ್ಲಿ ಕನ್ನಡೇತರರು ತುಂಬಿಕೊಳ್ಳುತ್ತಿರುವುದನ್ನು ತಡೆಯಲು ನಮಗೆ ಶಕ್ತಿ ಬರಲಿಲ್ಲ. ಸಂಸದರು ರಾಜ್ಯದ ಜನರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ರಾಜಕಾರಣದ ಭ್ರಷ್ಟ ವ್ಯವಸ್ಥೆಯಲ್ಲಿ ಮತದಾರರೂ ಸೇರಿಕೊಂಡಿರುವ ಭಯ ಪ್ರಜಾಪ್ರಭುತ್ವವನ್ನು ಕಾಡುತ್ತಿದೆ. ರಾಷ್ಟ್ರಮಟ್ಟದ ಸಾಹಿತ್ಯ ವೇದಿಕೆಯಲ್ಲಿ ಇವೆಲ್ಲವೂ ಚರ್ಚೆಗೆ ಒಳಗಾಗಬೇಕು. ಊಟ, ಉಪಾಹಾರ, ಅಲಂಕಾರವೇ ಪ್ರಧಾನವಾಗದೆ, ಕನ್ನಡದ ವಾಸ್ತವಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಶಕ್ತಿ ಸಮ್ಮೇಳನಕ್ಕೆ ಬರಲಿ.
-ತಾ.ಸಿ.ತಿಮ್ಮಯ್ಯ, ಬೆಂಗಳೂರು
‘ಒಂದೊಳ್ಳೆ ನೌಕರಿ, ಸ್ಥಾನಮಾನ, ಗೌರವಕ್ಕೆಲ್ಲಾ ಇಂಗ್ಲಿಷೇ ಬುನಾದಿ ಎಂಬ ಮಿಥ್ಯೆಯೊಂದು ಗಾಢವಾಗಿ ಬೇರೂರಿದೆ’ ಎಂದು ಮುರಳೀಧರ ಕಿರಣಕೆರೆ ಅವರು ತಮ್ಮ ಲೇಖನದಲ್ಲಿ (ಸಂಗತ, ನ. 20) ಅಭಿಪ್ರಾಯ
ಪಟ್ಟಿದ್ದಾರೆ. ನಮ್ಮಲ್ಲಿ ಬಹುತೇಕರ ಮೂಢನಂಬಿಕೆ ಇದೇ ಆಗಿದೆ. ಖಾಸಗಿ ಉದ್ಯೋಗಕ್ಷೇತ್ರವು ಇಂಗ್ಲಿಷಿನೊಂದಿಗೆ ಬೆಸೆದುಕೊಂಡಿದೆ. ಒಕ್ಕೂಟ ಭಾರತದ ಉದ್ಯೋಗ ನೀತಿಯು ಹಿಂದಿ, ಇಂಗ್ಲಿಷ್ ಭಾಷೆಗಳೊಂದಿಗೆ ಬೆಸೆದುಕೊಂಡಿದೆ. ಕರ್ನಾಟಕ ಸರ್ಕಾರದ ಉದ್ಯೋಗ ನೀತಿಯೂ ನಿಧಾನವಾಗಿ ಇಂಗ್ಲಿಷಿನತ್ತ ವಾಲುತ್ತಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಕನ್ನಡದ ಬೆಳವಣಿಗೆಗೆ ಬೇಕಾಗಿರುವ ಚಿಕಿತ್ಸಕ ಪರಿಹಾರಗಳ ಬಗ್ಗೆ ಆಲೋಚಿಸಬೇಕು. ಇಂಗ್ಲಿಷನ್ನು ಬಿತ್ತಿ ಕನ್ನಡವನ್ನು ಬೆಳೆಯಲಾಗದು. ಪ್ರಸ್ತುತ ವ್ಯವಸ್ಥೆ ಬಿತ್ತುತ್ತಿರುವುದು ಇಂಗ್ಲಿಷ್ ಭಾಷೆಯನ್ನೇ, ಬಯಸುತ್ತಿರುವುದು ಕನ್ನಡ ಬೆಳೆಯನ್ನು!
-ಗಿರೀಶ್ ಮತ್ತೇರ, ಹೊದಿಗೆರೆ, ಚನ್ನಗಿರಿ
ರಾಜ್ಯದಲ್ಲಿ ಅರ್ಹರಲ್ಲದವರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿ, ಅವುಗಳನ್ನು ಎಪಿಎಲ್ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸುವ ನಿರ್ಧಾರ ಸೂಕ್ತವೂ ಸಮಂಜಸವೂ ಆಗಿದೆ. ಮುಖ್ಯಮಂತ್ರಿಯವರು ಇದಕ್ಕೆ ಸರಿಯಾದ ಸ್ಪಷ್ಟನೆ ನೀಡಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರ ಹೆಸರಿನಲ್ಲಿರುವ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನಷ್ಟೇ ರದ್ದುಪಡಿಸಬೇಕೆನ್ನುವ ಈ ನಿರ್ಧಾರಕ್ಕೆ ವಿರೋಧ ಸಲ್ಲದು. ವೋಟ್ ಬ್ಯಾಂಕ್ ದೃಷ್ಟಿಯಿಂದ ವಿರೋಧ ಪಕ್ಷಗಳೇನಾದರೂ ಈ ನಿರ್ಧಾರದ ವಿರುದ್ಧ ಪ್ರತಿಭಟಿಸಿದರೆ, ಅದು ಠುಸ್ ಪಟಾಕಿ ಆಗುವುದರಲ್ಲಿ ಎರಡು ಮಾತಿಲ್ಲ.
-ನರೇಂದ್ರ ಘೋರ್ಪಡೆ, ಭದ್ರಾವತಿ
ಚುನಾವಣೆಗಳಲ್ಲಿ ಮತದಾನ ಮುಗಿದ ಮೇಲೆ ವಿವಿಧ ಸಂಸ್ಥೆಗಳು ತಾವು ಅದುವರೆಗೂ ಕಲೆಹಾಕಿದ ಮಾಹಿತಿಯ ಆಧಾರದಲ್ಲಿ, ಯಾವ ಪಕ್ಷ ಅಥವಾ ಪಕ್ಷಗಳ ಮೈತ್ರಿಕೂಟಕ್ಕೆ ಕನಿಷ್ಠ, ಗರಿಷ್ಠ ಸ್ಥಾನಗಳು ಲಭ್ಯವಾಗುತ್ತವೆ ಮತ್ತು ಯಾವುದು ಅಧಿಕಾರದ ಗದ್ದುಗೆಯನ್ನು ತನ್ನದಾಗಿ ಮಾಡಿಕೊಳ್ಳುವ ಸ್ಥಿತಿಯಲ್ಲಿದೆ ಎಂಬ ಭವಿಷ್ಯವನ್ನು ಜನರ ಮುಂದಿಡುತ್ತವೆ. ಇದೀಗ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆ ಬಗ್ಗೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ವಿವಿಧ ಸಂಸ್ಥೆಗಳು ಕೊಟ್ಟಿರುವ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದಾಗ, ಅಲ್ಲಿರುವ ಅಂದಾಜುಗಳಲ್ಲಿ ಕಂಡುಬರುವ ವ್ಯತ್ಯಾಸ ಹುಬ್ಬೇರಿಸುವಂತಿದೆ. ಎರಡು ಸಂಸ್ಥೆಗಳು ಒಂದು ಮೈತ್ರಿಕೂಟದ ಬಗ್ಗೆ ಕೊಟ್ಟಿರುವ ಕನಿಷ್ಠ– ಗರಿಷ್ಠ ಸಂಖ್ಯೆಗಳಲ್ಲಿ 25ರಿಂದ 38 ಸ್ಥಾನಗಳವರೆಗೂ ಅಂತರ ಕಂಡುಬರುತ್ತದೆ. ಇನ್ನು ಕೆಲವು ಸಂಸ್ಥೆಗಳ ಅಂದಾಜು ಹೆಚ್ಚು ಕಡಿಮೆ ಹೊಂದಿಕೆಯಾಗುತ್ತದೆ.
ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಲ್ಲಿ ಅಥವಾ ಶೇಕಡ 75ರಷ್ಟು ಕ್ಷೇತ್ರಗಳಲ್ಲಿ, ವಿವಿಧ ಸಂಸ್ಥೆಗಳು ಪ್ರತ್ಯೇಕವಾಗಿ ನಡೆಸಿದ ಸಮೀಕ್ಷೆಯಲ್ಲಿ ಒಂದು ಪಕ್ಷದ ಅಭ್ಯರ್ಥಿಯ ಗೆಲುವು ಅಥವಾ ಸೋಲು ಇಂಥಿಂಥ ಕ್ಷೇತ್ರಗಳಲ್ಲಿ ಕಂಡುಬರುತ್ತದೆ ಎಂಬ ನಿರ್ದಿಷ್ಟ ತೀರ್ಮಾನಕ್ಕೆ ಬಹುತೇಕ ಎಲ್ಲಾ ಸಂಸ್ಥೆಗಳು ಬಂದಿವೆ ಎನ್ನುವುದಾದರೆ, ಸಮೀಕ್ಷೆಗಳ ಬಗ್ಗೆ ಭರವಸೆ ಹುಟ್ಟುತ್ತದೆ. ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸಮೀಕ್ಷೆಗಳು ತಲೆಕೆಳಗಾಗಿದ್ದುದು ನಮಗೆ ನೆನಪಿದೆ ಅಲ್ಲವೇ? ಎದ್ಹೋಗೋ ಮಾತು ಬಿದ್ಹೋಗೋ ರೀತಿಯಲ್ಲಿ ಅನ್ನುವಂತಾದರೆ, ಸಮೀಕ್ಷೆಗಳು ಏನು ಸಾಧಿಸಿದ ಹಾಗಾಯಿತು?
-ಸಾಮಗ ದತ್ತಾತ್ರಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.