‘ನಲುಗಿದ ಕಾಮಧೇನು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಅಕ್ಟೋಬರ್ 16) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
‘ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ’
ರಾಸುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ನಿವಾರಣೆಗೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗವನ್ನು ತಡೆಯಲು ರೈತರು ಪ್ರಾಥಮಿಕ ಹಂತದಲ್ಲಿ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಈಗಾಗಲೇ ರೈತರು ಈ ರೋಗಕ್ಕೆ ತುತ್ತಾದ ಜಾನುವಾರುಗಳನ್ನು ಸಾಕಲು ಸಾಧ್ಯವಾಗದ ಉದಾಹರಣೆಗಳಿವೆ. ಸದ್ಯ ರೈತರ ಬದುಕು ಚಿಂತಾಜನಕವಾಗಿದೆ.
–ಅನುಷಾ ಎಚ್.ಜಿ., ಹೆಬ್ಬಾಳು ಕೊಪ್ಪಲು, ಕೆ.ಆರ್. ನಗರ ತಾಲ್ಲೂಕು, ಮೈಸೂರು
–––
‘ಪರಿಹಾರ ಮೊತ್ತ ಹೆಚ್ಚಿಸಿ’
ರಾಜ್ಯದಾದ್ಯಂತ ಚರ್ಮಗಂಟು ರೋಗದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರಾಥಮಿಕ ಚಿಕಿತ್ಸೆಯಲ್ಲಿ ನಾಟಿ ಔಷಧಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ತುರ್ತಾಗಿ ಮೇಕೆ ಸಿಡುಬುಲಸಿಕೆಯ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ರೋಗ ನಿಯಂತ್ರಿಸಲು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು.
–ಚೈತ್ರಾ ಕೆ, ಚಿತ್ರದುರ್ಗ
–––––––
‘ಜಾಗರೂಕತೆ ಅವಶ್ಯ’
ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹರಡುತ್ತಿರುವುದರಿಂದ ರೈತರು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲವಾಗುತ್ತಿದ್ದಾರೆ. ಸರ್ಕಾರ ಕೋವಿಡ್ ವಿಚಾರದಲ್ಲಿ ಎಷ್ಟು ಜಾಗರುಕವಾಗಿತ್ತೋ, ಅದೇ ರೀತಿ ಜಾನುವಾರುಗಳ ವಿಚಾರದಲ್ಲೂ ಅಷ್ಟೇ ಎಚ್ಚರ ವಹಿಸಿ ರೈತನ ಬೆನ್ನಿಗೆ ನಿಲ್ಲಬೇಕು.
-ಆನಂದ ಎಂ. ಗೌಡ, ಚಿಕ್ಕಬಳ್ಳಾಪುರ
ಜಾಗತಿಕ ಮಟ್ಟದಲ್ಲಿ ಚರ್ಚಿಸಿ
ವೈರಾಣುವನ್ನು ನಿಯಂತ್ರಿಸುವ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಆದಷ್ಟು ಬೇಗ ಕಂಡು ಹಿಡಿದು ಚಿಕಿತ್ಸೆ ನೀಡಬೇಕು. ಈ ರೋಗದ ಬಗ್ಗೆ ಜಾಗತಿಕ ಪ್ರಾಣಿಗಳ ಕಲ್ಯಾಣ ಸಂಸ್ಥೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಚಚಿ೯ಸಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿರುವ ದೇಶದಿಂದ ಮಾಹಿತಿಯನ್ನು ಪಡೆದು ಕಾಯಿಲೆಗೆ ತುತ್ತಾದ ಪ್ರಾಣಿಯನ್ನು ಪ್ರಯೋಗಕ್ಕೆ ಬಳಸಿಕೊಂಡು ಆದಷ್ಟು ಬೇಗ ಈ ರೋಗಕ್ಕೆ ರಾಮಬಾಣವನ್ನು ಕಂಡುಹಿಯಬೇಕು. ರೋಗ ಹರಡಿರುವ ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾವಾರು ಪ್ರತ್ಯೇಕ ಕೇಂದ್ರಗಳನ್ನಾಗಿ ವಿಂಗಡಿಸಿ ಚಿಕಿತ್ಸೆ ನೀಡಬೇಕು. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಶಾಶ್ವತ ಪರಿಹಾರವನ್ನು ನೀಡಬೇಕು.
–ಮುಬೀನಾ ಪಿ, ವಿಜಯನಗರ
–––
‘ಸರ್ಕಾರಿ ನೌಕರರ ಒಂದು ದಿನದ ವೇತನ ಮೀಸಲಿಡೋಣ’
ಚರ್ಮಗಂಟು ರೋಗ ನಮ್ಮ ಮಾತೃ ಸಮಾನವಾದ ಕಾಮಧೇನುವನ್ನು ಕಾಡುತ್ತಿದೆ. ಇದರಿಂದ, ದೇಶದ ಬೆನ್ನೆಲುಬಾದ ರೈತನ ಬಾಳಿಗೂ ಧಕ್ಕೆಯುಂಟಾಗಿದೆ. ಆದ್ದರಿಂದ, ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ಪುಣ್ಯಕೋಟಿಯ ಚಿಕಿತ್ಸೆಗೆ ಮೀಸಲಿಡೋಣ.
–ನಿಂಗನಗೌಡ ಗುಂಡಕನಾಳ, ಶಿಕ್ಷಕ, ಬಸವೇಶ್ವರ ಪ್ರೌಢಶಾಲೆ ಕಲಕೇರಿ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.