ADVERTISEMENT

ವಾಚಕರ ವಾಣಿ: ವೃತ್ತಿ ನಿಂದನೆ ಸರಿಯೇ?

ಪ್ರಜಾವಾಣಿ ವಿಶೇಷ
Published 4 ಫೆಬ್ರುವರಿ 2024, 20:08 IST
Last Updated 4 ಫೆಬ್ರುವರಿ 2024, 20:08 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ವೃತ್ತಿ ನಿಂದನೆ ಸರಿಯೇ?

‘ಕಲ್ಲೊಡೆದುಕೊಂಡು ಇದ್ದವರನ್ನು ಲೋಕಸಭೆಗೆ ಆರಿಸಿ ಕಳಿಸಿದರೆ ಇನ್ನೇನಾಗುತ್ತದೆ’ ಎಂದು, ಪ್ರತ್ಯೇಕ ರಾಷ್ಟ್ರದ
ಪರ ಧ್ವನಿ ಎತ್ತಿರುವ ಸಂಸದ ಡಿ.ಕೆ.ಸುರೇಶ್‌ ಅವರ ವಿರುದ್ಧ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿರುವುದನ್ನು (ಪ್ರ.ವಾ., ಫೆ. 3) ಓದಿ ಬೇಸರವಾಯಿತು. ದೇಶದ ಸಾಂವಿಧಾನಿಕ ಹುದ್ದೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಕೊಟ್ಟಿರುವ ಅವಕಾಶದ ಮೇಲೆ ಸಿಗುತ್ತದೆಯೇ ವಿನಾ ಯಾವುದೇ ವೃತ್ತಿ, ಜಾತಿ, ಭಾಷೆಯ ಆಧಾರದಲ್ಲಿ ಅಲ್ಲ. ಈ ಸಾಮಾನ್ಯ ವಿಷಯವನ್ನು ಕುಮಾರಸ್ವಾಮಿ ಅವರು ಮರೆತರೇ? ಅವರ ಹೇಳಿಕೆಯಂತೆಯೇ ನೋಡುವುದಾದರೆ, ಎಚ್‌.ಡಿ.ದೇವೇಗೌಡರದು ರೈತ ಕುಟುಂಬ. ‘ನಾವು ಮಣ್ಣಿನ ಮಕ್ಕಳು’ ಎಂದು ಹೇಳಿಕೊಳ್ಳುವವರು ಸಂಸದರೂ ಆದರು, ದೇಶದ ಪ್ರಧಾನಿಯೂ ಆದರು. ಹಾಗಾದರೆ ಆಗ ಅವರಿಗೆ ಅವರ ಕೌಟುಂಬಿಕ ವೃತ್ತಿಯ ಆಧಾರದಲ್ಲಿ ಹುದ್ದೆಯನ್ನು ನಿರಾಕರಿಸಲಾಯಿತೇ? ಈ ರೀತಿಯ ಟೀಕೆಯು ಕಲ್ಲು ಒಡೆಯುವ ಕೆಲವು ಸಮುದಾಯಗಳ ಜನರನ್ನು ಹಾಗೂ ಅವರ ವೃತ್ತಿಯನ್ನು ಕೇವಲವಾಗಿ ಕಂಡು, ಅವರನ್ನು ಅವಮಾನಿಸಿದಂತೆ ಆಗುವುದಿಲ್ಲವೇ?

ADVERTISEMENT

ಹುಸೇನಬಾಷಾ, ತಳೇವಾಡ, ಹುಬ್ಬಳ್ಳಿ

***

ಜಿಎಸ್‌ಟಿ ಪಾಲು: ಪ್ರತಿದಿನವೂ ಹಂಚಿಕೆಯಾಗಲಿ

ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದ ಮೇಲೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ನಿಜಕ್ಕೂ ಪೆಟ್ಟಾಗಿದೆ. ತಮ್ಮ ಪಾಲಿನ ಜಿಎಸ್‌ಟಿ ಹಣಕ್ಕಾಗಿ ಅವು ಕೇಂದ್ರದ ಮುಂದೆ ಪದೇಪದೇ ಬೇಡುತ್ತಾ ನಿಲ್ಲಬೇಕಾಗಿದೆ. ರಾಜ್ಯಗಳ ಪಾಲು ಹಲವಾರು ಸಂದರ್ಭಗಳಲ್ಲಿ ಬೆಟ್ಟದಂತೆ ಬೆಳೆದು ಒತ್ತಡ ಹೆಚ್ಚಿದಾಗ, ಒಂದಷ್ಟು ಪಾಲನ್ನು ನೀಡುತ್ತಾ ರಾಜ್ಯಗಳಿಗೆ ದೊಡ್ಡ ಉಪಕಾರವನ್ನು ಮಾಡಿದ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದೆ ಕೇಂದ್ರ. ಇದರ ಬದಲಿಗೆ, ಪ್ರತಿದಿನವೂ ಸಂಗ್ರಹವಾಗುವ ಜಿಎಸ್‌ಟಿ ಹಣದಲ್ಲಿ ರಾಜ್ಯದ ಪಾಲು ಮತ್ತು ಕೇಂದ್ರದ ಪಾಲು ಎಂದು ವಿಭಜಿಸಿ, ಆಯಾ ದಿನದ ಜಿಎಸ್‌ಟಿ ಪಾಲನ್ನು ಆಯಾ ದಿನವೇ ಸಂಬಂಧಪಟ್ಟ ಸರ್ಕಾರಗಳ ಖಜಾನೆಗೆ ನೀಡುವಂತಹ ತಂತ್ರಾಂಶವನ್ನು ಅಳವಡಿಸಬೇಕಾಗಿದೆ. ಇಂತಹ ಒಂದು ವ್ಯವಸ್ಥೆ ಬರದಿದ್ದರೆ ರಾಜ್ಯಗಳು ಬಹಳಷ್ಟು ಸಂದರ್ಭಗಳಲ್ಲಿ ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುತ್ತವೆ.

ಇನ್ನು ಕೇಂದ್ರ ಸರ್ಕಾರ ಹಲವಾರು ಯೋಜನೆಗಳಿಗೆ ರಾಜ್ಯಗಳು ನೀಡುವ ಪಾಲಿಗಿಂತ ಕಡಿಮೆ ಮೊತ್ತವನ್ನು ನೀಡಿದ್ದರೂ ಇವು ತನ್ನ ಯೋಜನೆಗಳು ಎಂದು ಜಾಹೀರಾತಿನಲ್ಲಿ ಬಿಂಬಿಸಿಕೊಳ್ಳುವ ಉದಾಹರಣೆಗಳೂ ಇವೆ. ಇದು, ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯಗಳ ಸಾಧನೆ ಶೂನ್ಯ ಎಂಬ ರಾಜಕೀಯ ವಿಮರ್ಶೆಗಳಿಗೆ ದಾರಿಯಾಗುತ್ತದೆ.

ಕೆ.ಎಸ್.ನಾಗರಾಜ್, ಬೆಂಗಳೂರು

ಸಾವಿನ ಸುದ್ದಿಯಲ್ಲಿ ಹುಚ್ಚಾಟವೇಕೆ?

ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಜನಜಾಗೃತಿ ಮೂಡಿಸಲು, ತಾವು ನಿಧನರಾಗಿದ್ದಾಗಿ ನಟಿ, ರೂಪದರ್ಶಿ ಪೂನಂ ಪಾಂಡೆ ಸುಳ್ಳು ಸುದ್ದಿ ಹಬ್ಬಿಸಿದ್ದು ಮೂರ್ಖತನದ ಪರಮಾವಧಿ. ಅರಿವು ಮೂಡಿಸಲೇಬೇಕು ಎಂದಾದರೆ ಅದಕ್ಕೆ ಬಹಳಷ್ಟು ಮಾರ್ಗಗಳಿವೆ. ಅದನ್ನು ಬಿಟ್ಟು ತಾವು ಸತ್ತಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸುವುದು ‘ಅರಿವಿ’ಗೆ ಮಾಡುವ ಅಪಮಾನ. ಪ್ರಚಾರ ಪಡೆಯುವ ಸಲುವಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧ ಎನ್ನುವುದನ್ನು ಪೂನಂ ಪಾಂಡೆ ಸಾಬೀತು ಮಾಡಿದ್ದಾರೆ.

ಮುರುಗೇಶ ಡಿ., ದಾವಣಗೆರೆ

ಏಕತೆಯ ಹೆಸರಿನಲ್ಲಿ ಕಡೆಗಣನೆ

ಸಂಸದ ಡಿ.ಕೆ.ಸುರೇಶ್‌ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆ ನೋಡಿದರೆ, ಇಂತಹ ಮಾತುಗಳನ್ನು ಆಡಿದವರಲ್ಲಿ ಸುರೇಶ್ ಮೊದಲಿಗರೇನಲ್ಲ. ಅರ್ಧ ಶತಮಾನದ ಹಿಂದೆಯೇ ಅಣ್ಣಾದೊರೈ ಪ್ರತ್ಯೇಕ ದ್ರಾವಿಡ ನಾಡಿನ ಮಾತನಾಡಿದ್ದರು. ಪಂಜಾಬ್, ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತೆಯ ಮಾತುಗಳು ಹಲವು ಬಾರಿ ಕೇಳಿಬಂದಿವೆ. ಹಿಂದಿ ಹೇರಿಕೆಯ ಬಗೆಗಿನ ಪ್ರತಿಭಟನೆಗಳಲ್ಲಿ ‘ಹಿಂದಿಯನ್ನು ಹೇರಿದರೆ ದೇಶ ಚಿಂದಿ’ ಅನ್ನುವ ಘೋಷಣೆ ಸಾಮಾನ್ಯ. ರಾಷ್ಟ್ರದ ಏಕತೆಯ ಹೆಸರಿನಲ್ಲಿ ಪಕ್ಷಪಾತ, ಅನ್ಯಾಯವನ್ನು ಎಷ್ಟು ವರ್ಷ ಸಹಿಸಲು ಸಾಧ್ಯ? ಆದರೆ, ಕಾಂಗ್ರೆಸ್‌ನ ಸುರೇಶ್ ಅವರು ಆಡಿದ ಮಾತು ‘ಭೂತದ ಬಾಯಲ್ಲಿ ಭಗವದ್ಗೀತೆ’ಯಂತೆ ಕಂಡಿತು. ಪಕ್ಷಪಾತ, ಅನ್ಯಾಯದ ಕೆಟ್ಟ ಪರಂಪರೆಗೆ ನಾಂದಿ ಹಾಡಿದ್ದೇ ಕಾಂಗ್ರೆಸ್. ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿರುವುದು ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲೇ.

ಮಹಾಜನ್ ಆಯೋಗವನ್ನು ನೇಮಿಸಿದ ಕೇಂದ್ರ, ಅದರ ವರದಿಯಲ್ಲಿನ ಶಿಫಾರಸುಗಳನ್ನು ಏಕೆ ಜಾರಿ ಮಾಡಲಿಲ್ಲ? ರೈಲ್ವೆಯಲ್ಲಿ ಕರ್ನಾಟಕ ಕೊನೆಯ ಸ್ಥಾನದಲ್ಲಿದೆ. ಕೃಷ್ಣಾ ವಿಚಾರದಲ್ಲಿ ಅನ್ಯಾಯ ಆಗಿದ್ದು ಯಾರ ಕಾಲದಲ್ಲಿ? ಇನ್ನು ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಗೋವಾ ಪರ ಮಾತನಾಡಿದ್ದರು. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಸುದೀರ್ಘವಾಗುತ್ತದೆ. ಬಿಜೆಪಿಯವರು ಅನ್ಯಾಯ, ಪಕ್ಷಪಾತದ ನಿಲುವನ್ನು ಮುಂದುವರಿಸಿದ್ದಾರೆ. ಸ್ಥಳೀಯ ಭಾಷೆಗಳ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ಮುಂದುವರಿದಿದೆ. ಕರ್ನಾಟಕದ ಬ್ಯಾಂಕುಗಳನ್ನು ಉತ್ತರ ಭಾರತದ ಬ್ಯಾಂಕುಗಳಲ್ಲಿ ವಿಲೀನಗೊಳಿಸಿ ಅಲ್ಲೆಲ್ಲ ಹಿಂದಿ ಭಾಷಿಕರನ್ನು ತುಂಬುತ್ತಿದ್ದಾರೆ. ಮಹದಾಯಿ, ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ಕೂಗಿಗೆ ಕೇಂದ್ರವು ಕಿವುಡಾಗಿದೆ. ಒಟ್ಟಿನಲ್ಲಿ ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಕರ್ನಾಟಕವನ್ನು ಕಡೆಗಣಿಸಿವೆ. ‘ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೇ!’ ಎನ್ನುವ ಕನ್ನಡಿಗರಿಗೆ ‘ರಾಷ್ಟ್ರೀಯತೆ’ಯ ಬೋಧನೆ ಮಾಡುವ ಅಗತ್ಯವಿಲ್ಲ. ಆದರೆ, ರಾಷ್ಟ್ರದ ಏಕತೆಯ ಹೆಸರಿನಲ್ಲಿ ನಡೆಯುತ್ತಿರುವ ಕಡೆಗಣನೆ, ಪಕ್ಷಪಾತವನ್ನು ಇನ್ನೆಷ್ಟು ದಿನ ಸಹಿಸಬೇಕು? ಸಹನೆಗೂ ಮಿತಿ ಇದೆ ಎಂಬುದನ್ನು ಆಳುವವರು ಮತ್ತು ರಾಷ್ಟ್ರೀಯ ಪಕ್ಷಗಳು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

ರಾ.ನಂ.ಚಂದ್ರಶೇಖರ, ಬೆಂಗಳೂರು

ಮೊದಲೇ ಕೊಡಿ...

ಪ್ರಶಸ್ತಿ-ಪುರಸ್ಕಾರ ಸ್ವೀಕರಿಸುವವರು
ಗಟ್ಟಿಮುಟ್ಟಾಗಿ, ಆರೋಗ್ಯವಂತರಾಗಿ

ಇರುವಾಗಲೇ ಕೊಡಿ,

ಅವರೂ ಆನಂದಿಸಲಿ,

ಹಿಂದಿನ ಎಷ್ಟೋ ಸಂಗತಿಗಳು

ಮರೆತುಹೋಗಿರಬಹುದಾದ

ಇಳಿವಯಸ್ಸಿನಲ್ಲಿ ಪ್ರಶಸ್ತಿ

ಕೊಡುವುದರಿಂದ ಪ್ರಶಸ್ತಿಗಳ
ಸಂಖ್ಯೆ ಹೆಚ್ಚಿಸಿದಂತಾಗುತ್ತದೆ, ಅಷ್ಟೇ.

ಟಿ.ಆರ್.ರಘುನಾಥ್
ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.