2018ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ರಂಗಭೂಮಿ ನಿರ್ದೇಶಕ ಎಸ್. ರಘುನಂದನ ಅವರು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ (ಪ್ರ.ವಾ., ಜುಲೈ 18). ಅದಕ್ಕೆ ಅವರು ಕೊಟ್ಟಿರುವ ಕಾರಣಗಳು– ದೇವರು, ಧರ್ಮ, ಆಹಾರದ ಹೆಸರಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳು, ಮತಾಂಧತೆಯಿಂದ ಕೂಡಿದ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬುವ, ಶೋಷಿತರ ಪರ ಅಹಿಂಸಾ ಮಾರ್ಗದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ.
ಸಾಹಿತಿಗಳು, ವಿಚಾರವಂತರ ಹತ್ಯೆಗಳನ್ನು ಖಂಡಿಸಿ, ತಮಗೆ ಸಂದ ಪ್ರಶಸ್ತಿಗಳನ್ನು ದೇಶದಾದ್ಯಂತ ಹಿಂದಿರುಗಿಸಿದ ವಿದ್ಯಮಾನ ಈ ಹಿಂದೆನಡೆದಿತ್ತು. ಆಳುವ ಮಂದಿ ಅದಕ್ಕೆ ಕ್ಯಾರೇ ಅಂದಿರಲಿಲ್ಲ. ಬದಲಿಗೆ ಅವರನ್ನು ‘ಅವಾರ್ಡ್ ವಾಪ್ಸಿ ಗ್ಯಾಂಗ್’ ಎಂದು ಅಪಹಾಸ್ಯ ಮಾಡಲಾಯಿತು. ಈಗ, ಒಬ್ಬ ಸೃಜನಶೀಲ ವ್ಯಕ್ತಿ ಪ್ರಶಸ್ತಿಗಾಗಿ ಸಂಭ್ರಮಿಸದೆ ತನ್ನ ಇತರ ದೇಶವಾಸಿಗಳಿಗೆ ಆಗುತ್ತಿರುವ ನೋವಿಗೆ ಸ್ಪಂದಿಸುತ್ತ, ಇನ್ನೂ ಒಂದು ಹೆಜ್ಜೆ ಮುಂದಿರಿಸಿ (ಅಥವಾ ಹಿಂದಿರಿಸಿ) ‘ಇದು ಪ್ರತಿಭಟನೆಯಲ್ಲ, ವ್ಯಥೆ’ ಎಂದಿದ್ದಾರೆ. ಯಾವುದೇ ಪ್ರತಿಭಟನೆಗೆ ಸೊಪ್ಪು ಹಾಕದ, ಮಿಗಿಲಾಗಿ ಅದನ್ನು ಹೊಸಕಿ ಹಾಕುವ ಮನಃಸ್ಥಿತಿಯ, ಸಂವೇದನೆಯೇ ಇಲ್ಲದ ಕೇಂದ್ರ ಸರ್ಕಾರಕ್ಕೆ ಈ ಪ್ರತಿಭಟನೆಯ ವ್ಯಥೆ ತಿಳಿಯುವುದೇ? ಹಾಡುಹಕ್ಕಿಯ ಗೋಳು ಕೇಳುವವರಾರು!
-ಚಂದ್ರಪ್ರಭ ಕಠಾರಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.