ಇತ್ತೀಚೆಗೆ ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ, ರಶ್ ಇದ್ದ ಕಾರಣ ಮಗುವೊಂದು ಶಾಲಾ ಬ್ಯಾಗನ್ನು ನನ್ನ ಕಡೆ ಕೊಟ್ಟಿತು. ಅದನ್ನು ನನ್ನ ತೊಡೆಯ ಮೇಲಿಟ್ಟುಕೊಂಡಾಗ, ಮಣಭಾರದ ಬ್ಯಾಗನ್ನು ಹೇಗೆ ಮಗು ತನ್ನ ಬೆನ್ನ ಮೇಲೆ ಪ್ರತಿದಿನ ಕೊಂಡೊಯ್ಯುತ್ತದೆ ಎಂಬುದನ್ನು ನೆನೆಸಿಕೊಂಡು, ಅದರ ಬಗ್ಗೆ ಕನಿಕರ ಉಂಟಾಯಿತು.
ಇದು, ಬಹುತೇಕ ಶಾಲಾ ಮಕ್ಕಳ ಪರಿಸ್ಥಿತಿ. ಶಿಕ್ಷಣ ಇಲಾಖೆಯು ಇಂತಿಷ್ಟೇ ತೂಕದ ಬ್ಯಾಗನ್ನು ಕೊಂಡೊಯ್ಯಬೇಕೆಂಬ ನಿಯಮ ಮಾಡಿದ್ದರೂ ಹೆಚ್ಚಿನವರು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಕಾಣುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಬ್ಯಾಗ್ ತಯಾರಿಕಾ ಕಂಪನಿಯವರು ವಿಧ ವಿಧ ವಿನ್ಯಾಸದ ಬ್ಯಾಗುಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅವುಗಳ ತೂಕವೇ ಅರ್ಧ ಕೆ.ಜಿ.ಗಿಂತಲೂ ಹೆಚ್ಚಾಗಿರುತ್ತದೆ! ಇಂತಹ ಬ್ಯಾಗಿನಲ್ಲಿ ಒಂದೆರಡು ಪುಸ್ತಕಗಳನ್ನು ಇಟ್ಟುಕೊಂಡರೂ ಬ್ಯಾಗಿನ ತೂಕವು ಇಲಾಖೆಯು ನಿಗದಿಪಡಿಸಿದ ತೂಕಕ್ಕಿಂತ ಹೆಚ್ಚಾಗುತ್ತದೆ. ಹೀಗಾಗಿ, ಇಂತಿಷ್ಟೇ ತೂಕದ ಬ್ಯಾಗನ್ನು ತಯಾರಿಸಬೇಕೆಂಬ ಆದೇಶವನ್ನು ಬ್ಯಾಗ್ ತಯಾರಿಕಾ ಕಂಪನಿಗಳಿಗೂ ಹೊರಡಿಸಬೇಕು. ನಿಯಮ ಮಾಡಿದರಷ್ಟೇ ಸಾಲದು. ಅದರ ಕಟ್ಟುನಿಟ್ಟಿನ ಅನುಷ್ಠಾನವೂ ಮುಖ್ಯ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.