ಟೋಲ್‍ಗಳಲ್ಲಿ ತಮಗೆ ಪ್ರತ್ಯೇಕ ಪಥಬೇಕು ಎಂದು ನಮ್ಮ ಶಾಸಕದ್ವಯರು ಸ್ಪೀಕರ್ ಅವರಿಗೆ ಬೇಡಿಕೆ ಸಲ್ಲಿಸಿದ್ದನ್ನು ಓದಿ (ಪ್ರ.ವಾ., ಸೆ. 16) ಆಶ್ಚರ್ಯವಾಯಿತು. ‘ನಾವು ಶಾಸಕರು, ಟೋಲ್‍ಗಳಲ್ಲಿ ನಮ್ಮ ವಾಹನ ತಡೆದು ಗುರುತಿನ ಚೀಟಿ ಕೇಳುವುದೆಂದರೇನು? ಸಾರ್ವಜನಿಕರ ವಾಹನಗಳ ಜತೆ ಹೋಗಬೇಕಾಗಿರುವುದು ನಮ್ಮ ಗೌರವಕ್ಕೆ ತಕ್ಕುದಲ್ಲ’ ಎಂಬುದು ಅವರ ಅಸಮಾಧಾನಕ್ಕೆ ಕಾರಣ.
ಈ ಪ್ರಸಂಗದಲ್ಲಿ ನನಗೆ ಡಾ. ರಾಮಮನೋಹರ ಲೋಹಿಯಾ ನೆನಪಾಗುತ್ತಾರೆ. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಲೋಹಿಯಾ, ಅನಾರೋಗ್ಯಪೀಡಿತರಾಗಿ ನವದೆಹಲಿಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ (ಈಗದು ರಾಮ ಮನೋಹರ ಲೋಹಿಯಾ ಆಸ್ಪತ್ರೆ ಎಂದು ಪುನರ್ ನಾಮಕರಣಗೊಂಡಿದೆ). ಲೋಹಿಯಾ ಅವರ ಆರೋಗ್ಯಸ್ಥಿತಿ ಉಲ್ಬಣಿಸುತ್ತದೆ. ವಿದೇಶದಿಂದ ತಜ್ಞ ವೈದ್ಯರನ್ನು ಕರೆಸಿ, ಚಿಕಿತ್ಸೆ ಮುಂದುವರಿಸುವ ಕುರಿತು ವೈದ್ಯರ ತಂಡ ಚರ್ಚಿಸುತ್ತಿರುತ್ತದೆ. ಅದನ್ನು ಕೇಳಿಸಿಕೊಂಡ ಲೋಹಿಯಾ ಅವರು ಆ ವೈದ್ಯರಿಗೆ ಕೇಳುತ್ತಾರೆ, ‘ಈಗ ನನಗೆ ಸಿಗಲಿರುವ ವಿದೇಶಿ ವೈದ್ಯರ ಸೇವೆಯ ಸೌಲಭ್ಯ ಭಾರತದ ಸರ್ವ ಜನಸಾಮಾನ್ಯರಿಗೂ ಸಿಗುತ್ತದೇನು?’ ‘ಇಲ್ಲ’ ಎಂಬ ಉತ್ತರ ವೈದ್ಯರಿಂದ ಬಂದಾಗ, ಲೋಹಿಯಾ ಸ್ಪಷ್ಟವಾಗಿ ಹೇಳುತ್ತಾರೆ, ‘ಬಡವರಿಗೆ ಸಿಗದ ಇಂಥ ಯಾವ ಸೌಲಭ್ಯ ನನಗೆ ಯಾಕೆ ಬೇಕು? ಬೇಡ... ಬೇಡವೇ ಬೇಡ’ ಎಂದು ನಿರಾಕರಿಸುತ್ತಾರೆ.
ಲೋಹಿಯಾ ಅವರು ಒಂದುಕಡೆ ಹೀಗೆ ಬರೆಯುತ್ತಾರೆ. ‘ನನ್ನ ಬಳಿ ನನ್ನದೆಂಬುದೇನೂ ಇಲ್ಲ. ಭಾರತದ ಬಡವರು ಹಾಗೂ ಶ್ರೀಸಾಮಾನ್ಯರು ನನ್ನನ್ನು ತಮ್ಮವನು ಅಂದುಕೊಂಡಿರುವ ಒಂದು ಗೌರವದ ಭಾವನೆಯ ಹೊರತಾಗಿ ನನ್ನ ಬಳಿ ಏನೂ ಇಲ್ಲ’. ಅಂಥ ಲೋಹಿಯಾ ಅವರು ಇಂದಿನ ಜನಪ್ರತಿನಿಧಿಗಳಿಗೆ ಆದರ್ಶ ಏಕಾಗಬಾರದು...?
– ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.