ಕೊರೊನಾ ಬಿಕ್ಕಟ್ಟಿನ ಈ ದುರಿತ ಕಾಲದಲ್ಲಿ ಜನರ ಸೇವೆಗೆ ಪ್ರಚಾರದ ಅಬ್ಬರವಿಲ್ಲದೆ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳು ಸ್ವಯಂ ಪ್ರತಿಷ್ಠೆಯ ಕಾರಣಕ್ಕೆ ರಾಜಕಾರಣಿಗಳಂತೆ ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪ ಮಾಡಿಕೊಂಡರು. ಐಎಎಸ್ ಅಧಿಕಾರಿಗಳ ಕತೆ ಈ ರೀತಿಯಾದರೆ ಐಪಿಎಸ್ ಅಧಿಕಾರಿಗಳಂತೂ ತಮ್ಮ ಅಧಿಕಾರದ ಪ್ರಭಾವಳಿಯನ್ನು ಅಪರಾಧ ನಿಯಂತ್ರಣ ಮಾಡುವ ಬದಲು ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್.ರವಿಕಾಂತೇಗೌಡ ಅವರು ‘ಸಿಂಗಂ’, ‘ಸಿಂಹಿಣಿ’ಯರಿಗೆ ಹೇಳಿರುವ ಕಿವಿಮಾತು (ಪ್ರ.ವಾ., ಜೂನ್ 9) ಸಕಾಲಿಕವಾಗಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಹಜ ಪ್ರಕ್ರಿಯೆಯೆಂಬಂತೆ ನಿರ್ವಹಿಸುವ ಬದಲು ಅದನ್ನೇ ವೈಭವೀಕರಿಸಿಕೊಳ್ಳುವುದರ ಹಿಂದೆ ಅಡಗಿರುವ ಒಳ ಉದ್ದೇಶ, ಸ್ವಯಂ ನಿವೃತ್ತಿ ಅಥವಾ ನಿವೃತ್ತಿಯ ನಂತರ ರಾಜಕೀಯಕ್ಕೆ ಪ್ರವೇಶ ಮಾಡುವುದೇ ಆಗಿರುತ್ತದೆ.
ಕನ್ನಡದಲ್ಲೇ ಯುಪಿಎಸ್‍ಸಿ ಪರೀಕ್ಷೆ ಬರೆದು ಐಎಎಸ್ ತೇರ್ಗಡೆಯಾಗಿದ್ದ ಒಬ್ಬ ವ್ಯಕ್ತಿ ವ್ಯಾಪಕ ಪ್ರಚಾರ ಪಡೆದು ನಂತರ ರಾಜಕೀಯ ಪ್ರವೇಶ ಮಾಡಿದರು. ಅವರಂತೆಯೇ ಇನ್ನೂ ಅನೇಕ ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ನಮ್ಮ ರಾಜ್ಯದಲ್ಲಿ ಮಾಧ್ಯಮಗಳ ಮುಂದೆ ‘ಸಿಂಗಂ’ ಎಂದು ಪ್ರಚಾರ ಪಡೆದುಕೊಂಡು, ರಾಜೀನಾಮೆ ನೀಡಿ ಚುನಾವಣೆಗೆ ನಿಂತರು. ಅಧಿಕಾರಿಗಳು ಸ್ವಯಂ ಪ್ರಾಯೋಜಿಸಿ ಅಭಿಮಾನಿ ಸಂಘಗಳನ್ನು ಸೃಷ್ಟಿಸಿ, ಮಾಧ್ಯಮಗಳಲ್ಲಿ ವರ್ಚಸ್ಸು ವೃದ್ಧಿಸಿಕೊಳ್ಳುವುದರ ಹಿಂದೆ ಅಡಗಿರುವ ಏಕೈಕ ಗುರಿ, ರಾಜಕೀಯ ಪಕ್ಷಗಳು ಇವರನ್ನು ಕರೆದು ಅವಕಾಶ ನೀಡಲಿ ಎಂಬುದಾಗಿದೆ.
–ಸಿ.ಎಚ್.ಹನುಮಂತರಾಯ, ಕೆ.ಬಿ.ಕೆ. ಸ್ವಾಮಿ, ಸೂರ್ಯ ಮುಕುಂದರಾಜ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.