ADVERTISEMENT

ನಗದು ಚಲಾವಣೆ ಇನ್ನೂ ಹೆಚ್ಚುತ್ತದೆ!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST

ದೇಶದಲ್ಲಿ ವರ್ಷವರ್ಷಕ್ಕೂ ನಗದು ಚಲಾವಣೆ ಹೆಚ್ಚುತ್ತಿದೆಯೆಂದು ಆರ್‌ಬಿಐ ತಿಳಿಸಿದೆ (ಪ್ರ.ವಾ., ಫೆ. 17). ಎಟಿಎಂ ವ್ಯವಹಾರವನ್ನು ತಿಂಗಳಲ್ಲಿ ಮೂರು ಬಾರಿಗಿಂತ ಹೆಚ್ಚು ಬಳಸಿದಲ್ಲಿ ಶುಲ್ಕ ವಿಧಿಸುವುದು, ₹ 1 ಲಕ್ಷ ನಗದು ಠೇವಣಿ ಇಟ್ಟಲ್ಲಿ ಅದಕ್ಕೆ ₹ 121 ‘ಕ್ಯಾಶ್ ಹ್ಯಾಂಡ್ಲಿಂಗ್ ಚಾರ್ಜಸ್’ ವಸೂಲಿ ಮಾಡುವುದು, ನಮ್ಮದೇ ಉಳಿತಾಯ ಖಾತೆಯಿಂದ ಭೀಮ್ ಆ್ಯಪ್ ಮೂಲಕ ಅನ್ಯ ಖಾತೆಗೆ ₹ 300 ಹಣ ವರ್ಗಾಯಿಸಿದ್ದಕ್ಕೆ 1.18 ಪೈಸೆ ಜಿಎಸ್‍ಟಿ ಆಕರಿಸುವುದನ್ನು ಬ್ಯಾಂಕುಗಳು ಜಾರಿಗೆ ತಂದರೆ, ಗ್ರಾಹಕರು ಏಕೆ ಡಿಜಿಟಲ್ ಆರ್ಥಿಕತೆಗೆ ಒತ್ತು ನೀಡುತ್ತಾರೆ? ಹೊಸ ಆರ್ಥಿಕತೆಯ ನೆಪ ಹೇಳಿ ಬ್ಯಾಂಕ್‍ಗಳು ಗ್ರಾಹಕರನ್ನು ವಿವಿಧ ಶುಲ್ಕಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವುದನ್ನು ಬಿಟ್ಟರೆ ಯಾವ ಗ್ರಾಹಕಸ್ನೇಹಿ ಸುಧಾರಣೆಯೂ ಆಗಿಲ್ಲ.

ಹೆಜ್ಜೆ ಹೆಜ್ಜೆಗೆ ಬರೀ ತೆರಿಗೆ ವಸೂಲಿಯನ್ನೇ ಗುರಿಯಾಗಿಸಿಕೊಂಡರೆ ಹಣ ಚಲಾವಣೆ ಆಗುವುದಾದರೂ ಹೇಗೆ? ಕಪ್ಪುಹಣ ನಿರ್ಮೂಲನೆ ಮಾಡುವ ಮಹದಾಸೆ ಇದ್ದಲ್ಲಿ ಡಿಜಿಟಲ್ ತಂತ್ರಜ್ಞಾನದ ಸುರಕ್ಷಿತ ಸದ್ಬಳಕೆಗೆ ಒತ್ತು ನೀಡಿ, ಸಾಧ್ಯವಾದಷ್ಟು ಉಚಿತ ಸೇವೆಗೆ ಅವಕಾಶ ಕಲ್ಪಿಸಿದಲ್ಲಿ ನಗದು ಚಲಾವಣೆ ಕಡಿಮೆ ಯಾಗುತ್ತದೆ. ನಗದು ಮುದ್ರಣ- ಸಾಗಾಣಿಕೆ ವೆಚ್ಚ, ಕಾಗದ, ಸಿಬ್ಬಂದಿ ವೇತನ ವೆಚ್ಚ ಇಳಿಕೆ, ಪರಿಸರ ರಕ್ಷಣೆಯ ಮೂಲಕವೇ ಮೌಲ್ಯವನ್ನು ಸಾಕಷ್ಟು ವರ್ಧಿಸಬಹುದು. ಜೊತೆಗೆ ಕಳ್ಳಗಂಟಿನವರ ಲೆಕ್ಕ ಚೊಕ್ಕವಾಗುವುದೂ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಗದು ವ್ಯವಹಾರ ಇನ್ನೂ ಹೆಚ್ಚುತ್ತದೆ.

-ಡಾ. ಚೆನ್ನು ಅ. ಹಿರೇಮಠ,ರಾಣೆಬೆನ್ನೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.