ADVERTISEMENT

ಸಂಬಂಧಗಳ ಮಹತ್ವ ತಿಳಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 20:29 IST
Last Updated 1 ಜನವರಿ 2020, 20:29 IST

ಈಗಿನ ಮಕ್ಕಳು ವಯಸ್ಸಿನ ಮಿತಿಯಿಲ್ಲದೆ ಹಿರಿಯರನ್ನೆಲ್ಲ ಆಂಟಿ, ಅಂಕಲ್ ಎಂದು ಕರೆಯುವ ಕೆಟ್ಟ ಪರಿಪಾಟ ಇದೆ. ಅದು ಎಷ್ಟರಮಟ್ಟಿಗೆ ಎಂದರೆ, ಸಂಬಂಧದಲ್ಲಿ ಮಗುವಿಗೆ ಅವರು ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ದೊಡ್ಡಪ್ಪ, ದೊಡ್ಡಮ್ಮ... ಆಗಿದ್ದರೂ ಅವರನ್ನು ಸಹ ಹೆಚ್ಚಿನ ಮಕ್ಕಳು ಆಂಟಿ, ಅಂಕಲ್ ಎಂದೇ ಕರೆಯುತ್ತಾರೆ. ಅಜ್ಜ, ಅಜ್ಜಿಯನ್ನೂ ಆಂಟಿ, ಅಂಕಲ್ ಎಂದು ಕರೆಯುವವರೂ ಇದ್ದಾರೆ! ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮನ್ನು ಆವರಿಸಿಕೊಂಡಿರುವುದೇ ಇದಕ್ಕೆ ಕಾರಣ. ಈಗಿನ ಪಾಲಕರು ಸಹ ಸಂಬಂಧಗಳಿಗೆ ತಕ್ಕಂತೆ ಸಂಬೋಧಿಸುವುದನ್ನು ಮಕ್ಕಳಿಗೆ ಹೇಳಿಕೊಡದೆ ಎಲ್ಲರನ್ನೂ ಅಂಕಲ್, ಆಂಟಿ ಎಂದೇ ಪರಿಚಯಿಸುತ್ತಿದ್ದಾರೆ.

ಮೊದಲು ಅವಿಭಕ್ತ ಕುಟುಂಬಗಳಲ್ಲಿ ಅಣ್ಣ–ತಮ್ಮ, ದೊಡ್ಡಪ್ಪ- ಚಿಕ್ಕಪ್ಪ, ಅಕ್ಕ–ತಮ್ಮ, ಅಣ್ಣ–ತಂಗಿ ಎಲ್ಲರೂ ಒಟ್ಟಿಗೆ ಬಾಳುತ್ತಿದ್ದೆವು. ಹಬ್ಬಹರಿದಿನಗಳಲ್ಲಿ ಸಂಬಂಧಿಕರೆಲ್ಲ ಒಟ್ಟಿಗೆ ಸೇರುತ್ತಿದ್ದೆವು. ಒಟ್ಟಿಗೆ ಊಟಕ್ಕೆ ಕೂರುತ್ತಿದ್ದೆವು, ಒಟ್ಟಿಗೆ ಬಟ್ಟೆಬರೆ ಕೊಂಡುಕೊಳ್ಳುತ್ತಿದ್ದೆವು. ಹಾಗಾಗಿ ಎಲ್ಲರಿಗೂ ಎಲ್ಲರ ಸಂಬಂಧ ಸ್ಪಷ್ಟವಾಗಿ ತಿಳಿಯುತ್ತಿತ್ತು. ಆದರೆ ಈಗ ಅವಿಭಕ್ತ ಕುಟುಂಬಗಳು ಒಡೆದು ಚೂರಾಗಿವೆ.

ಇಂದಿನ ಮಕ್ಕಳು ಶೈಕ್ಷಣಿಕವಾಗಿ ಮುಂದಿದ್ದರೂ ಸಂಬಂಧದ ವಿಷಯದಲ್ಲಿ ಹಿಂದೆ ಬಿದ್ದಿದ್ದಾರೆ. ಇಂತಹ ಸೂಕ್ಷ್ಮ ಸಂಗತಿಗಳನ್ನು ಗುರುತಿಸಿ, ಸಂಬಂಧಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕಾದ ಅಗತ್ಯ ಈಗ ಹೆಚ್ಚಾಗಿದೆ.

ADVERTISEMENT

-ಮಂಜುನಾಥ ಉಮೇಶ ನಾಯ್ಕ,ಮುರ್ಡೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.