ADVERTISEMENT

ವಾಚಕರ ವಾಣಿ | ಬರಲಿ ‘ಕಾಶ್ಮೀರ ಡೋಗ್ರಾ ಫೈಲ್ಸ್’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:30 IST
Last Updated 21 ಮಾರ್ಚ್ 2022, 19:30 IST

‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನೋಡಿದ ಮೇಲೆ ಹಲವರ ಮನದಲ್ಲಿ ಮೂಡಿರುವ ಪ್ರಶ್ನೆಯೆಂದರೆ, ‘ಕಾಶ್ಮೀರದ ಕಣಿವೆಯಲ್ಲಿ ಇದ್ದ ಹಿಂದೂಗಳಲ್ಲಿ ಪಂಡಿತರು ಮಾತ್ರ ಸೇರಿದ್ದರೇ? ಜಾತಿ ವಿಜಾತಿಯಿಂದ ಕೂಡಿರುವ ಹಿಂದೂ ಧರ್ಮ ಇರುವ ಪ್ರದೇಶದಲ್ಲಿ ಒಂದೇ ಜಾತಿಯ ಜನರು ಇರಲು ಹೇಗೆ ಸಾಧ್ಯ? ಹೌದು, ಕಾಶ್ಮೀರ ಕಣಿವೆಯಲ್ಲಿ ಪಂಡಿತರು ಮಾತ್ರವಲ್ಲ ಅಲ್ಲಿ ಡೋಗ್ರಾ ಎಂಬ ಕೃಷಿ ಅವಲಂಬಿತ ಯೋಧ ಸಮುದಾಯವೂ ಪಂಡಿತರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಇತ್ತು. ಕಾಶ್ಮೀರದ ಹಿಂದಿನ ರಾಜರುಗಳೆಲ್ಲಾ ಡೋಗ್ರಾ ಜಾತಿಯವರಾಗಿದ್ದರು. ಜತೆಗೆ ಹಿಂದೂ ದಲಿತರೂ ಅಲ್ಲಿದ್ದರು. ರಾಜಾ ಹರಿಸಿಂಗನ ಪೂರ್ವಜರು ಪಂಜಾಬಿನಿಂದ ವೀರ ಸಿಖ್ಖರನ್ನು ಕರೆಸಿ ತನ್ನ ಸೇನೆಯಲ್ಲಿ ಸೇರಿಸಿಕೊಂಡಿದ್ದರು. ಈ ಸಿಖ್ಖರು ತಮ್ಮ ಪಂಜಾಬಿ ಭಾಷೆ ಬಿಟ್ಟು ಕಾಶ್ಮೀರಿ ಭಾಷೆಯನ್ನೇ ಮಾತ್ರಭಾಷೆಯಾಗಿ ಸ್ವೀಕರಿಸಿ ಅಲ್ಲಿಯೇ ಶಾಶ್ವತವಾಗಿ ನೆಲೆಸಿದರಂತೆ. ಹಾಗಾದರೆ 1990ರಲ್ಲಿ ನಗರವಾಸಿ ಪಂಡಿತರನ್ನು ಮಾತ್ರ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದಿಗಳು ಗುರಿ ಮಾಡಿದ್ದು ಸತ್ಯವೇ?

ಇಲ್ಲ, ನಿಜವಾಗಿ ಪಾಕ್ ಉಗ್ರರು ಎಲ್ಲಾ ಜಾತಿಯ ಹಿಂದೂಗಳನ್ನೂ ಗುರಿ ಮಾಡಿ ಭಯ ಹರಡಿದ್ದರು. ಆದರೆ ಹೆಚ್ಚಾಗಿ ಶ್ರೀನಗರದಲ್ಲಿ ಕೇಂದ್ರಿತವಾದ ಪಂಡಿತರನ್ನು ಕಾಶ್ಮೀರದ ಆಗಿನ ಗವರ್ನರ್ ಜಗಮೋಹನ್ ತುರಾತುರಿಯಿಂದ ಜಮ್ಮುವಿಗೆ ವಲಸೆ ಹೊಗುವಂತೆ ಒತ್ತಾಯಿಸಿ ಅವರಿಗೆ ಸಾರಿಗೆ ಒದಗಿಸಿದರಂತೆ. ಡೋಗ್ರಾ ಮತ್ತು ಇತರ ಹಿಂದೂಗಳು ಹಳ್ಳಿಗಳಲ್ಲಿ ಇರುತ್ತಿದ್ದು, ಅವರು ಅಲ್ಲಿಯೇ ಉಳಿದು ಉಗ್ರರನ್ನು ಪ್ರಬಲವಾಗಿ ಎದುರಿಸಿದರು. ಹಾಗಾಗಿ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ, 1990ರಲ್ಲಿ ಪಾಕ್ ಉಗ್ರರು 219 ಪಂಡಿತರನ್ನು ಕೊಂದರೆ, 1700ಕ್ಕೂ ಹೆಚ್ಚು ಡೋಗ್ರಾ, ದಲಿತ ಹಿಂದೂ ಮತ್ತು ಸಿಖ್ಖರನ್ನು ಕೊಂದರಂತೆ. ಹಾಗಾದರೆ ಜನರಿಗೆ ಸತ್ಯ ತಿಳಿಯಬೇಕಾದರೆ ‘ಕಾಶ್ಮೀರ ಡೋಗ್ರಾ ಫೈಲ್ಸ್’ ಸಹ ಚಲಚಿತ್ರ ಆಗಬೇಕು ಅಲ್ಲವೇ?

-ಪ್ರಕಾಶ್ ಗಾಂಭೀರ್, ಕಲ್ಲಬೆಟ್ಟು, ಮೂಡುಬಿದಿರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.