ಬೇರೇನೋ ಕೆಲಸಕ್ಕಾಗಿ ಇತ್ತೀಚೆಗೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಸುತ್ತಾ ತಿರುಗಾಡಬೇಕಾಯಿತು. ಅಲ್ಲಿ ನಾನು ಕಂಡ ದೃಶ್ಯ ಕರುಣಾಜನಕವಾಗಿತ್ತು. ನೂರಾರು ನೆಲ್ಲಿ ಮರಗಳ ಕೊಂಬೆ-ರೆಂಬೆಗಳನ್ನು ಕಡಿದು ಮಾರಾಟಕ್ಕಾಗಿ ಲಾರಿಗಟ್ಟಲೆ ತಂದು ಮಾರುಕಟ್ಟೆ ತುಂಬೆಲ್ಲ ಹರಡಿದ್ದುದನ್ನು ನೋಡಿದೆ. ಇದು ರಾಜ್ಯದ ನೂರಾರು ಪಟ್ಟಣ- ನಗರಗಳಲ್ಲಿ ನಡೆದಿರಬೇಕು. ಹತ್ತಾರು ಹಳ್ಳಿಗಳಿಂದ ನಮ್ಮ ಶ್ರಮಿಕ ಬಂಧುಗಳು ತ್ರೈವರ್ಣೀಕರ ತುಳಸಿ ಮದುವೆ ಹಬ್ಬದಲ್ಲಿ ನಾಕು ದುಡ್ಡು ಮಾಡಿಕೊಳ್ಳುವ ಆಸೆಯಿಂದ ಇದರ ಮಾರಾಟಕ್ಕೆ ಎಲ್ಲೆಂದರಲ್ಲಿ ನೆಲ್ಲಿಕಾಯಿಯ ಕೊಂಬೆ-
ರೆಂಬೆಗಳನ್ನು ಹರಡಿಕೊಂಡಿದ್ದರು ಮತ್ತು ರಾತ್ರಿಯೆಲ್ಲ ಪ್ರಯಾಣ ಮಾಡಿ ಆಯಾಸಗೊಂಡಿದ್ದ ಅವರು ಅದರ ಹೊರೆಯ ಮೇಲೇ ಮಲಗಿಕೊಂಡಿದ್ದರು. ತ್ರೈವರ್ಣೀಕರ ಧಾರ್ಮಿಕ ತೃಷೆಯನ್ನು ತಣಿಸುವುದಕ್ಕೆ ನೂರಾರು ಮರ ನೆಲ್ಲಿಯ ಹರಣ ನಡೆದಿರುವುದು ಕಂಡುಬಂತು.
ನಮ್ಮ ಪರಂಪರೆಯ ವಿನಾಶಕ ಆಯಾಮಗಳನ್ನು ತೊರೆದು ಅದರ ವಿಧಾಯಕ ಗುಣಗಳನ್ನು ರೂಢಿಸಿಕೊಳ್ಳುವ ಕ್ರಮದ ಬಗ್ಗೆ ತ್ರೈವರ್ಣೀಕರು ಯೋಚಿಸಬೇಕು. ಹತ್ತಾರು ಹಳ್ಳಿಗಳಿಂದ ನೂರಾರು ಶ್ರಮಿಕ ಬಂಧುಗಳು ಲಾರಿಗಟ್ಟಲೆ ಮರನೆಲ್ಲಿ ಕೊಂಬೆ-ರೆಂಬೆ-ಶಾಖೆಗಳನ್ನು ಕಡಿದು ಮಾರಾಟಕ್ಕೆ ತಂದಿದ್ದುದನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವರಿಗೆ ಇದು ಜೀವನೋಪಾಯದ ಸಾಧನ. ಆದರೆ ಶಿಕ್ಷಿತ, ಉನ್ನತ ವರ್ಗದ ಜನರು ಹವಾಮಾನ ಬದಲಾವಣೆಯ ಭಯಾನಕ ಪರಿಣಾಮಗಳ ಪರಿವೆಯಿಲ್ಲದೆ ನೆಲ್ಲಿಗೆ ಹಾತೊರೆಯುವುದನ್ನು ಏಕೆ ಬಿಡಬಾರದು? ನಮ್ಮ ಧಾರ್ಮಿಕ ಆಚರಣೆಗೆ ಮರಗಿಡಗಳ ಹನನ ನಿಲ್ಲಬೇಕು.
ಟಿ.ಆರ್.ಚಂದ್ರಶೇಖರ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.