ADVERTISEMENT

ವಾಚಕರ ವಾಣಿ: ಹಲ್ಲೆ ಪ್ರಕರಣ: ರಾಜಕೀಯ ಬಣ್ಣ ಸಲ್ಲದು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 23:20 IST
Last Updated 25 ಜುಲೈ 2024, 23:20 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ರಾಗಿ ಬಳಕೆ: ಅವಹೇಳನ ಏಕೆ?

ಮುದ್ದೆಯು ಸಾರ್ವಕಾಲಿಕವಾದ ಸರ್ವರ ಆಹಾರ. ಅದರಲ್ಲಿ ಕಾರ್ಬೊಹೈಡ್ರೇಟ್ ಪ್ರಮಾಣ ಅಧಿಕವಾಗಿದ್ದು, ದೇಹಕ್ಕೆ ಶಕ್ತಿ ನೀಡುವ, ಸುಲಭವಾಗಿ ತಯಾರಿಸಬಹುದಾದ ಆಹಾರ. ಊಟದ ತೃಪ್ತಿ ನೀಡಿ, ಸುಲಭವಾಗಿ ಜೀರ್ಣವಾಗುವ ಸಾತ್ವಿಕ ಆಹಾರ. ರಾಗಿಯು ಕಡಿಮೆ ನೀರಿನಲ್ಲಿ ಅಥವಾ ಮಳೆಯಾಶ್ರಯದಲ್ಲಿ ಬೆಳೆಯಬಹುದಾದ ಬೆಳೆ. ಕನಕದಾಸರ ರಾಮಧಾನ್ಯ ಚರಿತೆಯಲ್ಲಿ ಅಕ್ಕಿಯನ್ನು ಸೋಲಿಸಿದ ರಾಗಿಯ ಬಗ್ಗೆ ಮಹತ್ವದ ವರ್ಣನೆ ಇದೆ. ಪುರಂದರದಾಸರ, ‘ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ’ ಎಂಬ ಕೀರ್ತನೆಯಲ್ಲಿ ರಾಗಿಯನ್ನು ಈ ಜಗತ್ತಿನ ಸರ್ವಶ್ರೇಷ್ಠ ಆಹಾರವೆಂದು ಬಣ್ಣಿಸಲಾಗಿದೆ.

ADVERTISEMENT

ಆದರೆ ನಮ್ಮ ಪ್ರಚಾರ ಮಾಧ್ಯಮಗಳು ಮಾತ್ರ ಮುದ್ದೆಯನ್ನು ಬಲು ಕೇವಲವಾಗಿ, ಕನಿಷ್ಠವಾಗಿ ಕಾಣುತ್ತಿವೆ. ಜೈಲಿನಲ್ಲಿ ಇರುವವರ ಊಟದ ಕುರಿತು ಹೇಳುವಾಗ ‘ಮುದ್ದೆಯೇ ಗತಿ’, ‘ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾರೆ’ ಎಂದೆಲ್ಲ ಮುದ್ದೆಯನ್ನು ಅವಹೇಳನ ಮಾಡಲಾಗುತ್ತಿದೆ. ಸುದ್ದಿ ಮಾಧ್ಯಮಗಳ ಎಷ್ಟೋ ನೌಕರರು ಕೆಲಸಕ್ಕೆ ಬರುವಾಗ ಮನೆಯಲ್ಲಿ ಮುದ್ದೆ ಉಂಡು ಬರಬಹುದು. ಆದರೆ ಕಚೇರಿಯಲ್ಲಿ ಮಾತ್ರ ಮುದ್ದೆಯ ಬಗ್ಗೆ ಈ ಪರಿಯ ಕನಿಷ್ಠತೆಯ ವ್ಯಸನವೇಕೆ?

⇒ದಾಸೇಗೌಡ ಎಂ.ಆರ್., ಚಿತ್ರದುರ್ಗ

ಹಲ್ಲೆ ಪ್ರಕರಣ: ರಾಜಕೀಯ ಬಣ್ಣ ಸಲ್ಲದು

ಕನಕಪುರ ತಾಲ್ಲೂಕಿನ ಮಳಗಾಳು ಗ್ರಾಮದಲ್ಲಿ ಸವರ್ಣೀಯರಿಂದ ದಲಿತ ಯುವಕನ ಮೇಲೆ ಇತ್ತೀಚೆಗೆ ನಡೆದಿರುವ ಹಲ್ಲೆ ಪ್ರಕರಣವು ಕುಡಿದ ಅಮಲಿನಲ್ಲಿ, ರೌಡಿಸಂ ಹಿನ್ನೆಲೆಯುಳ್ಳ ಗುಂಪುಗಳ ಮಧ್ಯೆ ನಡೆದ ಕಾದಾಟವಾಗಿದೆ. ಇಲ್ಲಿ ಯಾವುದೇ ರೀತಿಯ ಜಾತಿ ದ್ವೇಷ ಅಥವಾ ವೈಷಮ್ಯ ಇರಲಿಲ್ಲ. ಹಾಗಾಗಿ, ಈ ಪ್ರಕರಣ
ವನ್ನು ಕಾನೂನು ಮತ್ತು ಸುವ್ಯವಸ್ಥೆ ಆಧಾರದಲ್ಲಿ ಮಾತ್ರ ಪರಿಗಣಿಸಿ, ಹಲ್ಲೆಗೊಳಗಾದವರಿಗೆ ನ್ಯಾಯ ಕೊಡಿಸುವಂತೆ ಆಗಬೇಕು. ಗ್ರಾಮಸ್ಥರು ಈ ಸಮಯದಲ್ಲಿ ಶಾಂತಿಯುತವಾಗಿ ಒಗ್ಗಟ್ಟಿನ ಮಂತ್ರ ಪಠಿಸಬೇಕಾಗಿದೆ. ಇದನ್ನು ಮೀರಿ ಈ ಪ್ರಕರಣವು ಜಾತಿ ಮತ್ತು ರಾಜಕೀಯದ ಬಣ್ಣ ಪಡೆಯುತ್ತಿರುವುದು ಅತ್ಯಂತ ದುರದೃಷ್ಟಕರ.

⇒ಪ್ರಜ್ವಲ್ ಎಂ.ಪಿ., ಮಳಗಾಳು, ಕನಕಪುರ

ಬಡ ರೋಗಿಗಳತ್ತ ಗಮನಹರಿಸಿ

ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ವೈದ್ಯಕೀಯ ಲೋಕದಲ್ಲಿ ವೈದ್ಯರ ಬಗೆಗಿರುವ ಗೌರವವನ್ನು ಹೆಚ್ಚಿಸುವಂತಹದ್ದು. ಆದರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳುವ ಬಹುತೇಕ ರೋಗಿಗಳಿಗೆ ಅಲ್ಲಿನ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯವಿದ್ದರೂ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಬಡ ರೋಗಿಗಳಿಗಾಗಿ ಸರ್ಕಾರ ನೀಡಿದ ಸವಲತ್ತುಗಳನ್ನು ವೈದ್ಯರು ಸಮರ್ಪಕವಾಗಿ ಬಳಸಬೇಕು. ಅದುಬಿಟ್ಟು ಹೀಗೆ ವೈದ್ಯರು ತಮ್ಮ ವೃತ್ತಿಧರ್ಮವನ್ನು ಮರೆತು, ಬಡವರ ಪರಿಸ್ಥಿತಿಯ ಲಾಭ ಪಡೆದು, ಹಣ ವಸೂಲಿ ಮಾಡುವ ಸನ್ನಿವೇಶಗಳು ಕೆಲವು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಕಂಡುಬರುತ್ತಿವೆ.

ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಪರಿಸ್ಥಿತಿ ಬದಲಾಗುತ್ತಿಲ್ಲ. ಕೆಲವು ಸರ್ಕಾರಿ ವೈದ್ಯರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು, ಕೆಲವು ಕಡೆ ಆಸ್ಪತ್ರೆಗೆ ತಮ್ಮದೇ ಹೆಸರನ್ನು ರಾಜಾರೋಷವಾಗಿ ಹಾಕಿಕೊಂಡಿದ್ದಾರೆ. ವೈದ್ಯರ ಇಂತಹ ಲಾಬಿಯ ವಿರುದ್ಧ ಆರೋಗ್ಯ ಸಚಿವರು ಪರಿಶೀಲಿಸಿ ಶಿಸ್ತುಕ್ರಮ ಕೈಗೊಳ್ಳಬೇಕು.

⇒ಸುರೇಂದ್ರ ಪೈ, ಭಟ್ಕಳ

ಮುಡಾ ಹಗರಣ: ಚರ್ಚೆಗೆ ಸಿಗಬೇಕಿತ್ತು ಅವಕಾಶ

ಎಂದೋ ಆಗಿಹೋದ ಮುಡಾ ಹಗರಣದ ಬಗ್ಗೆ ಇಂದೇ ನಡೆದಿದೆಯೋ ಎಂಬಂತೆ ನಿಲುವಳಿ ಸೂಚನೆ ತರುವಂತಿಲ್ಲ ಎಂಬ ವಿಧಾನಸಭಾಧ್ಯಕ್ಷರ ನಿಲುವು ತರ್ಕಬದ್ಧವೇನೋ ಹೌದು. ಆದರೆ ಪ್ರತಿಪಕ್ಷದ ಧುರೀಣರ ಪೈಕಿ ಒಬ್ಬರು, ವಿಷಯದ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ಆತುರಾತುರವಾಗಿ ರಚಿಸಿರುವ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆಯ ಹಣೆಪಟ್ಟಿ ಹಚ್ಚಿ, ವಿಷಯದ ಬಗ್ಗೆ ವಿಧಾನಮಂಡಲದಲ್ಲಿ ಚಕಾರವನ್ನೂ ಎತ್ತಲಾಗದ ತಂತ್ರಗಾರಿಕೆಯ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದೂ ಅವರು ಗಂಭೀರವಾಗಿ ಆಪಾದಿಸಿದರು. ಇತರ ಕಲಾಪಗಳನ್ನೆಲ್ಲಾ ಮುಂದೂಡಿ ಈ ವಿಷಯವನ್ನು ಕೈಗೆತ್ತಿಕೊಳ್ಳುವ ಆವಶ್ಯಕತೆಯಿಲ್ಲ ಎನ್ನುವುದು ಸರಿಯೆನಿಸಿದರೂ ವಿಷಯವನ್ನು ಪ್ರಸ್ತಾಪಿಸುವುದನ್ನೇ ತಡೆಯುವ ಕ್ರಮ ಅನುಮಾನಾಸ್ಪದವೇ ಸರಿ.

ಆಡಳಿತ ಪಕ್ಷದ ಈ ನಿಲುವಿನಿಂದ, ಪ್ರತಿಕ್ಷಗಳು ರಾಜಕೀಯ ಪ್ರಚಾರ ಗಿಟ್ಟಿಸಿಕೊಳ್ಳಲೂ ಬಹಳಷ್ಟು ಅವಕಾಶ ಕಲ್ಪಿಸಿಕೊಟ್ಟಂತೆ ಆಗಿದೆ. ಸರ್ಕಾರವು ನಿಜವಾಗಿಯೂ ಪಾರದರ್ಶಕತೆ ಪರವಾಗಿ ಇರುವುದಾದರೆ, ವಿಷಯದ ಕುರಿತು ಚರ್ಚೆಗೆ ಯಾವುದೋ ಒಂದು ನಿಯಮದ ಅಡಿ ಒಪ್ಪಿಕೊಳ್ಳಬಹುದಿತ್ತು. ಇರಬಹುದಾದ ಸೂಕ್ತ ಮಾಹಿತಿಗಳಿಂದ ಪ್ರತಿಪಕ್ಷಗಳ ಆರೋಪಗಳನ್ನು ಹಣಿಯಲು ಇದರಿಂದ ಅವಕಾಶವಾಗುತ್ತಿತ್ತು.

⇒ಆರ್.ಕೆ.ದಿವಾಕರ, ಬೆಂಗಳೂರು

ಸಹಿಸಲಾರದ ಸಂವಿಧಾನಬಾಹಿರ ನಡೆ

ಲೋಕಸಭೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಸದನದಲ್ಲಿ ಸದಸ್ಯರೊಬ್ಬರು ನೋಟು ರದ್ದತಿಯ ಬಗ್ಗೆ ಮಾತನಾಡುವಾಗ, ಅದು ಹಳೆಯ ವಿಷಯ, ಇವತ್ತಿನ ವಾಸ್ತವ ವಿಷಯದ ಬಗ್ಗೆ ಮಾತನಾಡಿ ಎಂದು ಮಧ್ಯಪ್ರವೇಶಿಸಿದ್ದು ಉಚಿತವಲ್ಲ. ಯಾರೇ ಸಭಾಧ್ಯಕ್ಷರಾದರೂ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಸದನದಲ್ಲಿ ಪಕ್ಷಾತೀತವಾಗಿ ನಡೆದುಕೊಳ್ಳುವುದು ಸಾಂವಿಧಾನಿಕ ಜವಾಬ್ದಾರಿ ಆಗಿರುತ್ತದೆ. ಸದನದಲ್ಲಿ ಆಡಳಿತ ಪಕ್ಷದ ಜೊತೆಗೆ ವಿರೋಧ ಪಕ್ಷಕ್ಕೂ ಅಷ್ಟೇ ಸಮಾನವಾದ ಅವಕಾಶ ಮತ್ತು ಪ್ರಾತಿನಿಧ್ಯ ಸಿಗುವ ರೀತಿಯಲ್ಲಿ ನೋಡಿಕೊಳ್ಳಬೇಕಾದದ್ದು ಸಭಾಧ್ಯಕ್ಷರ ಕರ್ತವ್ಯ. ಆದರೆ ಈಗಿನ ಸಭಾಧ್ಯಕ್ಷರು ಬಿಜೆಪಿಯ ಪ್ರತಿನಿಧಿಯಂತೆ ನಡೆದುಕೊಳ್ಳುತ್ತಿರುವುದು ಸಂವಿಧಾನಬಾಹಿರ ನಡವಳಿಕೆಯಾಗಿದೆ.

ಪಕ್ಷದ ಬಗ್ಗೆ ಹೆಚ್ಚಿನ ಪ್ರೀತಿ, ಒಲವು ಇದ್ದರೆ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಲಿ. ದೇಶದ ಪ್ರಜ್ಞಾವಂತ ನಾಗರಿಕರು ಇಂತಹ ಅಸಾಂವಿಧಾನಿಕ ನಡೆಯನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ.

⇒ನಾಗೇಶ್ ಹರಳಯ್ಯ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.